ಹೀಗೆ ಆದರೆ ಕೊಡಗು ಕಳೆದು ಹೋಗಬಹುದು.. ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ…!
ಇದು ಸಾಮಾಜಿಕ ಕಾಳಜಿಯ ಲೇಖನಗಳ ಸರಮಾಲೆ-50

ಮೊದಲಿಗೆ ಇದು ಕಾಲ್ಪನಿಕವಾಗಿ ಕಾಣಬಹುದು. ಮುಂದಕ್ಕೆ ಓದುತ್ತಾ ಹೋದರೆ ನಮ್ಮ ಪರಿಸ್ಥಿತಿಯ ಅರಿವು ಆಗುತ್ತದೆ. ಇದು ನನ್ನ 50ನೇ ಲೇಖನ. ವಾಸ್ತವವನ್ನು ನಾವು ಹಾಗೂ ವ್ಯವಸ್ಥೆಗಳು ನೆನಪಿಸಿಕೊಳ್ಳಬೇಕು ಎಂಬ ಉದ್ದೇಶಕ್ಕೋಸ್ಕರ ಬರೆದ ಬರಹ. ಈ ಬರಹ ಸ್ವಲ್ಪ ಉದ್ದ ಅನಿಸಬಹುದು ಓದುಗರ ಸಹಕಾರ ಇರಲಿ…
ಒಂದು ದಿನ ಬೆಳಿಗ್ಗೆ ಎದ್ದು ನೋಡೋಣ. ಕರ್ನಾಟಕದ ನಕ್ಷೆಯಲ್ಲಿ ಕೊಡಗು ಎಂಬ ಹೆಸರೇ ಇಲ್ಲ. ಮಡಿಕೇರಿ ಇಲ್ಲ, ವಿರಾಜಪೇಟೆ ಇಲ್ಲ, ಗೋಣಿಕೊಪ್ಪ ಇಲ್ಲ, ಪೊನ್ನಂಪೇಟೆ ಇಲ್ಲ, ಸೋಮವಾರಪೇಟೆ ಇಲ್ಲ. ಒಂದು ಇಡೀ ಜಿಲ್ಲೆಯೇ ಮಾಯವಾಗಿದೆ. ಏನಾಗುತ್ತದೆ? ಈ ಪ್ರಶ್ನೆಯನ್ನು ಕೇಳಿದ ತಕ್ಷಣ ನಮ್ಮ ಹೃದಯ ಒಂದು ಕ್ಷಣ ನಿಂತು ಹೋಗುತ್ತದೆ ಅಲ್ಲವೇ? ಅದೇ ಈ ಲೇಖನದ ಆರಂಭ.
ಬೆಂಗಳೂರಿನ ಒಂದು ಸಣ್ಣ ಮನೆಯಲ್ಲಿ ಒಂದು ತಾಯಿ ಕಾಫಿ ಮಾಡುತ್ತಾಳೆ. ಕಾಫಿ ಇದೆ, ಆದರೆ ಅದರಲ್ಲಿ ಕೊಡಗಿನ ಸುವಾಸನೆ ಇಲ್ಲ. ಏಕೆಂದರೆ ಕರ್ನಾಟಕದ ಕಾಫಿ ಬೆಳೆಗೆ ಕೊಡಗಿನ ಪಾಲು ಅತ್ಯಂತ ದೊಡ್ಡದು. ಚಿಕ್ಕಮಗಳೂರಿನಲ್ಲೂ ಕಾಫಿ ಇದೆ, ಜಗತ್ತಿನ ಬೇರೆ ದೇಶಗಳಲ್ಲೂ ಕಾಫಿ ಇದೆ. ಆದರೆ ಕೊಡಗಿನ ಮಣ್ಣಿನಲ್ಲಿ ಬೆಳೆದ ಕಾಫಿಗೆ ಒಂದು ವಿಶೇಷ ಗುಣವಿದೆ. ಅದು ಕೊಡಗಿನ ಮಳೆ, ಕೊಡಗಿನ ಮಂಜು, ಕೊಡಗಿನ ರೈತನ ಕೈಯಿಂದ ಬಂದ ಸುವಾಸನೆ. ಆ ಸುವಾಸನೆ ಇಲ್ಲದಿದ್ದರೆ ಕಾಫಿ ಇರುತ್ತದೆ, ಆದರೆ ಕೊಡಗಿನ ಕಾಫಿಯ ನೆನಪು ಇರುವುದಿಲ್ಲ. ನಾವು ದಿನವೂ ಕುಡಿಯುವ ಕಾಫಿಯ ಹಿಂದೆ ಒಬ್ಬ ಕೊಡಗಿನ ರೈತನ ಬೆವರು ಇದೆ ಎಂಬುದನ್ನು ಆ ದಿನ ನಮಗೆ ಅರ್ಥವಾಗುತ್ತದೆ.

