ಮದುವೆಯ ಸಂಭ್ರಮಗಳೆಲ್ಲ ಮುಗಿದು ನೆಂಟರಿಷ್ಟರೆಲ್ಲ ತಮ್ಮ ತಮ್ಮ ಮನೆಗಳಿಗೆ ಮರಳಿದ್ದರು. ಮನೆ ನಿಶ್ಯಬ್ದವಾಗಿತ್ತು. ಹಕ್ಕಿಗಳ ಚಿಲಿಪಿಲಿ, ಸೂರ್ಯನ ಕಿರಣಗಳು ಆಗಲೇ ಬೆಳಕನ್ನು ಹರಡಿದ್ದವು. ರಾಕೇಶ್ ಎದ್ದವನೇ ಹೊರಗೆ ಬಂದ. ಮನೆ ಸ್ವಚ್ಛವಾಗಿ ಸುವಾಸನೆಯಿಂದ ತುಂಬಿತ್ತು. ಅವನ ಕಣ್ಣುಗಳು ತನ್ನ ಹೊಸ ಮಡದಿಯನ್ನು ಹುಡುಕುತ್ತಿದ್ದವು.
ರಂಜನಿ ಆಗತಾನೇ ಸ್ನಾನ ಮಾಡಿ, ಮಡಿಯಿಂದ ಬಂದಿದ್ದಳು. ಆಕೆಯ ಗೌರವರ್ಣ, ನೀಳವಾದ ಕೇಶರಾಶಿ, ಮತ್ತೆ ಮತ್ತೆ ಚುಂಬಿಸಲು ಆಕರ್ಷಿಸುವ ಚೆಲುವಾದ ತುಂಬು ಗಲ್ಲ, ಮಿಂಚುವ ಬಟ್ಟಲು ಕಣ್ಣುಗಳು ರಾಕೇಶನನ್ನು ಆಹ್ವಾನಿಸುತ್ತಿದ್ದವು. ಮೊದಲ ರಾತ್ರಿಯ ಕನಸು ಕಂಡಿದ್ದ ಅವನು, ಅವಳ ಚೆಲುವಾದ ಕೆನ್ನೆಯನ್ನು ಚುಂಬಿಸುವ ಮುನ್ನವೇ ಅವಳು ಮುಖವನ್ನು ಪಕ್ಕಕ್ಕೆ ತಿರುಗಿಸಿ, “ನನ್ನನ್ನು ಕ್ಷಮಿಸಿ, ನನಗೆ ಭಯವಾಗುತ್ತದೆ, ನನ್ನ ಹತ್ತಿರ ಬರಬೇಡಿ” ಎಂದು ದುಃಖ ಮತ್ತು ಭಯದಿಂದ ನುಡಿದಳು.
ಅದುರುತ್ತಿದ್ದ ಅವಳ ತುಟಿಗಳನ್ನು ಗಮನಿಸಿ, “ಹುಚ್ಚು ಹುಡುಗಿ, ಇಂದು ನಮ್ಮ ಮೊದಲ ರಾತ್ರಿ ನೆನಪಿದೆಯಾ? ಭಯಪಡಲು ನಾನೇನು ಸಿಂಹವೇ? ನಿನ್ನನ್ನು ತಿಂದು ಹಾಕುವುದಿಲ್ಲ” ಎಂದು ನಗುತ್ತಾ ಮತ್ತಷ್ಟು ಅವಳ ಹತ್ತಿರ ಕುಳಿತು ಅವಳನ್ನು ದಿಟ್ಟಿಸಿ ನೋಡಿದ. ಆದರೆ ಅವಳು ಅವನಿಂದ ಮತ್ತಷ್ಟು ದೂರ ಸರಿದು ಕುಳಿತಳು.ಅವನಿಗೆ ಕೊಂಚ ಬೇಸರವಾದರೂ, “ಎಂತಹ ಕಟುಕನಿಗೂ ನಿನ್ನನ್ನು ಹಿಂಸಿಸುವ ಮನಸ್ಸು ಬಾರದು. ಹೆಣ್ಣು ತಾನಾಗಿಯೇ ಒಲಿದರೆ ಚೆಂದ. ಹೊಸದಾಗಿ ಮದುವೆಯಾದ ಮೊದಲ ರಾತ್ರಿ ತನ್ನ ಪತಿಯೊಂದಿಗೆ ಮನಸ್ಸು ಹಂಚಿಕೊಳ್ಳುವುದು ಹೆಣ್ಣಿಗೆ ಸಹಜ” ಎಂದುಕೊಂಡು ಆ ರಾತ್ರಿಯನ್ನು ಮಗ್ಗಲು ಬದಲಿಸುತ್ತಾ ಕಳೆದ.

ದೊಡ್ಡ ಟ್ರಾನ್ಸ್ಪೋರ್ಟ್ ಕಂಪನಿಯ ಮ್ಯಾನೇಜರ್ ಆಗಿದ್ದ ರಾಕೇಶನಿಗೆ ತನ್ನ ಸುಂದರ ಹೆಂಡತಿಯೊಂದಿಗೆ ಹೊಸ ಜೀವನ ಪ್ರಾರಂಭಿಸಲು ಕಾತರವಿತ್ತು. ಮದುವೆಗಾಗಿ ತೆಗೆದುಕೊಂಡಿದ್ದ ರಜೆ ಮುಗಿದಿತ್ತು. ಅವನು ಪುಣೆಗೆ ಹೊರಡಲು ನಿಂತಾಗ, “ನೀನೊಬ್ಬನೇ ಹೋಗು. ರಂಜನಿಯನ್ನು ಒಂದು ತಿಂಗಳ ನಂತರ ಕರೆದುಕೊಂಡು ಹೋಗು. ಅವಳಿಗೆ ಅಲ್ಲಿನ ವಾತಾವರಣ ಹೊಸದು” ಎಂದು ಅಮ್ಮ ನುಡಿದಾಗ, ಆತನ ಆಸೆಗಳೆಲ್ಲ ಜರ್ ನೆ ಇಳಿದವು. ಚಿಕ್ಕಂದಿನಿಂದಲೇ ತಂದೆ-ತಾಯಿಯ ಮುದ್ದಿನಲ್ಲಿ ಬೆಳೆದು, ಉತ್ತಮ ಶಿಕ್ಷಣದೊಂದಿಗೆ ಉದ್ಯೋಗ ಪಡೆದಿದ್ದ. ತಂದೆಯ ಎದುರು ನಿಂತದ್ದು ಕಡಿಮೆ, ಎಲ್ಲವೂ ತಾಯಿಯ ಶಿಫಾರಸಿನೊಂದಿಗೆ ನಡೆಯುತ್ತಿತ್ತು. ಮೆಲ್ಲಗೆ ಅಕ್ಕನನ್ನು ದಿಟ್ಟಿಸಿದ, ಅವಳು ಸಹ ಹುಸಿ ನಗೆ ನಕ್ಕು ಒಳಗೆ ನಡೆದಳು. ಅವನು ಏನು ತೋಚದವನಂತೆ ನಿಂತ.
“ನೀನಿರುವ ಮನೆ ಈಗ ಚಿಕ್ಕದು. ಬೇರೆ ಮನೆ ಮಾಡಿ ನಂತರ ಕರೆದುಕೊಂಡು ಹೋಗು. ಸಂಸಾರ ಹೊಸದು, ಅಲ್ಲಿ ತೊಂದರೆ ಅನುಭವಿಸುವುದು ಬೇಡ. ಯೋಚಿಸು” ಎಂದು ತಂದೆ ನುಡಿದಾಗ, ಬೇರೆ ದಾರಿ ಕಾಣದೆ ತಲೆಯಾಡಿಸಿದ. ಮನಸ್ಸು ರಂಜನಿಯನ್ನು ಬಿಟ್ಟು ಹೋಗಲು ಹಿಂಜರಿಯುತ್ತಿತ್ತು, ಆದರೆ ಪೆಚ್ಚುಮೋರೆಯಿಂದ ಅಪ್ಪ-ಅಮ್ಮನನ್ನು ಬೀಳ್ಕೊಂಡು ಪುಣೆಗೆ ಹೊರಟ.
