LatestMysore

ವ್ಯಸನಕ್ಕೆ ಯುವಜನತೆ ಬಲಿಯಾಗುತ್ತಿರುವುದಕ್ಕೆ  ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕ ಬಸವರಾಜು ಕಳವಳ

ಮೈಸೂರು(ಹೆಚ್ ಪಿ ನವೀನ್ ಕುಮಾರ್): ಯುವಜನತೆ ವ್ಯಸನಕ್ಕೆಬಲಿಯಾಗುತ್ತಿರುವುದು ಇಂದು ಸಮಾಜ ಎದುರಿಸುತ್ತಿರುವ ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ ಎಂದು ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ಸಂಸ್ಥಾಪಕ ಎಸ್.ಬಸವರಾಜು ಕಳವಳ ವ್ಯಕ್ತಪಡಿಸಿದರು.

ಬಸವಮಾರ್ಗ ಫೌಂಡೇಶನ್ ಮತ್ತು ಶೇಷಾದ್ರಿಪುರಂ ಕಾಲೇಜು ವತಿಯಿಂದ ಶುಕ್ರವಾರ ನಗರದ ಹೆಬ್ಬಾಳದಲ್ಲಿ ಇರುವ ಶೇಷಾದ್ರಿಪುರಂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಪರಾಧ ಜಾಲಗಳು ಹೆಣ್ಣು ಮಕ್ಕಳು ಮತ್ತು ಯುವ ಜನತೆಗೆ ಮಾದಕ ದ್ರವ್ಯಗಳ ವ್ಯಸನವನ್ನು ಹತ್ತಿಸಿ, ನಂತರ ಅವರನ್ನು ಬಲವಂತವಾಗಿ ಶೋಷಣೆಗೆ ದೂಡುತ್ತಿವೆ. ಕುಟುಂಬದ ಸದಸ್ಯರು ತೀವ್ರ ವ್ಯಸನಿಗಳಾಗಿದ್ದಾಗ, ತಮ್ಮ ವ್ಯಸನದ ಹಣದ ಅಗತ್ಯವನ್ನು ಪೂರೈಸಿಕೊಳ್ಳಲು ಮನೆಯ ಹೆಣ್ಣು ಮಕ್ಕಳನ್ನು ಆರ್ಥಿಕ ಅಥವಾ ದೈಹಿಕ ಶೋಷಣೆಗೆ ಒಳಪಡಿಸುವ ಸಂದರ್ಭಗಳು ಎದುರಾಗುತ್ತವೆ. ಜೊತೆಗೆ ಸಮಾಜದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವ್ಯಸನದ ಆಸೆ ತೋರಿಸಿ, ಬಣ್ಣ, ಬಣ್ಣದ ಮಾತುಗಳನ್ನಾಡಿ ಜಾಲಕ್ಕೆ ದೂಡುತ್ತಿವೆ.

ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ವಯಸ್ಸಿನಲ್ಲಿ ತಪ್ಪು ದಾರಿ ತುಳಿಯುವುದು ಜೀವನದ ಮೇಲಷ್ಟೇ ಅಲ್ಲದೆ, ಕುಟುಂಬ ಮತ್ತು ದೇಶದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಸ್ನೇಹಿತರ ಗುಂಪಿನಲ್ಲಿ ಗುರುತಿಸಿಕೊಳ್ಳಲು ಅಥವಾ ಅವರ ಒತ್ತಾಯಕ್ಕೆ ಮಣಿದು ಮೊದಲ ಬಾರಿಗೆ ತಪ್ಪುಗಳನ್ನು ಮಾಡುತ್ತಾರೆ.  ಪರೀಕ್ಷೆಯ ಭಯ, ಅಂಕ ಗಳಿಸುವ ಒತ್ತಡ, ಮತ್ತು ಭವಿಷ್ಯದ ಬಗೆಗಿನ ಆತಂಕದಿಂದ ಮುಕ್ತಿ ಪಡೆಯಲು ತಪ್ಪು ದಾರಿಯನ್ನು ಆರಿಸಿಕೊಳ್ಳುತ್ತಾರೆ. ಮನೆಯಲ್ಲಿ ಪೋಷಕರ ನಡುವಿನ ಜಗಳ, ಪ್ರೀತಿಯ ಕೊರತೆ ಅಥವಾ ಅತಿಯಾದ ಸ್ವಾತಂತ್ರ್ಯ ನೀಡುವುದು ಕೂಡ ವ್ಯಸನಕ್ಕೆ ಬಲಿಯಾಗುವ ಕಾರಣಗಳಲ್ಲಿ ಒಂದಾಗಿದೆ. ಜತೆಗೆ  ಇಂಟರ್ನೆಟ್ ಮತ್ತು ಸಿನಿಮಾಗಳಲ್ಲಿ ಧೂಮಪಾನ, ಮದ್ಯಪಾನವನ್ನು ಆಕರ್ಷಕವಾಗಿ ತೋರಿಸುವುದನ್ನು ನೋಡಿ ಪ್ರೇರಿತರಾಗುವುದು ಸೇರಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವ್ಯಸನಕ್ಕೆ ಒಳಗಾದ ವಿದ್ಯಾರ್ಥಿಗಳು  ಓದಿನಲ್ಲಿ ಹಿನ್ನಡೆ ಅನುಭವಿಸುತ್ತಾರೆ. ಇದ್ದಕ್ಕಿದ್ದಂತೆ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ಪಡೆಯುವುದು ಮತ್ತು ತರಗತಿಗಳಿಗೆ ಗೈರುಹಾಜರಾಗುವುದನ್ನು ಮಾಡುತ್ತಾರೆ. ಅವರ ನಡವಳಿಕೆಯಲ್ಲಿ ಬದಲಾವಣೆಯಾಗುತ್ತದೆ. ಅತಿಯಾದ ಕೋಪ, ಒಂಟಿತನವನ್ನು ಇಷ್ಟಪಡುವುದು ಮತ್ತು ಮನೆಯವರಿಂದ ವಿಷಯಗಳನ್ನು ಮುಚ್ಚಿಡುವುದನ್ನು ಮಾಡುತ್ತಾರೆ. ಪೋಷಕರಿಂದ ಪದೇ ಪದೆ ಹಣಕ್ಕಾಗಿ ಪೀಡಿಸುವುದು ಅಥವಾ ಕಾರಣವಿಲ್ಲದೆ ಹೆಚ್ಚು ಖರ್ಚು ಮಾಡುವುದನ್ನು ಮಾಡುತ್ತಾರೆ.  ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕವಾಗಿ ಕುಗ್ಗಿ ಹೋಗುತ್ತಾರೆ ಎಂದು ವಿವರಣೆ ನೀಡಿದರು.ಈ ನಿಟ್ಟಿನಲ್ಲಿ ಪಾಲಕರು ಎಚ್ಚರ ವಹಿಸಬೇಕು.

ಮಕ್ಕಳೊಂದಿಗೆ ಪ್ರತಿದಿನ ಸಮಯ ಕಳೆಯಬೇಕು. ಅವರ ಸ್ನೇಹಿತರು ಯಾರು ಎಂಬುದನ್ನು ಗಮನಿಸಬೇಕು ಮತ್ತು ಅವರ ಸಮಸ್ಯೆಗಳನ್ನು ಸ್ನೇಹಿತರಂತೆ ಆಲಿಸಬೇಕು. ಶಾಲೆ-ಕಾಲೇಜುಗಳಲ್ಲಿ ಕೌನ್ಸಿಲಿಂಗ್ ಕೇಂದ್ರಗಳನ್ನು ಸ್ಥಾಪಿಸಿ, ವ್ಯಸನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳನ್ನು ಕ್ರೀಡೆ, ಕಲೆ, ಸಂಗೀತ, ಅಥವಾ ಯೋಗದಂತಹ ಸಕಾರಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು.

ಶಾಲಾ-ಕಾಲೇಜುಗಳ ಸುತ್ತಮುತ್ತ ಮಾದಕ ವಸ್ತುಗಳು, ಸಿಗರೇಟ್ ಮತ್ತು ತಂಬಾಕು ಮಾರಾಟ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ವ್ಯಸನ ಎನ್ನುವುದು ಒಂದು ಕಾಯಿಲೆಯಾಗಿದ್ದು, ಶಿಕ್ಷೆಗಿಂತ ಹೆಚ್ಚಾಗಿ ಪ್ರೀತಿ, ಸೂಕ್ತ ಮಾರ್ಗದರ್ಶನ ಮತ್ತು ಆಪ್ತಸಮಾಲೋಚನೆ ಮೂಲಕ ವಿದ್ಯಾರ್ಥಿಗಳನ್ನು ಮತ್ತೆ ಮುಖ್ಯವಾಹಿನಿಗೆ ತರಲು ಸಾಧ್ಯವಿದೆ ಎಂದು ಪರಿಹಾರ ಸೂಚಿಸಿದರು.