ಮೈಸೂರಿನ ಒಬ್ಬ ರೈತ ತನ್ನ ಗದ್ದೆಗೆ ಹೋಗುತ್ತಾನೆ. ಗದ್ದೆಯಲ್ಲಿ ನೀರು ಇಲ್ಲ. ಕಾಲುವೆಯಲ್ಲಿ ನೀರು ಇಲ್ಲ. ಕಾವೇರಿಯಲ್ಲಿ ನೀರು ಇಲ್ಲ. ಏಕೆಂದರೆ ಕಾವೇರಿ ಹುಟ್ಟುವ ತಲಕಾವೇರಿ ಇರುವ ಕೊಡಗೇ ಇಲ್ಲ. ಕೊಡಗಿನ ಮಳೆಯೇ ಕಾವೇರಿ. ಕೊಡಗಿನ ಕಾಡೇ ಕಾವೇರಿ. ಕೊಡಗು ಇಲ್ಲದಿದ್ದರೆ ಕಾವೇರಿ ಕೇವಲ ಒಂದು ಹೆಸರಾಗಿ ಉಳಿಯುತ್ತದೆ. ಮೈಸೂರು, ಮಂಡ್ಯ, ಬೆಂಗಳೂರಿನ ಕೋಟ್ಯಂತರ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಾರೆ. ಒಂದು ಜಿಲ್ಲೆ ಇಲ್ಲದಿದ್ದರೆ ಒಂದು ರಾಜ್ಯವೇ ಬಾಯಾರುತ್ತದೆ ಎಂಬ ಸತ್ಯ ಆ ದಿನ ನಮಗೆ ಗೊತ್ತಾಗುತ್ತದೆ.
ದೆಹಲಿಯ ಗಡಿಯಲ್ಲಿ ಒಬ್ಬ ಸೇನಾಧಿಕಾರಿ ತನ್ನ ಸೈನಿಕರ ಪಟ್ಟಿ ನೋಡುತ್ತಾನೆ. ಅದರಲ್ಲಿ ಕೊಡಗಿನ ಹೆಸರುಗಳು ಕಡಿಮೆಯಾಗಿವೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತಹ ವೀರರನ್ನು ಕೊಟ್ಟ ನಾಡು ಇಲ್ಲ. ದೇಶಕ್ಕೆ ಅತಿ ಹೆಚ್ಚು ಸೈನಿಕರನ್ನು ಕೊಡುವ ಜಿಲ್ಲೆಗಳಲ್ಲಿ ಕೊಡಗು ಮುಂಚೂಣಿಯಲ್ಲಿದೆ. ಆ ನಾಡು ಇಲ್ಲದಿದ್ದರೆ ದೇಶವನ್ನು ಕಾಯಲು ಹೋಗುವ ಸಾವಿರಾರು ಕೈಗಳು ಕಡಿಮೆಯಾಗುತ್ತವೆ. ಆ ದಿನ ದೇಶಕ್ಕೆ ಅರ್ಥವಾಗುತ್ತದೆ, ಕೊಡಗು ಎಂದರೆ ಕೇವಲ ಒಂದು ಜಿಲ್ಲೆ ಅಲ್ಲ, ಅದು ದೇಶಭಕ್ತಿಯ ತವರೂರು ಎಂದು.

ಒಂದು ಮಗು ಶಾಲೆಗೆ ಹೋಗುತ್ತದೆ. ಪುಸ್ತಕದಲ್ಲಿ ಕೊಡಗಿನ ಬಗ್ಗೆ ಪಾಠ ಇಲ್ಲ. ಪುತ್ತರಿ ಹಬ್ಬ ಇಲ್ಲ, ಕೋವಿ ಇಲ್ಲ, ವಳಗ ಇಲ್ಲ, ಐನ್ ಮನೆ ಇಲ್ಲ. ಕೊಡಗಿನ ಸಂಸ್ಕೃತಿ ಎಂಬ ಪದವೇ ಇಲ್ಲ. ಆ ಮಗುವಿಗೆ ಗೊತ್ತಾಗುವುದಿಲ್ಲ, ಒಮ್ಮೆ ಈ ನಾಡಿನಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸುತ್ತಿದ್ದ, ಅತಿಥಿಗಳನ್ನು ದೇವರಂತೆ ನೋಡುತ್ತಿದ್ದ, ಮಾತಿಗೆ ತಪ್ಪದ ಒಂದು ಜನಾಂಗ ಇತ್ತು ಅಂತ. ಒಂದು ಸಂಸ್ಕೃತಿ ಕಣ್ಮರೆಯಾದರೆ ಒಂದು ಇತಿಹಾಸವೇ ಕಣ್ಮರೆಯಾಗುತ್ತದೆ.
ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಒಬ್ಬ ಯುವಕ ರಜೆ ತೆಗೆದುಕೊಂಡು ಎಲ್ಲಿಗೆ ಹೋಗಬೇಕು ಎಂದು ಯೋಚಿಸುತ್ತಾನೆ. ಕೂರ್ಗ್ ಇಲ್ಲ. ಮಂಜು ನೋಡಲು ಜಾಗ ಇಲ್ಲ. ಮಳೆ ನೋಡಲು ಜಾಗ ಇಲ್ಲ. ಅಬ್ಬಿ ಫಾಲ್ಸ್ ಇಲ್ಲ, ರಾಜಾ ಸೀಟ್ ಇಲ್ಲ, ಮಂಡಲ್ ಪಟ್ಟಿ ಇಲ್ಲ. ಕರ್ನಾಟಕದ ಅತ್ಯಂತ ಸುಂದರವಾದ ಪ್ರವಾಸಿ ತಾಣವೇ ಇಲ್ಲ. ಆಗ ಅವನಿಗೆ ಅರ್ಥವಾಗುತ್ತದೆ, ಕೊಡಗು ಎಂದರೆ ಕೇವಲ ಜಿಲ್ಲೆ ಅಲ್ಲ, ಅದು ಮನಸ್ಸಿಗೆ ಶಾಂತಿ ಕೊಡುವ ಒಂದು ಭಾವನೆ ಎಂದು.