ರಂಜನಿ ಕೋಣೆಯಿಂದ ಹೊರಗೆ ಬಾರದಿರುವುದನ್ನು ಕಂಡು ಅವನೇ ಒಳಗೆ ಹೋಗಿ, “ರಂಜನಿ, ಪುಣೆಗೆ ಹೋಗುತ್ತಿದ್ದೇನೆ, ನನ್ನನ್ನು ಪ್ರೀತಿಯಿಂದ ಕಳುಹಿಸಿ ಕೊಡುವುದಿಲ್ಲವೇ?” ಎಂದು ಪ್ರೀತಿಯಿಂದ ನುಡಿದ.“ಹೂಂ, ಹೋಗಿ ಬನ್ನಿ” ಎಂದು ನುಡಿದು ತಲೆತಗ್ಗಿಸಿ ನಿಂತಳು.“ಬೇಗ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ” ಎಂದು ನುಡಿದು ಮುಂದೆ ಹೆಜ್ಜೆ ಹಾಕಿದ.
ರೈಲು ಹತ್ತಿದ ರಾಕೇಶ್ ಕಿಟಕಿಯ ಹತ್ತಿರದ ಸೀಟು ಹಿಡಿದು ಕುಳಿತ. ರಂಜನಿಯ ಮುಖ ಕಣ್ಣ ಮುಂದೆ ತೇಲಿ ಬರುತ್ತಿತ್ತು. ವಿರಹ ಒಮ್ಮೆಲೇ ಆವರಿಸಿಕೊಂಡು ಬಂದಂತಾಗಿ ಕೊರಳು ಉಬ್ಬಿತು. ಕಷ್ಟದಿಂದ ಉಗುಳು ನುಂಗಿಕೊಂಡ. ಇಂತಹ ಅನುಭವ, ಸಂಕಟ, ಮೆಚ್ಚಿದ ಪ್ರೇಯಸಿಯನ್ನು ಮೊದಲ ಬಾರಿಗೆ ಸ್ವಲ್ಪ ಕಾಲ ಅಗಲುವಾಗ ಆಗುವ ಸಂಕಟವನ್ನು ಸಿನಿಮಾ, ಕಾದಂಬರಿಗಳಲ್ಲಿ ಮಾತ್ರ ಓದಿ ತಿಳಿದಿದ್ದ. ಎಷ್ಟೊಂದು ಹೆಂಗಸರು ಸಂಗಾತಿಯನ್ನು ಬೀಳ್ಕೊಡುವಾಗ ಮುದ್ದಿನ ಮುತ್ತಿಟ್ಟು ಆನಂದದಿಂದ ಕಳುಹಿಸುತ್ತಾರೆ, ಆದರೆ ನನ್ನ ರಂಜನಿ ಮೌನವಾಗಿದ್ದಾಳೆ. ಅವಳ ಭಾವನೆಗಳೇ ಅರ್ಥವಾಗುತ್ತಿಲ್ಲ. ಮೊದಲ ರಾತ್ರಿಯೂ ನನ್ನಿಂದ ದೂರ ಸರಿದಳು.
ರೈಲಿನಿಂದ ಇಳಿದು ಹೋಟೆಲ್ನಲ್ಲಿ ಕಾಫಿ ಕುಡಿದು ರೂಮ್ ಸೇರಿದಾಗ ಮನಸ್ಸು ಭಾರವೆನಿಸಿದಂತೆ ಹಾಸಿಗೆಯನ್ನು ಸರಿಪಡಿಸಿ ಮಂಚಕ್ಕೆ ಒರಗಿದ. ನಿದ್ರೆ ಬಾರದೆ ಹೊರಳಾಡಿದ. “ರಂಜನಿ ಎಷ್ಟು ಸುಂದರವಾದ ಹೆಸರು, ಎಂತಹ ಸೌಂದರ್ಯದ ರಾಣಿ! ಆದರೆ ನನ್ನ ಪಾಲಿಗೆ ಆ ಸೌಂದರ್ಯರಾಣಿಯನ್ನು ಅನುಭವಿಸದ ದುರದೃಷ್ಟವೇ? ಎಷ್ಟೊಂದು ಆಸೆ, ಬಯಕೆ, ನಿರಾಸೆಗಳನ್ನು ಉಂಟು ಮಾಡಿದೆ?” ಅವನ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು.
ಏಕಾಂಗಿಯಾಗಿರಲು ಮನಸ್ಸಿಗೆ ಬೇಸರವೆನಿಸಿತು. ಆದಷ್ಟು ಬೇಗ ಬೇರೆ ಮನೆ ಮಾಡಿ ರಂಜನಿಯನ್ನು ಕರೆದುಕೊಂಡು ಬರಬೇಕೆನಿಸಿತು. ಕನಸು ಕಾಣುತ್ತಾ ಮಗ್ಗಲು ಬದಲಿಸಿದ. ರಾತ್ರಿ ತುಂಬಾ ಸಮಯವಾಗಿತ್ತು. ಅವಳ ನೆನಪಿನಲ್ಲಿ 15 ದಿನಗಳನ್ನು ಕಳೆದ ರಾಕೇಶ್, ಪತ್ನಿಯಿಂದ ಒಂದು ಕರೆ ಬಾರದೆ ಚಡಪಡಿಸುತ್ತಿದ್ದಾಗ, ಅವನ ತಂದೆಯಿಂದ ಕರೆ ಬಂತು. “ಕ್ಷೇಮವೇ? ಬೇರೆ ಮನೆ ಮಾಡಿದ್ದೀಯಾ? ಬಾಡಿಗೆ ತುಂಬಾ ದುಬಾರಿಯದ್ದಕ್ಕೆ ಹೋಗಬೇಡ, ಯಾವಾಗ ಬರುವೆ?” ಇಂತಿಷ್ಟಕ್ಕೆ ಸೀಮಿತವಾಗಿತ್ತು.
ಹೆಂಡತಿಯ ಪ್ರೀತಿಯ ನುಡಿಗಳನ್ನು ಹೊತ್ತ ಕರೆ ಬಾರದೆ ರಾಕೇಶ್ ನಿರಾಶನಾದ. “ನನ್ನ ರಂಜನಿಗೇನಾಗಿದೆ? ಕೊಂಚವೂ ನನ್ನಲ್ಲಿ ಪ್ರೀತಿ ಇಲ್ಲವೇ? ಸದಾ ಮೌನದಿಂದಿರುತ್ತಾಳೆ. ಪ್ರೀತಿಯಿಂದ ಹತ್ತಿರ ಹೋದರೆ ಮುಖ ಸರಿಸುತ್ತಾಳೆ. ಒಂದು ದಿನವೂ ಅವಳು ನಕ್ಕಿದ್ದು, ಸಂತೋಷದಿಂದ ಮಾತನಾಡಿದ್ದು ಕಂಡಿಲ್ಲ. ಹೆಂಗಸರು ತುಂಬಾ ವಿಚಿತ್ರ ಸ್ವಭಾವದವರು, ಅವರ ಮನಸ್ಸು ಅರಿಯುವುದು ತುಂಬಾ ಕಷ್ಟ.”