ಬಸವಮಾರ್ಗ ಸಂಸ್ಥೆಯ ವ್ಯವಸ್ಥಾಪಕ ಮಹೇಶ್ ಮಾತನಾಡಿ, ವ್ಯಸನ ಎನ್ನುವುದು ವ್ಯಕ್ತಿಯೊಬ್ಬನ ದೈಹಿಕ ಮತ್ತು ಮಾನಸಿಕ, ಆಧ್ಯಾತ್ಮಿಕ ಆರೋಗ್ಯದ ಮೇಲೆ ತೀವ್ರವಾದ ದುಷ್ಪರಿಣಾಮ ಬೀರುವ ಗಂಭೀರವಾದ ಕಾಯಿಲೆಯಾಗಿದೆ. ವ್ಯಸನಿಗಳ ವರ್ತನೆಯಿಂದಾಗಿ ಕೌಟುಂಬಿಕ ಕಲಹಗಳು ಹೆಚ್ಚಾಗಿ, ನೆಮ್ಮದಿ ಹಾಳಾಗುತ್ತದೆ. ವಿದ್ಯಾರ್ಥಿಗಳು ವ್ಯಸನಕ್ಕೆ ದಾಸರಾದರೆ ಓದಿನಲ್ಲಿ ಸಮಸ್ಯೆಯಾಗುವುದರಿಂದ ಪ್ರಾರಂಭವಾಗಿ, ಉದ್ಯೋಗ ಸ್ಥಳ ಮತ್ತು ಕುಟುಂಬದಲ್ಲೂ ಹಲವು ತೊಂದರೆ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಯುವಕರು ವ್ಯಸನಕ್ಕೆ ಬಲಿಯಾಗದೆ ಉತ್ತಮ ಜೀವನ ಮಾಡಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಸೌಮ್ಯಾ ಈರಪ್ಪ ಮಾತನಾಡಿ, ವ್ಯಸನಕ್ಕೆ ಬಲಿಯಾಗದಿರುವುದು ನಮ್ಮ ಆರೋಗ್ಯಕರ ಮತ್ತು ಯಶಸ್ವಿ ಜೀವನಕ್ಕೆ ಅತ್ಯಂತ ಮುಖ್ಯವಾಗಿದೆ. ಧೂಮಪಾನ, ಮದ್ಯಪಾನ, ಮಾದಕವಸ್ತುಗಳು ಅಥವಾ ಯಾವುದೇ ರೀತಿಯ ಕೆಟ್ಟ ಅಭ್ಯಾಸಗಳು ನಮ್ಮ ಜೀವನವನ್ನು ನಾಶಮಾಡುತ್ತವೆ. ಮೊದಲಿಗೆ ನಾವು ಯಾವುದೇ ಆಮಿಷಗಳಿಗೆ ಒಳಗಾಗುವುದಿಲ್ಲ ಎಂಬ ಬಲವಾದ ಮನೋಬಲವನ್ನು ಬೆಳೆಸಿಕೊಳ್ಳಬೇಕು.

ನಮ್ಮನ್ನು ತಪ್ಪು ದಾರಿಗೆಳೆಯುವ ಸ್ನೇಹಿತರಿಂದ ದೂರವಿದ್ದು, ಸನ್ಮಾರ್ಗದಲ್ಲಿ ನಡೆಸುವವರ ಜೊತೆ ಸ್ನೇಹ ಮಾಡಬೇಕು. ನಮ್ಮ ಭಾವನೆಗಳನ್ನು ಮತ್ತು ಒತ್ತಡವನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳಬೇಕು. ಪ್ರತಿದಿನ ವ್ಯಾಯಾಮ, ಯೋಗ ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ  ಕಾಲೇಜಿನ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಗುರುಮೂರ್ತಿ ಭಟ್, ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ದವದರು ಉಪಸ್ಥಿತರಿದ್ದರು.

admin
the authoradmin

Leave a Reply