ಒಬ್ಬ ಪರಿಸರ ವಿಜ್ಞಾನಿ ವರದಿ ಬರೆಯುತ್ತಾನೆ. ಕೊಡಗಿನ ಕಾಡು ಇಲ್ಲ. ಪಶ್ಚಿಮ ಘಟ್ಟದ ಹಸಿರು ಶ್ವಾಸಕೋಶವೇ ಇಲ್ಲ. ಕರ್ನಾಟಕದ ಹವಾಮಾನವೇ ಬದಲಾಗಿದೆ. ಬಿಸಿಲು ಹೆಚ್ಚಾಗಿದೆ, ಮಳೆ ಕಡಿಮೆಯಾಗಿದೆ. ಆಗ ಇಡೀ ಜಗತ್ತಿಗೆ ಅರ್ಥವಾಗುತ್ತದೆ, ಕೊಡಗನ್ನು ಉಳಿಸುವುದು ಎಂದರೆ ಕೇವಲ ಕೊಡಗನ್ನು ಉಳಿಸುವುದಲ್ಲ, ಭೂಮಿಯನ್ನೇ ಉಳಿಸುವುದು ಎಂದು.
ಆದರೆ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಏಕೆಂದರೆ ಕೊಡಗು ನಿಜವಾಗಿಯೂ ಇಲ್ಲವಾಗಿಲ್ಲ. ಕೊಡಗು ಇನ್ನೂ ಇದೆ. ಆದರೆ ಕೊಡಗು ನಿಧಾನವಾಗಿ ಇಲ್ಲವಾಗುತ್ತಿದೆ. ಇದೇ ನಿಜವಾದ ದುರಂತ. ಕೊಡಗು ಇದೆ, ಆದರೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಮಧ್ಯರಾತ್ರಿ ಒಬ್ಬ ತಾಯಿಯ ಎದೆ ನೋವು ಶುರುವಾಗುತ್ತದೆ. ಮಗ ಕಣ್ಣೀರಿನಲ್ಲಿ ತಾಯಿಯನ್ನು ಕಾರಿನಲ್ಲಿ ಹಾಕಿಕೊಂಡು ಮೈಸೂರಿಗೆ ಓಡುತ್ತಾನೆ. ದಾರಿಯಲ್ಲಿ ಮಳೆ, ದಾರಿಯಲ್ಲಿ ಕತ್ತಲೆ, ದಾರಿಯಲ್ಲಿ ಆಸ್ಪತ್ರೆ ಇಲ್ಲ. ಮೈಸೂರು ತಲುಪುವ ಮೊದಲೇ ತಾಯಿಯ ಉಸಿರು ನಿಂತು ಹೋಗುತ್ತದೆ.

ಮಗನ ಕೂಗು ಕಾಡಿನಲ್ಲಿ ಕರಗಿ ಹೋಗುತ್ತದೆ. ಒಂದು ಆಸ್ಪತ್ರೆ ಇದ್ದಿದ್ದರೆ ಆ ತಾಯಿ ಬದುಕುತ್ತಿದ್ದಳು. ಇಡೀ ದೇಶಕ್ಕೆ ಸೈನಿಕ ಕೊಟ್ಟ ಜಿಲ್ಲೆಯಲ್ಲಿ ಒಬ್ಬ ತಾಯಿಯನ್ನು ಉಳಿಸಲು ಒಂದು ಆಸ್ಪತ್ರೆ ಇಲ್ಲ ಎಂದರೆ ಇದಕ್ಕಿಂತ ದೊಡ್ಡ ನೋವು ನಮಗೆ ಇನ್ನೇನಿದೆ?
ಕೊಡಗು ಇದೆ, ಆದರೆ ನಮ್ಮ ರೈತನಿಗೆ ಬದುಕು ಇಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ಮಳೆಯಲ್ಲಿ ನೆನೆದು, ಬೆವರು ಸುರಿಸಿ ಕಾಫಿ ಬೆಳೆದ ನಮ್ಮ ರೈತ ಸಂಜೆ ಮನೆಗೆ ಬಂದಾಗ ಅವನ ಕೈಯಲ್ಲಿ ಬೆಲೆ ಇಲ್ಲ. ಅವನು ಬೆಳೆದ ಬೆಳೆಗೆ ಬೇರೆಯವರು ಬೆಲೆ ಹೇಳುತ್ತಾರೆ. ಅವನ ಸಾಲ ದಿನದಿಂದ ದಿನಕ್ಕೆ ಬೆಳೆಯುತ್ತದೆ. ಮಕ್ಕಳ ಫೀಸ್ ಕಟ್ಟಲು, ಮನೆ ಕಟ್ಟಲು, ಮದುವೆ ಮಾಡಲು ಅವನಿಗೆ ದಾರಿ ಕಾಣುವುದಿಲ್ಲ. ಇಡೀ ಜಗತ್ತಿಗೆ ಕಾಫಿ ಕೊಟ್ಟವನು ತನ್ನ ಮನೆಯಲ್ಲಿ ಕಾಫಿ ಕುಡಿಯಲು ಕೂಡ ಯೋಚಿಸಬೇಕಾದ ಸ್ಥಿತಿ ಬಂದರೆ, ಅದು ಅವನ ತಪ್ಪಲ್ಲ, ವ್ಯವಸ್ಥೆಯ ತಪ್ಪು. ಇದು ನಮ್ಮೆಲ್ಲರ ನೋವು.

