ArticlesDasaraLatestMysore

ದಸರಾ ಕುಶಾಲತೋಪು ಸಿಡಿಸುವ ಮೈಸೂರು ಅರಮನೆಯಲ್ಲಿರುವ ಫಿರಂಗಿಗಳ  ಇತಿಹಾಸದ ಕಥೆ…

ದಸರಾ ಸಂದರ್ಭದಲ್ಲಿ ಜನರಿಗೆ ಕಾಣಿಸುವ ಮೈಸೂರು ಅರಮನೆಯಲ್ಲಿರುವ ಫಿರಂಗಿಗಳು ಇತಿಹಾಸದ ಕಥೆ ಹೇಳುತ್ತಿವೆ. ಒಂದು ಕಾಲದಲ್ಲಿ ಮೈಸೂರು ಸಂಸ್ಥಾನದ ರಾಜರ ಸಮರಶಕ್ತಿಯ ಕೇಂದ್ರವಾಗಿದ್ದ ಇವು ಇಂದು ದಸರಾದಲ್ಲಿ ಕುಶಾಲತೋಪು ಸಿಡಿಸಲು ಬಳಕೆಯಾಗುತ್ತಿವೆ. ಜತೆಗೆ ದಸರಾ ಮೆರವಣಿಗೆಯಲ್ಲಿಯೂ ಫಿರಂಗಿಗಳ ಪ್ರದರ್ಶನಗೊಳ್ಳುತ್ತಿವೆ.

ಹಿಂದಿನ ಕಾಲದಲ್ಲಿ ಫಿರಂಗಿ ಹೊಂದಿದ ರಾಜರು ಯುದ್ಧದಲ್ಲಿ ಜಯಶೀಲರಾಗುತ್ತಿದ್ದರು. ಅಂದು ಹೋರಾಟದಲ್ಲಿ ಶಕ್ತಿ ಮೆರೆದಿದ್ದ  ಫಿರಂಗಿಗಳು ಈಗ ಮ್ಯೂಸಿಯಂ ಸೇರಿವೆ. ದಸರಾ ಸಂದರ್ಭದಲ್ಲಿ ಹೊರ ತೆಗೆದು ಸ್ವಚ್ಛಗೊಳಿಸಿ ವಿಜಯ ಗಣಪತಿ ಪೂಜೆ ಸಲ್ಲಿಸುವ ಮೂಲಕ ಕುಶಾಲ ತೋಪು ಸಿಡಿಸಲು ಮತ್ತು ಮೆರವಣಿಗೆಗೆ ಬಳಸಲಾಗುತ್ತದೆ.

ದಸರಾ ಜಂಬೂಸವಾರಿ ಹೊರಡುವ ಸಂದರ್ಭ ಅಂಬಾರಿಯಲ್ಲಿ ವೀರಾಜಮಾನಳಾದ ಚಾಮುಂಡೇಶ್ವರಿಗೆ ಪುರ್ಷ್ಪಾರ್ಚನೆ ಮಾಡುವಾಗ ರಾಷ್ಟ್ರಗೀತೆ ಆರಂಭಿಸಿ ಅದು ಮುಗಿಯುವುದರೊಳಗಾಗಿ 21 ಕುಶಾಲ ತೋಪುಗಳನ್ನು ಇದೇ ಫಿರಂಗಿಯಿಂದ ಸಿಡಿಸಲಾಗುತ್ತದೆ.

ಫಿರಂಗಿ ಮೂಲಕ ಕುಶಾಲತೋಪು ಸಿಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕಾಗಿ ತರಬೇತಿ ಬೇಕಾಗುತ್ತದೆ. ಇದನ್ನು ಸಿಎಆರ್ ಪೊಲೀಸರು ಚಾಚುತಪ್ಪದೆ ಮಾಡಿಕೊಂಡು ಬಂದಿದ್ದಾರೆ.ಫಿರಂಗಿ ಸಿಡಿಸುವಾಗ ಬಹಳಷ್ಟು ಅವಘಡ ಸಂಭವಿಸಿದೆ ಹೀಗಾಗಿ ಸಿಬ್ಬಂದಿಗೆ ವಿಮೆ ಮಾಡಿಸುವ ಯೋಜನೆ ಜಾರಿಗೆ ಬಂದಿದೆ.

