LatestMysore

ಮಹಿಳೆಯರು ಸ್ವಯಂ ಉದ್ಯೋಗದೊಂದಿಗೆ ಆರ್ಥಿಕ ಸಬಲರಾಗಬೇಕು: ಕೆ. ದೀಪಕ್

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲರಾಗುವುದರ ಜತೆಗೆ ಮಕ್ಕಳಿಗೆ ಉತ್ತಮ  ಶಿಕ್ಷಣ ಕೊಡಿಸಿ, ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರು ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಹೇಳಿದರು.

ಕಟ್ಟೆಮಳಲವಾಡಿಯ ಸಮೃದ್ಧಿ ಮಹಿಳಾ ಅಭಿವೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು. ಆರ್ಥಿಕವಾಗಿ ಸದೃಢರಾಗುವುದರಿಂದ ಕುಟುಂಬದ ಅಭಿವೃದ್ಧಿಯ ಜತೆಗೆ ಸಮಾಜದ ಪ್ರಗತಿಗೂ ಕೊಡುಗೆ ನೀಡಲು ಸಾಧ್ಯ ಎಂದರು.

ಮಹಿಳೆಯರು ತಮ್ಮ ವೃತ್ತಿ ಹಾಗೂ ಉದ್ಯೋಗದ ಬಗ್ಗೆ ಯಾವುದೇ ರೀತಿಯ ಕೀಳರಿಮೆ ಹೊಂದಬಾರದು. ಪ್ರತಿಯೊಂದು ವೃತ್ತಿಗೂ ತನ್ನದೇ ಆದ ಗೌರವವಿದ್ದು, ಆತ್ಮವಿಶ್ವಾಸದಿಂದ ಕೆಲಸ ನಿರ್ವಹಿಸಬೇಕು. ಮಕ್ಕಳ ಶಿಕ್ಷಣದ ಕಡೆ ವಿಶೇಷ ಗಮನಹರಿಸಿ, ಅವರ ಪ್ರತಿಭೆ ಹಾಗೂ ಆಸಕ್ತಿಗೆ ಅನುಗುಣವಾಗಿ ಸಾಧನೆ ಮಾಡಲು ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ಸಮಾಜದ ಹಿಂದುಳಿದ ವರ್ಗಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದರು. ಅವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಮೂಲಕ ಸಮಾನತೆ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಬೆಳೆಸಬೇಕಿದೆ ಎಂದರು.

ದೌರ್ಜನ್ಯವಾದರೆ ಸಮಿತಿ ಗಮನಕ್ಕೆ ತನ್ನಿ…

ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯರು ಹಾಗೂ ಜಿಲ್ಲಾ ಅಭ್ಯುದಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ನೇರಳಕುಪ್ಪೆ ಮಹದೇವ ಮಾತನಾಡಿ, ಮಹಿಳೆಯರು ಹಾಗೂ ಸಮಾಜದ ಯಾವುದೇ ವ್ಯಕ್ತಿಯ ಮೇಲೆ ಜಾತಿನಿಂದನೆ, ದೌರ್ಜನ್ಯ ಸೇರಿದಂತೆ ಅನ್ಯಾಯಗಳು ನಡೆದರೆ ಮೌನವಾಗದೆ ಸಂಬಂಧಪಟ್ಟ ಸಮಿತಿಯ ಗಮನಕ್ಕೆ ತರಬೇಕು. ಸಂತ್ರಸ್ತರ ರಕ್ಷಣೆಗೆ ಹಾಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಮಿತಿ ಅಗತ್ಯ ಸಹಕಾರ ನೀಡಲಿದೆ ಎಂದರು.

ಸಮೃದ್ಧಿ ಮಹಿಳಾ ಅಭಿವೃದ್ಧಿ ಸೇವಾ ಟ್ರಸ್ಟ್ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಹಲವು ಚಟುವಟಿಕೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಇಂತಹ ಸೇವಾ ಸಂಸ್ಥೆಗಳು ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಉತ್ತಮ ಹಾಗೂ ಸಮಾನತೆಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.

ನಿವೃತ್ತ ಸೈನಿಕ ಶಿವು, ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ಹನಗೋಡು ನಟರಾಜ್, ಟ್ರಸ್ಟ್ ಅಧ್ಯಕ್ಷೆ ಮಹದೇವಮ್ಮ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಶಂಕರ್, ಮುಕುಂದ, ಯೋಗೇಂದ್ರ ಸೇರಿದಂತೆ ನೂರಾರು ಮಹಿಳೆಯರು  ಭಾಗವಹಿಸಿದ್ದರು.

admin
the authoradmin

Leave a Reply