ಸ್ನೇಹಿತನ ಸಹಾಯದಿಂದ ಮನೆಯೊಂದನ್ನು ಗೊತ್ತು ಮಾಡಿದ. ಸಂಸಾರಕ್ಕೆ ಬೇಕಾದ ವಸ್ತುಗಳನ್ನು ತನಗೆ ತಿಳಿದ ಮಟ್ಟಿಗೆ ಕೊಂಡುಕೊಂಡ. ಅದರಲ್ಲಿ ರಂಜನಿಗಾಗಿ ನಿಲುಗನ್ನಡಿ ಕೊಳ್ಳಲು ಮರೆಯಲಿಲ್ಲ. “ರಂಜನಿ, ನಿನ್ನ ಸೌಂದರ್ಯ ನೋಡಲು ಕನ್ನಡಿಯೇಕೆ? ನನ್ನ ಕಣ್ಣ ಕನ್ನಡಿ ಸಾಲದೇ?” ಎಂದು ಮನಸ್ಸಿನಲ್ಲೇ ಅಂದುಕೊಂಡ.

ಎರಡು ದಿನದ ಮಟ್ಟಿಗೆ ಕಂಪನಿಗೆ ರಜೆ ಹಾಕಿ ಮರುದಿನ ಬೆಂಗಳೂರಿಗೆ ಹೊರಟ. ಅಮ್ಮ ಬಾಗಿಲಲ್ಲಿ ನಿಂತಿದ್ದಳು. ಮುಗುಳು ನಕ್ಕು ಆರೋಗ್ಯ ವಿಚಾರಿಸಿದರೆ, ತಂಗಿಯೂ ಕ್ಷೇಮ ಸಮಾಚಾರ ವಿಚಾರಿಸಿ ಒಳಗೆ ಸೇರಿದಳು. ರಾಕೇಶನ ಕಣ್ಣು ರಂಜನಿಯನ್ನು ಹುಡುಕಿದವು. ನನ್ನನ್ನು ಕಂಡೊಡನೆ ಕಣ್ಣೆದುರು ಬಾರದ ಚೆಲುವೆಯ ಬಗ್ಗೆ ಕೊಂಚ ಬೇಸರವಾಯಿತು. ರಾಕೇಶ್ ರೂಮಿಗೆ ಬಂದ. ಟೇಬಲ್ ಮೇಲಿದ್ದ ವಾರಪತ್ರಿಕೆ ಅವನನ್ನು ಸೆಳೆಯಿತು. ಕಣ್ಣು ಹಾಯಿಸಿದ – “ಕನಸಿನ ದೋಣಿ” ಕತೆಗಾರ್ತಿ ರಂಜನಿ! ಅವನ ಕಣ್ಣುಗಳು ಸಂತೋಷದಿಂದ ಅರಳಿದವು.
“ನನ್ನ ರಂಜನಿ ಕಥೆಗಾರ್ತಿಯೇ?” ರಾಕೇಶನಿಗೆ ಆದಷ್ಟು ಬೇಗ ಕಥೆಯ ಸಾರವನ್ನು ಓದುವ ಕಾತರ. ಆದರೆ ಸ್ವಲ್ಪ ಸಮಯದ ನಂತರ ಸೋಪಿನ ಸುವಾಸನೆ ರಂಜನಿಯ ಬರವನ್ನು ಸಾರಿತು. ಅವಳನ್ನು ಗಮನಿಸಿದೊಡನೆ ಮಿಂದ ದೇಹವಿಡೀ ಸಂತಸ, ಸಂಭ್ರಮದಿಂದ ಪುಳಕಗೊಂಡಿತು. ತುಂಬಾ ದಿನಗಳಿಂದ ಅವಳನ್ನು ನೋಡದ ಕಣ್ಣುಗಳು ಕಾತರಿಸುತ್ತಿದ್ದವು. “ಚೆನ್ನಾಗಿದ್ದೀಯಾ ರಂಜನಿ?” ಎಂದು ತುಂಬು ನೋಟದಿಂದ ನೋಡಿದ. ಅವಳು ತುಸು ನಾಚಿದಂತೆ ತಲೆತಗ್ಗಿಸಿ ಮುಗುಳ್ನಕ್ಕಳು.
“ತುಂಬಾ ಶಿಕ್ಷೆ ಕೊಟ್ಟುಬಿಟ್ಟೆ ರಂಜನಿ, ಒಂದು ಕರೆಯನ್ನು ಮಾಡದಷ್ಟು ನನ್ನಲ್ಲಿ ಕೋಪವೇ? ನನ್ನ ಪ್ರೀತಿಯ ಕಥೆಗಾರ್ತಿಗೆ” ಎನ್ನುತ್ತಾ ಅವಳ ಹತ್ತಿರ ಸರಿದು ಅವಳ ಸೊಂಟ ಬಳಸಿ ನುಡಿದ. ಅವನ ಕೈಗಳನ್ನು ಸಡಿಲಿಸಿ “ಹಾಗೇನಿಲ್ಲ” ಎಂದು ಕನ್ನಡಿಯ ಎದುರು ಬಂದು ನಿಂತಳು.
“ಯಾಕೆ ರಂಜನಿ ಇಷ್ಟು ಸಂಕೋಚ? ಹೇಳಬಾರದೇ?” ಎಂದು ಅವಳ ಸುಂದರ ತುಟಿಗಳನ್ನು ಚುಂಬಿಸಿ ನುಡಿದಾಗ “ಬಿಡಿ” ಎಂದು ಅವನಿಂದ ದೂರ ಸರಿದು ನಿಂತಳು. ರಾಕೇಶ್ ಮಾತು ಮುಂದುವರಿಸಿದ, “ರಂಜನಿ ಯಾಕೆ ಮೌನವಾಗಿ ನಿಂತೆ? ಏನಾದರೂ ಮಾತನಾಡು, ನೀನು ನಿನ್ನ ತಾಯಿಯ ಮನೆಗೆ ಹೋಗಿದ್ದೀಯಾ?” “ಹೂಂ” ಎಂದಷ್ಟೇ ನುಡಿದಳು.
“ನೀನು ಕಥೆ-ಕವನ ಬರೆಯುವ ವಿಷಯ ನನಗೆ ಹೇಳೇ ಇರಲಿಲ್ಲ. ನಿನ್ನನ್ನು ಪಡೆದ ನಾನು ತುಂಬಾ ಅದೃಷ್ಟವಂತ. ಮೂರು ವಾರಗಳಿಂದ ನಿನ್ನ ನೋಡಬೇಕು, ನಿನ್ನ ಜೊತೆ ಮಾತನಾಡಬೇಕು ಎಂದು ಓಡೋಡಿ ಬಂದೆ, ಆದರೆ ನೀನು ಮಾತೇ ಆಡುವುದಿಲ್ಲ. ಯಾಕೆ ರಂಜನಿ? ನಿನಗೆ ನಾನು ಇಷ್ಟವಿಲ್ಲವೇ?” ಎಂದು ಅವಳ ಹತ್ತಿರ ನಿಂತು ನುಡಿದ. ರಂಜನಿಯ ಕಣ್ಣಿನಿಂದ ನೀರಿನ ಹನಿಗಳು ಜಾರಿದವು. ಅವಳು ತಲೆ ತಗ್ಗಿಸಿ ಕುಳಿತಳು. ಅವಳ ಕಣ್ಣೀರು ಗಮನಿಸಿ ಗಾಬರಿಯಿಂದ,
“ನನ್ನ ಮಾತಿನಿಂದ ನಿನಗೆ ಬೇಸರವಾಯಿತೇ? ಕ್ಷಮಿಸು. ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಗೊತ್ತಾ? ಒಂದು ಕ್ಷಣ ಬಿಟ್ಟಿರಲು ಕಷ್ಟವಾಗುತ್ತದೆ. ಮೊದಲು ನೋಡಿದ್ದು ನಿನ್ನನ್ನೇ, ವಿದ್ಯಾವಂತೆ ಎಂದು ಇಷ್ಟಪಟ್ಟಿದ್ದು ನಿನ್ನನ್ನೇ. ಅದಕ್ಕೋಸ್ಕರ ಬಾಡಿಗೆ ಮನೆ ಮಾಡಿ ನಿನ್ನನ್ನು ಕರೆದುಕೊಂಡು ಹೋಗಬೇಕು ಎಂದು ಓಡೋಡಿ ಬಂದೆ. ರಾಣಿಯಂತೆ ನಿನ್ನನ್ನು ನೋಡಿಕೊಳ್ಳಬೇಕು. ನೀನು ಯಾವಾಗಲೂ ನಗುನಗುತ್ತಾ ಇರಬೇಕು. ಆ ನಗು, ಸುಖ, ಸಂತೋಷವೇ ನನ್ನ ಜೀವನ ಎಂದುಕೊಂಡಿದ್ದೇನೆ. ನೀನು ಹೀಗೆ ಮೌನವಾಗಿ ಕಣ್ಣೀರು ಹಾಕಿದರೆ ಹೇಗೆ? ದಯವಿಟ್ಟು ಸ್ವಲ್ಪ ನಗುತ್ತಾ ಇರು, ಪ್ಲೀಸ್” ಎಂದು ಅವಳ ಕೈಗಳನ್ನು ತನ್ನ ಕೈಗಳಲ್ಲಿ ಹಿಡಿದು ನುಡಿದ.

