CinemaLatest

ಭಾರತಿದೇವಿ.. ಭಾರತಿ ವಿಷ್ಣುವರ್ಧನ್ ಆಗಿದ್ದೇಗೆ?….ಇದು 55 ವರ್ಷಗಳ ಸಿನಿಮಾ  ಜರ್ನಿ..

ಜನಜಂಗುಳಿಯನ್ನು ಸೀಳಿ  ಜಾಗ ಬಿಡಿಸಿಕೊಂಡು ಹೋಗಿ ಚಿತ್ರೀಕರಣದಲ್ಲಿದ್ದ ಡಾ.ರಾಜ್‍ ಕುಮಾರ್ ದರ್ಶನ ಪಡೆದು ಕುಣಿದು ಕುಪ್ಪಳಿಸಿದ್ದ ಪುಟ್ಟ ಹುಡುಗಿ ಮುಂದೆ ಅವರೊಂದಿಗೆ ನಟಿಸಿ ಭಲೇ ಜೋಡಿ ಎನಿಸಿಕೊಂಡರು.. ಅವರು ಬೇರಾರು ಅಲ್ಲ ನಟಿ ಭಾರತಿ ವಿಷ್ಣು ವರ್ಧನ್… ಅವರ ಬಗ್ಗೆ ಒಂದಿಷ್ಟು ವಿಚಾರವನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್  ಅವರು ಇಲ್ಲಿ ತೆರೆದಿಟ್ಟಿದ್ದಾರೆ…

ಭಾರತದ ಸ್ವಾತಂತ್ರ್ಯ ದಿನವಾದ 15.8.1947ರಂದು ಬೆಂಗಳೂರಿನ ಮಧ್ಯಮವರ್ಗ ಕುಟುಂಬದಲ್ಲಿ ಜನಿಸಿದ ಈ ಮರಾಠಿಮೊಗ್ಗು ನಿಜವಾಗಿಯು ಪುಣ್ಯವಂತೆ. ಏಕೆಂದರೆ ಸ್ವರಾಜ್ಯ ದಿನದಂದು ಜನಿಸುವ ಮಕ್ಕಳಿಗೆ “ಭಾರತಮಾತೆ, ಲೋಕಮಾತೆ, ಭಾರತಿ, ಭರತ, ಭರತ್‍ಕುಮಾರ್, ಭಾರತ್, ಭಾರತೀಸುತ” ಮುಂತಾದ ಮಾತೃಭೂಮಿ, ತಾಯಿನಾಡು ಜ್ಞಾಪಕಾರ್ಥ ಇರುವಂತಹ ನಾಮಕರಣ ಮಾಡಲು ಮಾಧ್ಯಮದ ಮೂಲಕ ಗಾಂಧೀಜಿ ಸರ್ದಾರ್‍ ಪಟೇಲ್ ದೇಶವಾಸಿಗಳಿಗೆ ಕರೆ ನೀಡಿದ್ದರು. ಈ ಕಾರಣಕ್ಕೂ ಇವರ ಪೋಷಕರು ಮಗುವಿಗೆ “ಭಾರತಿದೇವಿ” ಎಂದು ನಾಮಕರಣ ಮಾಡಿರಬಹುದು.

