ಮಾದೇಶ್ವರ ಮಹಾತ್ಮೆ …… ಸೋಜುಗದ ಸೂಜುಮಲ್ಲಿಗೆ… ಮಾದೇವ ನಿಮ್ಮ ಮಂಡೆ ಮ್ಯಾಲೆ…
ಇದು ಚಾಮರಾಜನಗರದ ಮಹದೇಶ್ವರಬೆಟ್ಟ ಚರಿತ್ರೆ

ಪೀಠಿಕೆ… ಸೋಜುಗದ ಸೂಜುಮಲ್ಲಿಗೆ… ಮಾದೇವ ನಿಮ್ಮ ಮಂಡೆ ಮ್ಯಾಲೆ…; ಆನುಮಲೆ ಜೇನುಮಲೆ…; ಮುಂತಾದ ಸಾವಿರಾರು ಜಾನಪದ ಗೀತೆಗಳನ್ನು ಲಕ್ಷಾಂತರ ಭಕ್ತರು ಅನಾದಿ ಕಾಲದಿಂದ ಹಾಡಿಕೊಂಡಾಡಿ ಜನ್ಮ ಸಾರ್ಥಕವಾಯ್ತೆಂದು ಕೃತಾರ್ಥರಾದರು. ಮಾದೇಶ್ವರ…. ದಯೆಬಾರದೇ….., ಹಾಡಿದ ಮಳವಳ್ಳಿ ಮಾದೇವಸ್ವಾಮಿ ಗೌ.ಡಾಕ್ಟರೆಟ್ ಪಡೆದು ನಿರೀಕ್ಷೆಗುಮೀರಿ ಉದ್ಧಾರವಾದರು.
ಚೆಲ್ಲಾಟಗಾರ ಮಾದಪ್ಪನ ಬಗ್ಗೆ ನಾಟಕ ಸಿನಿಮಾ ಆಡಿಯೊ ವೀಡಿಯೊ ಮೂಲಕ ಡಾ.ರಾಜಕುಮಾರ್, ಪಿಬಿ.ಶ್ರೀನಿವಾಸ್, ಎಸ್ಪಿ.ಬಾಲು, ಎಸ್.ಜಾನಕಿ, ಅನನ್ಯಭಟ್ ಮುಂತಾದ ನೂರಾರು ನಟನಟಿ ಗಾಯಕರ ಜೀವನ ಪಾವನವಾಯ್ತು. ಭಾರತದಲ್ಲಿರುವ ರಾಮೇಶ್ವರ ಗಯಾ ಕೈಲಾಸ ಕಾಶಿವಿಶ್ವನಾಥ ಬದರೀ-ಕೇದಾರನಾಥ ಇತ್ಯಾದಿ ಪುಣ್ಯ ಕ್ಷೇತ್ರಗಳಂತೆ ಕರ್ನಾಟಕದಲ್ಲಿ ಇರುವ ಧರ್ಮಸ್ಥಳ ಮಂಜುನಾಥ, ಏಳುಮಲೆ ಮಹದೇಶ್ವರಬೆಟ್ಟ, ಇವೆರಡು ಸ್ಥಳಗಳೂ ಪುಣ್ಯಕ್ಷೇತವೆಂದು ಜಗಜ್ಜಾಹೀರಾಗಿದೆ.

ಸಾಕ್ಷಾತ್ ಪರಶಿವನ ಅವತಾರವೇ ಏಳುಮಲೆ ಮಾದೇಶ್ವರ ಎಂಬ ಅಚಲ ನಂಬಿಕೆಯಿಂದ 108 ಸಮುದಾಯದ ಕುಲದೈವ, ಲಕ್ಷಾಂತರ ಕುಟುಂಬದ ಮನೆದೈವ, ಕೋಟ್ಯಾಂತರ ಭಕ್ತರ ಮನದೈವ ಎಂದೇ ವಿಖ್ಯಾತರಾದ ಮಹದೇಶ್ವರ, ಮಾದಪ್ಪ, ಮಾದಯ್ಯ, ಮಾದೇವ, ಮಾದೇಶ, ಮುದ್ದುಮಾದಪ್ಪ, ಕೊಂಗಳ್ಳಿಯಪ್ಪ ಮುಂತಾದ ಹೆಸರಿಂದ ನಿಜಭಕ್ತರಿಗೆ ಒಲಿದು ವರವಕೊಡುವ ಕಲಿಯುಗದ ಪ್ರಶ್ನಾತೀತ, ಜಾತ್ಯಾತೀತ, ಮತಾತೀತ, ಧರ್ಮಾತೀತ ದೇವನೇ ಈತ.
ಸತೀ ಶಂಕಮ್ಮ, ಜುಗ್ಗಾ ಶೆಟ್ಟಿ ಮುಂತಾದವರ ದುರ್ಬುದ್ಧಿ ತೊಲಗಿಸಿ ಸದ್ಭುದ್ಧಿ ಕರುಣಿಸಿದ ಹುಲಿವಾಹನದೇವ. ಅಬಲರಿಗೆ ಮುಗ್ಧರಿಗೆ ರೋಗಿಗಳಿಗೆ ನೊಂದುಬೆಂದವರಿಗೆ ಕಷ್ಟನಷ್ಟದಲ್ಲಿದ್ದವರಿಗೆ ಆಪತ್ಭಾಂಧವನಾಗಿ ಭೋಗಭಾಗ್ಯ ಸಕಲೈಶ್ವರ್ಯ ನೀಡಿ, ದವಸಧಾನ್ಯ ವಂಶ ಹೆಚ್ಚೊಕ್ಕಲು ಮಾಡಿ, ಸಲಹುವ ಪವಾಡಪುರುಷ. ಆಸೆಪಟ್ಟ ಚಾಮುಂಡೇಶ್ವರಿಗೂ ಒಲಿಯದೇ ಆಕೆಯಕಣ್ಣಿಗೆ ಕಾಣಿಸದಂತೆ ಪಶ್ಚಿಮಘಟ್ಟ ಏಳುಮಲೆಬೆಟ್ಟದ ಮಧ್ಯೆಆಳದಲ್ಲಿ ನೆಲೆಸಿ ಸರ್ವಸ್ತ್ರೀಸಂಗ ಪರಿತ್ಯಾಗ ಮಾಡಿದ ಅಖಂಡ ಬ್ರಹ್ಮಚಾರಿ.
