LatestNationalPolitical

ಬಿಹಾರದಲ್ಲಿ ವಿಧಾನಸಭಾ ಚುನಾವಣೆಯಾದರೆ ರಾಜ್ಯದ ಸಿಎಂ-ಡಿಸಿಎಂಗೆ ಟೆನ್ಷನ್ ಏಕೆ? ಹೈಕಮಾಂಡ್ ಗೆ ಕರ್ನಾಟಕವೇ ಅಕ್ಷಯ ಪಾತ್ರೆ!

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಅನುದಾನಗಳನ್ನು ಹೊಂದಿಸುವುದರಲ್ಲಿಯೇ ಹೈರಾಣವಾಗಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ಮುಂದಿನ ಬಿಹಾರದ ವಿಧಾನಸಭಾ ಚುನಾವಣೆಗೂ ಸಂಪನ್ಮೂಲದ ಕ್ರೋಢೀಕರಣ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂಬ ಮಾತುಗಳು ರಾಜಕೀಯದ ಪಡಸಾಲೆಯಲ್ಲಿ ಬಹುಚರ್ಚಿತ ವಿಷಯವಾಗುತ್ತಿದೆ. ಸದ್ಯ ಆಡಳಿತ ಪಕ್ಷದೊಳಗೆ ಅಸಮಾಧಾನದ ಹೊಗೆ ಎದ್ದಿದ್ದು, ಬೊಕ್ಕಸದಲ್ಲಿ ಹಣವಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಹೀಗಾಗಿ ಚುನಾವಣೆಗೆ ಹಣ ಹೊಂದಿಸುವುದು ಸರ್ಕಾರಕ್ಕೆ ಸವಾಲ್ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಈಗಾಗಲೇ ಒತ್ತಡದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅವರು ಒಂದೆಡೆ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಬೇಕು.. ಮತ್ತೊಂದಡೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು.. ಇಷ್ಟೇ ಅಲ್ಲದೆ ಮುಂದಿನ ಬಿಹಾರದ ವಿಧಾನಸಭಾ ಚುನಾವಣೆಗೂ ಹೈಕಮಾಂಡ್ ಗೆ ಇಲ್ಲಿಂದಲೇ ಸಂಪನ್ಮೂಲ ಕ್ರೋಢೀಕರಿಸಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಎಲ್ಲವನ್ನು ಒಟ್ಟೊಟ್ಟಿಗೆ ಮಾಡಬೇಕಾದ ಅನಿವಾರ್ಯತೆಗೆ ಸಿಕ್ಕಿ ಒದ್ದಾಡಬೇಕಾಗಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಆರ್ಥಿಕ ಮುಗ್ಗಟ್ಟು ಕಾಣಿಸುತ್ತಿದೆ. ಮುಂದಿನ ದಿನಗಳಲ್ಲಿ ತೈಲಬೆಲೆ ಗಗನಕ್ಕೇರಿದರೆ ಆಗ ಕೆಎಸ್ ಆರ್ ಟಿಸಿ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲದಂತಾಗಿದೆ.

ಹಾಗೆನೋಡಿದರೆ ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದರೂ ಕರ್ನಾಟಕ ಮತ್ತು ತೆಲಂಗಾಣ ಹೊರತು ಪಡಿಸಿದರೆ ಬೇರೆಲ್ಲೂ ಅಧಿಕಾರದಲ್ಲಿಲ್ಲ. ಹೀಗಾಗಿ ಪಕ್ಷಕ್ಕೆ ನಿಧಿ ಸಂಗ್ರಹವನ್ನು ಕರ್ನಾಟಕದಿಂದಲೇ ಮಾಡಬೇಕಾಗುತ್ತದೆ. ತೆಲಂಗಾಣದಿಂದ ಹೆಚ್ಚಿನ ನಿರೀಕ್ಷೆ ಮಾಡುವುದು ಕಷ್ಟವೇ.. ಅಲ್ಲಿ ಗ್ಯಾರಂಟಿ ಯೋಜನೆಗಳನ್ನು ತಂದು ಅದರ ಪರಿಣಾಮ ಏನಾಗಿದೆ ಎಂಬುದರ ಬಗ್ಗೆ ಸ್ವತಃ ಸಿಎಂ ರೇವಂತ್ ರೆಡ್ಡಿಯೇ ಕಾರ್ಯಕ್ರಮವೊಂದರಲ್ಲಿ ಅಳಲು ತೋಡಿಕೊಂಡಿದ್ದನ್ನು ಮಾಧ್ಯಮಗಳಲ್ಲಿ ಜನಸಾಮಾನ್ಯರು ನೋಡಿದ್ದಾರೆ. ಹೀಗಿರುವಾಗ ಅಲ್ಲಿಂದ ಹೆಚ್ಚಿನ ಸಂಪನ್ಮೂಲಗಳನ್ನು ನಿರೀಕ್ಷಿಸುವುದು ಹೈಕಮಾಂಡ್ ಗೆ ಕಷ್ಟವಾಗಿದೆ.

