LatestMysore

ಗದ್ದಿಗೆ ಕೆಂಡಗಣ್ಣೇಶ್ವರಸ್ವಾಮಿ ಗರ್ಭಗುಡಿಯ ನವೀಕರಣ ಸಮಾರಂಭದಲ್ಲಿ ಸಚಿವ ಈಶ್ವರ ಖಂಡ್ರೆ ಭಾಗಿ

ಹುಣಸೂರು(ನಂಜಾಪುರ ಮನುಕುಮಾರ್):  ಇಂದು ಸಮಾಜ ಕವಲು ದಾರಿಯಲ್ಲಿದ್ದು, ನೈತಿಕ ಮೌಲ್ಯಗಳನ್ನು ಪುನರುತ್ಥಾನ ಮಾಡುವ ಕಾರ್ಯ ಅತ್ಯಗತ್ಯವಾಗಿ ಆಗಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಹುಣಸೂರು ತಾಲೂಕು  ಶ್ರೀ ಕ್ಷೇತ್ರ ಗದ್ದಿಗೆ ಶ್ರೀ ಕೆಂಡಗಣ್ಣೇಶ್ವರ ಮತ್ತು ಮಹದೇಶ್ವರ ಸ್ವಾಮಿಯ ದೇವಾಲಯದ ಗರ್ಭಗುಡಿಯ ನವೀಕರಣ, ದಾಸೋಹ ಪ್ರಸಾದ,  ರಜತಪೀಠ ಸಮರ್ಪಣೆ ಹಾಗೂ ಗೋಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಸಮಾಜದಲ್ಲಿ ನೈತಿಕತೆ ಕುಸಿಯುತ್ತಿದ್ದು, ತಾಯಂದಿರು ತಮ್ಮ ಮಕ್ಕಳಿಗೆ ಸಂಸ್ಕೃತಿಯ ಪರಿಚಯ ಮಾಡಿಸಬೇಕು, ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಬೇಕು ಎಂದರು.

ಧರ್ಮೋ ರಕ್ಷತಿ ರಕ್ಷಿತಃ ಎಂದು ಹೇಳುತ್ತಾರೆ. ಯಾರು ಧರ್ಮ ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ. ಧರ್ಮ ಅಂದರೆ ಸತ್ಯ, ಕೆಳಗೆ ಬಿದ್ದವರನ್ನು ಮೇಲೆತ್ತುವುದೇ ಧರ್ಮ, ಹಸಿದವರಿಗೆ ಅನ್ನ ಹಾಕುವುದೇ ಧರ್ಮ, ನೊಂದವರ ಕಣ್ಣೀರು ಒರೆಸುವುದೇ ಧರ್ಮ, ನಾವೆಲ್ಲರೂ ಹಸಿದವರಿಗೆ ಅನ್ನ ನೀಡಬೇಕು, ನೊಂದವರ ಕಣ್ಣೀರು ಒರೆಸಬೇಕು, ತಂದೆ- ತಾಯಿ ನೋಯಿಸದಂತೆ ನೋಡಿಕೊಳ್ಳುವುದು ಇಂದಿನ ಧರ್ಮವಾಗಿದೆ  ಎಂದರು.

ಪಶ್ಚಿಮಘಟ್ಟ ಸಂರಕ್ಷಣೆಗೆ ಕರೆ

ಪಶ್ಚಿಮಘಟ್ಟ ಜೀವವೈವಿಧ್ಯತೆಯ ತಾಣವಾಗಿದೆ. ಇಲ್ಲಿ ಅನೇಕ ಪ್ರಭೇಧದ ಸಸ್ಯಸಂಕುಲ, ಪ್ರಾಣಿ ಸಂಕುಲ, ಕೀಟ ಸಂಕುಲ, ಪಕ್ಷಿ ಸಂಕಲವಿದೆ. ಹಲವು ನದಿಗಳ ಮೂಲ ಪಶ್ಚಿಮಘಟ್ಟವಾಗಿದೆ. ಹುಣಸೂರು ತಾಲೂಕು ಇಂತಹ ದೈವದತ್ತವಾದ ಪ್ರಕೃತಿ ಪರಿಸರದಲ್ಲಿದ್ದು, ಹಚ್ಚ ಹಸಿರಿನ ನಡುವೆ ಬದುಕುವ ನೀವು ಪುಣ್ಯವಂತರು ಎಂದರು.

ಅಗ್ನಿಯ ಮೇಲೆ ಕುಳಿತು ಘೋರ ತಪಸ್ಸು ಆಚರಿಸಿ ದಿವ್ಯಶಕ್ತಿ ಪಡೆದ ಸದ್ಗುರು ಶ್ರೀ ಕೆಂಡಗಣ್ಣಸ್ವಾಮೀಜಿ ಅವರ ಕಣ್ಣು ಕೆಂಪು ಕೆಂಡದಂತೆ ಕಾಣುತ್ತಿತ್ತು. ಹೀಗಾಗಿ ಅವರನ್ನು ಕೆಂಡಗಣ್ಣಸ್ವಾಮಿ ಎಂದೇ ಭಕ್ತರು ಕರೆಯುತ್ತಿದ್ದರು ಎಂದು ನಾನು ಕೇಳಿದ್ದೇನೆ. ಶ್ರೀ ಕೆಂಡಗಣ್ಣೇಶ್ವರ ಸ್ವಾಮಿ ಅವರು ಜೀವಂತ ಸಮಾಧಿಯಾಗಿ, ತಮ್ಮ ದರ್ಶನಕ್ಕೆ ಬರುವ ಎಲ್ಲ ಭಕ್ತರನ್ನು ಹರಸುತ್ತಿದ್ದಾರೆ. ಪವಾಡ ಪುರುಷರಾಗಿ, ಸದ್ಗುರುಗಳಾಗಿ ಅವರು ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಅಮರವಾದದ್ದು.

ಮೈಸೂರು ಮಹಾರಾಜರ ಆರಾಧ್ಯ ದೈವ ಹಾಗೂ ರಾಜ್ಯಾದ್ಯಂತ ಅಪಾರ ಭಕ್ತವೃಂದ ಹೊಂದಿರುವ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಗದ್ದಿಗೆ ಗುರು ಶ್ರೀ ಕೆಂಡಗಣ್ಣೇಶ್ವರ ಸ್ವಾಮಿ  ಹಾಗೂ ಮಹದೇಶ್ವರಸ್ವಾಮಿ ದೇವಾಲಯವಿರುವ ಈ ಕ್ಷೇತ್ರ ಪರಮ ಪವಿತ್ರ ಕ್ಷೇತ್ರವಾಗಿದೆ. ದೇವಾಲಯದ ಆವರಣದಲ್ಲಿ ಗ್ರಾಮಸ್ಥರು, ಸಾರ್ವಜನಿಕರು ಮತ್ತು ಭಕ್ತಾದಿಗಳ ಅನುಕೂಲಕ್ಕಾಗಿ ಓವರ್ ಹೆಡ್ ಟ್ಯಾಂಕ್, ಶೌಚಾಲಯ ನಿರ್ಮಿಸಲು ಇಲಾಖೆಯಿಂದ ಕ್ರಮ ವಹಿಸುವ ಭರವಸೆ ನೀಡಿದರು.

ಏಕ ಬಳಕೆ ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ…

ಮಣ್ಣಲ್ಲಿ  ಮಣ್ಣಾಗದ, ನೀರಲ್ಲಿ ಕರಗದ ಏಕ ಬಳಕೆ ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ತಾವು ಪಂಚಾಯಿತಿಗಳಿಗೆ ಸೂಚನೆ ನೀಡಿರುವುದಾಗಿ ಅವರು ತಿಳಿಸಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಈ ವರ್ಷ 15 ಸಾವಿರ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದಾಗಿ ತಿಳಿಸಿದ ಅವರು, ಪ್ರತಿ ತಾಲೂಕು ಕೇಂದ್ರದಲ್ಲಿ ವೀರಶೈವ ಲಿಂಗಾಯತ ಭವನ ನಿರ್ಮಿಸಲು ಮಹಾ ಸಭಾ ರಾಷ್ಟ್ರೀಯ ಅಧ್ಯಕ್ಷನಾಗಿ ತಾವು ಶ್ರಮಿಸುತ್ತಿರುವುದಾಗಿ ತಿಳಿಸಿದರು.

ಅರ್ಜುನ ಆನೆ ಸ್ಮರಿಸಿದ ಈಶ್ವರ ಖಂಡ್ರೆ…

ಕಾಕನಕೋಟೆಯಲ್ಲಿ ನಡೆದ ಖೆಡ್ಡಾ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿದ್ದ ಅರಣ್ಯ ಪಡೆಯ ಮೆಚ್ಚಿನ ಆನೆ, 22 ಬಾರಿ ಜಂಬೂಸವಾರಿಯಲ್ಲಿ ಭಾಗಿಯಾಗಿ, 8 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಅರ್ಜುನನ್ನು ಸೆರೆ ಹಿಡಿದಿದ್ದೂ ಈ ಪ್ರದೇಶದಲ್ಲೇ ಎಂದು ಈಶ್ವರ ಖಂಡ್ರೆ ಸ್ಮರಿಸಿದರು. ಅರ್ಜುನ ಕಳೆದ 3 ವರ್ಷದ ಹಿಂದೆ ಕಾರ್ಯಾಚರಣೆಯಲ್ಲಿ ಮೃತಪಟ್ಟಾಗ, ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿ, ಅರ್ಜುನ ಆನೆ ಇದ್ದ ಬಳ್ಳೆ ಶಿಬಿರದಲ್ಲಿ ಮತ್ತು ಯಸಳೂರು ಹೋಬಳಿ ದಬ್ಬಳಿಕಟ್ಟೆಯಲ್ಲಿ ಅರ್ಜುನನ ಸ್ಮಾರಕ ನಿರ್ಮಿಸಿದ್ದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ ಈಶ್ವರ ಖಂಡ್ರೆ ಅವರು ಅರಣ್ಯ ಸಚಿವರಾಗಿದ್ದಾಗ ಅವರು ಗಜ ಪಯಣಕ್ಕೆ ಬರುತ್ತಿದ್ದರು. ನಾವು ಕಾಡಿನಂಚಿನ ಗ್ರಾಮಗಳ ಯಾವುದೇ ಸಮಸ್ಯೆ, ಅಭಿವೃದ್ಧಿ ವಿಚಾರ ತಿಳಿಸಿದರೂ ತಕ್ಷಣ ಸ್ಪಂದಿಸುತ್ತಿದ್ದರು ಎಂದು ಹೇಳಿದರು.

ಮಾಜಿ ಶಾಸಕ ಮಂಜುನಾಥ್ ಮಾತನಾಡಿ, ಅರಣ್ಯ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಈಶ್ವರ ಬಿ ಖಂಡ್ರೆ ಅವರು ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವರಾಗಿ ಗ್ರಾಮಾಭಿವೃದ್ಧಿಗೆ ಪಣತೊಟ್ಟಿದ್ದಾರೆ ಎಂದು ಹೇಳಿ ಬೆಳ್ಳಿಯ ಕಡಗ ಹಾಕಿ ಸನ್ಮಾನಿಸಿದರು. ದೇವಾಲಯದ ಬೇಡಿಕೆಗಳನ್ನು ಈಡೇರಿಸಲು ಸಚಿವರಿಗೆ ತಿಳಿಸಿದು ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.

ತಮಗೆ ಗೌರವಪೂರ್ವಕವಾಗಿ ನೀಡಿದ ಬೆಳ್ಳಿಯ ಕಡಗವನ್ನು ಈಶ್ವರ ಖಂಡ್ರೆ ಅವರು ದೇವಾಲಯದ ದಾಸೋಹಕ್ಕೆ ಪುನರ್ ಸಮರ್ಪಣೆ ಮಾಡಿದರು.  ಇದೇ ಸಂದರ್ಭದಲ್ಲಿ ದೇವಾಲಯದ ಜೀರ್ಣೋದ್ಧಾರ ಮಾಡಿದ ದಾನಿಗಳಾದ ತೋಟಿಮನೆ ಸಹೋದರರಿಗೂ ಹೆಚ್.ಪಿ.ಮಂಜುನಾಥ್ ಬೆಳ್ಳಿ ಖಡ್ಗ ಹಾಕಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ , ಪೂಜ್ಯ ಶ್ರೀ ಸಾಂಬಸದಾಶಿವ ಸ್ವಾಮೀಜಿ, ಧರ್ಮದರ್ಶಿಗಳಾದ ಬಿ.ಎಸ್. ಮಹದೇವಪ್ಪ ಮತ್ತು ಪುಣ್ಯ ಶೀಲ, ದೇವಾಸ್ಥಾನ ದಾನಿಗಳಾದ ತೋಟಿಮನೆ ನಂಜುಡಶೆಟ್ಟಿ, ಮಹದೇವಪ್ಪ, ಸ್ವಾಮಿಶೆಟ್ಟರು, ಕೆಂಟಗಣ್ಣಶೆಟ್ಟರು, ದಾಸೋಹ ಭವನದ ದಾನಿ ರಾಜೇಗೌಡ, ಮುಖಂಡರಾದ ಗದ್ದಿಗೆ ದೇವರಾಜ್, ಕರಿಮುದ್ದನಹಳ್ಳಿ ವಸಂತ್ ಕುಮಾರ್,  ಹಂದನಹಳ್ಳಿ ಸೋಮಶೇಖರ್, ರಮೇಶ್, ಪ್ರಕಾಶ್, ಸತೀಶ ಪಾಪಣ್ಷ, ವರುಣ ಮಹೇಶ್, ಸಿಇಓ ಉಕೇಶ್ ಕುಮಾರ್,    ತಹಸಿಲ್ದಾರ್ ಜೆ.ಮಂಜುನಾಥ್,  ಮತ್ತಿತರರು ಪಾಲ್ಗೊಂಡಿದ್ದರು.

admin
the authoradmin

Leave a Reply