ಬಾಲ್ಯದಿಂದ ಮೊದಲ್ಗೊಂಡು ಭೂಸಮಾಧಿ ಆಗುವವರೆಗೆ ಕಾರಯ್ಯ ಬಿಲ್ಲಯ್ಯ ಬೇಡರಕಣ್ಣಯ್ಯ ಮುಂತಾದ ಶಿವಭಕ್ತರ ಒಡನಾಟದ ಮಹಾಮಹಿಮ. ಆಜೀವ ಪರ್ಯಂತ ತನ್ನಿಚ್ಚೆಯಂತೆ ಬದುಕು ಸಾಗಿಸಿದ ಮಾದೇಶ್ವರ ಲಿಂಗವಾದುದು ನಡುಮಲೆ ಬೆಟ್ಟದಲ್ಲಿ ಎಂಬುದೇ ಸತ್ಯ ಹಾಗೂ ಇದೇ ನಿಜವಾದ ಸಮಾಧಿ. ಈಗಲೂ ಸಮಾಧಿ ಸಿದ್ಧನಾಗಿ ಶಿವಯೋಗ ಧ್ಯಾನ ಮಾಡುತ್ತಿರುವ ಮಹದೇಶ್ವರ ಪರಮಾತ್ಮನು ಇಲ್ಲಿದ್ದಾನೆ ಎಂಬುದು ಎಲ್ಲರ ನಂಬಿಕೆ ವಿಶ್ವಾಸ ಭಕ್ತಿ. ಈ ಕಾರಣಕ್ಕೆ ಶ್ರೀಕ್ಷೇತ್ರದಲ್ಲಿ ಪ್ರಾಣಿವಧೆ ನರಹಿಂಸೆ ಅತ್ಯಾಚಾರ ಅನಾಚಾರ ಭ್ರಷ್ಠಾಚಾರ ಇತ್ಯಾದಿ ಪಾಪ ಸಂಕಲ್ಪಗಳನ್ನು ಮಾಡಬಾರದೆಂಬ ಪದ್ಧತಿ ಪ್ರತೀತಿ ಇವತ್ತಿಗೂ ಇದೆ.

ಸ್ಥಳ ಪರಿಚಯ….
“ಕನ್ನಡ ದೇಶದ ಕಾವೇರಿ ತೀರದ ಪೊನ್ನಾಚಿ ಬೆಟ್ಟದೊತ್ತಿನಲ್ಲಿ ಉನ್ನತವಾಗಿಹ ನಡುಮಲೆಯೊಪ್ಪುವ ಬಿನ್ನದದೇನ ಹೇಳುವೆನು” ಎಂದು ಬಹಳ ಹಿಂದೆಯೇ ಗುರುಸಿದ್ಧಕವಿ ವರ್ಣಿಸಿದಂತೆ ಮಲೆಮಹದೇಶ್ವರ ಬೆಟ್ಟವು ದಕ್ಷಿಣ ಭಾರತ ಪಶ್ಚಿಮ ಘಟ್ಟದ ಕರ್ನಾಟಕ ರಾಜ್ಯ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಎಪ್ಪತ್ತೇಳು ಮಲೆಗಳ ಮಧ್ಯೆ ಇರುವ ಏಳುಮಲೆಯ ದಟ್ಟವಾದ ಬೆಟ್ಟಗಾಡು. ಇಲ್ಲಿರುವ ಮಹದೇಶ್ವರ ದೇವಾಲಯ ಭಾರತದ ಪುರಾತನ ಶೈವ ಪುಣ್ಯಕ್ಷೇತ್ರಗಳಲ್ಲಿ ಒಂದು. ಅತ್ಯಂತ ಭಕ್ತಿಭಾವದ ಈ ಶಿವದೇವಾಲಯದ ಪ್ರಮುಖ ಶಿವಲಿಂಗದ ಮೇಲೆ ಧರಿಸಿದ ಮಿಂಚುವ ಪಂಚಲೋಹದ ರತ್ನಖಚಿತ ಮಾದೇಶ್ವರನ ಕೊಳಗವು ಹೆಚ್ಚು ಆಕರ್ಷಕ.
