LatestLife style

ಹಾಲುಣಿಸಿದರೆ ತಾಯಿಯ ಸೌಂದರ್ಯಕ್ಕೆ ಧಕ್ಕೆ ಬರುತ್ತಾ? ಈ ತಪ್ಪು ಕಲ್ಪನೆ ಬಂದಿದ್ದೇಕೆ? ವೈದ್ಯರು ಹೇಳುವುದೇನು?

ಈಗ ಮಗುವಿಗೆ ತಾಯಿಯ ಹಾಲನ್ನೇ ಕುಡಿಸಿ ಎಂದು ಜಾಹೀರಾತುಗಳ ಮೂಲಕ ತಿಳಿಸುವ ಪರಿಸ್ಥಿತಿಗೆ ಬಂದು ನಿಂತಿದ್ದೇವೆ… ಮಗುವಿಗೆ ತಾಯಿಯ ಹಾಲನ್ನೇ ಕುಡಿಸಿ ಎಂದು ಸರ್ಕಾರ ಕಾರ್ಯಕ್ರಮಗಳ ಮೂಲಕ ತಿಳಿಸಬೇಕಾಗಿ ಬಂದಿದೆ. ಏಕೆ ಹೀಗೆ ಆಗುತ್ತಿದೆ ಎಂಬುದಕ್ಕೆ ಹತ್ತು ಹಲವು ವಿಚಾರಗಳು ಮುನ್ನಲೆಗೆ ಬರುತ್ತಿವೆ. ಬಹುತೇಕ ತಾಯಂದಿರಿಗೆ ಮಗುವಿಗೆ ಹಾಲುಣಿಸಿದರೆ ಸೌಂದರ್ಯಕ್ಕೆ ಧಕ್ಕೆ ಬಂದು ಬಿಡುತ್ತದೆ ಎಂಬ ತಪ್ಪು ಕಲ್ಪನೆ ಮಗುವಿನ ಮೇಲೆ ಪರಿಣಾಮ ಬೀರುತ್ತಿದೆ.

ಮಗುವಿಗೆ ತಾಯಿಯ ಹಾಲು ಎಷ್ಟು ಪ್ರಾಮುಖ್ಯ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಆದರೂ ಎಲ್ಲೋ ಒಂದು ಕಡೆ ಆಧಾರ ರಹಿತ ತಪ್ಪು ಕಲ್ಪನೆಯಿಂದ ಮಹಿಳೆಯರು ತನ್ನ ಮಗುವಿಗೆ ಹಾಲುಣಿಸಲು  ಹಿಂದೇಟು ಹಾಕುವಂತೆ ಮಾಡಿದೆ. ಇಷ್ಟಕ್ಕೂ ಮಗುವಿಗೆ ತಾಯಿಯ ಹಾಲನ್ನೇ ಏಕೆ ಉಣಿಸಬೇಕು ಅದರ ಪ್ರಾಮುಖ್ಯತೆ ಏನು ಎಂಬುದರ ಬಗ್ಗೆ ತಿಳಿಯುವ ಅಗತ್ಯತೆಯೂ ಬಂದೊದಗಿದೆ.  ವೈದ್ಯಲೋಕದಲ್ಲಿ ಹುಟ್ಟಿದ ಮಗುವಿಗೆ ತಾಯಿಯ ಹಾಲು ಪೋಷಣೆಯ ಪ್ರಾಥಮಿಕ ಮೂಲವಾಗಿರುವುದರಿಂದ ಹಾಲುಣಿಸುವುದನ್ನು ಮಗುವಿನ ಜೀವನದ ಆರಂಭದ ಅವಧಿ ಎಂದೇ ಹೇಳಲಾಗುತ್ತದೆ.

