CinemaLatest

ಸಿ.ಡಿ.ಪ್ರಭಾರಾಜ್  ‘ಟೈಗರ್ ಪ್ರಭಾಕರ್ ‘ ಆಗಿ ಬೆಳ್ಳಿತೆರೆಯಲ್ಲಿ ಮಿಂಚಿದ ರೋಚಕ ಸ್ಟೋರಿ!

ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ನಂತರ ವಿಲನ್ ತದನಂತರ ಹೀರೋ ಆಗಿ ಚಂದನವನದಲ್ಲಿ ಮಿಂಚಿ ಮರೆಯಾದ ನಟ ಟೈಗರ್ ಪ್ರಭಾಕರ್ ಅದೃಷ್ಟ ಮತ್ತು ದುರಾದೃಷ್ಟವನ್ನು ಬೆನ್ನಿಗೆಳೆದುಕೊಂಡವರು.. ಅವರ ಸಿನಿ ಜರ್ನಿ ಕುರಿತಂತೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ಬರೆದಿದ್ದಾರೆ…

ರೌಡಿರಂಗಣ್ಣ 1968ರಲ್ಲಿ ತೆರೆಕಂಡ ರಾಜ್‍ಕುಮಾರ್ ಚಿತ್ರದ ಒಂದೇ ಒಂದು ದೃಶ್ಯದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಿನಿರಂಗ ಪ್ರವೇಶ. ಕೆಲವು ಕಾಲದ ನಂತರ ವಿಷ್ಣುವರ್ಧನ್ ಕಲ್ಪನಾರೊಡನೆ ಡಾ.ರಾಜ್ ನಟಿಸಿದ ಬ್ಲಾಕ್ ಬಸ್ಟರ್ ಫಿಲಂ ಗಂಧದಗುಡಿ ಚಿತ್ರದ 12 ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಒಂದೇ ಒಂದು ಡೈಲಾಗ್ ಇಲ್ಲದೆ ನಟನೆ…

ಇದನ್ನೂ ಓದಿ: ರಾಮಗೋಪಾಲ್ ಚಂದನವನದಲ್ಲಿ ಮಿಂಚಿಯೂ ಮಿನುಗದ ನಟ… ಕೈಕೊಟ್ಟಿತಾ ಅದೃಷ್ಟ!

ಇಂತಹ ನಟ ಇದಾದ 20 ವರ್ಷದೊಳಗೆ 100ಕ್ಕು ಹೆಚ್ಚು ಚಿತ್ರಗಳಲ್ಲಿ ಹೀರೋ ಪಾತ್ರದಲ್ಲಿ ವಿಜೃಂಭಿಸಿ ತಾನು ನಟಿಸಿದ “ಟೈಗರ್” ಎಂಬ ಚಿತ್ರದ ಬಿರುದನ್ನೇ ಪಡೆದು ದಕ್ಷಿಣ ಭಾರತದ  ನಾಯಕನಟರ ಅಗ್ರಪಂಕ್ತಿಗೆ ಸೇರಿ ಕನ್ನಡ ತಮಿಳು ತೆಲುಗು ಹಿಂದಿ ಮಲಯಾಳಂ ಮರಾಠಿ ತುಳು ಕೊಡವ ಕೊಂಕಣಿ ಭಾಷೆ ಚಿತ್ರಗಳಲ್ಲಿ ನಟಿಸುವ ಮೂಲಕ ಅಖಿಲ ಭಾರತ ನೂತನ ದಾಖಲೆ ನಿರ್ಮಿಸಿದ ಅದೃಷ್ಟವಂತ. ಕಾಲಕ್ರಮೇಣ ದುರಂತ ಸಾವನ್ನಪ್ಪಿ ಇತಿಹಾಸದ ಪುಟಸೇರಿದ ದುರದೃಷ್ಟವಂತನೂ ಹೌದು.

ಸಿ.ಡಿ.ಪ್ರಭಾರಾಜ್ ಮೂಲ ಹೆಸರಿನ ಈ ಯುವಕ ಆಕಸ್ಮಿಕವಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕಾಯ್ತು. ಬಾಲ್ಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಲಾಗದ ಈತ ಚಿಕ್ಕಂದಿನಿಂದ ಬಾಡಿಬಿಲ್ಡರ್ ಆಗಿ ಮಿಸ್ಟರ್ ಕರ್ನಾಟಕ, ಮಿಸ್ಟರ್ ಇಂಡಿಯ ಸ್ಫರ್ಧೆ ಗೆಲ್ಲುವಾಸೆ ಇಟ್ಟುಕೊಂಡಿದ್ದ ಕನಸುಗಾರ.