ಸದ್ಯಕ್ಕೆ ಹೈಕಮಾಂಡ್ ಕರ್ನಾಟಕದತ್ತ ಆಸೆಕಣ್ಣಿನಿಂದ ನೋಡುತ್ತಿದೆ. ಅದರ ಒತ್ತಡಗಳು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಸಿದ್ದರಾಮಯ್ಯರವರ ಮೇಲೆ ಬೀಳುತ್ತಿದೆ. ಬಿಹಾರದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿ ಗೆಲ್ಲುವುದು ಸಾಧ್ಯವಾಗದ ಮಾತಾಗಿದೆ. ಹೀಗಾಗಿ ಆರ್ ಜೆಡಿಯ ಲಾಲ್ ಪ್ರಸಾದ್ ಯಾದವ್ ಅವರ ಸಖ್ಯ ಅನಿವಾರ್ಯವಾಗಿದೆ. ಬಿಜೆಪಿ ಮತ್ತು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಈಗಾಗಲೇ ಅಲ್ಲಿ ಆಡಳಿತ ನಡೆಸುತ್ತಿದೆ. ಜೆಡಿಯುನ ಮುಖ್ಯಸ್ಥ ಸಿಎಂ ನಿತೀಶ್ ಕುಮಾರ್ ಕಾಂಗ್ರೆಸ್ ಜತೆಗೆ ಕೈಜೋಡಿಸುವುದಂತು ಸಾಧ್ಯವಾಗದ ಮಾತಾಗಿದೆ.

ಈ ಹಿಂದೆ ಬಿಜೆಪಿ ಸಖ್ಯ ತೊರೆದು ಕಾಂಗ್ರೆಸ್ ಗೆ ಬೆಂಬಲ ನೀಡಿ ಕಾಂಗ್ರೆಸ್ ಮತ್ತು ಆರ್ ಜೆಡಿ ಆಡಳಿತ ನಡೆಸುವಂತೆ ಮಾಡಿದ್ದ ನಿತೀಶ್ ಕುಮಾರ್ ಅದರ ಹಿಂದೆ ಪ್ರಧಾನಿಯಾಗುವ ಕನಸು ಇಟ್ಟುಕೊಂಡಿದ್ದರು. ಹೀಗಾಗಿ ಅವತ್ತು ಬಿಜೆಪಿ ಮೈತ್ರಿಯನ್ನು ಮೊಟಕು ಗೊಳಿಸಿದ್ದರು. ಆದರೆ ಇವತ್ತಿನ ಪರಿಸ್ಥಿತಿ ಆ ರೀತಿಯಿಲ್ಲ. ಅದಕ್ಕಿಂತ ಹೆಚ್ಚಾಗಿ ಈ ಹಿಂದೆ ಪ್ರಧಾನಿಯಾಗುವ ಬಯಕೆಯಿಂದ ಇಂಡಿ ಒಕ್ಕೂಟ ರಚನೆ ಮಾಡಿಸಿದ್ದ ಅವರು ತನ್ನನ್ನು ಪ್ರಧಾನಿ ಅಭ್ಯರ್ಥಿ ಮಾಡಲ್ಲ ಎಂಬುದು ಗೊತ್ತಾಗುತ್ತಿದ್ದಂತೆಯೇ ಅಲ್ಲಿಂದ ಕಾಲ್ಕಿತ್ತಿದ್ದರು. ನಂತರ ಕೈಕಾಲು ಹಿಡಿದು  ಬಿಜೆಪಿ ಸಖ್ಯ ಬೆಳೆಸಿ ಮುಖ್ಯಮಂತ್ರಿಯಾದರು.

ಸದ್ಯ ಬಿಹಾರದಲ್ಲಿ ಎನ್ ಡಿಎ ಗಟ್ಟಿಯಾಗಿದೆ. ಈಗಾಗಲೇ ಹಲವು ಬಾರಿ ಪ್ರಧಾನಿ ನರೇಂದ್ರಮೋದಿ ಬಿಹಾರದಲ್ಲಿ  ರೋಡ್ ಶೋ ಸೇರಿದಂತೆ ಬಹಿರಂಗ ಪ್ರಚಾರ ನಡೆಸಿದ್ದಾರೆ. ಆ ಮೂಲಕ ಅಲ್ಲಿ ಬಿಜೆಪಿಯನ್ನು ಪ್ರಬಲಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಬಿಜೆಪಿ ಸೇರಿದಂತೆ ಜೆಡಿಯು ಜಂಟಿಯಾಗಿ ಚುನಾವಣೆಗೆ ಈಗಿನಿಂದಲೇ  ತಯಾರಿ ಆರಂಭಿಸಿವೆ. ಕಾಂಗ್ರೆಸ್ ಇನ್ನೂ ಕೂಡ ಆ ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರಕ್ಕಿಳಿದಂತೆ ಕಾಣಿಸುತ್ತಿಲ್ಲ. ಚುನಾವಣೆ ಹತ್ತಿರವಾದಂತೆಯೇ ಕಾಂಗ್ರೆಸ್ ಮತ್ತು ಆರ್ ಜೆಡಿ ಸ್ಥಾನ ಹೊಂದಾಣಿಕೆ ಹೇಗೆ ಮಾಡುತ್ತವೆ ಎನ್ನುವುದು ಅಷ್ಟೇ ಮುಖ್ಯವಾಗುತ್ತದೆ. ವಿಧಾನಸಭಾ ಚುನಾವಣೆಯಾಗಿರುವುದರಿಂದ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದರೆ ಪ್ರಾದೇಶಿಕ ಪಕ್ಷವಾಗಿರುವ ಆರ್ ಜೆಡಿ ದುರ್ಬಲವಾಗುವ ಭಯವೂ ಇಲ್ಲದಿಲ್ಲ.

ಕಾಂಗ್ರೆಸ್ ಬಿಹಾರ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಬೇಕಾದರೆ ಕರ್ನಾಟಕ ಅಗತ್ಯತೆ ಇದ್ದೇ ಇದೆ. ಪ್ರಚಾರಕ್ಕೆ ನಾಯಕರು ಬೇಕು ಹಾಗೆಯೇ ಸಂಪನ್ಮೂಲವೂ ಇಲ್ಲಿಂದಲೇ ರವಾನೆಯಾಗಬೇಕಿದೆ. ಈಗ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಬಿಹಾರ ಚುನಾವಣೆ ಸವಾಲ್ ಆಗಿ ಪರಿಣಮಿಸಿದೆ. ಹೈಕಮಾಂಡ್ ಕೃಪೆ ತೋರಬೇಕಾದರೆ ಇಲ್ಲಿಂದಲೇ ಸ್ವಾಮಿ ಸೇವೆ ಮಾಡಬೇಕಾಗಿದೆ. ಸಾಧ್ಯವಿಲ್ಲ ಎಂದು ಕೈಕಟ್ಟಿ ಕೂರುವ ಪರಿಸ್ಥಿತಿಯೂ ಇಲ್ಲದಾಗಿದೆ. ಒಂದು ವೇಳೆ ಬಿಹಾರದ ಚುನಾವಣೆ ಕಡೆಗೆ ಹೆಚ್ಚಿನ ಒತ್ತು ನೀಡಿದರೆ ಸ್ವಪಕ್ಷದ ಶಾಸಕರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಹೀಗಾಗಿ ಎಲ್ಲವನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

 

B M Lavakumar

admin
the authoradmin

Leave a Reply

Translate to any language you want