ಕೊಡಗು ಇದೆ, ಆದರೆ ನಮ್ಮ ಯುವಕರಿಗೆ ಭವಿಷ್ಯ ಇಲ್ಲ. ಓದಿದ ನಮ್ಮ ಮಗ ಕೊಡಗಿನಲ್ಲೇ ಉಳಿಯಬೇಕು ಅಂತ ಆಸೆ ಪಡುತ್ತಾನೆ. ಆದರೆ ಕೊಡಗಿನಲ್ಲಿ ಅವನಿಗೆ ಕೆಲಸ ಇಲ್ಲ. ಉದ್ಯೋಗ ಇಲ್ಲ. ದಾರಿ ಇಲ್ಲ. ಅಂತಿಮವಾಗಿ ಅವನು ಬ್ಯಾಗ್ ಹಿಡಿದು ಬೆಂಗಳೂರಿಗೆ ಹೋಗುತ್ತಾನೆ, ದುಬೈಗೆ ಹೋಗುತ್ತಾನೆ. ತಾಯಿ ಮನೆಯ ಬಾಗಿಲಲ್ಲಿ ನಿಂತು ಕಣ್ಣೀರು ಹಾಕುತ್ತಾಳೆ. ಮಗ ಹೋಗುವಾಗ ಹೇಳುತ್ತಾನೆ, “ಅಮ್ಮಾ, ನಾನು ಹೋಗಲ್ಲ ಅಂದರೆ ಇಲ್ಲಿ ಏನು ಮಾಡಲಿ?” ಈ ಪ್ರಶ್ನೆಗೆ ಉತ್ತರ ಕೊಡಲು ನಮ್ಮಲ್ಲಿ ಯಾರಿಗೂ ಸಾಧ್ಯವಾಗುವುದಿಲ್ಲ. ಒಂದು ಜಿಲ್ಲೆ ತನ್ನ ಮಕ್ಕಳನ್ನೇ ಕಳೆದುಕೊಳ್ಳುತ್ತಿದೆ.
ಕೊಡಗು ಇದೆ, ಆದರೆ ನಮಗೆ ರಾತ್ರಿ ನಿದ್ದೆ ಇಲ್ಲ. ಆನೆ ಬರುತ್ತದೆ ಎಂಬ ಭಯದಲ್ಲಿ ನಮ್ಮ ರೈತ ರಾತ್ರಿಯಿಡೀ ಕಾವಲು ಕಾಯುತ್ತಾನೆ. ಒಂದೇ ರಾತ್ರಿಯಲ್ಲಿ ವರ್ಷವಿಡೀ ಬೆಳೆದ ತೋಟ ನಾಶವಾಗುತ್ತದೆ. ನಮ್ಮ ಮಗ ಶಾಲೆಗೆ ಹೋಗುವಾಗ ಆನೆ ಭಯ. ನಮ್ಮ ತಾಯಿ ನೀರು ತರಲು ಹೋಗುವಾಗ ಆನೆ ಭಯ. ಆನೆಗೂ ತಪ್ಪಿಲ್ಲ, ಮನುಷ್ಯನಿಗೂ ತಪ್ಪಿಲ್ಲ. ಆದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಬೇಕಾದ ವ್ಯವಸ್ಥೆ ಮಾತ್ರ ಮೌನವಾಗಿದೆ. ನಾವು ನಮ್ಮ ತೋಟದಲ್ಲೇ ಅಪರಿಚಿತರಂತೆ ಬದುಕುವಂತಾಗಿದೆ.

ಕೊಡಗು ಇದೆ, ಆದರೆ ನಮ್ಮ ಜಿಲ್ಲೆಯ ಒಳಗಡೆ ಅಕ್ರಮವಾಗಿ ವಾಸ ಮಾಡುತ್ತಿರುವ ವಲಸಿಗರಿಂದ ಆಗುವ ಅನಾಹುತದ ಬಗ್ಗೆಯೂ ನಾವು ಯೋಚಿಸಬೇಕು. ಉದಾಹರಣೆಗೆ ಅಸ್ಸಾಂ, ಬಾಂಗ್ಲಾದೇಶದಿಂದ ಬಂದವರೆಂದು ಹೇಳಲಾಗುವ ಅಕ್ರಮ ವಲಸಿಗರು ಗುರುತಿನ ಪತ್ರವಿಲ್ಲದೆ, ಪರಿಶೀಲನೆ ಇಲ್ಲದೆ ನಮ್ಮ ತೋಟಗಳಲ್ಲಿ, ಕಟ್ಟಡ ಕೆಲಸಗಳಲ್ಲಿ, ಊರುಗಳಲ್ಲಿ ನೆಲೆಸುತ್ತಿದ್ದಾರೆ ಎಂಬ ಆತಂಕ ಜನರಲ್ಲಿ ಇದೆ. ಇದರಿಂದ ಸ್ಥಳೀಯ ಯುವಕರಿಗೆ ಸಿಗಬೇಕಾದ ಕೆಲಸ ಕಡಿಮೆಯಾಗುತ್ತದೆ, ಕೂಲಿ ಬೆಲೆ ಕುಸಿಯುತ್ತದೆ, ಭೂಮಿ ಮತ್ತು ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ.
ಗುರುತು ಪರಿಶೀಲನೆ ಇಲ್ಲದಿದ್ದರೆ ಕಾನೂನು ಸುವ್ಯವಸ್ಥೆಗೆ, ಹೆಣ್ಣು ಮಕ್ಕಳ ಸುರಕ್ಷತೆಗೆ, ನಮ್ಮ ಸಂಸ್ಕೃತಿ ಮತ್ತು ಭಾಷೆಗೆ ಅಪಾಯವಾಗುತ್ತದೆ ಎಂಬ ಭಯ ಜನರಲ್ಲಿ ಮನೆ ಮಾಡಿದೆ. ಕಾನೂನುಬದ್ಧವಾಗಿ ಬಂದು ದುಡಿಯುವವರಿಗೆ ನಮ್ಮ ವಿರೋಧ ಇಲ್ಲ. ಆದರೆ ಅಕ್ರಮವಾಗಿ ಬಂದು ನೆಲೆಸುವುದು ನಮ್ಮ ಜಿಲ್ಲೆಯ ಭವಿಷ್ಯಕ್ಕೆ ಅಪಾಯ. ಇದರ ಬಗ್ಗೆ ಸರ್ಕಾರ ಮತ್ತು ವ್ಯವಸ್ಥೆಗಳು ಗಂಭೀರವಾಗಿ ಪರಿಶೀಲನೆ ಮಾಡಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಕೊಡಗು ಇರುತ್ತದೆ, ಆದರೆ ಕೊಡಗಿನವರು ಅಲ್ಪಸಂಖ್ಯಾತರಾಗುವ ಭಯ ನಮ್ಮನ್ನು ಕಾಡುತ್ತಿದೆ.