ಬೆಂಗಳೂರು ಕಂಟೋನ್ಮೆಂಟ್‌ ಪುಲಿಕೇಶಿ ನಗರದಲ್ಲಿ ವಾಸವಿದ್ದ ಕನ್ವರ್ಟೆಡ್ ಕ್ರಿಶ್ಚಿಯನ್ ಸಿ.ಡಿ.ಸುಂದರ್ ರಾಜ್ ದಂಪತಿಯ ಪುತ್ರನಾಗಿ 1947ರಲ್ಲಿ ಜನನ. ಈತನ ತಾಯಿಯ ತೌರು ಮನೆ ಮೈಸೂರಿನ ಸೌತ್ ಇಂಡಸ್ಟ್ರಿಯಲ್ ಸಬರ್ಬ್. ಮೈಸೂರಿನಲ್ಲೂ ಬಹಳ ವರ್ಷ ಜಿಮ್ ಮಾಡಿಕೊಂಡಿದ್ದ ಆಜಾನುಬಾಹು. ಆಗ ನಿರ್ಮಾಪಕ ನಿರ್ದೇಶಕ ಎಂ.ಪಿ.ಶಂಕರ್ ಕಣ್ಣಿಗೆ ಬಿದ್ದ. ಗುಂಗುರು ಕೂದಲು ಸಿಕ್ಸ್  ಪ್ಯಾಕ್ ಬಾಡಿ ಎಲ್ಲರನ್ನು ಆಕರ್ಷಿಸುವಂಥ ನಡೆನುಡಿ. ಹೀಗಾಗಿ ಎಂ.ಪಿ.ಶಂಕರ್ ತಮ್ಮೆಲ್ಲಾ ಚಿತ್ರಗಳಿಗೆ ಈ ಹುಡುಗನನ್ನು ಪರ್ಮನೆಂಟಾಗಿ ಬುಕ್ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ: ಎಡಕಲ್ಲು ಗುಡ್ಡದ ಮೇಲಿನ ನಂಜುಂಡನಾಗಿ ಮಿಂಚಿದ ನಟ ಚಂದ್ರಶೇಖರ್…. ಈಗ ನೆನಪು!

ಕಾಲಕ್ರಮೇಣ ಕಾಡಿನರಹಸ್ಯ, ಕಾಡಿನರಾಜ, ಕಾಳಿಂಗ, ಸೇಡಿಗೆ ಸೇಡು, ಪರೋಪಕಾರಿ, ಕುಳ್ಳ ಏಜೆಂಟ್, ತಾಯಿಗೆ ತಕ್ಕಮಗ, ಮಯೂರ, ಚೆಲ್ಲಿದರಕ್ತ, ಮುಂತಾದ ಚಿತ್ರಗಳಲ್ಲಿ ನಟಿಸಿ ಬೆಸ್ಟ್ ವಿಲನ್ಸ್ ಪೈಕಿ ಟಾಪ್ ಲೆವಲ್ ತಲುಪಿದರು. ಸಾಹಸಸಿಂಹ, ಗರುಡರೇಖೆ, ಅಂತ, ಮುಂತಾದ ಚಿತ್ರಗಳು ಹಣ ಕೀರ್ತಿ ಜನಪ್ರಿಯತೆ ತಂದುಕೊಟ್ಟವು. ಹೀರೊ ಆಗೋವರೆಗೂ ದಿನದಿಂದ ದಿನಕ್ಕೆ ಚಿತ್ರದಿಂದ ಚಿತ್ರಕ್ಕೆ ಇವರ ಅಭಿನಯ ಮನೆ ಮಾತಾಯ್ತು.

ಖಳನಾಯಕನ ಪಾತ್ರವನ್ನು ಕನ್ನಡಿಗರು ಒಪ್ಪಿ ಅಪ್ಪಿಕೊಂಡರು. ಆಶ್ಚರ್ಯ ಎಂದರೆ ಇವರ ಸಮಕಾಲೀನ ವಿಲನ್ ಆಗಿ ಇವರೊಡನೆ ನಟಿಸುತ್ತಿದ್ದ ಸುಧೀರ್ ಮಾತ್ರ ಕಡೆತನಕ ಖಳನಟನಾಗೇ ಉಳಿದರು. ಆದರೆ ದೇವರ ಕೃಪೆಯಿಂದಲೋ, ತನ್ನ ಪ್ರತಿಭೆಯಿಂದಲೊ, ಸುಧೀರ್ ಎದುರೇ ಪ್ರಭಾಕರ್ ಹೀರೋ ಆಗಿ ಅನೇಕ ಚಿತ್ರದಲ್ಲಿ ಅಭಿನಯಿಸಿದ್ದು ಇತಿಹಾಸ?!