15ನೇ ಶತಮಾನದಲ್ಲಿ ಜುಂಜೇಗೌಡನಿಂದ ಸ್ಥಾಪಿಸಲ್ಪಟ್ಟ ದೇವಾಲಯ ಕಾಲಕ್ರಮೇಣ ಅಭಿವೃದ್ಧಿಯಾಗಿ ಜನಪ್ರಿಯತೆ ಗಳಿಸಿತು. ಶ್ರೀಕ್ಷೇತ್ರಕ್ಕೆ ವರ್ಷಪೂರ್ತಿ ಭಕ್ತರು ಆಗಮಿಸುವರು, ವಿಶೇಷವಾಗಿ ಶಿವರಾತ್ರಿ ಯುಗಾದಿ ನವರಾತ್ರಿ ದೀಪಾವಳಿ ಮಾಸಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಎಲ್ಲರಿಗು ಅಗತ್ಯವಾದ ಮೂಲಭೂತ ಸೌಕರ್ಯ ಅಚ್ಚುಕಟ್ಟಾಗಿದ್ದು ಮಹಿಳೆ ಮಕ್ಕಳು ವೃದ್ಧರಾದಿಯಾಗಿ ಜಾತಿಮತ ಭೇದಭಾವ ಇಲ್ಲದೆ ಪ್ರಸಾದ ಭೋಜನ ವಸತಿ ಆದರಾತಿಥ್ಯ ತೃಪ್ತಿಕರವಾಗಿರುತ್ತದೆ. ಭಕ್ತಾಧಿಗಳು ಪೂಜೆ ಪುನಸ್ಕಾರ ಕೈಂಕರ್ಯಗಳನ್ನು ಮುಗಿಸಿ, ಎಲ್ಲೂಕಾಣದ ನೆಮ್ಮದಿ ಸುಖ ಸಂತೋಷ ಮನಶ್ಯಾಂತಿ ಪಡೆದು ಹಿಂದಿರುಗುತ್ತಾರೆ.

ಇದೆಕ್ಕೆಲ್ಲ ಮೂಲಕಾರಣರಾದ ಸುಮಾರು 50 ವರ್ಷಕಾಲ ಶ್ರೀಕ್ಷೇತ್ರದ ಮತ್ತು ದೇವಸ್ಥಾನದ ಸಕಲ ಅಭಿವೃದ್ಧಿಗಾಗಿ ತನುಮನ ಧನಕನಕ ಮುಡಿಪಾಗಿಟ್ಟು ಧರ್ಮಶಾಲೆ ಕಟ್ಟಿಸಿಕೊಟ್ಟು ಅಮೋಘ ಸೇವೆ ಮಾಡಿದ ಆಗಿನ ಮೈಸೂರು ಮತ್ತು ಮದ್ರಾಸ್ ರಾಜ್ಯಗಳ ಗವರ್ನರ್ಆಗಿದ್ದ ಮಹಾರಾಜ ಶ್ರೀಜಯಚಾಮರಾಜ ಒಡೆಯರ್ರನ್ನು, 1962ರಲ್ಲಿ ಶಿವೈಕ್ಯರಾದ ರಾವಸಾಹೇಬ್ ಜಿ.ಪಿ.ಮಲ್ಲಪ್ಪರನ್ನು ಹಾಗೂ ಧರ್ಮದರ್ಶಿಗಳ ಸಮಿತಿ ಅಧ್ಯಕ್ಷರಾಗಿದ್ದ ಅಡ್ವೋಕೇಟ್ ಜಿ.ವೆಂಕಟೇಗೌಡರನ್ನು ಸ್ಮರಿಸುವುದು ಆದ್ಯ ಕರ್ತವ್ಯ. ದಿನಾಂಕ 4.12.1953ರಂದು ಮಹಾರಾಣಿ ಮಾತೃಶ್ರೀ ಕೆಂಪು ಚೆಲುವರಾಜಮ್ಮಣ್ಣಿ ಅಮೃತಹಸ್ತದಿಂದ ಧರ್ಮಶಾಲೆ ಹಾಗೂ ನಾಲ್ಕು ಧರ್ಮಛತ್ರಗಳನ್ನೂ ಉದ್ಘಾಟಿಸಲಾಯಿತು.
ಹಿಂದಿನ ಕಾಲದಂತೆಯೇ ಈ ಆಧುನಿಕ ವಿಜ್ಞಾನ-ತಂತ್ರಜ್ಞಾನ ಕಾಲದಲ್ಲು ಅನೇಕ ಭಕ್ತರು ದೂರದ ಊರುಗಳಿಂದ ಕಾಲ್ನಡಿಗೆಯಲ್ಲೆ ಬಂದು ಮಹದೇಶ್ವರನ ದರ್ಶನ ಪಡೆದು ಸೇವೆ ಸಲ್ಲಿಸಿ ಹರಕೆ ತೀರಿಸಿ ನಂತರ ಕುಂತೂರು ಪ್ರಭುಸ್ವಾಮಿ ಬೆಟ್ಟಕ್ಕೆ ಭೇಟಿ ಕೊಡುವ ಪದ್ಧತಿ ಇದೆ. ಶ್ರೀಕ್ಷೇತ್ರಕ್ಕೆ ರಸ್ತೆಯ ಮೂಲಕ ವಾಹನದಲ್ಲು ಬರಬಹುದು. ತಾಳುಬೆಟ್ಟದಿಂದ ಕಾಲುದಾರಿಯಲ್ಲಿ 10ಕಿ.ಮಿ., ಮೋಟಾರು ರಸ್ತೆ ಮೂಲಕ 17ಕಿ.ಮೀ. ಪ್ರಯಾಣ ಮಾಡಿ ಏಳುಬೆಟ್ಟ ಹತ್ತಿಇಳಿದರೆ ನಡುಮಲೆಯಲ್ಲಿ ಕಾಣಿಸುತ್ತದೆ ಮಹದೇಶ್ವರನ ದೇವಾಲಯ. ಕರ್ನಾಟಕದ ಪ್ರತಿಯೊಂದು ಜಿಲ್ಲಾ ಕೇಂದ್ರದಿಂದ ಖಾಸಗಿ ಬಸ್ಸುಗಳಲ್ಲದೆ, ಮಹದೇಶ್ವರ ಬೆಟ್ಟದ ಸರ್ಕಾರೀ ಬಸ್, ಕರಾರಸಾನಿ ಬಸ್ಸುಗಳ ಅನುಕೂಲವಿದೆ.