ಕೊಡಗು ಇದೆ, ಆದರೆ ನಮ್ಮ ಐನ್ ಮನೆ ಒಡೆಯುತ್ತಿದೆ. ಒಮ್ಮೆ ನೂರು ಜನ ಸೇರುತ್ತಿದ್ದ ಮನೆಯಲ್ಲಿ ಈಗ ನಾಲ್ಕು ಜನವೂ ಇಲ್ಲ. ಅಣ್ಣ ತಮ್ಮಂದಿರು ಬೇರೆ ಬೇರೆ ಊರಿಗೆ ಹೋಗಿದ್ದಾರೆ. ಹಬ್ಬಕ್ಕೆ ಸೇರುವವರು ಕಡಿಮೆಯಾಗಿದ್ದಾರೆ. ಹಿರಿಯರು ಒಂಟಿಯಾಗಿದ್ದಾರೆ. ಪುತ್ತರಿ ಬಂದರೂ ಹಳೆಯ ಸಡಗರ ಇಲ್ಲ. ಕೊಡಗಿನ ಸಂಸ್ಕೃತಿ ಪುಸ್ತಕದಲ್ಲಿ ಮಾತ್ರ ಉಳಿಯುವ ಭಯ ಶುರುವಾಗಿದೆ. ಒಂದು ಜನಾಂಗದ ಬೇರು ಒಡೆಯುತ್ತಿದೆ ಎಂದರೆ ಅದಕ್ಕಿಂತ ದೊಡ್ಡ ನೋವು ನಮಗೆ ಇನ್ನೇನಿದೆ?
ಕೊಡಗು ಇದೆ, ಆದರೆ ನಮಗೆ ಗೌರವ ಸಿಗುತ್ತಿಲ್ಲ. ನಾವು ಕೇಳುವುದು ಭಿಕ್ಷೆ ಅಲ್ಲ, ನಮ್ಮ ಹಕ್ಕು. ಕಾಫಿ ಕೊಟ್ಟವನಿಗೆ ಬೆಲೆ ಬೇಕು. ನೀರು ಕೊಟ್ಟವನಿಗೆ ನೀರು ಬೇಕು. ಸೈನಿಕ ಕೊಟ್ಟವನಿಗೆ ಆಸ್ಪತ್ರೆ ಬೇಕು. ಪ್ರಕೃತಿ ಉಳಿಸಿದವನಿಗೆ ರಸ್ತೆ ಬೇಕು. ಇವು ದೊಡ್ಡ ಕನಸುಗಳಲ್ಲ. ಇವು ಒಂದು ಜಿಲ್ಲೆಗೆ ಇರಬೇಕಾದ ಕನಿಷ್ಠ ಮೂಲಭೂತ ಸೌಕರ್ಯಗಳು. ಇವು ಸಿಗದಿದ್ದರೆ ಕೊಡಗು ಇರುತ್ತದೆ, ಆದರೆ ನಾವು ಉಳಿಯುವುದಿಲ್ಲ.

