LatestMysore

ಹರೀನಹಳ್ಳಿಯಲ್ಲಿ ಹೊತ್ತಿ ಉರಿದ ತಂಬಾಕು ಬ್ಯಾರನ್.. ತಂಬಾಕು ಅಗ್ನಿಗಾಹುತಿ.. ರೈತ ಕಂಗಾಲು

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ತಂಬಾಕು ಹದ ಮಾಡುವ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹದಗೊಳ್ಳುತ್ತಿದ್ದ ತಂಬಾಕು ಸಂಪೂರ್ಣ ಸುಟ್ಟು ಹೋಗಿದ್ದು, ಬ್ಯಾರನ್‌ ಗೂ ಭಾರಿ ಹಾನಿಯಾಗಿರುವ ಘಟನೆ ತಾಲೂಕಿನ ಹನಗೋಡು ಹೋಬಳಿಯ ಹರೀನಹಳ್ಳಿಯಲ್ಲಿ ಸೆ.4ರ ಶುಕ್ರವಾರ ಸಂಭವಿಸಿದೆ.

ಗ್ರಾಮದ ನಾಗರಾಜಪ್ಪ ಅವರಿಗೆ ಸೇರಿದ ತಂಬಾಕು ಹದ ಮಾಡುವ ಸಿಂಗಲ್‌ ಬ್ಯಾರನ್ ಇದಾಗಿದ್ದು, ಎಂದಿನಂತೆ ತಂಬಾಕು ಕ್ಯೂರಿಂಗ್‌ (ಹದ ಮಾಡುವ) ಪ್ರಕ್ರಿಯೆ ನಡೆಯುತ್ತಿದ್ದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ ಪರಿಣಾಮ ಬ್ಯಾರನ್ ಹಾಗೂ ಅದರಲ್ಲಿದ್ದ ತಂಬಾಕು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಸುಮಾರು 5 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಬೆಂಕಿ ಹೊತ್ತಿಕೊಂಡು ಹೊಗೆ ಆವರಿಸುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. ಅಷ್ಟರಲ್ಲಾಗಲೇ ತಂಬಾಕು ಭಸ್ಮವಾಗಿದ್ದರೂ, ಪಕ್ಕದಲ್ಲೇ ಇದ್ದ ಮನೆಗಳಿಗೆ ಬೆಂಕಿ ವ್ಯಾಪಿಸುವುದನ್ನು ತಡೆಯುವಲ್ಲಿ ಸಿಬ್ಬಂದಿ ಯಶಸ್ವಿಯಾದರು.

ಕಷ್ಟಪಟ್ಟು ಬೆಳೆದ ತಂಬಾಕು ಕೈಸೇರುವ ಹೊತ್ತಿನಲ್ಲೇ ಬೆಂಕಿಗಾಹುತಿಯಾಗಿರುವುದರಿಂದ ಕಂಗಾಲಾಗಿರುವ ಬೆಳೆಗಾರ ನಾಗರಾಜಪ್ಪ ಅವರು, ತಂಬಾಕು ಮಂಡಳಿ ತಮಗೆ ಸೂಕ್ತ ಪರಿಹಾರ ನೀಡಿ ನೆರವಾಗಬೇಕೆಂದು ಮನವಿ ಮಾಡಿದ್ದಾರೆ.

admin
the authoradmin

Leave a Reply