ಪ್ರತಿದಿನ ಬೆಂಗಳೂರು ಮತ್ತು ಮೈಸೂರಿನಿಂದ ಬಸ್ಸುಗಳ ವ್ಯವಸ್ಥೆ ಇದ್ದು ಚಾಮರಾಜ ನಗರದವರೆಗೆ ರೈಲು ಮಾರ್ಗವಿದೆ. ಮೈಸೂರಿನ ಮಹಾರಾಜ ಜಯಚಾಮರಾಜ ಒಡೆಯರ್ರವರು ತಾಳುಬೆಟ್ಟದಿಂದ ನಡುಮಲೆಬೆಟ್ಟದ ದೇವಸ್ಥಾನದವರೆಗೆ ಮೋಟಾರು ವಾಹನ ಓಡಾಟಕ್ಕೆಂದು ಸಿಮೆಂಟ್ ರಸ್ತೆಯನ್ನು ನಿರ್ಮಾಣ ಮಾಡಿಸಿ 18.2.1953ರಂದು ಉಧ್ಘಾಟನೆ ಮಾಡಿದ ಘನಕಾರ್ಯಕ್ಕೆ ಕೃತಜ್ಞತಾಪೂರ್ವಕವಾಗಿ ಪ್ರಧಾನಿ ರಾಷ್ಟ್ರಪತಿ ಮೊದಲ್ಗೊಂಡು ಇಡೀದೇಶವೆ ಹೊಗಳಿ ಹರಸಿ ಭಕ್ತಿನಮನ ಸಲ್ಲಿಸಿದ್ದು ಇತಿಹಾಸ. ಶ್ರೀಕ್ಷೇತ್ರಕ್ಕೆ ಹತ್ತಿರವಿರುವ ವಿಮಾನ ನಿಲ್ದಾಣ 150 ಕಿ.ಮೀ. ದೂರದ ಮೈಸೂರು ಅಥವ 210 ಕಿ.ಮೀ. ದೂರದ ಬೆಂಗಳೂರು ಆಗಿದ್ದು, ಮಂಗಳೂರು ಮತ್ತು ಚೆನ್ನೈವರೆಗೆ ಸಮುದ್ರ ಮಾರ್ಗವೂ ಇದೆ.

ಸಂಕ್ಷಿಪ್ತ ಇತಿಹಾಸ…
ಮಹದೇಶ್ವರನ ಮೂಲಗುರುಗಳು ಅನಿಮಿಷದೇವ ಶಿವಗಾಮ ಪರಂಪರೆಯ ಶಿವಯೋಗಿ ನಂದಿಕೇಶ್ವರ, ಇವರ ನೆಲೆಬೀಡು ಬಾದಾಮಿ ಚಾಲುಕ್ಯರ ಧರ್ಮ ಸಾಹಿತ್ಯ ಸಂಸ್ಕೃತಿ ಕೇಂದ್ರವಾಗಿದ್ದ ಪಟ್ಟದಕಲ್ಲು. ಇದರ ಸಮೀಪದ ಸ್ಥಳ ಐಹೊಳೆ, ಕ್ರಮೇಣ ಶೈವಧರ್ಮ ಕೇಂದ್ರಸ್ಥಳ ಕಲ್ಯಾಣ. ಪ್ರಭುದೇವರಂಥ ಗುರುಪರಂಪರೆ ನಡುವೆ ಅವತರಿಸಿದ ಮಹದೇಶ್ವರನನ್ನು ದ್ರಾವಿಡ ಗ್ರಂಥಗಳಲ್ಲಿ ಮಾಯಕಾರ ಮಾದಪ್ಪನೆಂದು ಉಲ್ಲೇಖಿಸಿದ್ದರೆ, ವೀರಶೈವ ಗ್ರಂಥಗಳಲ್ಲಿ ನಿರ್ಮಾಯ ಗಣೇಶ್ವರ, ಮಾಯೆಯನ್ನು ದಮನ ಮಾಡಿದ ಈಶ್ವರನೇ ಮಾದೇಶ್ವರ, ಎಂದು ಬಣ್ಣಿಸಿದ್ದಾರೆ.
ಸಿದ್ಧಿ ಪುರುಷರ ಹೆಸರಿನ ಜತೆಗೆ ಭಕ್ತಿ-ಹಿರಿತನ ಸೂಚಕ “ಈಶ್ವರ” ಸೇರಿಸುವುದು ವಾಡಿಕೆ. ಉದಾ:- ಸಿದ್ಧಲಿಂಗೇಶ್ವರ, ಮರುಳಸಿಧ್ಧೇಶ್ವರ, ಚೆನ್ನಬಸವೇಶ್ವರ, ಕಾಲಭೈರವೇಶ್ವರ ಮುಂತಾದ ಮಹಾಮಹಿಮರು. ಶ್ರೀಸಾಮಾನ್ಯನು ಮಹಾದೇವ ಆಗುವುದು ಹೇಗೆಂಬ ಭಕ್ತಿರಹಸ್ಯ ತಿಳಿಸಿದ ಮಹದೇಶ್ವರನ ಶಿಷ್ಯಪರಂಪರೆಯಲ್ಲಿ ತೋಂಟದ ಸಿದ್ಧಲಿಂಗೇಶ್ವರ ಮೊದಲಾದವರು ಭಕ್ತಿಯ ಬೆಳಕಲ್ಲಿ ಕಂಗೊಳಿಸಿದರು. ಇವರ ಕೃಪಾನುಗ್ರಹದಿಂದ ಲಕ್ಷಾಂತರ ಜನ ಸರಿದಾರಿಯಲ್ಲಿ ನಡೆದು ಉತ್ತಮ ಜೀವನ ಅನುಭವಿಸಿದರು.
