ಬಸ್ ನಲ್ಲಿ ಬಿಟ್ಟಿದ್ದ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ-ನಿರ್ವಾಹಕ… ಕೃತಜ್ಞತೆ ಸಲ್ಲಿಕೆ!

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಆಂಧ್ರ ಪ್ರದೇಶ ಮೂಲದ ವ್ಯಕ್ತಿಯೊಬ್ಬರು ಕೆಎಸ್ ಆರ್ ಟಿಸಿ ಬಸ್‌ನಲ್ಲಿ ಬಿಟ್ಟು ಹೋಗಿದ್ದ 88,500 ರೂ. ನಗದು ಇದ್ದ ಬ್ಯಾಗ್ ಅನ್ನು ಹುಣಸೂರು ನಿರ್ವಾಹಕ- ಚಾಲಕರು ಘಟಕದ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಹುಣಸೂರು ಡಿಪೋದ ನಿರ್ವಾಹಕ ಜೆ.ದೇವರಾಜ ಹಾಗೂ ಚಾಲಕ ಸುನಿಲ್ – ಎಲ್ ನಾಯಕ ತಮಗೆ ಸಿಕ್ಕ ಹಣವನ್ನು ಮರಳಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸೆ.10ರಂದು ಹುಣಸೂರು ಘಟಕಕ್ಕೆ ಸೇರಿದ, ಬೆಂಗಳೂರಿನಿಂದ-ಮೈಸೂರಿಗೆ ಬರುತ್ತಿದ್ದ ಬಸ್ ಏರಿದ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನ ಸುರೇಂದ್ರನಾಥ್ ಹಣದ ಬ್ಯಾಗ್‌ನೊಂದಿಗೆ ಬಸ್ ಏರಿದ್ದರು. ಎಕ್ಸ್‌ಪ್ರೆಸ್ ಬಸ್ ಅಲ್ಲ ಎಂದು ತಿಳಿದು ಮುಂದಿನ ನಿಲ್ದಾಣದಲ್ಲಿ ಬ್ಯಾಗ್ ಮರೆತು ಇಳಿದಿದ್ದಾರೆ.
ಕಂಡಕ್ಟರ್ ಹಣದ ಬ್ಯಾಗ್ ಕಂಡು ತಕ್ಷಣವೇ ಹುಣಸೂರು ಡಿಪೋ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದಾರೆ. ಹಣದೊಂದಿಗಿದ್ದ ಚೆಕ್ ಬುಕ್‌ನಲ್ಲಿದ್ದ ಖಾತೆ ನಂಬರ್ ಪತ್ತೆ ಹಚ್ಚಿ ಬ್ಯಾಂಕ್ ಮೂಲಕ ಮಾಹಿತಿ ನೀಡಿದ ಮೇರೆಗೆ ಸುರೇಂದ್ರನಾಥ್ ಅವರು ಹುಣಸೂರು ಡಿಪೋಗೆ ಬಂದು ಸೂಕ್ತ ದಾಖಲೆ ನೀಡಿ, ಡಿಪೋ ಮ್ಯಾನೇಜರ್ ಎಂ.ಶೇಷುಮೂರ್ತಿ ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ಹಣ ಪಡೆದು ಕೃತಜ್ಞತೆ ಸಲ್ಲಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ 15 ದಿನಗಳ ಹಿಂದಷ್ಟೆ ಇದೇ ಡಿಪೋಗೆ ಸೇರಿದ ಹುಣಸೂರು-ಊಯಿಗೊಂಡನಹಳ್ಳಿ ಮಾರ್ಗದ ಬಸ್‌ನಲ್ಲಿ ರೈತರೊಬ್ಬರು ಬಿಟ್ಟು ಹೋಗಿದ್ದ ಲಕ್ಷ ರೂ.ಗಳನ್ನು ಚಾಲಕ-ನಿರ್ವಾಹಕರು ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದನ್ನು ಸ್ಮರಿಸಬಹುದು. ಸಿಬ್ಬಂದಿಗಳ ಪ್ರಾಮಾಣಿಕತೆ – ಮೆರೆದು ಡಿಪೋಗೆ ಒಳ್ಳೆ ಹೆಸರು ತಂದಿರುವ ಬಗ್ಗೆ ಸೂಕ್ತ ಬಹುಮಾನಕ್ಕಾಗಿ ಹಿರಿಯ ಅಧಿ ಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಡಿಪೋ ಮ್ಯಾನೇಜರ್ ಎಂ.ಶೇಷುಮೂರ್ತಿ ತಿಳಿಸಿದ್ದಾರೆ.