ಬಾಲ್ಯದಿಂದಲು ಬಲು ಚೂಟಿ ಬಹಳ ಬ್ಯೂಟಿ ಆಗಿದ್ದ ಈಕೆ ಓದುವುದರಲ್ಲಿ ಮಾತ್ರವಲ್ಲದೆ ಇನ್ನಿತರ ಚಟುವಟಿಕೆಗಳಲ್ಲು ಎಲ್ಲರಿಗಿಂತ ಮುಂದಿರುತ್ತಿದ್ದ ತುಸು ಘಾಟಿ. ಪುಟ್ಟ ಹುಡುಗಿ ಇದ್ದಾಗ ಒಮ್ಮೆ ಜನಜಂಗುಳಿ ತಳ್ಳಿಕೊಂಡು ಜಾಗ ಬಿಡಿಸಿಕೊಂಡು ಹೋಗಿ ಚಿತ್ರೀಕರಣದಲ್ಲಿದ್ದ ರಾಜ್‍ಕುಮಾರ್ ದರ್ಶನ ಪಡೆದು ಕುಣಿದು ಕುಪ್ಪಳಿಸಿದ್ದ ಭಲೇರಾಣಿ. ಮುಂದೊಂದಿನ ಅದೇ ರಾಜ್‍ಕುಮಾರ್ ಜತೆಗೆ ನಟಿಸಿ ಚಿತ್ರರಂಗದ ಧ್ರುವತಾರೆ ಆಗುವೆನೆಂದು ಊಹಿಸಲು ಅಸಾಧ್ಯವಾದ ಕಾಲವದು. ಆದರೆ ಇದೇ ಬೆಂಗಳೂರು ಬೆಡಗಿ ಕಾಲಕ್ರಮೇಣ ಭಾರತ ಚಿತ್ರರಂಗದ ದಿಗ್ಗಜ ಕಲಾವಿದರ ಗುಂಪಿಗೆ ಸೇರುತ್ತೇನೆಂದು ಕನಸಲ್ಲು ನೆನೆಸಿರಲಿಲ್ಲ?

ಎಂ.ಜಿ.ಆರ್. ಶಿವಾಜಿಗಣೇಶನ್, ಮುತ್ತುರಾಮನ್, ಜೆಮಿನಿ ಗಣೇಶನ್, ಎ.ನಾಗೇಶ್ವರರಾವ್, ಎನ್.ಟಿ.ಆರ್. ರಾಕೇಶರೋಶನ್, ಮೆಹಮೂದ್, ಮನೋಜಕುಮಾರ್, ವಿನೋದಖನ್ನ, ಕನ್ನಡ ಚಿತ್ರರಂಗದ ರಾಜ್‍ಕುಮಾರ್ ಕಲ್ಯಾಣಕುಮಾರ್ ಉದಯಕುಮಾರ್ ರಾಜೇಶ್ ವಿಷ್ಣುವರ್ಧನ್ ಅಂಬರೀಷ್ ನಾಗ್  ಬ್ರದರ್ಸ್, ಮುಂತಾದ ಮೇರುನಟರಲ್ಲದೆ ಬಹುತೇಕ ಎಲ್ಲಾ ಹೀರೋಗಳ ಜತೆ ನಟಿಸಿದ ಏಕೈಕ ಮೋಹಕತಾರೆ. ಚಂದನವನದ ಮುದ್ದುನಟಿ ಭಾರತಿ 55 ವರ್ಷಕಾಲ ತುಳು ಕೊಂಕಣಿ ಕೊಡವ ಹಿಂದಿ ಮರಾಠಿ ತಮಿಳ್ ತೆಲುಗು ಮಲಯಾಳಂ ಮುಂತಾದ ಬಹುಭಾಷೆಯ ಅಂದಾಜು 200 ಸಿನಿಮಾಗಳಲ್ಲಿ ನಟಿಸಿ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದರು!

ಭಾರತಿ ಜತೆಗೆ ನಟಿಸಿದ ವಿವಿಧ ಭಾಷೆಯ 50ಕ್ಕು ಹೆಚ್ಚು ಹೀರೋಗಳ ಪೈಕಿ ಕನ್ನಡ ಚಿತ್ರರಂಗದ ರಾಜ್-ಭಾರತಿ ಜೋಡಿಯು ಅಪರೂಪದ ಅಪ್ರತಿಮ ಅದ್ಭುತ ಜೋಡಿ ಎನಿಸಿತ್ತು. ಒಂದುಕಾಲಕ್ಕೆ “ಭಾರತ ಚಿತ್ರರಂಗದ ಅತ್ಯಂತ ಜನಪ್ರಿಯ ಈಡುಜೋಡು ಮತಗಣತಿ ಸ್ಫರ್ಧೆ” ಅಂಕಿಅಂಶದ ಪ್ರಕಾರ ದೇಶದಲ್ಲೇ ಧರ್ಮೇಂದ್ರ-ಹೇಮಮಾಲಿನಿ ಜೋಡಿ ನಂತರ ರಾಜ್‍ಕುಮಾರ್-ಭಾರತಿ ನಂ.1. ಜನಪ್ರಿಯ ಜೋಡಿ ಎಂದು ಪ್ರಕಟಗೊಂಡಿದ್ದು ಇತಿಹಾಸ.