ಇಷ್ಟಾದರೂ ಕಳೆದ ನೂರಾರು ವರ್ಷಗಳಿಂದ ಕೆಲವು ಕಿಡಿಗೇಡಿ ನಾಸ್ತಿಕರು ಮಹದೇಶ್ವರನ ಅಸ್ತಿತ್ವ ಮಹಿಮೆ ಮಹಾತ್ಮೆ ಕುರಿತು ಅಜ್ಞಾನ ಅವಿವೇಕದ ಕೊಂಕುನುಡಿ ವ್ಯಂಗ್ಯವಾಕ್ಯ ಅಸಭ್ಯನಡೆ ಅಸಹ್ಯ(ಪ್ರ)ದರ್ಶನದ ಮೂಲಕ ಹಲವು ಕಠಿಣ ಕಳಪೆ ಪರೀಕ್ಷೆಗಳನ್ನು ಕೈಗೊಳ್ಳುವ ವ್ಯರ್ಥ ಪ್ರಯತ್ನದಿಂದ ಸೋತುಸುಣ್ಣವಾದ, ತೇಜೋವಧೆಗೊಂಡು ರೋಗರುಜಿನ ಕಷ್ಟನಷ್ಟ ಅನುಭವಿಸಿದ, ಅನೇಕ ಉದಾಹರಣೆ ಇತಿಹಾಸದ ಪುಸ್ತಕ ಸೇರಿತು.
ಶ್ರೀಕ್ಷೇತ್ರದ ಪುಣ್ಯಸ್ಥಳಗಳು..

ಮಹದೇಶ್ವರನ ದೇವಾಲಯವು ಸುತ್ತಲೂ ಸುಂದರವಾದ ಪೌಳಿ ಮತ್ತು ಮಂಟಪಗಳಿಂದ ಅಲಂಕೃತವಾಗಿದೆ. ಈ ಮಹಾ ಮಂಟಪಗಳು ಪೂರ್ವ-ಪಶ್ಚಿಮ 24 ಅಂಕಣಗಳ ಹಾಗೂ ಉತ್ತರ-ದಕ್ಷಿಣ 18 ಅಂಕಣಗಳ ವಿಶಾಲತೆ ಉಳ್ಳದ್ದಾಗಿದೆ. ದೇವಸ್ಥಾನದ ಮುಖವು ಪಶಿಮಕ್ಕೂ, ಗೋಪುರವು ದಕ್ಷಿಣಕ್ಕೂ, ಉತ್ತರಕ್ಕೆ ಆಲಂಬಾಡಿ ಬಸವದ್ವಾರ ಬಾಗಿಲುಂಟು. ಪೂರ್ವಕ್ಕೆ ಬಲವಾದ ಗೋಡೆಇದೆ. ಗರ್ಭಗುಡಿ ಮತ್ತು ಸುಖನಾಸಿ ತಲಾ ಒಂದೊಂದು ಅಂಕಣವಿದ್ದು, 9 ಅಂಕಣದ ಮುಖಮಂಟಪದಲ್ಲಿ ಪ್ರಾಚೀನ ವೀರಭದ್ರನ ವಿಗ್ರಹವಿದೆ ಆದ್ದರಿಂದ ಜಾತ್ರೆಯ ಕಾಲದಲ್ಲ್ಲಿ ಅಗ್ನಿಕೊಂಡ ನಡೆಯುತ್ತದೆ.
ನವರಂಗಮಂಟಪ 25 ಅಂಕಣದಷ್ಟಿದ್ದು ಮಾದೇಶ್ವರನ ಎದುರುಭಾಗದಲ್ಲಿ ಒಂದು ಅಂಕಣದ ಬಸವೇಶ್ವರನ ಗುಡಿಇದೆ. ಸಾಲೂರುಮಠದ ಗದ್ದಿಗೆಗಳು. ಶೇಷಣ್ಣೊಡೆಯರ ಗದ್ದಿಗೆ, ಹುಲಿವಾಹನರಥ, ಬೆಳ್ಳಿರಥ, ಉತ್ಸವಮೂರ್ತಿ, ಅಂತರಗಂಗತೀರ್ಥ, ದೊಡ್ಡಬಸವ, ಕಿರುಜಲಪಾತ, ಕಿಷ್ಕಿಂದಾಹಾದಿ, ಮಾದೇಶ್ವರಗುಡ್ಡಪ್ಪನ ಧ್ಯಾನಸ್ಥಳ, ಯೋಗಿಋಷಿ ತಪಸ್ಸಿನತಾಣ, ಮಹಾಗೋಪುರ, ಹೊನ್ನಕಳಶ, ನವರತ್ನಕಿರೀಟ ರುದ್ರಾಕ್ಷಿಮಂಟಪ, ಮಹದೇಶ್ವರ ದೇವಾಲಯದ ಆಲಂಬಾಡಿ ಬಸವೇಶ್ವರ ದ್ವಾರ, ಮಹಾಗಣಪತಿ, ನಂದಿಭೃಂಗಿ ದ್ವಾರಪಾಲಕರು, ನವನಿರ್ಮಿತ ಮುಖ್ಯದ್ವಾರ.