ಅವಳು ಅವನಿಂದ ಬಿಡಿಸಿಕೊಂಡು ಕೋಣೆಯಿಂದ ಹೊರಗೆ ಬಂದಳು. ರಾಕೇಶನಿಗೆ ಏನು ತೋಚದೆ, ಅವಳ ವರ್ತನೆಯಿಂದ ಬೇಸರಗೊಂಡು ಆಯಾಸದಿಂದ ಮಂಚಕ್ಕೆ ಒರಗಿ ಕುಳಿತ. ಮರುದಿನ ರಾಕೇಶ್ ಮತ್ತು ರಂಜನಿ ಮನೆಯಿಂದ ಬೀಳ್ಕೊಂಡು ಪುಣೆಗೆ ಪ್ರಯಾಣ ಬೆಳೆಸಿದರು. ರೈಲು ವೇಗವಾಗಿ ಸಾಗುತ್ತಿತ್ತು. ರಂಜನಿ ಕಿಟಕಿಯಿಂದ ಹೊರಗಿನ ಸೌಂದರ್ಯವನ್ನು ದಿಟ್ಟಿಸುತ್ತಿದ್ದಳು. ಮಧ್ಯೆ ಮಧ್ಯೆ ರಾಕೇಶನ ಮಾತಿಗೆ ಹುಂ-ಹಾ ಎಂದಷ್ಟೇ ಉತ್ತರಿಸುತ್ತಿದ್ದಳು.
ಪುಣೆ ತಲುಪಿ ಮನೆಯ ಬಾಗಿಲು ತೆರೆದು, ಬಲಗಾಲಿಟ್ಟು ಬರುವಂತೆ ಸೂಚಿಸಿದ. ಸುಂದರವಾದ, ಪುಟ್ಟ ರೂಮುಗಳು, ಅಗಲವಾದ ಮಂಚ, ಪಕ್ಕದಲ್ಲಿ ದೊಡ್ಡದಾದ ಕಿಟಕಿ, ಟಿ.ವಿ., ವಿವಿಧ ಬಣ್ಣದ ಬೊಂಬೆಗಳು, ಟೇಬಲ್ ಮೇಲೆ ತಮ್ಮಿಬ್ಬರ ಸುಂದರವಾದ ಫೋಟೋ, ಅಲ್ಮಾರಿನಲ್ಲಿ ನೀಟಾಗಿ ಜೋಡಿಸಿಟ್ಟ ಪುಸ್ತಕಗಳು. ರಾಕೇಶನ ಸರಳತೆ, ಅಚ್ಚುಕಟ್ಟುತನವನ್ನು ಸಾರುತ್ತಿದ್ದವು.
ರಂಜನಿಗೆ ಪ್ರಯಾಣದ ಆಯಾಸವಾಗಿತ್ತು. ಮಂಚದಲ್ಲಿ ಒರಗಿ ಕುಳಿತು ಕಣ್ಣು ಮುಚ್ಚಿದಳು. ಎಷ್ಟು ಸಮಯದ ನಂತರ ಕಣ್ಣು ತೆರೆದಾಗ ರಾಕೇಶ್ ಫ್ಲಾಸ್ಕ್ನಿಂದ ಬಿಸಿಯಾದ ಕಾಫಿಯನ್ನು ಅವಳಿಗೆ ನೀಡಿ, “ಆಯಾಸವಾಗಿರಬೇಕು, ಮುಖ ತೊಳೆದು ಡ್ರೆಸ್ ಬದಲಿಸಿ ವಿಶ್ರಾಂತಿ ತೆಗೆದುಕೋ, ನಾನು ಹೋಟೆಲ್ಗೆ ಹೋಗಿ ಊಟ ತರುತ್ತೇನೆ” ಎಂದು ನುಡಿದು ಹೊರನಡೆದ.
ಸಮಯ ಆಗಲೇ ರಾತ್ರಿ 8 ಗಂಟೆಯಾಗಿತ್ತು. ರಂಜನಿ ಕುರ್ಚಿಯಲ್ಲಿ ಕುಳಿತು ನಿದ್ರಿಸುತ್ತಿದ್ದಳು. ರಾಕೇಶ್ ಮೆಲ್ಲಗೆ ಅವಳ ಹತ್ತಿರ ಕುಳಿತು, “ರಂಜನಿ, ಊಟ ಮಾಡಿ ಮಲಗುವಂತೆ ಏಳು” ಎಂದು ಅವಳ ಮುಂಗುರುಳು ಸರಿಸಿದ. ಅವಳು ಮೇಲೆದ್ದು ಮುಖ ತೊಳೆದು ಬಂದಳು. ಇಬ್ಬರೂ ಮೌನವಾಗಿ ಊಟ ಮುಗಿಸಿದರು. ರಾಕೇಶ್ ಮಲಗಿದ್ದಲ್ಲೇ ಯೋಚಿಸುತ್ತಿದ್ದ. ರಂಜನಿ ಮಂಚದ ಇನ್ನೊಂದು ತುದಿಯಲ್ಲಿ ಅವನಿಗೆ ಬೆನ್ನು ಮಾಡಿ ಮಲಗಿದಳು. ರಾಕೇಶ್ ಅವಳ ಹತ್ತಿರ ಸರಿದು ಅವಳ ಸೊಂಟವನ್ನು ಬಳಸಿ ತನ್ನೆಡೆಗೆ ತಿರುಗಿಸಿಕೊಂಡ.
“ನನಗೆ ತುಂಬಾ ಆಯಾಸವಾಗಿದೆ, ನನ್ನ ಮನಸ್ಸು ಸರಿ ಇಲ್ಲ, ಪ್ಲೀಸ್ ನನ್ನನ್ನು ಬಿಟ್ಟುಬಿಡಿ” ಎಂದು ಕಿರುಚಿಕೊಂಡು ಬೇರೆಡೆ ತಿರುಗಿದಾಗ, ಅವನಲ್ಲಿದ್ದ ಆಸೆ ಆಕಾಂಕ್ಷೆಗಳು ಜರ್ರನೆ ಇಳಿದವು.“ರಂಜನಿ, ನನ್ನನ್ನು ಯಾಕೆ ಸತಾಯಿಸುತ್ತಿದ್ದೀಯಾ? ಮೊದಲ ರಾತ್ರಿಯೂ ಹೀಗೆ ಹೇಳಿ ದೂರವಿದ್ದೆ, ಈಗಲೂ ದೂರವಿರುತ್ತಿದ್ದೀಯ. ನಿನಗೆ ನನ್ನ ಮೇಲೆ ಇಷ್ಟ ಇಲ್ಲವಾ ರಂಜನಿ? ಒತ್ತಾಯದ ಮದುವೆಯಾ? ನಿಜ ಹೇಳು?” ಎಂದು ಉಕ್ಕಿ ಬಂದ ಆವೇಶದಿಂದ ಹೇಳಿದಾಗ ಅವಳು ದುಃಖ, ವೇದನೆಯಿಂದ ಬಿಕ್ಕಿದಳು.