ಚಂದನವನದಲ್ಲಿ ಅಮೋಘವಾಗಿ ಮೆರೆದ ಭಾರತಿ, ರಾಜ್ ಜತೆಗೆ ಎಮ್ಮೆತಮ್ಮಣ್ಣ ಬೀದಿಬಸವಣ್ಣ ಶ್ರೀಕೃಷ್ಣ ದೇವರಾಯ, ಬಂಗಾರದಮನುಷ್ಯ, ಮೇಯರ್ ಮುತ್ತಣ್ಣ, ಬಾಳುಬೆಳಗಿತು, ಭಲೇಜೋಡಿ, ಹೃದಯ ಸಂಗಮ, ತಾಯಿದೇವರು, ನಮ್ಮಸಂಸಾರ, ಕುಲಗೌರವ, ಜಗಮೆಚ್ಚಿದಮಗ, ಬಿಡುಗಡೆ, ದೂರದಬೆಟ್ಟ ಮುಂತಾದ 28 ಸಿನಿಮಾಗಳಲ್ಲಿ ನಟಿಸಿ ಅತಿಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಹೀರೋಯಿನ್ ಪೈಕಿ ಲೀಲಾವತಿ, ಜಯಂತಿ, ನಂತರದ 3ನೇ ಸ್ಥಾನ ಪಡೆದರು.

1965-75 ವರೆಗೆ ಇವರ ಸಿನಿಮ ನೋಡುತ್ತಿದ್ದ ಕೋಟ್ಯಾಂತರ (ಮುಗ್ಧ)ಮಹಿಳೆಯರು ಮಕ್ಕಳು ಆದಿಯಾಗಿ ಚಿತ್ರಪ್ರೇಕ್ಷಕರು ಇವರಿಬ್ಬರು ಸ್ವಂತ ಗಂಡ-ಹೆಂಡ್ತಿ ಇರ ಬಹುದೆಂದು ಮಾತ ನಾಡುತ್ತಿದ್ದರಂತೆ? ಇವರಿಬ್ಬರ ಕೆಮಿಷ್ಟ್ರಿ ಇರುವಂತಹ ಸಿನಿಜೋಡಿಯನ್ನು ಕಾಣುವುದು ಇವತ್ತಿಗೂ ವಿರಳ!

ರಾಜ್ಯಪ್ರಶಸ್ತಿ, ರಾಷ್ಟ್ರಪ್ರಶಸ್ತಿ, ಫಿಲಂಫೇರ್‍ ಪ್ರಶಸ್ತಿ, ಸೈಮಾಪ್ರಶಸ್ತಿ,  ಕ.ರಾ.ಮು.ವಿ. ಗೌ.ಡಾಕ್ಟರೇಟ್, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಶ್ರೀ ಸೇರಿದಂತೆ ಅನೇಕ ಶ್ರೇಷ್ಠನಟಿ ಪುರಸ್ಕಾರ ಬಿರುದು ಸನ್ಮಾನ ಗಳಿಸಿದ್ದಾರೆ. ಜನನಿ, ಮುಕ್ತಮುಕ್ತ, ಮುಂತಾದ ಟಿ.ವಿ.ಧಾರಾವಹಿಗಳಲ್ಲಿ ನಟಿಸಿ ಸೈಎನಿಸಿಕೊಂಡರು. ಕೆಲವಾರು ಚಿತ್ರಗಳಿಗೆ ನಿರ್ಮಾಪಕಿ ನಿರ್ದೇಶಕಿ ಕಾರ್ಯನಿರ್ವಹಿಸಿ ಯಶಸ್ವಿಯಾದರು. ಗಾಯಕ ಟಿ.ಎಂ.ಸೌಂದರರಾಜನ್ ಜತೆಸೇರಿ ಯುಗಳಗೀತೆ ಹಾಡುವ ಮೂಲಕ ಹಿನ್ನೆಲೆಗಾಯಕಿಯೂ ಆದರು. ಭಾರತದ ಖ್ಯಾತ ನಟ ನಿರ್ಮಾಪಕ ನಿರ್ದೇಶಕ ಬಿ.ಆರ್.ಪಂತುಲುರವರ ಪದ್ಮಿನಿ ಪಿಕ್ಛರ್ಸ್ ಸಂಸ್ಥೆ ನಿರ್ಮಿಸಿ 1966ರಲ್ಲಿ ತೆರೆಕಂಡ ದುಡ್ಡೇದೊಡ್ಡಪ್ಪ ಚಿತ್ರದ ಮೂಲಕ ಸ್ಯಾಂಡಲ್ವುಡ್‍ಗೆ ಪ್ರವೇಶ ಮಾಡಿದರು.

