ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಗೃಹಿಣಿಯೊಬ್ಬರು ಕ್ರಿಮಿನಾಶಕ ಕಾಳು ಮಾತ್ರೆ ಸೇವಿಸಿ ಪ್ರಾಣಬಿಟ್ಟ ಘಟನೆ ತಾಲೂಕಿನ ಗಾವಡಗೆರೆ ಹೋಬಳಿಯ ಲಕ್ಕನಕೊಪ್ಪಲಿನಲ್ಲಿ ನಡೆದಿದೆ. ಆಕೆ ಪ್ರಾಣ ಕಳೆದುಕೊಳ್ಳಲು ಗ್ರಾಮದ ಯುವಕನೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಮೃತಪಟ್ಟ ಗೃಹಿಣಿ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಲಕ್ಕನಕೊಪ್ಪಲು ಗ್ರಾಮದ ಶ್ರೀಕಾಂತ್ ಎಂಬವರ ಪತ್ನಿ ಸಿಂಧೂ (26). ಈಕೆ ಪತಿ ಶ್ರೀಕಾಂತ್ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಸಾವಿಗೆ ಶರಣಾಗಿದ್ದಾರೆ. ಸಾವಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅದೇ ಗ್ರಾಮದ ಎಲ್.ಕೆ. ವಿಕಾಸ್ ಎಂಬಾತನನ್ನು ಬಿಳಿಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪೊಲೀಸರಿಗೆ ಮೃತ ಗೃಹಿಣಿಯ ಪತಿ ನೀಡಿದ ದೂರಿನಂತೆ ಹೇಳುವುದಾದರೆ, ಎಂಟು ವರ್ಷಗಳ ಹಿಂದೆ ಕೆ.ಆರ್. ನಗರ ತಾಲೂಕಿನ ಮಾವತ್ತೂರು ಗ್ರಾಮದ ಎಂ.ಆರ್. ಸಿಂಧೂ ಅವರನ್ನು ಶ್ರೀಕಾಂತ್ ವಿವಾಹವಾಗಿದ್ದರು. ಆದರೆ ಮೊನ್ನೆ ಸೆ. 21ರ ಸೋಮವಾರ ಮಧ್ಯಾಹ್ನ ಸಿಂಧೂ ಗಂಡ ಶ್ರೀಕಾಂತ್ ಗೆ ಕರೆ ಮಾಡಿ ತಾನು ತೊಂದರೆಯಲ್ಲಿದ್ದೇನೆ ಎಂದು ತಿಳಿಸಿದ್ದರು. ತಕ್ಷಣ ಮನೆಗೆ ಬಂದು ನೋಡಿದಾಗ, ಸಿಂಧೂ ಕ್ರಿಮಿನಾಶಕ ಕಾಳು ಮಾತ್ರೆ ಸೇವಿಸಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅವರನ್ನು ಕೆ.ಆರ್. ನಗರ ಆಸ್ಪತ್ರೆಗೆ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಸಾವಿಗೂ ಮುನ್ನ ತನ್ನ ಸಾವಿಗೆ ಗ್ರಾಮದ ಎಲ್.ಕೆ. ವಿಕಾಸ್ ಕಾರಣ ಎಂದು ಸಿಂಧೂ ತಿಳಿಸಿದ್ದರು. ಅದರಂತೆ ಆಕೆಯ ಮೊಬೈಲ್ ಪರಿಶೀಲಿಸಿದ ವೇಳೆ ವಿಕಾಸ್‌ನ ಮೊಬೈಲ್ ಸಂಖ್ಯೆಯನ್ನು ‘ಕಾವ್ಯ’ ಎಂಬ ಹೆಸರಿನಡಿ ಸೇವ್ ಮಾಡಿಕೊಂಡಿರುವುದು ತಿಳಿದುಬಂದಿದೆ. ಅಲ್ಲದೆ, ಕ್ರಿಮಿನಾಶಕ ಸೇವನೆಗೂ ಮುನ್ನ ಇಬ್ಬರೂ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ. ಹೀಗಾಗಿ ಪತ್ನಿ ಸಿಂಧೂ ಸಾವಿಗೆ ವಿಕಾಸ್‌ನ ಪ್ರಚೋದನೆಯೇ ಕಾರಣವಾಗಿದ್ದು, ಈತನಿಗೆ ಆತನ ತಂದೆ-ತಾಯಿಯ ಸಹಕಾರವೂ ಇತ್ತೆಂದು ಶ್ರೀಕಾಂತ್ ಬಿಳಿಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಮೇರೆಗೆ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ವಿಕಾಸ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ರವಿ ಹಾಗೂ ಇನ್‌ಸ್ಪೆಕ್ಟರ್ ಪುನೀತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ, ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದ್ದು, ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಕ್ರೈಂ ಸ್ಟೋರಿ ಮತ್ತು ಕ್ರೈಂ ಸುದ್ದಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ..