1905ರಲ್ಲಿ ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಣಿಕೆ ನೀಡಿದ ಮತ್ತು 1935ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಣಿಕೆ ನೀಡಿದ ಬೆಳ್ಳಿಯ ಹುಲಿವಾಹನ ವೃಷಭವಾಹನ. ಉತ್ಸವ ಮೂರ್ತಿ-ರಥಗಳು. ಮೈಸೂರು ಮಹಾರಾಜರ ಧರ್ಮಶಾಲೆ, ಅನ್ಯರಾಜ್ಯ/ ದೇಶದ ರಾಜಮಹಾರಾಜ ಪ್ರಧಾನಿ ರಾಷ್ಟ್ರಪತಿ ಮುಂತಾದ ದಿಗ್ಗಜರು ಭೇಟಿನೀಡಿದ ಭಾವಚಿತ್ರ ಇತ್ಯಾದಿ ಸ್ಮರಣಾರ್ಥ ವಸ್ತುಗಳಿರುವ ಸಂಗ್ರಹಾಲಯ, ಶರಣೆ ಶಂಕಮ್ಮನ ಕಲ್ಯಾಣಿ, ಚಿಕ್ಕೆರೆ, ದೊಡ್ಕೆರೆ, ಜಲಬಾವಿ, ಬಸಪ್ಪನಕಟ್ಟೆ, ನಾಗಮಲೆ, ಆರುಮಲೆ, ಜೇನುಮಲೆ, ಗುಪ್ತಮಲೆ, ಕಲ್ಮುಳ್ಳುಮಲೆ, ಶಿಖರದೊಳಗಿನ ಗವಿಗುಹೆಗಳು, ಶಿವಯೋಗ ಸಮಾಧಿಯಲ್ಲಿರುವ ಲಿಂಗರೂಪಿ ಮಾದೇಶ್ವರ.
ಸಾಮಾನ್ಯವಾಗಿ ಇಲ್ಲಿನ ನೆರೆಹೊರೆಯ ಹನೂರು ಕೊಳ್ಳೆಗಾಲ ಕೌದಳ್ಳಿ ಮಾಂಬಳ್ಳಿ ಯಳಂದೂರು ಸಿಂಗನಲ್ಲೂರು ಮುಂತಾದ ಸುತ್ತಮುತ್ತಲ48ಪ್ರದೇಶದ ಜನರು ಕನ್ನಡ ಮತ್ತು ತಮಿಳು ಭಾಷೆಯನ್ನ ಸರಾಗವಾಗಿ ಮಾತನಾಡುವರು ಇವರ ಮೂಲವೃತ್ತಿ ಬೊಂಬು, ಗಳ, ಮೊರ, ಬುಟ್ಟಿ, ಕುಕ್ಕೆ, ಸೆಣಬುಹೆಣಿಗೆ, ಮರಗಿಡಕಡ್ಡಿನೇಯ್ಗೆ, ಕೈಕಸುಬಿನ ಕಲಾಕೃತಿ ಜತೆಗೆ ಗುಲಗಂಜಿ, ಉಂಡೆನಾಮ, ಮೇರ್ತಗೆ, ವಿಭೂತಿಘಟ್ಟಿ, ಕಿರುಜೇನು-ಹಿರಿಜೇನುತುಪ್ಪ, ನವಿಲುತುಪ್ಪ-ನವಿಲುಗರಿ, ಗೀಜಗನಗೂಡು, ಸತ್ತಪ್ರಾಣಿಕೊಂಬುಕಹಳೆ, ನಾರುಬೇರುಗಳಿಂದ ನಾಟಿಔಷಧ ತಯಾರಿಸುವುದು.
ಸಾಹಿತ್ಯದಲ್ಲಿ ಮಹದೇಶ್ವರ:-
ಶ್ರೀ ಮಾದೇಶ್ವರನನ್ನು ಕುರಿತು ಕವಿಗಳು ವಿದ್ವಾಂಸರು ಸಂಗೀತಗಾರರು ಗಾಯಕರು ಅನೇಕ ಜಾನಪದ ಪದ್ಯಗಳನ್ನು ಕಟ್ಟಿಹಾಡಿದ್ದಾರೆ ಮತ್ತು ಜನಪ್ರಿಯ ಕಾವ್ಯಗಳನ್ನು ಬರೆದು ಪ್ರಕಟಿಸಿದ್ದಾರೆ. ಆದರೆ ಇವರೆಲ್ಲರಿಗಿಂತ ಹೆಚ್ಚಾಗಿ ಅರ್ಥಪೂರ್ಣವಾಗಿ ಭಕ್ತಿಪೂರ್ವಕವಾಗಿ ಅಚ್ಚುಕಟ್ಟಾಗಿ ಉಳುವರೈತರು ಒಪ್ಪಓರಣದ ಒಕ್ಕಲಗಿತ್ತಿಯರು ದೋಣಿಅಂಬಿಗರು, ದಾರಿಹೋಕರು, ಸಂತೆಜಾತ್ರೆ ಹಾದಿಬೀದಿ ಮಾರುಕಟ್ಟೆಯವರು ಭಿಕ್ಷುಕರು ಕುಂಟಕುರುಡರು ಬರೆಯದೆಲೆ ಮನಸ್ಸಿನಲ್ಲಿರಿಸಿಕೊಂಡು ಬಾಯಿಪಾಠ ಮಾಡಿಕೊಂಡು ಹಾಡಿಕೊಂಡಾಡಿದ್ದಾರೆ.
ಪ್ರಚಾರದಲ್ಲಿರುವ ಬೇವಿನಹಟ್ಟಿಕಾಳಿ ಜಂಗಮರಸೆರೆ ಶ್ರವಣನಗರ್ವಭಂಗ ರಂಗನಾಥನಕಾಪಾಡಿದ್ದು ಆನೆಗಳನ್ನಅನುಗ್ರಹಿಸಿದ್ದು ಕೊಂಗರಾಜನಜೈಸಿದ್ದು ಹುಲಿಯಹಾಲಿನಮೇವು ಅಂತರ್ಯುದ್ಧ ಮುಂತಾದ ಇತಿಹಾಸ ಮತ್ತು ದಂಥಕತೆಗಳು ಇವತ್ತಿಗೂ ಅಸ್ತಿತ್ವದಲ್ಲಿದ್ದು ಮೈಸೂರು ಕೊಳ್ಳೇಗಾಲ ಚಾಮರಾಜನಗರ ಕೊಯಮತ್ತೂರು ನೀಲಗಿರಿ ಕೊರಮಗಿರಿ ಕೊಂಗಬೆಟ್ಟ ದೊಡ್ಡಬೆಟ್ಟ ಉದಕಮಂಡಲ ಸ್ಥಳಗಳಲ್ಲಿ ಮಾದೇಶ್ವರನ ಗದ್ದಿಗೆಗಳಿವೆ. ಇವರು ಸಂಚರಿಸಿದ ಸ್ಥಳಗಳಲ್ಲಿ ಜನಮಾನಸರ ತನುಮನದ ಇಚ್ಚೆಯಂತೆ ಅಲ್ಲಲ್ಲಿ ತೋರುಗದ್ದಿಗೆಗಳು ಹುಟ್ಟಿಕೊಂಡವು. ಮಾದೆಶ್ವರನು ಕುಂತೂರಿಗೆ ಬಂದಾಗ ವೀರಸಿಂಹಾಸನ ಮಠದಲ್ಲಿ ಕೂರಿಸಿ ಅಭಿಷೇಕದಿಂದ ಪೂಜಿಸಿ ಧನ್ಯರಾದರು ನಂಜುಂಡ ಒಡೆಯರ್.

ಉಲ್ಲೇಖಾರ್ಹ ಪುಸ್ತಕಗಳು :
*ಮಲೆಯಮಾದೇಶ್ವರಚರಿತಂ ಎಂಬ ಗ್ರಂಥದಲ್ಲಿ ಮಾದರಸ ಎಂಬುವನು ಈ ದೇಶದ ಪ್ರಸಿದ್ಧ ರಾಜನಾಗಿದ್ದ ಎಂಬ ಉಲ್ಲೇಖ ಇದ್ದು ಇವೆಲ್ಲದರ ಐತಿಹ್ಯವು ಆಚಂದ್ರಾರ್ಕ ಅಜರಾಮರ.
*ಮಾದೇಶ್ವರನ ಸಾಂಗತ್ಯ: ಎಂಬ ಗ್ರಂಥವನ್ನು ಪರಾಮರ್ಶಿಸಬಹುದು. ಲೇಖಕ: ಹಲಗೂರುದೇವಣ್ಣನ ಚಿಕ್ಕದೇವಣ್ಣ, ಮಿಣ್ಯ, ಕೊಳ್ಳೇಗಾಲ (ಕನ್ನಡ ಕವಿ ಚರಿತ್ರೆ, ಭಾಗ-3, ಪುಟ 105).
*ನಿರಂಜನವಂಶ ರತ್ನಾಕರ: ಬಿಜಾಪುರದ ಶಿವಾನುಭವ ಗ್ರಂಥಮಾಲೆ ಅಡಿಯಲ್ಲಿ 1933ರಲ್ಲಿ ಪ್ರಕಟಿತ.
*ಸುತ್ತೂರು ವೀರಸಿಂಹಾಸನ ಗುರುಪರಂಪರೆ: ಷಟ್ಪದಿ ಗ್ರಂಥ ರಚನೆ: ಸಿ.ಸಂಗಪ್ಪಶಾಸ್ತ್ರಿ, ಮೈಸೂರು
*ಕುಂತೂರು ವೀರಸಿಂಹಾಸನ ಮಠ: ಹಲವು ಮಹದೇಶ್ವರನ ಕಥೆಗಳಿದ್ದು, ಇವರು ಕೈಗೊಂಡ ವಿವಿಧ ಗುರುಗಳ ಸೇವೆ, ಮಠಗಳ ಸೇವೆ ಕುಂತೂರು ಪ್ರಭುಲಿಂಗಬೆಟ್ಟದ ಜಗದ್ಗುರು ಆದಿಗಣನಾಥರ ಸೇವೆ.
*ಪಂಚ ಮಹಾಮಠಗಳು ಪೀಠಾಧಿಪತಿಗಳು: ನಂಜನಗೂಡು, ಸುತ್ತೂರು, ವಂಡರಬಾಳು, ಕುಂತೂರು ಹಾಗೂ ಎರಗಂಬಳ್ಳಿ ಎಂಬ ಐದು ಮಹಾಮಠಗಳೂ, ಇದರ ಪೀಠಾಧಿಪತಿಗಳೂ ಉಲ್ಲೇಖಗೊಂಡಿದೆ.
*ತಮ್ಮಡಿಗಳ ಮನೆತನ: ನೂರಾರುವರ್ಷ ಮಾದೇಶ್ವರನ ಅರ್ಚಕರಾಗಿ ಪ್ರಸಿದ್ಧರಾದ ತಮ್ಮಡಿಗಳು. ಉದಾ ಹರಣೆಗೆ: ಬಿಲ್ಲಯ್ಯ ಮತ್ತು ಇವನಮಗ ಶೇಷಣ್ಣೊಡೆಯ, ಬೀರಯ್ಯ, ಎಲ್ಲತಮ್ಮಡಿ, ಕಾಳಮಾದ, ಕೆಂಪುಮಾದ, ಚಿಣ್ಣಮಾದ, ಬೋಳುಮಾದ, ತೋಳಮಾದ, ದುಂಡುಮಾದ@ದುಂಡಯ್ಯ ಹಾಗೂ ಅನ್ನಸಾಲಮ್ಮ ಮುಂತಾದವರನ್ನು ಬ್ರಿಟಿಷ್ ಈಸ್ಟ್ ಇಂಡಿಯ ಸರ್ಕಾರದ ತಹನಾಮೆಗಳಲ್ಲಿ ಮೂಲನಿವಾಸಿಗಳೆಂದು ತಿಳಿಸಲಾಗಿದೆ.