ಏಕೆಂದರೆ ಎದೆಹಾಲು ಮಗುವಿಗೆ ಸುರಕ್ಷಿತ, ಪೋಷಣೆ ಮತ್ತು ಆರೋಗ್ಯದ ಅಭಿವೃದ್ಧಿಯನ್ನು ಖಾತರಿಪಡಿಸುತ್ತದೆ. ಇದೊಂದು ರೀತಿಯ ನೈಸರ್ಗಿಕ ಆಹಾರವಾಗಿರುವುದರಿಂದ ಮಗುವಿಗೆ ಸುಲಭವಾಗಿ ಜೀರ್ಣ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವೈದ್ಯರ ಪ್ರಕಾರ ಮಗುಹುಟ್ಟಿದ ಅರ್ಧ ಗಂಟೆಯೊಳಗೆ ಹಾಲುಕುಡಿಸಬೇಕು. ಒಂದು ವೇಳೆ ಸಿಸೇರಿಯನ್ ಮೂಲಕ ಮಗುಹುಟ್ಟಿದ್ದರೆ ನಾಲ್ಕು ಗಂಟೆ ಅವಧಿಯಲ್ಲಿ ಹಾಲುಣಿಸಬೇಕಂತೆ. ಜೇನುತುಪ್ಪ, ಗ್ಲೂಕೋಸ್, ಸಕ್ಕರೆ ಬೆರೆಸಿದ ನೀರು ನೀಡುವುದನ್ನು ತಪ್ಪಿಸಿ ಹಾಲನ್ನು ನೀಡಬೇಕು. ತಾಯಿಯ ಎದೆಯಿಂದ ಮೊದಲ ಬಾರಿಗೆ ಬರುವ ಹಾಲಿನಲ್ಲಿ  ರೋಗನಿರೋಧಕ ಶಕ್ತಿ ಅಡಗಿರುತ್ತದೆ.

ಈ ಹಾಲಿನಲ್ಲಿ ಪ್ರೊಟೀನ್, ಖನಿಜಾಂಶ, ವಿಟಮಿನ್ ಇಷ್ಟೇ ಅಲ್ಲ ವಿಟಮಿನ್ ಎ, ಆಂಟಿಬಾಡಿಗಳು, ಸೋಂಕು ನಿರೋಧಕಗಳು ಜಾಸ್ತಿ ಇರುತ್ತದೆ. ಮೂರು ದಿನಗಳ ಕಾಲ ಬರುವ ಹಾಲು ಗಾಢಹಳದಿ ಬಣ್ಣದಲ್ಲಿರುತ್ತದೆ. ಹೀಗಾಗಿ ಇದನ್ನು COLOSTRUM ಎಂದು ಕರೆಯಲಾಗುತ್ತದೆ. ಇದರಲ್ಲಿ ವಿರೇಚಕ  (Laxative) ಗುಣವಿರುವುದರಿಂದ ಮಗುವಿನ ಆರೋಗ್ಯದ ದೃಷ್ಠಿಯಿಂದ ಸರ್ವೋತ್ತಮವಾಗಿರುತ್ತದೆ. ಮಗುವಿಗೆ ಆರು ತಿಂಗಳು ತುಂಬುವವರೆಗೂ ವಿಟಮಿನ್, ಖನಿಜಾಂಶ ಅಥವಾ ಔಷಧಿಗಳಂತಹ ಡ್ರಾಪ್‌ಗಳನ್ನು ಹೊರತು ಪಡಿಸಿ ವೈದ್ಯರ ಸಲಹೆ ಇಲ್ಲದೆ ಯಾವುದೇ ರೀತಿಯ ಘನ ಅಥವಾ ದ್ರವ ರೂಪದ ಪದಾರ್ಥಗಳನ್ನು ನೀಡಬಾರದು.

ಏಕೆಂದರೆ ಈ ರೀತಿಯ ಆಹಾರವನ್ನು ನೀಡುವುದರಿಂದ ಮಗು ಹಾಲು ಸೇವನೆಯನ್ನು ಕಡಿಮೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಪರಿಣಾಮ ಮಗುವಿನ ಆರೋಗ್ಯ ಕುಂಠಿತವಾಗಿ ಬಿಡುತ್ತದೆ. ಮಗುವಿಗೆ ಬೆಳಿಗ್ಗೆ ಮತ್ತು ರಾತ್ರಿ ಸಮಯದಲ್ಲಿ ಆಗಾಗ್ಗೆ ಹಾಲುಣಿಸಬೇಕು. ಈ ಸಮಯದಲ್ಲಿ ಮಗುವಿಗೆ ಹಾಲಿನ ಅವಶ್ಯಕತೆಯಿರುತ್ತದೆ. ಹಾಗಾಗಿ ಮಗುವಿನ ಬೇಡಿಕೆಯನ್ನು ಅರಿತುಕೊಂಡು ಹಾಲನ್ನು ನೀಡಬೇಕಾಗುತ್ತದೆ. ತಾಯಂದಿರು ಹೆಚ್ಚಿನ ಸಮಯದವರೆಗೆ ಹಾಲುಣಿಸುವುದರಿಂದ ಉತ್ತಮ ಹಾಲು ಉತ್ಪಾದನೆಗೆ ಸಹಕಾರಿಯಾಗುತ್ತದೆ.

