LatestMysore

ಬಸವಣ್ಣನವರ ಕನ್ನಡಾಭಿಮಾನ ಪ್ರತಿಯೊಬ್ಬರಿಗೂ ಆದರ್ಶವಾಗಲಿ : ವಚನ ಕುಮಾರಸ್ವಾಮಿ

ಮೈಸೂರು: ವಿಶ್ವಗುರು ಬಸವಣ್ಣನವರ ಕನ್ನಡಾಭಿಮಾನ ಪ್ರತಿಯೊಬ್ಬರಿಗೂ ಆದರ್ಶವಾಗಬೇಕು. ಕನ್ನಡವನ್ನು ಪ್ರೀತಿಸುವುದರ ಜೊತೆಗೆ ಅದರ ಬಳಕೆಯನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿ ಕೊಳ್ಳುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಮೈಸೂರು ತಾಲ್ಲೂಕಿನ ದೇವಲಾಪುರದ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರು ನಾಡು, ನುಡಿ ಹಾಗೂ ಭಾಷೆಯ ಅಭಿಮಾನವನ್ನು ಸಾರಿದ ಮಹಾನ್ ಚೇತನರಾಗಿದ್ದರು.

ಆಫ್ಘಾನಿಸ್ತಾನದಿಂದ ಬಂದ ಮರುಳ ಶಂಕರದೇವರು, ತಮಿಳುನಾಡಿನಿಂದ ಬಂದ ಮಾದಾರ ಚೆನ್ನಯ್ಯ, ಮಧ್ಯಪ್ರದೇಶದಿಂದ ಬಂದ ಡೋಹರ ಕಕ್ಕಯ್ಯ, ಕೇರಳದಿಂದ ಬಂದ ಧೂಪದ ಗೊಗ್ಗವ್ವೆ, ಆಂಧ್ರಪ್ರದೇಶದಿಂದ ಬಂದ ಉರಿಲಿಂಗದೇವ, ಗುಜರಾತಿನಿಂದ ಬಂದ ಆದಯ್ಯ ಹಾಗೂ ಮಹಾರಾಷ್ಟ್ರದಿಂದ ಬಂದ ಸಿದ್ಧರಾಮೇಶ್ವರರು ಸೇರಿದಂತೆ ವಿವಿಧ ಪ್ರದೇಶಗಳಿಂದ ಬಂದ ಶರಣರಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪರಿಚಯ ಮಾಡಿಸಿ, ಕನ್ನಡದ ಅಸ್ಮಿತೆಯನ್ನು ಜಾಗೃತಗೊಳಿಸಿದವರು ಬಸವಣ್ಣನವರು.