“ಛೆ, ಯಾಕೆ ಅಳುತ್ತೀಯಾ? ನಾನು ನಿನಗೇನಾದರೂ ತೊಂದರೆ ಕೊಟ್ಟೆನಾ? ನಾನು ನಿನ್ನ ಹತ್ತಿರ ಬಂದು ನಿನ್ನನ್ನು ಮುಟ್ಟುವುದು ಕಾಮ ಉದ್ವೇಗದಿಂದಲ್ಲ. ಪ್ರೀತಿ, ಪ್ರೇಮ ಅನ್ನೋದು ಬರಿ ಕಾಮದಿಂದ ಬರುವುದಿಲ್ಲ ರಂಜನಿ. ಅದು ನಿರ್ಮಲ ಹಾಗೂ ಪವಿತ್ರವಾದ ಪ್ರೀತಿ. ನಿನ್ನ ನಡವಳಿಕೆ ನನಗೆ ಅರ್ಥವಾಗುತ್ತಿಲ್ಲ. ನೀನು ಏನೂ ಹೇಳದೆ ಹೀಗೆ ಮೌನವಾಗಿ ನಿನ್ನೊಳಗೆ ಅತ್ತರೆ ನಾನು ಏನೆಂದು ತಿಳಿದುಕೊಳ್ಳಲಿ? ಹೊಸದಾಗಿ ಮದುವೆಯಾದವರು ಹೀಗೆ ಇರ್ತಾರಾ ರಂಜನಿ? ನಾನು ನಿನ್ನ ಹತ್ತಿರ ಬಂದರೆ ನಿನಗೆ ಇಷ್ಟ ಆಗುವುದಿಲ್ಲವಾ? ಯಾಕೆ ಅಂತಾದರೂ ಹೇಳು. ಹೋಗಲಿ, ನನ್ನೊಡನೆ ಪ್ರೀತಿಯಿಂದ ಮಾತನ್ನಾದರೂ ಆಡು.” “ಪ್ಲೀಸ್ ನನ್ನನ್ನೇನು ಕೇಳಬೇಡಿ” ಎಂದು ಮಂಡಿಯಲ್ಲಿ ಮುಖ ಹುದುಗಿಸಿ ಅಳತೊಡಗಿದಳು. ರಾಕೇಶ್ ನಿಟ್ಟುಸಿರಿನೊಂದಿಗೆ ಅತ್ತ ಹೊರಳಿ ಮಲಗಿದ. ಬೆಳಗಾಯಿತು.

“ಸ್ನಾನಕ್ಕೆ ನೀರು ಇಟ್ಟಿದ್ದೇನೆ” ಎಂದು ನುಡಿದು, ಅವನಿಗೆ ಟವೆಲ್ ನೀಡಿದಳು. ಮರು ಮಾತನಾಡದೆ ಅವಳನ್ನೇ ದಿಟ್ಟಿಸಿ, ಅವಳ ಮೌನಕ್ಕೆ ಕಾರಣ ತಿಳಿಯಲು ವಿಫಲನಾದ. ಹೃದಯದಲ್ಲಿ ಹೆಪ್ಪುಗಟ್ಟಿದ ಹರೆಯದ ಭಾವನೆಗಳು ಹುಚ್ಚು ಹೊಳೆಯಾಗಿ ಹರಿಯುತ್ತಿದ್ದವು. ಏನೋ ಕಾತರ, ಅವಳ ವೀಣೆಯಂತಹ ಮಾತುಗಳನ್ನು ಕೇಳಲು ಇಚ್ಛಿಸುತ್ತಿದ್ದ. ಆದರೆ ಅವಳಿಗೇನಾಗಿದೆ? ಒಂದು ದಿನವಾದರೂ ಪ್ರೀತಿಯಿಂದ ನನ್ನೊಂದಿಗೆ ಮಾತನಾಡಲಿಲ್ಲ. ಅವಳ ಮೌನಕ್ಕೆ ಕಾರಣ ಕೆದಕಿದಾಗಲೆಲ್ಲ ಜಾರಿಕೆಯ ಉತ್ತರ ನೀಡಿ ಕಣ್ಣೀರು ಸುರಿಸುತ್ತಾಳೆ.
ಪ್ರೀತಿ-ಪ್ರೇಮಗಳನ್ನು ಸೃಷ್ಟಿಸಿ ಕತೆ, ಕವನ ಬರೆಯುವ ಕಥೆಗಾರ್ತಿಗೆ ಪ್ರೀತಿಸುವ ಹೃದಯದ ನೋವು ಅರ್ಥವಾಗುವುದಿಲ್ಲವೇ? ಎಂದು ರಾಕೇಶ್ ಬೇಸತ್ತು ಮನಸ್ಸಿನಲ್ಲೇ ಒದ್ದಾಡಿದ. ರಂಜನಿ ತಿಂಡಿಯ ಡಬ್ಬಿಯನ್ನು ಅವನ ಕೈಯಲ್ಲಿ ಇರಿಸಿದ್ದಳು. ರಾಕೇಶ್ ಆಫೀಸಿಗೆ ಹೋಗುವ ಉತ್ಸಾಹವಿಲ್ಲದೆ ಕಾಲೆಳೆಯುತ್ತ ಹೆಜ್ಜೆ ಹಾಕಿದ. ಸಣ್ಣಗೆ ತಲೆ ಹಿಡಿಯುತ್ತಿತ್ತು. ಆಫೀಸಿನಲ್ಲಿ ಕೆಲಸ ಮಾಡಲು ಮೈ ಭಾರವಾದಂತೆನಿಸಿ ರಜೆ ಹಾಕಿ ಮನೆಗೆ ಬಂದ. ಊಟದ ಡಬ್ಬಿಯನ್ನು ಟೇಬಲ್ ಮೇಲೆ ಇರಿಸಿ, ಶೂ ಬಿಚ್ಚದೆ ಮಂಚದ ಮೇಲೆ ಮಲಗಿಕೊಂಡ. ಸ್ವಲ್ಪ ಸಮಯದ ನಂತರ “ರಂಜನಿ” ಎಂದು ಗಟ್ಟಿಯಾಗಿ ಕೂಗಿದ. ಅವನ ಧ್ವನಿಗೆ ಬೆಚ್ಚಿ ರಂಜನಿ ಮೌನವಾಗಿ ಅವನ ಹತ್ತಿರ ಬಂದು ನಿಂತಳು.
“ನನ್ನ ತಲೆ ಸಿಡಿಯುತ್ತಿದೆ. ನಿನ್ನಷ್ಟಕ್ಕೆ ನೀನು ಇರುತ್ತೀಯಲ್ಲ, ಕೊಂಚವಾದರೂ ನನ್ನನ್ನು ವಿಚಾರಿಸಿಕೊಂಡೆಯಾ? ನನ್ನ ನೋವು ನಲಿವು ಕೇಳುವವರು ಯಾರಿದ್ದಾರೆ? ನಿನಗೆ ನನ್ನ ಮೇಲೆ ಇಷ್ಟವಿಲ್ಲ, ಆದ್ದರಿಂದಲೇ ನೀನು ಸುಖ ಪಡದೆ ನನಗೂ ಸುಖ ಕೊಡದೆ ನಿನ್ನಷ್ಟಕ್ಕೆ ನೀನು ಅತ್ತರೆ ನನಗೆ ಹೇಗೆ ತಿಳಿಯಬೇಕು?” ಎಂದು ಮನಸ್ಸಿನಲ್ಲಿ ತುಂಬಿಕೊಂಡಿದ್ದ ಅಸಹನೆಯನ್ನು ಹೊರಹಾಕಿದ. ರಂಜನಿ ನೋವಿನಿಂದ ಮುಖ ಹಿಂಡಿದಳು.