ಇದನ್ನೂ ಓದಿ: ರಾಮಕೃಷ್ಣ… ಚಂದನವನದ ಅವತ್ತಿನ ಚಾಕ್ಲೆಟ್ ಬಾಯ್.. ಅವರ ಸಿನಿಮಾ ಜರ್ನಿ ಹೇಗಿತ್ತು?

ಪ್ರಭಾಕರ್‌ಗೆ ಹೆಸರು ಬಂದಿದ್ದು ಟೈಗರ್ ಚಿತ್ರದ ಮೂಲಕ. ಇದು ಟರ್ನಿಂಗ್ ಪಾಯಿಂಟ್ ಕೂಡ. ಅದುವರೆಗೂ ವಿಲನ್ ಆಗಿ ಮೆಚ್ಚಿಕೊಂಡಿದ್ದ ಚಿತ್ರರಸಿಕ ಅಭಿಮಾನಿಗಳು, ಹೀರೋ ಆದಾಗ ಸ್ವಾಗತಿಸಿ ಇವರ ಪ್ರತಿಭೆಯನ್ನ ಮೆಚ್ಚಿ ಪ್ರೋತ್ಸಾಹಿಸಿ ಬೆಳೆಸಿ ಉಳಿಸಿದರು. 100 ಚಿತ್ರಗಳ ನಾಯಕನಾಗಿ ಗುರಿ ತಲುಪುವ ತನಕ ಹಿಂದಿರುಗಿ ನೋಡಲಿಲ್ಲ. ಯಾರ ಶಿಫಾರಸ್ಸಿಲ್ಲದೆ, ಯಾವ ಲಂಚವೂ ನೀಡದೆ, ದೇವರು ಕೊಟ್ಟ ಪ್ರತಿಭೆ ಮತ್ತು ಅದೃಷ್ಟದಿಂದ ಅಭಿನಯ ವೃತ್ತಿಯನ್ನು ಪ್ರಾರಂಭಿಸಿ ಅತ್ಯಂತ ತಳಮಟ್ಟದಿಂದ ಮುನ್ನುಗ್ಗಿ ಅತಿಎತ್ತರಕ್ಕೆ ಕೊಂಡೊಯ್ದ ನಟ ಎನಿಸಿ ತಳವೂರಿದರು. ವಿಶ್ವದ ಚಿತ್ರರಂಗದಲ್ಲಿ ಶೂನ್ಯದಿಂದ ಶಿಖರದವರೆಗೆ ತಲುಪಿದಂಥ ಕೆಲವೇ ದಕ್ಷ ಕಲಾವಿದರ ಪಟ್ಟಿಗೆ ಸೇರಿದರು.

ಇವರ ಕೆಲವು ಉತ್ತಮ ಚಿತ್ರಗಳು… ಟೈಗರ್, ಒಂದೇಗೂಡಿನ ಹಕ್ಕಿಗಳು, ಕಿಲಾಡಿತಾತ, ಅಗ್ನಿಪರೀಕ್ಷೆ [ಜಸ್ಟಿಸ್ ಜಗನ್ನಾಥ್] ಮದರ್‌ ಇಂಡಿಯ, ಚಕ್ರವ್ಯೂಹ, ಕಳ್ಳಕುಳ್ಳ, ಜಿದ್ದು, ಜಗ್ಗು, ಒಂದೇ ಗುರಿ, ಚಂಡಿಚಾಮುಂಡಿ, ಮುತ್ತೈದೆಭಾಗ್ಯ, ಮಾತೃಭೂಮಿ, ಪ್ರತಿಧ್ವನಿ, ಪ್ರೇಮಲೋಕ, ಬಾಸ್, ಯಮಕಿಂಕರ, ಕಿಂಗ್, ಮೇಯರ್ ಪ್ರಭಾಕರ, ಖಳನಾಯಕ, ಮಿಂಚು, ಮುಂತಾದ ಅನೇಕ ಸಿನಿಮಾದ ಪಾತ್ರಗಳು ನಿತ್ಯ ಸ್ಮರಿಸುವಂಥದ್ದು. ದಕ್ಷಿಣ ಭಾರತದ ಬಹು ಭಾಷೆಗಳ 300 ಚಿತ್ರಗಳಲ್ಲಿ ಅಭಿನಯಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡ ಇವರು ತಮ್ಮ ಉತ್ತಮ ಅಭಿನಯಕ್ಕೆ ಅನೇಕ ಪ್ರಶಸ್ತಿ ಬಹುಮಾನ ಬಿರುದು ಸನ್ಮಾನ ಗಳಿಸಿದ್ದರು.