ಈಗ ನಾವು ಯೋಚಿಸೋಣ, ಕೊಡಗು ಇಲ್ಲದಿದ್ದರೆ ಏನಾಗುತ್ತದೆ ಎಂದು ಯೋಚಿಸುವುದಕ್ಕಿಂತ, ಕೊಡಗು ಇರುವಾಗಲೇ ನಾವೆಲ್ಲರೂ ಏನು ಮಾಡಬೇಕು? ನಮ್ಮ ರೈತನಿಗೆ ನ್ಯಾಯಯುತ ಬೆಲೆ ಸಿಗಬೇಕು. ಅವನು ಬೆಳೆದ ಕಾಫಿಗೆ ಅವನ ಬೆವರಿನ ಬೆಲೆ ಸಿಗಬೇಕು. ಅವನು ಸಾಲಗಾರನಾಗಿ ಸಾಯಬಾರದು, ಸ್ವಾಭಿಮಾನಿಯಾಗಿ ಬದುಕಬೇಕು. ಇದೇ ಮೊದಲ ರಚನಾತ್ಮಕ ಹೆಜ್ಜೆ.
ನಮ್ಮ ಸೈನಿಕರ ಜೊತೆಗೆ ನಮ್ಮ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರನ್ನು, ಕ್ರೀಡಾ ಕ್ಷೇತ್ರದವರನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು, ಗೌರವಿಸಬೇಕು. ದೇಶಕ್ಕಾಗಿ ಪ್ರಾಣ ಕೊಟ್ಟವನ ತಾಯಿಗೆ, ಹೆಂಡತಿಗೆ, ಮಕ್ಕಳಿಗೆ ಸಮಾಜದಲ್ಲಿ ಗೌರವದ ಸ್ಥಾನ ಸಿಗಬೇಕು. ವರ್ಷಕ್ಕೊಮ್ಮೆ ಹಾರ ಹಾಕುವುದು ಗೌರವವಲ್ಲ. ಪ್ರತಿದಿನ ಅವರನ್ನು ನೆನಪಿಸಿಕೊಳ್ಳುವುದೇ ನಿಜವಾದ ಗೌರವ.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಮ್ಮ ಹಿರಿಯರ ತ್ಯಾಗವನ್ನು, ಹಾಕಿಗೆ ಚಿನ್ನ ತಂದುಕೊಟ್ಟ ನಮ್ಮ ಕ್ರೀಡಾಪಟುಗಳ ಸಾಧನೆಯನ್ನು, ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೊಡಗಿನ ಹೆಸರನ್ನು ಬೆಳಗಿಸಿದ ಕಲಾವಿದರನ್ನು ನಮ್ಮ ಮಕ್ಕಳಿಗೆ ಶಾಲೆಯಲ್ಲಿ ಹೇಳಬೇಕು. ಒಟ್ಟಾರೆಯಾಗಿ ಸೈನಿಕ, ಸ್ವಾತಂತ್ರ್ಯ ಹೋರಾಟಗಾರ, ಕ್ರೀಡೆ, ಸಾಂಸ್ಕೃತಿಕ, ಶಿಕ್ಷಣ, ಕೃಷಿ – ಎಲ್ಲಾ ಕ್ಷೇತ್ರಗಳಲ್ಲೂ ಕೊಡಗು ಕೊಟ್ಟ ಕೊಡುಗೆಯನ್ನು ನಾವು ಮರೆಯಬಾರದು.

ನಮ್ಮ ಹೆಣ್ಣು ಮಕ್ಕಳನ್ನು, ಯುವಕರನ್ನು ನಾವೆಲ್ಲರೂ ಉಳಿಸಬೇಕು. ನಮ್ಮ ಯುವಕನಿಗೆ ಕೊಡಗಿನಲ್ಲೇ ಕೆಲಸ ಸಿಗಬೇಕು. ನಮ್ಮ ಯುವತಿಗೆ ಕೊಡಗಿನಲ್ಲೇ ಭವಿಷ್ಯ ಸಿಗಬೇಕು. ಅವರು ಕೆಲಸಕ್ಕಾಗಿ ಬೆಂಗಳೂರಿಗೆ, ದುಬೈಗೆ ಹೋಗಬೇಕಿಲ್ಲ. ಕೊಡಗಿನಲ್ಲೇ ಉದ್ಯೋಗ, ಕೊಡಗಿನಲ್ಲೇ ಬದುಕು ಕಟ್ಟಿಕೊಡುವುದು ನಮ್ಮೆಲ್ಲರ ಜವಾಬ್ದಾರಿ.
ಕೊಡಗಿನ ಪ್ರಕೃತಿಯನ್ನು, ಆನೆ-ಮಾನವ ಸಂಘರ್ಷವನ್ನು ನಾವು ಮಾನವೀಯತೆಯಿಂದ ಬಗೆಹರಿಸಬೇಕು. ಆನೆಗೂ ಬದುಕಲು ಜಾಗಬೇಕು, ಮನುಷ್ಯನಿಗೂ ಬದುಕಲು ಜಾಗಬೇಕು. ಒಬ್ಬರನ್ನು ಕೊಂದರೆ ಇನ್ನೊಬ್ಬರು ಉಳಿಯುವುದಿಲ್ಲ. ವೈಜ್ಞಾನಿಕ ಪರಿಹಾರ, ಸರ್ಕಾರದ ಇಚ್ಛಾಶಕ್ತಿ ಮತ್ತು ನಮ್ಮೆಲ್ಲರ ಸಹಕಾರದಿಂದ ಮಾತ್ರ ಇದನ್ನು ಬಗೆಹರಿಸಲು ಸಾಧ್ಯ.