ಅವಳ ಕಣ್ಣಿನಿಂದ ಕಣ್ಣೀರ ಹನಿಗಳು ಸಾಲುಗಟ್ಟಿದವು. ರಾಕೇಶ್ ಸಹನೆಯಿಂದ ಅವಳ ಹತ್ತಿರ ಬಂದು ಅವಳ ಭುಜಗಳನ್ನು ಅಲುಗಿಸಿ, “ರಂಜನಿ, ಏನಾದರೂ ನಿನ್ನ ಮನಸ್ಸು ನೋಯಿಸಿದ್ದೇನಾ? ನನ್ನ ಜೊತೆ ನಿನ್ನ ಮದುವೆ ಬಲವಂತವಾಗಿ ಮಾಡಿದ್ರಾ? ಅಥವಾ ಮದುವೆಗೆ ಮೊದಲು ಯಾರನ್ನಾದರೂ ಇಷ್ಟಪಟ್ಟಿದ್ದೀಯಾ? ಹೇಳು” ಎಂದು ಕೇಳಿದಾಗ, ಅವಳ ಕಣ್ಣುಗಳನ್ನು ದಿಟ್ಟಿಸಿ, ತುಂಬಿ ಬಂದ ದುಃಖದಿಂದ ಇನ್ನಷ್ಟು ಬಿಕ್ಕಳಿಸಿದಳು. ರಾಕೇಶ್ ಕಲ್ಲಾಗಿ ಕುಳಿತ. ಅತ್ತು ಅತ್ತು ಅವಳ ಕಣ್ಣು ಕೆಂಪಾಗಿ ಉರಿಯುತ್ತಿತ್ತು. ಏನೋ ನಿರ್ಧಾರಕ್ಕೆ ಬಂದವಳಂತೆ ಎದ್ದು ಕುಳಿತಳು.
“ನೀವು ನನ್ನ ನೋವುಗಳನ್ನು ಕೇಳಲು ಇಚ್ಛಿಸಿದರೂ ನನಗೆ ಹೇಳಲು ಅಸಾಧ್ಯ. ನಾನು ಎಲ್ಲಾ ಹೇಳಿಬಿಟ್ಟರೆ ನೀವು ನನ್ನ ಬಗ್ಗೆ ಇಟ್ಟುಕೊಂಡಿರುವ ಪ್ರೀತಿ, ಭಾವನೆಗಳೆಲ್ಲ ನುಚ್ಚುನೂರಾಗುತ್ತವೆ. ನೀವು ನನ್ನ ಬಗ್ಗೆ ಅಸಹ್ಯ ಪಡುತ್ತೀರಿ. ವಂಚಕಿ, ಮೋಸಗಾರ್ತಿ ಎಂದು ದ್ವೇಷಿಸುತ್ತೀರಿ. ಪ್ಲೀಸ್ ನನ್ನನ್ನು ಏನು ಕೇಳಬೇಡಿ” ಎಂದು ಅಂಗಲಾಚುವ ಧ್ವನಿಯಲ್ಲಿ ಬೇಡಿದಳು. ಗಕ್ಕನೆ ಅವಳ ಕೈಯನ್ನು ತನ್ನ ಕೈಯಲ್ಲಿ ಹಿಡಿದು ನಿರ್ಧಾರದ ಧ್ವನಿಯಲ್ಲಿ, “ಎಂತಹ ಕಹಿ ಸತ್ಯವಾದರೂ ಪರವಾಗಿಲ್ಲ, ನಾನು ಸಹಿಸಿಕೊಳ್ಳುತ್ತೇನೆ. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, ದ್ವೇಷಿಸಲಾರೆ. ಅದೇನು ವಿಷಯ ಹೇಳು” ಎಂದು ಒತ್ತಾಯಪಡಿಸಿದ. ಪ್ರಯಾಸದಿಂದ ಉಗುಳು ನುಂಗಿ, ಸೊರಗಿದಂತೆ ನಡುಗುವ ಸ್ವರದಲ್ಲಿ ರಂಜನಿ ನುಡಿದಳು.
“ನಮ್ಮೂರಿನಲ್ಲಿ ಶಶಿ ಅನ್ನುವವರನ್ನು ನಾನು ತುಂಬಾ ಇಷ್ಟಪಟ್ಟಿದ್ದೆ. ಅವರು ಕೂಡ ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಆದರೆ ಅವರು ಬಡವರು. ಅವರು ಓದು ಮುಗಿಸಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರು. ಕೆಲಸ ಸಿಕ್ಕಿದ ತಕ್ಷಣ ನಾವಿಬ್ಬರು ಮದುವೆಯಾಗುವುದೆಂದು ನಿರ್ಧರಿಸಿದ್ದೆವು. ನಮ್ಮದು ಸಂಪ್ರದಾಯಸ್ಥ ಕುಟುಂಬ. ಇಬ್ಬರು ತಂಗಿಯರು, ಒಬ್ಬ ತಮ್ಮನನ್ನು ಪಡೆದ ಹಿರಿಯವಳೆಂದು ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಒಂದು ದಿನ ನನ್ನ ಅಮ್ಮನಿಗೆ ನನ್ನ ಹಾಗೂ ಶಶಿಯ ಪ್ರೀತಿಯ ವಿಷಯ ತಿಳಿಯಿತು. ಅಮ್ಮ ರೌದ್ರಾವತಾರ ತಾಳಿದರು.
ಅಪ್ಪ ಮಾನ-ಮರ್ಯಾದೆ ಹೋಯಿತೆಂದು ರೇಗಾಡಿದರು. ಆಫೀಸಿಗೆ ಹೋಗದಂತೆ ಆಜ್ಞಾಪಿಸಿದರು. ನಾನು ನನ್ನ ನಿರ್ಧಾರ ಬದಲಾಯಿಸದೆ ಅತ್ತು, ಊಟ ಬಿಟ್ಟು ರಂಪ ಮಾಡಿದೆ. ಅಪ್ಪ ವಿಷವನ್ನು ನನ್ನ ಮುಂದೆ ತಂದು, ‘ಇದೊಂದೇ ನನಗೆ ದಾರಿ. ನನಗೆ ನಿನ್ನ ಪ್ರಾಣಕ್ಕಿಂತ ಮಾನ-ಮರ್ಯಾದೆ ಮುಖ್ಯ. ದಯವಿಟ್ಟು ಅವನನ್ನು ಮರೆತು ಬಿಡು. ಅವನ ಕೈಯಲ್ಲಿ ಕೆಲಸವಿಲ್ಲ, ಒಂದು ನೆಲೆ ಇಲ್ಲ. ಅಂತಹವನನ್ನು ನೀನು ಹೇಗೆ ಇಷ್ಟಪಟ್ಟೆ? ಖಂಡಿತ ಅವನ ಜೊತೆ ನಿನ್ನ ಮದುವೆ ಸಾಧ್ಯವಿಲ್ಲ’ ಎಂದು ನುಡಿದರು.