ಇದನ್ನೂ ಓದಿ: ಭಾರತದ ಚಿತ್ರರಂಗದಲ್ಲಿ ಅಚ್ಚಳಿಯದ ಹೆಸರು ಬಿ.ಆರ್.ಪಂತುಲು..

ಸರಳ ಸಜ್ಜನಿಕೆಗೆ ಹೆಸರಾಗಿದ್ದ ಪ್ರಭಾಕರ್ ತಮ್ಮ ಬದುಕಿನುದ್ದಕ್ಕೂ ಒಳ್ಳೆನಡೆನುಡಿಯ ಮನುಷ್ಯನಾಗಿದ್ದರು. ಡಾ.ರಾಜ್, ಉದಯ್, ಕಲ್ಯಾಣ್, ಕುಮಾರತ್ರಯರು ಮಾತ್ರವಲ್ಲದೆ ದಿಗ್ಗಜರಾದ ಎಂ.ಜಿ.ಆರ್. ಶಿವಾಜಿಗಣೇಶನ್, ಎನ್.ಟಿ.ಆರ್, ಮುಮ್ಮುಟ್ಟಿ, ಧರ್ಮೇಂದ್ರ, ಬಚ್ಚನ್, ಆದಿಯಾಗಿ ದೇಶ-ವಿದೇಶದ ನಟನಟಿಯರು ಕೊಂಡಾಡಿದ್ದರು. ಎಲ್ಲ ಹೀರೋಗಳಿಗೆ ಹೇಳಿಕೊಡುತ್ತಿದ್ದ ಸ್ಟಂಟ್ ಮಾಸ್ಟರ್ ಗಳು  ಇವರ ಫೈಟಿಂಗ್ ಸ್ಟೈಲ್ ಗೆ ಮಾರುಹೋಗಿ ಇವರಿಂದಲೇ ಹೇಳಿಸಿಕೊಳ್ವ ವಿಶೇಷ- ವಿಚಿತ್ರ ಸಂದರ್ಭ ಬಂದದ್ದುಂಟು.

ಪ್ರಭಾಕರ್‌ಗೆ ಈ ಮೊದಲೇ ಶ್ರೀಮತಿ ಅಂಜು ಉರುಫ್ ಆಲ್ಫೋನ್ಝಾಮೇರಿ ಎಂಬ ಮಡದಿ ಇದ್ದರೂ ಚಿತ್ರನಟಿ ಜಯಮಾಲರನ್ನು ಮೆಚ್ಚಿ ಪ್ರೀತಿಸಿ ತಮ್ಮ ಪತ್ನಿಯನ್ನಾಗಿ ಸ್ವೀಕರಿಸಿದರು. ಒಟ್ಟು 5 ಮಕ್ಕಳ ತಂದೆಯಾಗಿ, ಕೈತುಂಬ ಇದ್ದ ಕಾಲ್ ಶೀಟ್ ಸಿನಿಮಾಗಳಲ್ಲಿ ಹಗಲುರಾತ್ರಿ ನಟಿಸಿ ಎಲ್ಲವನ್ನು ಹೇಗೋ ನಿಭಾಯಿಸಿದರು! ಎಲ್ಲವೂ ಸರಿ ಇದೆ ಎನ್ನುವಾಗಲೇ ಇದ್ದಕ್ಕಿದ್ದಂತೆ ಇವರ ಜೀವನದಲ್ಲಿ ಬಿರುಗಾಳಿ ಎದ್ದಿತು. ತಾರಾಪತ್ನಿ ಜಯಮಾಲ ಇವರಿಂದ ದೂರವಾದರು.