*ಸಾಲೂರುಮಠ: ಮಹದೇಶ್ವರಚರಿತ್ರೆ ಪೂರ್ಣವಾಗಬೇಕಾದರೆ ಸಾಲೂರು ಮಠವೂ ಅತಿಮುಖ್ಯ.
*ಆಲಂಬಾಡಿ ಬೇಡಗಂಪಣರಾಜ್ಯ: ಈಗ ನಾಶವಾಗಿರುವ ಬೇಡಗಂಪಣ್ಣ ರಾಜ್ಯದ ರಾಜಧಾನಿ ಆಲಂಬಾಡಿ ಈಗಿಲ್ಲ, ಬಹಳ ಹಿಂದೆಯೇ ಸಂಪೂರ್ಣ ನಾಶವಾಗಿದೆ. ಮಹದೇಶ್ವರ ನಡುಮಲೆಗೆ ಬಂದಾಗ ಇಲ್ಲಿನ ಮೂಲನಿವಾಸಿಗಳಾದ ಸೋಲಿಗರು ಕುರುಬರು ಬೇಡರು ಹಾಲಕ್ಕಿಒಕ್ಕಲಿಗರು ಮಹದೇಶ್ವರನ ಶಿಷ್ಯರಾದರೆಂಬ ಉಲ್ಲೇಖವಿದೆ.
*ಸರಗೂರು ಭಕ್ತಾಗ್ರೇಸರು, ಶಿಷ್ಯರು : ಕಾರಯ್ಯ, ಬಿಲ್ಲಯ್ಯ, ಸಂಸಾರಿಸಂಗಪ್ಪ, ಹೊನ್ನಿದೇವ,ಸರಗೂರುಉಪ್ಪಲಿಗಶೆಟ್ಟಿ,ಇವರಪೈಕಿಸರಗೂರಯ್ಯ ಮಾದೇಶ್ವರನ ಸಂಗಡ ಹುಲಿಯಮೇಲೆ ಸವಾರಿ ಮಾಡುತ್ತ ವರ್ಷಗಟ್ಟಲೆ ಮಲೆಯಲ್ಲಿ ಓಡಾಡುತ್ತ ಕಾಲ ಕಳೆಯುತ್ತಿದ್ದರಂತೆ. ಇದೇಕಾಲದಲ್ಲಿ ಇವರೆಲ್ಲರಿಗೂ ಸ್ವಯಂ ಮಹದೇಶ್ವರನೆ ಲಿಂಗಧಾರಣೆ ಮಾಡಿಸಿದ ವಿಷಯವೂ ಪ್ರಸ್ತಾಪವಾಗಿದೆ.
ಉಪಸಂಹಾರ:

ಮಹಾತ್ಮ ಪರಮಾತ್ಮ ಮಹದೇಶ್ವರನು ಎಲ್ಲಿ ಹುಟ್ಟಿದರು? ಇವರ ಮಾತಾಪಿತರುಗಳು ಯಾರು? ಇವರ ಜನ್ಮಸ್ಥಳ ಯಾವುದು? ಇತ್ಯಾದಿಗಳ ಬಗ್ಗೆ ಇದುವರೆಗೆ ನಮಗೆ ಯಾವ ಸಂಗತಿಗಳೂ ಸ್ಪಷ್ಟವಾಗಿ ಆಧಾರ ಸಹಿತ ತಿಳಿದುಬಂದಿಲ್ಲ. ಸುತ್ತೂರು ಗುರು ಪರಂಪರೆ ಎಂಬ ಗ್ರಂಥದಲ್ಲಿ ಶ್ರೀಶೈಲದ ಪಾತಾಳಗಂಗೆಯ ತೀರದಲ್ಲಿ ಗಣಂಗಳಿಗೆ ಶ್ರೀಮಲ್ಲಿಕಾರ್ಜುನಸ್ವಾಮಿಯೇ ಆದಿಜಂಗಮನ ರೂಪದಿಂಬಂದು ಮಹದೇಶ್ವರನಿಗೆ ಕಾಣಿಸಿಕೊಂಡರು ಎಂಬ ಸಂಗತಿ ಮಾತ್ರ ಉಲ್ಲೇಖಿಸಲಾಗಿದೆ.
ಹೀಗಾಗಿ ಮಹದೇಶ್ವರನು ಮೂಲತಃ ಶ್ರೀಶೈಲದಿಂದ ಮಲೆಗಳ ಬೆಟ್ಟದೆಡೆಗೆ 14ನೇ ಶತಮಾನದ ಆಸುಪಾಸಲ್ಲಿ ಆಗಮಿಸಿದ ಜಂಗಮ ಶರಣವೀರ ಎಂಬುದಂತೂ ಖಾತ್ರಿಯಾಗುತ್ತದೆ. ಇದಕ್ಕೆ ಇಂಬುಕೊಟ್ಟಂತೆ ಈ ವಚನ:
“ಪರಶಿವನ ಪರಮಾಂಶಮುಂದೈ/
ತರುತ ಬಾಲಕ ರೂಪಿನಿಂದವ/
ತರಿಸಿ ಮಾದೇಶ್ವರನ ನಾಮದಿ ನಿಂದುದರ್ತಿಯೆಲ್ಲಿ//
(ಸು.ಗು.ಪ.ಪುಟ 71, ಪ.21)”
ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ಗುಣಕ್ಕೆ ಅವರವರ ನಂಬಿಕೆಗೆ ಅವರವರಿಗೆಲ್ಲ ದುಷ್ಟಶಿಕ್ಷಕ ಶಿಷ್ಟರಕ್ಷಕ ದೇವ ನೀನೊಬ್ಬನೇ ಮಹದೇಶ್ವರ…..