ಒಂದು ದಿನ ಶಶಿ ನಮ್ಮ ಮನೆಗೆ ಬಂದು, ‘ರಂಜನಿ, ನಿನ್ನನ್ನು ಮರೆಯಲು ನನ್ನಿಂದ ಸಾಧ್ಯವಿಲ್ಲ. ನಾವು ಯಾರಿಗೂ ತಿಳಿಸದೆ ದೂರ ಹೋಗಿ ಮದುವೆಯಾಗಿದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ. ನಿನ್ನ ಮನೆಯವರು ನಮ್ಮನ್ನು ಬಾಳಲು ಬಿಡುವುದಿಲ್ಲ. ನಿನ್ನನ್ನು ಬಿಟ್ಟು ಒಂದು ಕ್ಷಣ ಬದುಕಲು ಅಸಾಧ್ಯ. ಕೊನೆವರೆಗೆ ನಿನಗಾಗಿ ಕಾಯುತ್ತೇನೆ. ನನ್ನನ್ನು ಬಿಟ್ಟು ನೀನು ಬೇರೆಯವರೊಂದಿಗೆ ಮದುವೆಯಾದರೆ ಖಂಡಿತ ನಾನು ಮನುಷ್ಯನಾಗಿ ಬದುಕಲಾರೆ’ ಎಂದು ತಿಳಿಸಿ ಹೋದ. ನಾನು ಮತ್ತಷ್ಟು ದುಃಖ, ವೇದನೆಗಳೊಂದಿಗೆ ಊಟ-ನಿದ್ರೆ ಬಿಟ್ಟು ಸೊರಗಿ ಸೋತು ಹೋದೆ. ಅಮ್ಮ ನನ್ನ ಸ್ಥಿತಿ ಗಮನಿಸಿ ಅಳತೊಡಗಿದರು.
ನನ್ನ ಮತ್ತು ಶಶಿಯ ಪ್ರೀತಿ ಎಷ್ಟು ಗಾಢವಾಗಿತ್ತೆಂದರೆ, ಏನೇ ಕಷ್ಟ ಬಂದರೂ ಎದುರಿಸಿ ಸಮಾಜದಲ್ಲಿ ಬಾಳುತ್ತೇವೆ ಎಂಬಂತಿತ್ತು. ಆದರೆ ನಮ್ಮಿಬ್ಬರ ಮದುವೆ ಅಸಾಧ್ಯ ಎಂದು ತಿಳಿದು ನಾನು ಮೂಕಳಾದೆ. ಸಾಯಲು ನನ್ನ ಮನಸ್ಸು ಹಿಂಜರಿಯಿತು. ಶಶಿಯೊಂದಿಗೆ ದೂರ ಹೋಗಿ ಎಲ್ಲಾದರೂ ಮದುವೆಯಾಗೋಣವೆಂದರೆ, ನನ್ನ ತಂಗಿಯರ ಭವಿಷ್ಯ, ಅಮ್ಮ ಏನಾದರೂ ಅನಾಹುತ ಮಾಡಿಕೊಂಡರೆ ಎಂಬ ಭಯದಿಂದ ಸುಮ್ಮನಾದೆ. ನನ್ನ ಮದುವೆಯನ್ನು ಮನೆಯವರು ನಿಶ್ಚಯ ಮಾಡಿದರು. ಇದನ್ನು ತಿಳಿದ ಶಶಿ ಅಂದು ಊರು ಬಿಟ್ಟು ಹೋಗಿ ತನ್ನ ಬಾಳನ್ನೇ ಹಾಳು ಮಾಡಿಕೊಂಡ.
ಈಗ ಮನೋರೋಗಿಯಾಗಿ, ಸಮಾಜಕ್ಕೆ ಒಂದು ಕಳಂಕದಂತೆ ಕುಡುಕನಾಗಿ ಬದುಕುತ್ತಿದ್ದಾನೆ. ಸಮಾಜದಲ್ಲಿ ಗಣ್ಯ ವ್ಯಕ್ತಿಯಂತೆ ಮೆರೆಯುತ್ತಿದ್ದ ಅವನ ಬಾಳನ್ನು ಹಾಳು ಮಾಡಿದೆ ಎಂಬ ಕೀಳರಿಮೆ ನನ್ನನ್ನು ಕಾಡುತ್ತಿದೆ. ಅವನು ನನಗಾಗಿ ತನ್ನ ಪ್ರೀತಿಗಾಗಿ ತನ್ನ ಜೀವನವನ್ನೇ ಅರ್ಪಿಸಿಕೊಂಡು ಬಿಟ್ಟ. ಇದನ್ನು ನಾನು ಮರೆತು ಹೇಗೆ ನಿಮ್ಮೊಂದಿಗೆ ಬಾಳಲಿ? ಯಾವ ರೀತಿ ನಿಮ್ಮೊಂದಿಗೆ ನಗುನಗುತ್ತಾ ಇರಲಿ, ಹೇಳಿ?”
ರಾಕೇಶನ ಮುಖ ಕಳೆಗುಂದಿತು. ತನ್ನೆಲ್ಲ ಊಹೆಗೂ ಮೀರಿದ ವಿಷಯಕ್ಕೆ ತತ್ತರಿಸಿ, ಸಿಡಿಯುತ್ತಿದ್ದ ತನ್ನ ತಲೆಯನ್ನು ಎರಡು ಕೈಗಳಿಂದ ಹಿಡಿದು ಕುಳಿತ. ಅವನ ಭಾವನೆಗಳು ನುಚ್ಚುನೂರಾದವು. ಯಾವ ಸೌಂದರ್ಯವನ್ನು ಕಣ್ಣುಗಳು ಸವಿಯುತ್ತಿದ್ದವೋ, ಆ ಕಣ್ಣುಗಳು ಆಲಸ್ಯದಿಂದ ಮಂಕಾದವು. ಅವನ ಆಸೆ-ಆಕಾಂಕ್ಷೆಗಳು ಬತ್ತಿ ಹೋದವು. ರಾಕೇಶ್ ಕಲ್ಲಾಗಿ ಕುಳಿತ. ಕೊಂಚ ಸಮಯದ ನಂತರ ಸೋತ ಕಣ್ಣುಗಳಿಂದ ರಂಜನಿಯತ್ತ ದಿಟ್ಟಿಸಿದ. ಅವಳ ಕಣ್ಣುಗಳು ಕಣ್ಣೀರಿನಿಂದ ತುಂಬಿದ್ದವು.
ಅವಳು ಮತ್ತೆ ನುಡಿದಳು, “ಎಂತಹ ಕಹಿ ಸತ್ಯವಾದರೂ ಸಹಿಸಿಕೊಳ್ಳುತ್ತೇನೆ ಎಂದಿದಿರಲ್ಲ, ಸಾಧ್ಯವಾಯಿತೇ? ನನ್ನ ಎಲ್ಲಾ ನೋವುಗಳನ್ನು ನನ್ನೊಳಗೇ ಬಚ್ಚಿಟ್ಟು ಮರೆಯಲು ಪ್ರಯತ್ನಿಸುತ್ತಿದ್ದೇನೆ. ಆದರೆ ನೀವು ಹತ್ತಿರ ಬಂದಾಗಲೆಲ್ಲ ಶಶಿ ನೆನಪಾಗಿ, ನಾನು ಆತ್ಮವಂಚನೆ ಮಾಡಿಕೊಳ್ಳುತ್ತಿದ್ದೇನೆ ಎನಿಸಿ ದುಃಖಿಸುತ್ತಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ ಕಂಡು ಮನಸ್ಸಿನಲ್ಲೇ ಅತ್ತು ಯೋಚಿಸುತ್ತಿದ್ದೆ, ನಿಮ್ಮ ಪ್ರೀತಿಗೆ ನಾನು ಯೋಗ್ಯಳೇ? ನನಗೆ ಗೊತ್ತು, ಯಾವ ಗಂಡಸೂ ಇದನ್ನು ಸಹಿಸಲಾರ” ಎಂದು ದಿಂಬಿನಲ್ಲಿ ಮುಖವಿಟ್ಟು ಅಳತೊಡಗಿದಳು.