ಭಾರತಿ ನಟಿಸಿದ ಸಿನಿಮಾಗಳು….

ಲವ್‍ಇನ್‍ಬೆಂಗಳೂರು, ಎಮ್ಮೆತಮ್ಮಣ್ಣ, ಬೀದಿಬಸವಣ್ಣ, ರಾಜಶೇಖರ, ರಾಜದುರ್ಗದ ರಹಸ್ಯ, ಸಂಧ್ಯಾರಾಗ, ಗಂಗೆಗೌರಿ, ಮಧುಮಾಲತಿ, ಮನಸ್ಸಾಕ್ಷಿ, ಮೇಯರ್‍ ಮುತ್ತಣ್ಣ, ನಾನೇಭಾಗ್ಯವತಿ, ಗಂಡೊಂದು ಹೆಣ್ಣಾರು, ಶಿವಭಕ್ತ, ಗೃಹಲಕ್ಷ್ಮಿ, ಅಮ್ಮ, ಚದುರಂಗ, ಅಳಿಯಗೆಳೆಯ, ಬಾಳುಬೆಳಗಿತು, ಶ್ರೀಕೃಷ್ಣದೇವರಾಯ, ಹಸಿರುತೋರಣ, ಭಲೇಜೋಡಿ, ತಾಯಿದೇವರು, ನಮ್ಮಸಂಸಾರ, ಶ್ರೀಕೃಷ್ಣರುಕ್ಮಿಣಿಸತ್ಯಭಾಮ, ಕುಲಗೌರವ, ಜನ್ಮರಹಸ್ಯ, ಜಗಮೆಚ್ಚಿದಮಗ, ಹೃದಯಸಂಗಮ, ಬಂಗಾರದಮನುಷ್ಯ ಬಿಡುಗಡೆ, ಸ್ವಯಂವರ, ದೂರದಬೆಟ್ಟ, ರಂಗಮಹಲ್‍ರಹಸ್ಯ, ಜೀವನಜೋಕಾಲಿ, ಅಣ್ಣಅತ್ತಿಗೆ, ಒಂದೇರೂಪಎರಡುಗುಣ,

ಕಾವೇರಿ, ದೇವರಗುಡಿ, ಭಾಗ್ಯಜ್ಯೋತಿ, ಮಕ್ಕಳಭಾಗ್ಯ, ದೇವರೇದಿಕ್ಕು, ನಾಗರಹೊಳೆ, ಮಧುರಸಂಗಮ, ಪ್ರತಿಮಾ, ಸಂದರ್ಭ, ಮಾನಿನಿ, ಚಿತ್ರಕೂಟ, ರಹಸ್ಯರಾತ್ರಿ, ಬಂಗಾರದಜಿಂಕೆ, ಪೆದ್ದಗೆದ್ದ, ಋಣಮುಕ್ತಳು, ತವರುಮನೆ, ಮನೆಯೇಮಂತ್ರಾಲಯ, ನಮ್ಮಊರದೇವತೆ, ಎಲ್ಲಾಹೆಂಗಸರಿಂದ, ಬಂಧಮುಕ್ತ, ತಾಳಿಯಆಣೆ, ಶಾಂತಿನಿವಾಸ, ಮುತ್ತಿನಂಧಮನುಷ್ಯ, ಯುದ್ಧಕಾಂಡ, ಮತ್ಸರ, ಬಣ್ಣದಗೆಜ್ಜೆ, ದೊರೆ, ಪ್ರೀತಿಪ್ರೇಮಪ್ರಣಯ, ಮಹಾರಾಜ, ಕಲ್ಲರಳಿಹೂವಾಗಿ, ತನನಂತನನಂ, ರಾಜ್‍ದಿಶೋಮ್ಯಾನ್, ಕ್ರೇಜೀಲೋಕ, ದೊಡ್ಮನೆಹುಡುಗ, ರಾಜಸಿಂಹ, ಎಡಕಲ್ಲುಗುಡ್ಡದಮೇಲೆ(2018) ಕುರುಕ್ಷೇತ್ರ.

27.2.1975ರಂದು ವಿಷ್ಣುವರ್ಧನ್‍ರನ್ನು ಮದುವೆಯಾಗಿ “ರೀಲ್‍ಲೋಕದ ರಿಯಲ್‍ದಂಪತಿ” ಪಟ್ಟಿಗೆ ಸೇರಿದ ಇವರಿಬ್ಬರೂ ಒಟ್ಟಾಗಿ ಹಲವು ಸಿನಿಮಾಗಳಲ್ಲಿ ನಟಿಸಿದರು, ಕೆಲವು ಚಿತ್ರಗಳು ಶತದಿನೋತ್ಸವ, ಜ್ಯುಬಿಲಿ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿದವು. 30.12.2009ರಂದು ಸಾಹಸಸಿಂಹ ವಿಧಿವಶರಾಗುವರೆಗೆ 34 ವರ್ಷ ಯಶಸ್ವಿ ತಾರಾದಂಪತಿ ಎನಿಸಿದರು. 79 ವಸಂತ ಋತು ಕಂಡುಂಡ ಭಾರತಿ ಈಗಲೂ ಅವಕಾಶ ಸಿಕ್ಕರೆ ನಟಿಸುತ್ತೇನೆಂಬ ಇಚ್ಚೆಯುಳ್ಳವರು.

ಸಧ್ಯಕ್ಕೆ ಬೆಂಗಳೂರಿನಲ್ಲಿ ಚಂದನ ಮತ್ತು ಕೀರ್ತಿ ಎಂಬ ಇಬ್ಬರು ದತ್ತುಪುತ್ರಿಯರು ಮತ್ತು ಕುಟುಂಬದವರೊಡನೆ ತುಂಬು ಜೀವನ ನಡೆಸುತ್ತ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಇವರ ಅಳಿಯ ಅನಿರುಧ್ ಕಿರುತೆರೆ-ಬೆಳ್ಳಿತೆರೆ ನಟನಾಗಿ ಕಳೆದ 3 ದಶಕದಿಂದ ಜನಪ್ರಿಯತೆ ಗಳಿಸಿದ್ದಾರೆ. ಪ್ರಸ್ತುತ ಇವರೆಲ್ಲರೂ ಕೂಡಿ ಡಾ.ವಿಷ್ಣುವರ್ಧನ್ ಸ್ಮಾರಕ ಟ್ರಸ್ಟ್ ಮೂಲಕ ಅನೇಕ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ಮೈಸೂರಿನ ಸಂಪತ್ ಕುಮಾರ್  ಕನ್ನಡಿಗರ ವಿಷ್ಣುವರ್ಧನ್ ಆಗಿದ್ದೇಗೆ…? ಸಿನಿ ಬದುಕಿನ ಜರ್ನಿ ಇಲ್ಲಿದೆ…!

 

admin
the authoradmin

Leave a Reply