ಇಷ್ಟಕ್ಕೂ ಫಿರಂಗಿಯಲ್ಲಿ ಕುಶಾಲತೋಪು ಸಿಡಿಸುವುದಾದರೂ ಹೇಗೆ ಎನ್ನುವುದನ್ನು ನೋಡುವುದಾದರೆ ಸುಮಾರು ಮೂರೂವರೆ ಅಡಿ ಉದ್ದದ ಫಿರಂಗಿ ಕೊಳವೆಗೆ ಹದಮಾಡಿದ ಸುಮಾರು ಮೂರು ಕಿಲೋ ಗ್ರಾಂನಷ್ಟು ರಂಜಕದ ಪುಡಿಯನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ ಆಯತಕಾರದ  ಪೊಟ್ಟಣದಂತೆ ಮಾಡಲಾಗುತ್ತದೆ. ಅದನ್ನು ಕೊಳವೆಗೆ ಹಾಕಿ ನಂತರ  ಕಬ್ಬಿಣದ ಸಾಧನವೊಂದರ ಮೂಲಕ ತಳ್ಳಿ ಗಟ್ಟಿಗೊಳಿಸಲಾಗುತ್ತದೆ. ನಂತರ ಅದಕ್ಕೆ ಬೆಂಕಿ ಹಚ್ಚಿದಾಗ ಅದು ಭಾರೀ ಶಬ್ದದೊಂದಿಗೆ ಸ್ಫೋಟಗೊಳ್ಳುತ್ತದೆ.

ಆ ಬಿಸಿಯಿರುವ ಕೊಳವೆಯನ್ನು ಸಿಂಬ ಎಂಬ ಸಾಧನದಿಂದ ಸ್ವಚ್ಛಗೊಳಿಸುತ್ತಾರೆ. ಇದು ಸುಲಭದ ಕೆಲಸವಲ್ಲ ಏಕೆಂದರೆ ಇಲ್ಲಿ ಒಂದೇ ಚಿಕ್ಕ ಕಿಡಿಯಿದ್ದರೂ ಮತ್ತೆ ಮದ್ದು ತುಂಬಿಸುವಾಗ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಕುಶಾಲ ತೋಪು ಸಿಡಿಸುವಾಗ ಅವಘಡಗಳು ಸಂಭವಿಸಿ ಅದನ್ನು ಸಿಡಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವ ಘಟನೆಗಳೂ ಹಲವಷ್ಟು ನಡೆದಿವೆ. ಇದನ್ನು ತಪ್ಪಿಸುವ ಸಲುವಾಗಿ ಸಿಬ್ಬಂದಿಗಳಿಗೆ  ಅಗ್ನಿ ನಿರೋಧಕ ಜಾಕೆಟ್‌ಗಳನ್ನು ನೀಡಲಾಗುತ್ತದೆ.

ನಾವು ಫಿರಂಗಿಗಳ ಇತಿಹಾಸವನ್ನು ಮೆಲುಕು ಹಾಕಿದರೆ ಅವುಗಳ ಬಳಕೆ ಸುಮಾರು 12ನೇ ಶತಮಾನದಿಂದ ಆರಂಭವಾದ ಬಗ್ಗೆ ಮಾಹಿತಿ ಸಿಗುತ್ತದೆ. ಇದನ್ನು ಮೊಟ್ಟ ಮೊದಲಿಗೆ 1260ರಲ್ಲಿ  ಚೀನಿಯರು ಆವಿಷ್ಕರಿಸಿ  ಶತ್ರುಗಳನ್ನು ಹಿಮ್ಮೆಟ್ಟಿಸಲು ಆರಂಭಿಸಿದರು.

13ನೇ ಶತಮಾನದಲ್ಲಿ ಲಿಬಿಯಾ ದೇಶವು ಸ್ಪೇನ್ ದೇಶದ ವಿರುದ್ಧದ ಯುದ್ಧದಲ್ಲಿ ಪ್ರಪ್ರಥಮವಾಗಿ ಫಿರಂಗಿಯನ್ನು ಬಳಸಿತು ಎನ್ನಲಾಗುತ್ತಿದೆ.  16ನೇ ಶತಮಾನದಲ್ಲಿ ಸುಧಾರಿತ ಫಿರಂಗಿಗಳ ನಿರ್ಮಾಣ ನಡೆಯಿತು. ಟಿಪ್ಪು ಸುಲ್ತಾನ್ ಕಾಲದಲ್ಲಿ ಸುಮಾರು 10 ಅಡಿ ಉದ್ದ, 9,100 ಕೆ.ಜಿ.ತೂಕದ ಉಕ್ಕಿನ ಫಿರಂಗಿಗಳಿತ್ತು ಎನ್ನುವುದಕ್ಕೆ ಈಗಲೂ ಶ್ರೀರಂಗಟ್ಟಣದ ದರಿಯಾ ದೌಲತ್ ಅರಮನೆಯ ಮುಂಭಾಗದಲ್ಲಿರುವ ಫಿರಂಗಿ ಸಾಕ್ಷಿಯಾಗಿದೆ.

 

admin
the authoradmin

Leave a Reply