ನಮ್ಮ ಸಂಸ್ಕೃತಿಯನ್ನು ಉಳಿಸಬೇಕು. ಐನ್ ಮನೆಯನ್ನು ಉಳಿಸಬೇಕು. ಪುತ್ತರಿ ಹಬ್ಬವನ್ನು ಕೇವಲ ಫೋಟೋಗೆ ಸೀಮಿತ ಮಾಡಬಾರದು. ಅದರ ಹಿಂದಿನ ಪ್ರೀತಿ, ಒಗ್ಗಟ್ಟು, ಹಂಚಿಕೊಳ್ಳುವ ಗುಣವನ್ನು ಉಳಿಸಬೇಕು. ಒಂದು ಮನೆಯಲ್ಲಿ ನೂರು ಜನ ಸೇರುವ ಸಂಸ್ಕೃತಿ ಮತ್ತೆ ಬರಬೇಕು. ಅದೇ ಕೊಡಗಿನ ನಿಜವಾದ ಶಕ್ತಿ.
ಸ್ನೇಹಿತರೇ, ಇಲ್ಲಿ ಒಂದು ಸಾಮಾಜಿಕ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸಮಾಜದಲ್ಲಿ ಜಾಗೃತಿ ಮೂಡಿಸಲು ಶ್ರಮಿಸುವ ಬರಹಗಾರರು, ಸಮಾಜ ಸೇವಕರು ಎಂಬ ಒಂದು ವರ್ಗವಿದೆ. ಅವರು ಯಾವುದೇ ಪಕ್ಷದವರಾಗಿರಬಹುದು, ಯಾವುದೇ ಸಂಘದವರಾಗಿರಬಹುದು. ಅವರು ಪಕ್ಷಕ್ಕಾಗಿ ಕೆಲಸ ಮಾಡಬಹುದು ಇರಬಹುದು, ಸಂಘಗಳಿಗಾಗಿ ಕೆಲಸ ಮಾಡಬಹುದು ಇರಬಹುದು. ಅವರು ಯಾರಿಂದಲೂ ಸಂಬಳ ಪಡೆಯುವುದಿಲ್ಲ, ಯಾವುದೇ ಲಾಭಕ್ಕಾಗಿ ಕೆಲಸ ಮಾಡುವುದಿಲ್ಲ.

ತಮ್ಮ ಸಮಯವನ್ನು, ತಮ್ಮ ಶ್ರಮವನ್ನು, ಕೆಲವೊಮ್ಮೆ ತಮ್ಮ ಜೇಬಿನ ಹಣವನ್ನು ಖರ್ಚು ಮಾಡಿ ಸಮಾಜದ ಸಮಸ್ಯೆಯನ್ನು ಜನರ ಮುಂದೆ ಇಡುತ್ತಾರೆ. ಸತ್ಯ ಹೇಳಿದರೆ ಅವರಿಗೆ ಕೋಪವೂ ಬರುತ್ತದೆ, ಬೆದರಿಕೆಯೂ ಬರುತ್ತದೆ, ಅಪಮಾನವೂ ಆಗುತ್ತದೆ. ಆದರೂ ಅವರು ನಿಲ್ಲುವುದಿಲ್ಲ.
ಅಂತಹವರ ಬದುಕು ಎಷ್ಟು ಕಷ್ಟವಾಗಿರಬಹುದು ಎಂದು ನಾವೆಲ್ಲರೂ ಒಮ್ಮೆ ಯೋಚಿಸಬೇಕು. ಅವರ ಕುಟುಂಬದಲ್ಲೂ ಸಮಸ್ಯೆಗಳಿರುತ್ತವೆ. ಅವರಿಗೂ ನೋವು, ಸಾಲ, ಅನಾರೋಗ್ಯ ಇರಬಹುದು. ಇವರು ಸಹ ಆರ್ಥಿಕ ಸಹಾಯಕ್ಕಾಗಿ ಕಾಯುತ್ತಿರುತ್ತಾರೆ. ಆದರೂ ಅವರು ಬೇರೆಯವರ ನೋವಿಗಾಗಿ ಧ್ವನಿ ಎತ್ತುತ್ತಾರೆ.

ಅಂತಹವರಿಗಾಗಿ ನಾವು ಮಿಡಿಯಬೇಕು ಎಂಬ ಮನಸ್ಥಿತಿ ಸಮಾಜದಲ್ಲಿ ಬೆಳೆಯಬೇಕು. ಅವರಿಗೆ ಒಂದು ಒಳ್ಳೆಯ ಮಾತು ಹೇಳುವುದು, ಅವರ ಕೆಲಸವನ್ನು ಗೌರವಿಸುವುದು, ಅವರ ಜೊತೆ ಮಾನವೀಯವಾಗಿ ನಿಲ್ಲುವುದು – ಇದೇ ಸಮಾಜದ ಕರ್ತವ್ಯ. ಯಾರಾದರೂ ಒಬ್ಬರು ಸಮಾಜಕ್ಕಾಗಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದರೆ, ಅವರನ್ನು ಉಳಿಸಿಕೊಳ್ಳುವುದು ಸಮಾಜದ ಜವಾಬ್ದಾರಿ.
ಸ್ನೇಹಿತರೇ, ಈ 50ನೇ ಲೇಖನ ಕೇವಲ ಒಂದು ಲೇಖನ ಅಲ್ಲ. ಇದು ಒಂದು ಎಚ್ಚರಿಕೆ. ಒಂದು ದಿನ ಕೊಡಗು ಇಲ್ಲದಿದ್ದರೆ ಏನಾಗುತ್ತದೆ ಎಂದು ಕಲ್ಪನೆ ಮಾಡಿಕೊಂಡರೆ ಸಾಕು, ನಮ್ಮ ಕಣ್ಣಲ್ಲಿ ನೀರು ಬರುತ್ತದೆ. ಆದರೆ ಕೊಡಗು ಇರುವಾಗಲೇ ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕೈಯಲ್ಲಿದೆ. ನಾವೊಬ್ಬರೇ ಏನೂ ಮಾಡಬೇಕಿಲ್ಲ. ನಾವು ಕೊಡಗಿನ ಒಂದು ಮರವನ್ನು ಉಳಿಸಿದರೆ ಸಾಕು. ನಾವು ಕೊಡಗಿನ ಒಬ್ಬ ರೈತನಿಗೆ ಧೈರ್ಯ ಹೇಳಿದರೆ ಸಾಕು. ನಾವು ಕೊಡಗಿನ ಒಬ್ಬ ಮಗುವಿಗೆ ಕೊಡಗಿನ ಕಥೆ ಹೇಳಿದರೆ ಸಾಕು.