ಅಂದಿನಿಂದ ಇವರ ಖಾಸಗೀ ಜೀವನ ಹಾಗು ಸಿನಿಮಾ ಜೀವನ ಎರಡೂ ಮುದುಡಿಹೋಯಿತು. ದಿನೇ ದಿನೇ ದೈಹಿಕ, ಮಾನಸಿಕ ಸ್ಥಿತಿ ಬಿಗಡಾಯಿಸಿ ಬಗ್ಗಿ ತಗ್ಗಿ ಕುಗ್ಗಿ ಹೋದರು. ಅಂತ್ಯಕಾಲವು ದುರಂತ ಆಗುವ ಲಕ್ಷಣಕಂಡು ಶರೀರವು ರೋಗ ರುಜಿನದ ಗೂಡಾಯಿತು. ತಮ್ಮ ಸ್ವಯಂಕೃತ ಅಪರಾಧ ಎಂಬಂತೆ ಮದ್ಯ ವ್ಯಸನಿಯಾಗಿ, ರೋಗಕ್ಕೆ ದಾಸನಾಗಿ ತೀವ್ರ ಅನಾರೋಗ್ಯಕ್ಕೆ ತುತ್ತಾದರು.

ಇದನ್ನೂ ಓದಿ: ಕನ್ನಡ ಚಿತ್ರರಂಗ ಎಂದಿಗೂ ಮರೆಯದ ಜಿ.ವಿ.ಅಯ್ಯರ್…

ಅತಿರಥ ಮಹಾರಥ ನಟರಾದ ಅಂಬರೀಶ್, ವಿಷ್ಣುವರ್ಧನ್ ರವರ ಸಲಹೆ ಸೂಚನೆಯಂತೆ ಮಲ್ಯ ಆಸ್ಪತ್ರೆಗೆ ಸೇರಿಸಲಾಯ್ತು. ಇವರ ಕ್ಷೇಮವನ್ನು ನೋಡಿಕೊಳ್ಳುವ ಹೊಣೆಯನ್ನು ಮತ್ತೊಬ್ಬ ನಟ ಸುಂದರರಾಜ್ ಗೆ ವಹಿಸಿದರು. ಲಕ್ಷಾಂತರ ರೂಪಾಯಿ ಖರ್ಚು ವೆಚ್ಚವನ್ನು ಅಂಬರೀಶ್ ವಿಷ್ಣುವರ್ಧನ್ ಸೇರಿದಂತೆ ಚಿತ್ರೋದ್ಯಮದ ಇನ್ನೂ ಹಲವರು ಭರಿಸಿದರು. ಆದರೆ ಪ್ರಯೋಜನವಾಗಲಿಲ್ಲ. ಕೊನೆಗೆ ಧೃಢಕಾಯ ದೈತ್ಯಪ್ರತಿಭೆ ಮೃದುಮನಸ್ಸಿನ ಬಾಡಿಬಿಲ್ಡರ್ ಟೈಗರ್ ಪ್ರಭಾಕರ್ ಕೇವಲ ತಮ್ಮ 54ನೆ ವಯಸ್ಸಿಗೆ 25.3.2001ರಂದು ಬೆಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.

ಅಂತ್ಯಕ್ರಿಯೆ ಹೊಸೂರಿನಲ್ಲಿ ಜರುಗಿತು. ತಮ್ಮ ವೈಯಕ್ತಿಕ ಹಾಗೂ ಸಿನಿಮಾ ಬದುಕಿನಲ್ಲಿ ಕಷ್ಟಸುಖ, ಏರಿಳಿತ ಕಂಡುಂಡ ಈತ ಬಹುಭಾಷೆಯ ಚಿತ್ರಗಳಲ್ಲಿ ನಟಿಸಿದ ಒಟ್ಟು ಸಿನಿಮಾಗಳ ಸಂಖ್ಯೆ 300 ದಾಟಿತ್ತು. ಇವರ ಪುತ್ರ ವಿನೋದ್ ಪ್ರಭಾಕರ್ ’ನವಗ್ರಹ’ ಚಿತ್ರದಲ್ಲಿ ಅಭಿನಯಿಸಿ ಜನಪ್ರಿಯರಾದ ನಂತರ ಕೆಲವು ಚಿತ್ರಗಳಲ್ಲಿ ನಾಯಕ ನಟ, ಪೋಷಕ ನಟನಾಗಿ ಅಭಿನಯಿಸಿದ್ದಾರೆ. ತಮ್ಮ ತಂದೆಯ ಹೆಸರು ಉಳಿಸಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ ಈ ಮರಿಟೈಗರ್…?!

