LatestMysore

ಹುಣಸೂರು ನಗರದಲ್ಲಿ ಒಳಚರಂಡಿ ನಿರ್ಮಿಸಿ ಲಕ್ಷ್ಮಣತೀರ್ಥ ನದಿ ಸ್ವಚ್ಛತೆ ಕಾಪಾಡಿ;ಯದುವೀರ್

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ನಗರದ ಮದ್ಯಭಾಗದಲ್ಲಿ ಹರಿಯುತ್ತಿರುವ ಲಕ್ಷ್ಮಣತೀರ್ಥ ನದಿಗೆ  ಸೇರುತ್ತಿರುವ ಕಲ್ಮಶ ನೀರು ತಪ್ಪಿಸಲು ಇಡೀ ನಗರಕ್ಕೆ ಒಳಚರಂಡಿ ನಿರ್ಮಿಸಲು ರಾಜ್ಯ ಸರಕಾರಕ್ಕೆ ತಕ್ಷಣವೇ ಪ್ರಸ್ತಾವನೆ ಸಲ್ಲಿಸಬೇಕೆಂದು ನಗರ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಯ ಇಂಜಿನಿಯರ್‌ಗಳಿಗೆ ಸಂಸದ ಯದುವೀರ್ ಒಡೆಯರ್ ಸೂಚಿಸಿದರು.

ನಗರದ ಕಲ್ಕುಣಿಕೆ ಬಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಕಾರ್ಯವೈಖರಿಯನ್ನು ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ ನಗರ ವಿಸ್ತಾರವಾಗಿ ಬೆಳೆದಿದೆ. ಸಮರ್ಪಕ ಯುಜಿಡಿ ಇಲ್ಲದೆ ನದಿಗೆ ಕಲ್ಮಶ ನೀರು ಸೇರುತ್ತಿದ್ದು, ನದಿ ಸಂಪೂರ್ಣ ಕಲುಷಿತಗೊಂಡಿದೆ. ಈಗಾಗಲೇ ಒಳಚರಂಡಿ ವತಿಯಿಂದ ನಿರ್ಮಿಸಿರುವ  ಎರಡು ಸಂಸ್ಕರಣಾ ಘಟಕಗಳು ಸಾಲದಾಗಿದ್ದು, ಕಲ್ಮಶ ನೀರು ಸೇರದಂತೆ ನೋಡಿಕೊಳ್ಳುವುದೇ ಮುಖ್ಯವಾಗಿದೆ. ನದಿ ಶುದ್ದೀಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದಲ್ಲಿ ಯಾವುದಾದರೊಂದು ಯೋಜನೆಯಡಿ ಕ್ರಮಕೈಗೊಳ್ಳಬಹುದಾಗಿದೆ ಎಂದರು.

ಈ ವೇಳೆ ನಗರಸಭೆ ಮಾಜಿ ಸದಸ್ಯ ವಿವೇಕಾನಂದ ನಿರ್ವಹಣೆ ಇಲ್ಲದೆ ಹಲವಾರು ಬಡಾವಣೆಯ ಮನೆಗಳಿಗೆ ಗಲೀಜು ನೀರು ನುಗ್ಗುತ್ತಿದೆ ಎಂದು ಆರೋಪಿಸಿದರೆ,  ಸತ್ಯಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ನದಿಯ ಕೊಳಚೆ ನೀರನ್ನು ಎರಡು ಕೋಟಿ ಮಂದಿ ಬಳಸುತ್ತಿದ್ದಾರೆ.  ನದಿ ಸ್ವಚ್ಚತೆಗೆ ಕ್ರಮವಹಿಸಬೇಕೆಂದು ಮನವಿ ಮಾಡಿದರು.

ವಿವೇಕಾನಂದರ ಆರೋಪಕ್ಕೆ ನಗರಸಭೆವತಿಯಿಂದ ಕಳೆದ 26 ವರ್ಷಗಳ ಹಿಂದೆ ನಿರ್ಮಿಸಿದ್ದ ಎಸ್‌ಟಿಪಿ ಪ್ಲಾಂಟ್‌ನ ಸಾಮರ್ಥ್ಯ ಸಾಲದಾಗಿದೆ. ಅಲ್ಲದೆ ವಿದ್ಯುತ್ ಕಡಿತಗೊಂಡ ವೇಳೆ ಪ್ರತ್ಯೇಕ ಜನರೇಟರ್ ವ್ಯವಸ್ಥೆ ಇಲ್ಲದ ಪರಿಣಾಮ ಈ ಅವಸ್ಥೆ ಆಗುತ್ತಿದೆ. ನಗರದ ಬಹುತೇಕ ಬಡಾವಣೆಗಳಲ್ಲಿ ಯುಜಿಡಿ ವ್ಯವಸ್ಥೆ ಇಲ್ಲದೆ ನದಿಗೆ ಕೊಳಚೆ ನೀರು ಸೇರುತ್ತಿದೆ. ಕಳೆದ ಮಾರ್ಚ್ ನಲ್ಲಿ ಸರಕಾರಕ್ಕೆ 72.5ಕೋಟಿ ವೆಚ್ಚದಡಿ ಯುಜಿಡಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಒಳಚರಂಡಿ ಮಂಡಳಿಯ ಇಇ ಜಯರಾಂರವರು ಸ್ಪಷ್ಟನೆ ನೀಡಿದರು. ಇದನ್ನು ಸರಿಪಡಿಸಲು ಆಗಬೇಕಾದ ಪರಿಹಾರದ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸಂಸದರು ಸೂಚಿಸಿದರು

ನಗರ ಸಭೆ ಆಯುಕ್ತೆ ಮಾನಸ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಹೊನ್ನಪ್ಪ ರಾವ್ ಕಾಳಿಂಗೆ, ನಗರ ಸಭೆ ಮಾಜಿ ಸದಸ್ಯ ಗಣೇಶಕುಮಾರಸ್ವಾಮಿ   ಬಿಜೆಪಿ ಪಕ್ಷದ ಮುಖಂಡ ಬಿಳಿಕೆರೆ ಪ್ರಸನ್ನ, ದೇವರಹಳ್ಳಿ ಸೋಮಶೇಖರ್ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

admin
the authoradmin

Leave a Reply