ರಾಕೇಶ್ ಅಡ್ಡ ಕತ್ತರಿಯಲ್ಲಿ ಸಿಕ್ಕಿದವನಂತೆ ತತ್ತರಿಸಿದ. ಅವನು ಚಪ್ಪಲಿ ಮೆಟ್ಟಿ ಹೊರಗೆ ನಡೆದ. “ಮದುವೆಯಾಗಿ ಎರಡು ತಿಂಗಳು ತುಂಬಿಲ್ಲ, ಎಷ್ಟೊಂದು ಆಸೆ-ಆಕಾಂಕ್ಷೆಗಳನ್ನು ಇಟ್ಟುಕೊಂಡಿದ್ದೆ. ಅವಳ ಮುಗ್ಧತೆ ಸೂಸುವ ಸೌಂದರ್ಯದ ಹಿಂದೆ ಎಂತಹ ಘಟನೆ ಅಡಗಿದೆ! ಅವಳು ನನ್ನಿಂದ ದೂರವಾದರೆ ಈ ಸಮಾಜಕ್ಕೆ ನಾನು ಏನೆಂದು ಉತ್ತರಿಸಲಿ? ಹೆಣ್ಣು ಹೆತ್ತವರು ತಮ್ಮ ಕರ್ತವ್ಯ ಮುಗಿಯಿತು ಎಂಬಂತೆ ಮದುವೆ ಮಾಡಿ ಮುಗಿಸಿ, ಏನು ತಿಳಿಯದಂತೆ ಕೈಕಟ್ಟಿ ಕುಳಿತಿರುವರು. ಎಂತಹ ಕಹಿ ಸತ್ಯವಾದರೂ ಸಹಿಸಿಕೊಂಡು ನಿನ್ನನ್ನು ಪ್ರೀತಿಸುತ್ತೇನೆ ಎಂದು ಮಾತು ಕೊಟ್ಟೆ, ಈಗ ಹೇಗೆ ಸಹಿಸಿಕೊಳ್ಳಲಿ?” ಎಂದು ಅವನು ನೋವಿನಿಂದ ಮುಖ ಹಿಂಡಿದ.
ರಸ್ತೆಯ ದೀಪಗಳು ಆಗಲೇ ಬೆಳಗತೊಡಗಿದ್ದವು. ಅವಸರದಿಂದ ಮನೆಯ ಕಡೆ ಹೆಜ್ಜೆ ಹಾಕಿದ. ಕತ್ತಲೆ ಮನೆಯನ್ನು ಆವರಿಸಿತ್ತು. ಒಳಗೆ ಬಂದು ಲೈಟಿನ ಸ್ವಿಚ್ ಹಾಕಿ ದೀಪ ಬೆಳಗಿಸಿದ. ರಂಜನಿ ಯಥಾಸ್ಥಿತಿಯಲ್ಲಿ ಮಲಗಿದ್ದಳು. ರಾಕೇಶ್ ಅವಳ ಹತ್ತಿರ ಬಂದು ಕುಳಿತು, “ನಿನ್ನ ಪ್ರೀತಿಯ ವಂಚನೆಗೆ ಇನ್ನೊಂದು ಜೀವ ಬಲಿಯಾಗುವುದನ್ನು ನೀನು ಇಷ್ಟಪಡುತ್ತೀಯಾ? ಇನ್ನು ಮುಂದೆ ನೀನು ಎಲ್ಲಾದರೂ ಹೇಗಾದರೂ ನಿನ್ನ ಇಚ್ಛೆ ಬಂದಂತೆ ಬದುಕು” ಎಂದ. ರಂಜನಿಯ ಉಕ್ಕಿ ಬಂದ ದುಃಖ ಹಾಗೂ ವೇದನೆಯಿಂದ “ಈ ಬದುಕು ಯಾರಿಗಾಗಿ” ಎಂದು ಯೋಚಿಸಲಾರಂಭಿಸಿದಳು.
ತವರಿಗೆ ಮರಳಿ ಬಂದಳು. ತವರು ಮನೆಯಲ್ಲಿ ತಂದ ಮಾನಸಿಕ ಹಿಂಸೆ, ಸಮಾಜದ ಸಾಂಪ್ರದಾಯ, ಸುತ್ತಮುತ್ತಲಿನ ಜನರ ಮಾತು ಕೇಳಿ ಮರಳಿ ಕೆಲವೇ ದಿನಗಳಲ್ಲಿ ಗಂಡನ ಮನೆ ಸೇರುವಂತೆ ಮಾಡಿತು. ಪ್ರಿಯತಮನ ಪ್ರೀತಿಯನ್ನು ಕಳೆದುಕೊಂಡಿದ್ದ ರಂಜನಿ, ಕುರುಡು ಪ್ರೀತಿಗಾಗಿ ಜನರ ಕಣ್ಣಲ್ಲಿ ಕುಟುಕುವುದು ಸರಿಯಲ್ಲವೆಂದು ಪುಣೆಗೆ ಪ್ರಯಾಣ ಬೆಳೆಸಿದಳು.

ರಂಜನಿ ಇಲ್ಲದ ರಾಕೇಶನ ಬಾಳು ಬಿರುಗಾಳಿ ತುಂಬಿದ ಮರಳುಗಾಡಿನಂತೆ, ಪ್ರತಿ ಕ್ಷಣವೂ ನೆನಪಿನ ಕಣಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಹಾರಿಸುತ್ತಿತ್ತು. ಅವನ ಸ್ಥಿತಿಯನ್ನು ಅರಿತ ಸ್ನೇಹಿತರು ರಂಜನಿಯನ್ನು ತವರಿನಿಂದ ಕರೆತರುವಂತೆ ಸೂಚಿಸಿದರು. ಮಧ್ಯಾಹ್ನದ ಊಟ ಮಾಡಿ ರಂಜನಿಯ ನೆನಪಿನಲ್ಲಿ ಕನಸು ಕಾಣುತ್ತಾ ಮಲಗಿದ್ದ ರಾಕೇಶನಿಗೆ ಬಾಗಿಲ ಕರೆ ಗಂಟೆಯ ಸದ್ದು ಎಬ್ಬಿಸಿತು. ಬಾಗಿಲು ತೆರೆದ ಅವನಿಗೆ ಕನಸು ಮುಂದುವರಿದಂತಾಯಿತು.
ಬಾಗಿಲಲ್ಲಿ ನಿಂತ ರಂಜನಿಯನ್ನು ಕಂಡು ಅವನಿಗೆ ಆಶ್ಚರ್ಯ ಮತ್ತು ಸಂತೋಷಗಳೆರಡು ಉಕ್ಕಿ ಬಂದು, ಪ್ರೀತಿಯಿಂದ ರಂಜನಿಯ ಕೈ ಹಿಡಿದು ಒಳಗೆ ಬರಮಾಡಿಕೊಂಡ.ದುಃಖ, ಆತಂಕಗಳಿಂದ ತುಂಬಿದ ರಂಜನಿಯ ಮುಖವನ್ನು ತನ್ನ ಬೊಗಸೆಯಲ್ಲಿ ಹಿಡಿದು ನುಡಿದ, “ರಂಜನಿ, ಎಲ್ಲವನ್ನೂ ಕೆಟ್ಟ ಕನಸು ಎಂಬಂತೆ ಮರೆತು ನನ್ನೊಂದಿಗೆ ಸಂತೋಷವಾಗಿ ಇರಲಾರೆಯಾ? ನಾನು ಈಗಲೂ ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ ನೀನಿಲ್ಲದ ಈ ಬದುಕು ಅಸಾಧ್ಯ. ರಂಜನಿ ಉಕ್ಕಿ ಬಂದ ದುಃಖ ಹಾಗೂ ಪ್ರೀತಿ ಯಿಂದ ಅವನ ಎದೆಗಪ್ಪಿ ಬಿಕ್ಕಿದಳು. ರಾಕೇಶ್ ರಂಜನಿಯನ್ನು ಬಿಗಿಯಾಗಿ ಎದೆಗೊತ್ತಿಕೊಂಡ. ಅವಳು ಮತ್ತಷ್ಟು ಬಿಗಿಯಾಗಿ ಅವನ ಬಾಹುಗಳಲ್ಲಿ ಬಂದಿಯಾದಳು
ಜನಮನಕನ್ನಡದಲ್ಲಿ ಡಾ.ಸರ್ತಾಜ್ ಅವರು ಬರೆದ ಲೇಖನಗಳಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ









