FoodLatest

ಸುಲಭವಾಗಿ ಮಾಡಬಹುದಾದ ಮೂರು ಬಾತ್ ಗಳು…ವಾಂಗಿಬಾತ್, ಮೆಂತ್ಯಸೊಪ್ಪು ಬಾತ್, ವೆಜಿಟಬಲ್ ಬಾತ್ ಹೀಗೆ ಮಾಡಿ…

ನಾವು ಸೇವಿಸುವ ಆಹಾರ ಪದಾರ್ಥದಲ್ಲಿ ಬಾತ್ ಕೂಡ ಒಂದಾಗಿದ್ದು, ಇದನ್ನು ಹಲವು ರೀತಿಯಲ್ಲಿ ತಯಾರಿಸಬಹುದಾಗಿದೆ. ಇಲ್ಲಿ ವಾಂಗಿಬಾತ್,  ಮೆಂತ್ಯಬಾತ್, ವೆಜಿಟಬಲ್ ಬಾತ್ ಗಳನ್ನು ಮಾಡುವ ವಿಧಾನದ ಬಗ್ಗೆ ತಿಳಿಸಿಕೊಡಲಾಗಿದೆ.

1-ಸುಲಭವಾಗಿ ವಾಂಗಿಬಾತ್ ಮಾಡಿಬಿಡಿ

ವಾಂಗಿಬಾತ್‌ನ್ನು ಸುಲಭವಾಗಿ ಮಾಡಬಹುದಾಗಿದೆ. ಈ ವಾಂಗಿಬಾತ್‌ನ್ನು ಹೇಗೆ ಮಾಡಬಹುದು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು: ಬದನೆಕಾಯಿ- ಚಿಕ್ಕ ಚೂರುಗಳು, ಬ್ಯಾಡಗಿ ಮೆಣಸಿನಕಾಯಿ- ನೂರು ಗ್ರಾಂ, ಗುಂಟೂರು ಮೆಣಸು- ಹತ್ತು, ಕೊತ್ತಂಬರಿ ಬೀಜ- ಒಂದು ಹಿಡಿ, ಉದ್ದಿನ ಬೇಳೆ- ಐವತ್ತು ಗ್ರಾಂ, ಕಡ್ಲೆಬೇಳೆ-ಮೂರು ಚಮಚ, ಚಕ್ಕೆ- ಚಿಕ್ಕದಾದ ಚೂರುಗಳು, ಗಸಗಸೆ- ಎರಡು ಚಮಚ, ಲವಂಗ-ಎರಡು, ಒಣಕೊಬ್ಬರಿ- ಒಂದು ಬಟ್ಟಲು.

ಮಾಡುವ ವಿಧಾನ: ಒಂದೆಡೆ ಅನ್ನವನ್ನು ಮಾಡಿಟ್ಟುಕೊಳ್ಳಿ. ಇನ್ನೊಂದೆಡೆ ಮೊದಲಿಗೆ  ಒಲೆಯ ಮೇಲೆ ಪಾತ್ರೆಯಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ನಿಧಾನ ಉರಿಯಲ್ಲಿ ಮೇಲೆ ಹೇಳಿದ ಪದಾರ್ಥಗಳನ್ನು ಹಾಕಿ ಹುರಿಯಿರಿ ಹೀಗೆ ಹುರಿಯುವಾಗ ಕೊನೆಯಲ್ಲಿ ಗಸಗಸೆ ಮತ್ತು ಕೊಬ್ಬರಿ ತುರಿ ಹಾಕಬೇಕು. ಹೀಗೆ ಹುರಿದ ಪದಾರ್ಥಗಳನ್ನು ಇಳಿಸಿಟ್ಟು ತಣ್ಣಗಾದ ಬಳಿಕ ಚೆನ್ನಾಗಿ ಮಿಕ್ಸ್ ಮಾಡಿಟ್ಟುಕೊಳ್ಳಬೇಕು.

ಕೊನೆಗೆ ಪಾತ್ರೆಯಲ್ಲಿ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿ ಅದು ಬಿಸಿಯಾಗುತ್ತಿದ್ದಂತೆಯೇ ಸಾಸಿವೆ ಹಾಗೂ ಕರಿಬೇವು ಹಾಕಿ ಬಾಡಿಸಿ ಬಳಿಕ ಅದಕ್ಕೆ ಬದನೆ ಕಾಯಿ ಚೂರುಗಳನ್ನು ಹಾಕಿ ಚೆನ್ನಾಗಿ ಎಣ್ಣೆಯಲ್ಲಿ ಬೇಯಿಸಬೇಕು. ಚೆನ್ನಾಗಿ ಬೆಂದ ಬಳಿಕ ಮೊದಲು ಮಾಡಿಟ್ಟ ಮಿಕ್ಸ್ ನ್ನು ಹಾಕಿ ತಿರುಗಿಸಿ ಅದಕ್ಕೆ ಅನ್ನವನ್ನು ಮಿಕ್ಸ್ ಮಾಡಿದರೆ ವಾಂಗಿಬಾತ್ ಸೇವಿಸಲು ರೆಡಿ.

2- ಮೆಂತ್ಯಸೊಪ್ಪು ಬಾತ್ ಹೀಗೆ ಮಾಡಿ

ಮೆಂತ್ಯ ಸೊಪ್ಪಿನ ಬಾತ್ ಆರೋಗ್ಯಕ್ಕೆ ಒಳ್ಳೆಯದಾಗಿದೆ. ಹಾಗಾದರೆ ಮೆಂತ್ಯ ಸೊಪ್ಪಿನ ಬಾತ್ ತಯಾರಿಸುವುದು ಹೇಗೆ ಎಂದು ಆಲೋಚಿಸುತ್ತಿದ್ದಿರಾ ಇಲ್ಲಿದೆ ಮಾಡುವ ವಿಧಾನ.

ಬೇಕಾಗುವ ಪದಾರ್ಥಗಳು: ಮೆಂತ್ಯ ಸೊಪ್ಪು- ಎರಡು ಕಟ್ಟು, ಬೆಳ್ಳುಳ್ಳಿ-ಎರಡು, ಮೆಣಸಿನಕಾಯಿ- ಹತ್ತು, ಕರಿಮೆಣಸು- ನಾಲ್ಕು, ಕಾಯಿತುರಿ- ಸ್ವಲ್ಪ, ಕೊತ್ತಂಬರಿಸೊಪ್ಪು- ಸ್ವಲ್ಪ, ಹಸಿಶುಂಠಿ- ಒಂದು ತುಂಡು, ಈರುಳ್ಳಿ- ಒಂದು,

ಮಾಡುವ ವಿಧಾನ: ಮೇಲಿನ ಪದಾರ್ಥಗಳಲ್ಲಿ ಮೆಂತ್ಯ ಸೊಪ್ಪನ್ನು ಹೊರತು ಪಡಿಸಿ ಉಳಿದ ಎಲ್ಲ ಮಸಾಲೆ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಟ್ಟುಕೊಳ್ಳಿ. ಮತ್ತೊಂದೆಡೆ ಹಾಕುವ ಅಕ್ಕಿಯ ಎರಡರಷ್ಟು ನೀರನ್ನು ಕುದಿಸಿಟ್ಟುಕೊಳ್ಳಿ. ಮೊದಲಿಗೆ ಕುಕ್ಕರ್‌ ನಲ್ಲಿ ಸ್ವಲ್ಪ ಎಣ್ಣೆ ಹಾಕಿ ನಂತರ ಸ್ವಲ್ಪ ಈರುಳ್ಳಿ ಚೂರು ಹಾಕಿ ಬಾಡಿಸಿ ಅದಕ್ಕೆ ಮೆಂತೆ ಸೊಪ್ಪನ್ನು ಹಾಕಿ ಚೆನ್ನಾಗಿ ಬಾಡಿಸಬೇಕು. ಇದಕ್ಕೆ ಚೂರು ಲವಂಗ, ಏಲಕ್ಕಿ ಪುಡಿಯನ್ನು ಸೇರಿಸಿ ಜತೆಗೆ ರುಬ್ಬಿಟ್ಟ ಮಸಾಲೆ ಪದಾರ್ಥಗಳನ್ನು ಹಾಕಿ ಬಳಿಕ ನೆನೆಸಿಟ್ಟ ಅಕ್ಕಿಯನ್ನು  ಹಾಕಬೇಕು. ಆ ನಂತರ (ಒಂದು ಕಪ್‌ ಗೆ ಎರಡು ಕಪ್‌ಗೆ ಎರಡು ಕಪ್‌ ನಂತೆ)  ಬಿಸಿ ನೀರನ್ನು  ಹಾಕಿ ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ ಎರಡು ವಿಷಲ್ ಕೂಗಿಸಿ ಇಳಿಸಿದರೆ ಮೆಂತ್ಯ ಸೊಪ್ಪಿನ ಬಾತ್ ಸವಿಯಲು ಸಿದ್ಧವಾಗಲಿದೆ. 

3- ಸಿಂಪಲ್ ವೆಜಿಟಬಲ್ ಬಾತ್

ವೆಜಿಟಬಲ್ ಬಾತ್ ಮಾಡೋದು ಬಲು ಸುಲಭ. ಇದು ರುಚಿಯಾಗಿರುತ್ತದೆಯಲ್ಲದೆ, ಆ ಮೂಲಕ ತರಕಾರಿಗಳು ದೇಹಕ್ಕೆ ಆರೋಗ್ಯ ನೀಡುವಲ್ಲಿಯೂ ಸಹಕಾರಿಯಾಗುತ್ತವೆ. ಇಷ್ಟಕ್ಕೂ ರುಚಿಯಾದ ಸಿಂಪಲ್ ವೆಜಿಟಬಲ್ ಬಾತ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗುತ್ತಿದೆ.

ಬೇಕಾಗುವ ಪದಾರ್ಥಗಳು: ಅಕ್ಕಿ- ಒಂದು ಪಾವು, ಕಾಯಿ ತುರಿ- ಅರ್ಧ ಬಟ್ಟಲು, ಹಸಿಮೆಣಸಿನಕಾಯಿ- ಮೂರು, ಶುಂಠಿ, ಬೆಳ್ಳುಳ್ಳಿ ಪೇಸ್ಟ್- ಮೂರು ಚಮಚ, ಚಕ್ಕೆ- ಸ್ವಲ್ಪ, ಮೊಗ್ಗು- ಸ್ವಲ್ಪ, ಧನಿಯಾ- ಸ್ವಲ್ಪ, ಲವಂಗ- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಹಸಿಬಟಾಣಿ- ಐವತ್ತು ಗ್ರಾಂ, ಈರುಳ್ಳಿ- ಒಂದು, ಕರಿಬೇವು- ಸ್ವಲ್ಪ, ಬೀನ್ಸ್- ನೂರು ಗ್ರಾಂ, ಕ್ಯಾರೆಟ್- ನೂರು ಗ್ರಾಂ, ಗೆಡ್ಡಕೋಸು- ನೂರು ಗ್ರಾಂ, ಟೊಮ್ಯಟೋ- ಎರಡು, ಕೊತ್ತಂಬರಿ ಸೊಪ್ಪು- ಅರ್ಧಕಟ್ಟು, ತುಪ್ಪ- ಎರಡುಚಮಚ.

ಮಾಡುವ ವಿಧಾನ: ಮೊದಲಿಗೆ ಈರುಳ್ಳಿ, ಸೇರಿದಂತೆ ತರಕಾರಿಗಳನ್ನು ಹಚ್ಚಿಟ್ಟುಕೊಳ್ಳಬೇಕು ಮತ್ತೊಂದೆಡೆ ಮಸಾಲೆ ಪದಾರ್ಥಗಳಾದ ಕಾಯಿತುರಿ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಇದರ ಜತೆಗೆ ಚಕ್ಕೆ, ಮೊಗ್ಗು, ದನಿಯಾ ಲವಂಗವನ್ನು (ಎಣ್ಣೆಯಲ್ಲಿ ಸ್ವಲ್ಪ ಬಿಸಿ ಮಾಡಿಕೊಂಡು) ಅದನ್ನು ಮಿಕ್ಸಿಯಲ್ಲಿ ರುಬ್ಬಿಟ್ಟುಕೊಳ್ಳಬೇಕು.

ಇದಾದ ನಂತರ  ಕುಕ್ಕರ್‌ನಲ್ಲಿ ತುಪ್ಪ ಹಾಕಿ ಅದರಲ್ಲಿ ಕರಿಬೇವು, ಬಟಾಣಿ ಹಾಗೂ ಈರುಳ್ಳಿ, ಬೀನ್ಸ್, ಕ್ಯಾರೆಟ್, ಗೆಡ್ಡೆಕೋಸು, ಟೊಮ್ಯಾಟೋ ಹಾಕಿ ಚೆನ್ನಾಗಿ ಬಾಡಿಸಬೇಕು. ಆ ನಂತರ ರುಬ್ಬಿರುವ ಮಸಾಲೆಯನ್ನು ಹಾಕಬೇಕು. ಬಳಿಕ ಅಕ್ಕಿ ಹಾಕಿ ಅಗತ್ಯದಷ್ಟು ನೀರು ಹಾಕಿ ಒಂದೆರಡು ವಿಶಲ್ ಕೂಗಿಸಿ ಇಳಿಸಿ ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿದರೆ ವೆಜಿಟಬಲ್ ಬಾತ್ ರೆಡಿ.

 

admin
the authoradmin

Leave a Reply

Translate to any language you want