ಆದರೆ ಒಂದು ನೋವಿನ ಸತ್ಯವನ್ನು ಹೇಳಬೇಕಾಗಿದೆ. ನಮ್ಮ ಕೊಡಗು ಜಿಲ್ಲೆಯನ್ನು ಹೀಗೆಯೇ ಮೂಲಭೂತ ಸೌಕರ್ಯಗಳಿಲ್ಲದೆ ನಿರ್ಲಕ್ಷ್ಯ ಮಾಡಿದರೆ, ಪರಿಸ್ಥಿತಿ ಸರಿಯಾಗದೆ ಇದ್ದರೆ, ನಮ್ಮ ನಿಮ್ಮೆಲ್ಲರ ಮನಸ್ಸಿನಲ್ಲಿ ಒಂದು ಕಲ್ಪನೆ ಬರಲು ಶುರುವಾಗುತ್ತದೆ. ಕರ್ನಾಟಕದಿಂದ ಬೇರ್ಪಟ್ಟ ಕೊಡಗು ಸುಂದರವಾಗಿ ಇರಬಹುದು ಎಂಬ ಕಲ್ಪನೆ. ಇದು ದ್ವೇಷದಿಂದ ಬರುವ ಮಾತಲ್ಲ. ಇದು ಬೇಸರದಿಂದ ಬರುವ ಮಾತು. ನಾವು ಕರ್ನಾಟಕವನ್ನು ಬಿಡಬೇಕು ಎಂಬುದು ನಮ್ಮ ಆಸೆ ಅಲ್ಲ. ಕರ್ನಾಟಕ ನಮ್ಮನ್ನು ನೆನಪಿಸಿಕೊಳ್ಳಬೇಕು ಎಂಬುದೇ ನಮ್ಮ ಆಸೆ.
ಕೊಡಗು ಉಳಿದರೆ ಮಾತ್ರ ಕರ್ನಾಟಕ ಉಳಿಯುತ್ತದೆ. ಕೊಡಗು ನಗಿದರೆ ಮಾತ್ರ ಕರ್ನಾಟಕ ನಗುತ್ತದೆ. ಕೊಡಗು ಕಾಫಿ ಕೊಡುತ್ತದೆ, ನೀರು ಕೊಡುತ್ತದೆ, ಸೈನಿಕ ಕೊಡುತ್ತದೆ, ಸಂಸ್ಕೃತಿ ಕೊಡುತ್ತದೆ. ಆದರೆ ಕೊಡಗು ನಮಗೆ ಒಂದು ಪ್ರಶ್ನೆಯನ್ನು ಕೇಳುತ್ತಿದೆ. ನನಗಾಗಿ ನಾವೆಲ್ಲರೂ ಏನು ಮಾಡುತ್ತೇವೆ? ಈ ಪ್ರಶ್ನೆಗೆ ಉತ್ತರ ಕೊಡುವ ಸಮಯ ಬಂದಿದೆ. ಕೊಡಗನ್ನು ಉಳಿಸೋಣ. ಕೊಡಗನ್ನು ಬೆಳೆಸೋಣ. ಏಕೆಂದರೆ ಕೊಡಗು ಇಲ್ಲದ ಕರ್ನಾಟಕವನ್ನು ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.

ಜನರಿಂದ ಜನರಿಗಾಗಿ ಜನಜಾಗೃತಿಗಾಗಿ
ಇದುವರೆಗೂ ನನ್ನ 49 ಲೇಖನವನ್ನು ಓದಿ ನನಗೆ ಪ್ರೋತ್ಸಾಹಿಸಿದ ನನ್ನ ಎಲ್ಲಾ ಓದುಗ ಮಿತ್ರರಿಗೂ ಹಾಗೂ ನನಗೆ ಕರೆ ಮಾಡಿ ಅಭಿನಂದಿಸಿದ ಬಂಧು ಬಳಗದವರಿಗೂ, ಕುಟುಂಬದವರಿಗೂ, ಸ್ನೇಹಿತರಿಗೂ, ರಾಜಕಾರಣಿಗಳಿಗೂ, ಸಾಮಾಜಿಕ ಕಾರ್ಯಕರ್ತರಿಗೂ, ಎಲ್ಲಾ ಸ್ನೇಹಿತರಿಗೂ, ನನ್ನ ಲೇಖನವನ್ನು ಪತ್ರಿಕೆಯಲ್ಲಿ ಪ್ರಕಟ ಮಾಡಿದ ಪತ್ರಿಕೆಯವರಿಗೂ, ವೆಬ್ಸೈಟ್ ಚಾನೆಲ್ ಅವರಿಗೂ ಅನಂತ ಅನಂತ ಧನ್ಯವಾದಗಳು.
ಲೇಖಕ ಕಾಯಪಂಡ ವಿಷ್ಣುನಾಚಪ್ಪ ಅವರು ಬರೆದಿರುವ ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…