admin
the authoradmin

8 Comments

  • ಹಳೇ ಕಾಲದ ಸಿನಿಮ ನಟನಟಿಯರ ಕುರಿತು ಕುಮಾರಕವಿನಟರಾಜ ರವರು ಬರೆಯುವ ಪ್ರತಿಯೊಂದು ಲೇಖನವು ಬಹಳ ಕುತೂಹಲದಿಂದ ಕೂಡಿದೆ. ಧನ್ಯವಾದ ನಮಸ್ಕಾರ. ಸತ್ಯನಾರಾಯಣ, ಸರಸ್ವತಿಪುರಂ, ಮೈಸೂರು

  • ಟೈಗರ್ ಪ್ರಭಾಕರ್ ರವರ ಬಗ್ಗೆ ನಮಗೆಲ್ಲ ವಿವರವಾದ ವಿಚಾರ ಗೊತ್ತೇಇರಲಿಲ್ಲ. ನಟರಾಜ ಕವಿಯವರು ಈ ಲೇಖನದ ಮೂಲಕ ಒಳ್ಳೆಯ ಮಾಹಿತಿ ನೀಡಿದ್ದು ಈಗಿನ ಕಾಲದ ಸಿನಿಮ ಪ್ರಿಯರಿಗೆ ರಸದೌತಣ ಹಾಗೂ ಉಪಯುಕ್ತ. ಅನಂತ ಧನ್ಯವಾದ. ಹೇಮಲತಾ, ಹೆಚ್.ಆರ್.ಪಿ.ಸಿ.ಲೇಔಟ್, ಬೆಂಗಳೂರು.

  • ನನಗಂತೂ ಟೈಗರ್ ಪ್ರಭಾಕರ್ ಲೇಖನ ತುಂಬ ಇಷ್ಟವಾಯಿತು. ಏಕೆಂದರೆ ಇಷ್ಟು ಚಿಕ್ಕ ಲೇಖನದಲ್ಲಿ ಇವರ ಇಡೀ ಜೀವನ ದರ್ಶನ ಮಾಡಿಸಿರುವ ನಮ್ಮ ಕನ್ನಡನಾಡಿನ ಹಿರಿಯಲೇಖಕ ಕುಮಾರಕವಿ ನಟರಾಜರವರಿಗೆ ಸಹಸ್ರ ವ೦ದನೆಗಳು. ಜನಮನ ಪತ್ರಿಕೆಯವರಿಗೂ ನಮಸ್ಕಾರಗಳು.
    ಕೆ.ಜಿ.ಲಿಂಗಪ್ಪ, ದಾವಣಗೆರೆ, ಕರ್ನಾಟಕ

  • ನನಗಂತೂ ಟೈಗರ್ ಪ್ರಭಾಕರ್ ಲೇಖನ ತುಂಬ ಇಷ್ಟವಾಯಿತು. ಏಕೆಂದರೆ ಇಷ್ಟು ಚಿಕ್ಕ ಲೇಖನದಲ್ಲಿ ಇವರ ಇಡೀ ಜೀವನ ದರ್ಶನ ಮಾಡಿಸಿರುವ ನಮ್ಮ ಕನ್ನಡನಾಡಿನ ಹಿರಿಯಲೇಖಕ ಕುಮಾರಕವಿ ನಟರಾಜರವರಿಗೆ ಸಹಸ್ರ ವ೦ದನೆಗಳು. ಜನಮನ ಪತ್ರಿಕೆಯವರಿಗೂ ನಮಸ್ಕಾರಗಳು. ಕೆ.ಜಿ.ಲಿಂಗಪ್ಪ, ದಾವಣಗೆರೆ, ಕರ್ನಾಟಕ

  • Very much appreciated and interesting article about late tiger Prabhakar by NATRAJ sir 👏 👍 😀 👌. Thanks. Mrs. & Mr.Robert D’Souza, Cox town, Bangalore.

  • Thanksgiving article on legendary villain cum hero of Sandalwood film industry, late tiger Prabhakar, beautifully
    written by NATRAJ sir 👏👍Abhishekh Shetty, konaje Mangalore

  • Very much appreciated and interesting article about late tiger Prabhakar by NATRAJ sir 👏 👍 😀 👌Thanks all.
    -Mrs. & Mr.Robert D’Souza, Cox town, Bangalore.

  • Tiger Prabhakar article is superb. But of course very much pathetic and tragedy end of his life made me to cry 😢 😭 Anbukumar, KGF.

Leave a Reply