ನಾಡಿನ ಗಡಿಗಳನ್ನು ಮೀರಿ ಬಂದ ಶರಣರನ್ನು ಕನ್ನಡದ ನೆಲದಲ್ಲಿ ಒಂದಾಗಿಸಿ, ಕನ್ನಡದ ಮೂಲಕ ಅನುಭವ ಮಂಟಪದ ಚಿಂತನೆಗಳನ್ನು ವಿಶ್ವಕ್ಕೆ ಪರಿಚಯಿಸಿದ ಬಸವಣ್ಣನವರ ಭಾಷಾಭಿಮಾನ ನಮಗೆಲ್ಲರಿಗೂ ಮಾದರಿಯಾಗಬೇಕು. ಅನ್ಯಭಾಷೆಗಳನ್ನು ಕಲಿಯುವುದರ ಜೊತೆಗೆ ಮಾತೃಭಾಷೆಯ ಬಗ್ಗೆ ಗೌರವ ಮತ್ತು ಅಭಿಮಾನ ಬೆಳೆಸಿಕೊಂಡು ಕನ್ನಡವನ್ನು ಹೆಚ್ಚು ಹೆಚ್ಚು ಬಳಸಿದಾಗ ಮಾತ್ರ ಕನ್ನಡದ ಉಳಿವು ಮತ್ತು ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಮಾತನಾಡಿ ಕನ್ನಡ ನಮ್ಮ ಹೃದಯದ ಭಾಷೆ. ಕನ್ನಡವೆಂದ ತಕ್ಷಣವೇ ನಮ್ಮಲ್ಲಿ ಒಂದು ವಿಶಿಷ್ಟ ಸಂಸ್ಕಾರ ಮತ್ತು ಅಭಿಮಾನ ಮೂಡುತ್ತದೆ. ವಚನ ಸಾಹಿತ್ಯ ಕನ್ನಡಿಗರಿಗೆ ದೊರೆತಿರುವ ಅಮೂಲ್ಯ ಸೌಭಾಗ್ಯ. ಬೆಂಗಳೂರು ಬಸವ ಸಮಿತಿ ವತಿಯಿಂದ ವಚನ ಸಾಹಿತ್ಯ ಇಂದು ಸುಮಾರು 40 ಭಾಷೆಗಳಿಗೆ ಅನುವಾದಗೊಂಡಿರುವುದು ಕನ್ನಡ ಸಾಹಿತ್ಯದ ಹಿರಿಮೆ ಮತ್ತು ಗರಿಮೆಯನ್ನು ವಿಶ್ವದಾದ್ಯಂತ ಪರಿಚಯಿಸಿದೆ.

ಕನ್ನಡದ ನೆಲದಲ್ಲಿ ಅರಳಿದ ಶರಣರ ವಿಚಾರಧಾರೆಗಳು ಬೇರೆ ಬೇರೆ ಭಾಷೆಗಳ ಮೂಲಕ ವಿಶ್ವದ ಜನರಿಗೂ ತಲುಪುತ್ತಿದ್ದು, ವಚನಗಳ ಸವಿಯನ್ನು ಅನ್ಯಭಾಷಿಕರೂ ಆಸ್ವಾದಿಸುವಂತಾಗಿದೆ. ದೇಶ-ವಿದೇಶಗಳಲ್ಲಿಯೂ ಕನ್ನಡದ ಕಂಪು ಪಸರಿಸಿ, ವಿದೇಶಗಳಲ್ಲೂ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಕನ್ನಡ ಭಾಷೆಯ ಜಾಗತಿಕ ಪ್ರಭಾವ ಮತ್ತು ಕನ್ನಡಿಗರ ಭಾಷಾಭಿಮಾನದ ಸಂಕೇತವಾಗಿದೆ. ಕನ್ನಡವನ್ನು ಪ್ರೀತಿಸುವುದು, ಬಳಸುವುದು ಮತ್ತು ಮುಂದಿನ ಪೀಳಿಗೆಗೆ ಅದರ ಸಂಸ್ಕಾರವನ್ನು ಪರಿಚಯಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಜಡೆಸ್ವಾಮಿಗಳು ಆಶೀರ್ವಚನ ನೀಡಿ, ಕನ್ನಡ ನಾಡು ವಿವಿಧ ಭಾಷೆ, ಸಂಸ್ಕೃತಿ ಹಾಗೂ ಪ್ರದೇಶಗಳಿಂದ ಬಂದ ಎಲ್ಲರಿಗೂ ಆಶ್ರಯ ನೀಡಿದೆ. ಇಂತಹ ವಿಶಾಲ ಹೃದಯದ ಕನ್ನಡ ನೆಲದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಕಲಿತು, ಗೌರವಿಸಿ, ಬಳಸುವ ಮೂಲಕ ಕನ್ನಡತನವನ್ನು ತಮ್ಮ ಬದುಕಿನಲ್ಲಿ ಉಳಿಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಉಪಾಧ್ಯಕ್ಷ ಶಿವಪುರ ಉಮಾಪತಿ, ಹೇಮಂತಸ್ವಾಮೀಜಿ, ವಚನ ಪಾಠಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

admin
the authoradmin

Leave a Reply