ಮಗುವಿಗೆ ಆರು ತಿಂಗಳ ಕಾಲ ಕಡ್ಡಾಯವಾಗಿ ಹಾಲನ್ನು ಮಾತ್ರ ನೀಡಬೇಕು. ಆ ನಂತರ ವೈದ್ಯರ ಸಲಹೆ ಪಡೆದು ಪೂರಕ ಆಹಾರಗಳನ್ನು ನೀಡಲು ಶುರು ಮಾಡಬಹುದು. ಮಗುವಿಗೆ ಎರಡು ವರ್ಷಗಳ ಕಾಲ ಹಾಲುಣಿಸಲು ಅಡ್ಡಿಯಿಲ್ಲ. ವೈದ್ಯರ ಪ್ರಕಾರ ಮಗು ಆಗಾಗ ಹಾಲನ್ನು ಹೀರಿಕೊಳ್ಳುವುದು, ಸ್ತನದಲ್ಲಿ ಹಾಲು ಸಂಪೂರ್ಣ ಖಾಲಿಯಾದ ಅನುಭವ ಇದೆಲ್ಲವೂ ಯಶಸ್ವಿ ಹಾಲುಣಿಸುವಿಕೆಯ ಅಂಶಗಳಂತೆ. ಇನ್ನು ಅನಾರೋಗ್ಯದಿಂದ ಬಳಲುವ ಅಥವಾ ಔಷಧಿ ಸೇವಿಸುವ ತಾಯಂದಿರು ವೈದ್ಯರು ಹಾಲು ನೀಡಬಾರದು ಎಂದು ಹೇಳುವ ತನಕ ಹಾಲುಣಿಸುವುದನ್ನು ನಿಲ್ಲಿಸಬಾರದು. ಒಂದು ವೇಳೆ ತಾತ್ಕಾಲಿಕವಾಗಿ ಹಾಲುಣಿಸುವುದನ್ನು ನಿಲ್ಲಿಸಿದ್ದರೆ ಮತ್ತೆ ವೈದ್ಯರ ಸಲಹೆ ಮೇರೆಗೆ  ಹಾಲುಣಿಸುವುದನ್ನು ಮುಂದುವರೆಸಬಹುದು.

ತಾಯಿಯ ಹಾಲು ಕುಡಿಸುವುದರಿಂದ ಮಗುವಿನ ಮೆದಳಿನ ಬೆಳವಣಿಗೆ ಮತ್ತು ದೀರ್ಘಾವಧಿಯ ಆರೋಗ್ಯ ಹೊಂದಲು ಸಹಾಯವಾಗುತ್ತದೆ. ಜತೆಗೆ ಸೋಂಕು ತಗಲುವ ಅಪಾಯ ಕಡಿಮೆಯಾಗುತ್ತದೆ. ಇಷ್ಟೇ ಅಲ್ಲದೆ ತಾಯಿಯಂದಿರ ಗರ್ಭಕೋಶದ ಪ್ರತ್ಯಾಕರ್ಷಣೆಗೂ ಸಹಕಾರಿಯಾಗುತ್ತದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಮಗುವಿಗೆ ಹಾಲುಣಿಸುವುದರಿಂದ ತಾಯಿ ಮಗುವಿನ ಸಂಪರ್ಕ ಮತ್ತು ಬಾಂಧವ್ಯ ವೃದ್ಧಿಯಾಗುವುದಕ್ಕೆ ಅವಕಾಶ ದೊರೆಯುತ್ತದೆ.

 

B.M.Lavakumar

 

admin
the authoradmin

Leave a Reply

Translate to any language you want