CrimeLatest

ಮೈಸೂರಲ್ಲಿ ಬಯಲಾಯ್ತು ಭ್ರೂಣಪತ್ತೆ/ಹತ್ಯೆಯ ಮಹಾಜಾಲ… ಇದರ ಕಿಂಗ್ ಪಿನ್ ಯಾರು ಗೊತ್ತಾ?

ಭ್ರೂಣಪತ್ತೆ ಕಾನೂನಿನ ಪ್ರಕಾರ ಮಹಾ ಅಪರಾಧವಾಗಿದ್ದು, ಕಾನೂನು ಉಲ್ಲಂಘನೆಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂಬ ಎಚ್ಚರಿಕೆಯ ನಾಮಫಲಕ ಸಾಮಾನ್ಯವಾಗಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನೇತು ಹಾಕಲಾಗಿರುತ್ತದೆ. ಆದರೆ ಭ್ರೂಣ ಪತ್ತೆ ಮತ್ತು ಹತ್ಯೆಯೇ ಮಹಾದಂಧೆಯಾಗಿ ಕೆಲವರ ಜೇಬು ತುಂಬುತ್ತಿದೆ. ಮತ್ತು ಅಂತಹ ದಂಧೆ ನಡೆಸುವವರಿಗೆ ಐಷಾರಾಮಿ ಬದುಕನ್ನು ಕಟ್ಟಿಕೊಳ್ಳುತ್ತಿದೆ ಎಂಬ ವಿಚಾರ ಗುಟ್ಟಾಗಿಯೇನು ಉಳಿದಿಲ್ಲ. ಇದು ಆಗೊಮ್ಮೆ, ಈಗೊಮ್ಮೆ ಅಲ್ಲೊಂದು, ಇಲ್ಲೊಂದು ಎಂಬಂತೆ ಬೆಳಕಿಗೆ ಬರುತ್ತಿದೆ ವಿನಃ ಉಳಿದಂತೆ ಎಲ್ಲವೂ ಗೌಪ್ಯವಾಗಿಯೇ ಉಳಿದು ಹೋಗುತ್ತಿದೆ.

ವೈದ್ಯಕೀಯ ಲೋಕದಲ್ಲಿ ಕಾನೂನನ್ನು ಮೀರಿ ಅಡ್ಡದಾರಿಯಿಂದ ಹಣ ಸಂಪಾದಿಸಬಹುದಾದ ಮಾರ್ಗದಲ್ಲಿ ಭ್ರೂಣಪತ್ತೆ ಮತ್ತು ಹತ್ಯೆ ಒಂದಾಗಿದ್ದು, ಇದನ್ನು ಕಾನೂನು ಪ್ರಕಾರ ನಿಷೇಧಿಸಿ ಕಠಿಣ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಲಾಗುತ್ತಿದ್ದರೂ ಅಲ್ಲಲ್ಲಿ ನಡೆಯುತ್ತಲೇ ಇದ್ದು, ಬೆಳಕಿಗೆ ಬಾರದ ಕಾರಣಗಳಿಂದಾಗಿ ಬಹುತೇಕ ಪ್ರಕರಣಗಳು ಮುಚ್ಚಿ ಹೋಗುತ್ತಿವೆ. ಆದರೆ ಕೆಲವರು  ಇದನ್ನೇ ದಂಧೆಯನ್ನಾಗಿ ಮಾಡಿಕೊಂಡು ಬದುಕನ್ನು ದುಂಡಗೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಹನಿಟ್ರ್ಯಾಪ್… ಇದು ಮಾಯಾಂಗನೆಯರ ವಿಷವರ್ತುಲ…

ಹಳ್ಳಿಯಿಂದ ಪಟ್ಟಣದ ತನಕ ಬಹುತೇಕ ಜನರು ಗಂಡು ಮಗು ಬೇಕೆಂದು ಬಯಸುತ್ತಿದ್ದು, ಅದಕ್ಕಾಗಿ ಭ್ರೂಣಪತ್ತೆ ಮಾಡುವವರನ್ನು ಹುಡುಕುತ್ತಿರುತ್ತಾರೆ. ಅಂತಹವರಿಗೆ ಭ್ರೂಣ ಪತ್ತೆ ಮಾಡಿ ವಿಷಯ ತಿಳಿಸುವ ಮತ್ತು ಭ್ರೂಣ ಹತ್ಯೆ ಮಾಡುವ ಕೆಲಸಕ್ಕೆ ದಂಧೆಕೋರರು ಮುಂದಾಗುತ್ತಾರೆ. ಹಾಗೆಂದು ಇವರು ಸುಲಭವಾಗಿ ಕರೆದುಕೊಂಡು ಹೋಗಿ ಮಾಡುವುದಿಲ್ಲ. ಭ್ರೂಣಪತ್ತೆ ಮಾಡುವ ಮುನ್ನ ಯಾರು ಪತ್ತೆ ಮಾಡಲು ಬಂದಿದ್ದಾರೋ ಅವರನ್ನು ಮೂರರಿಂದ ನಾಲ್ಕು ಲೊಕೇಷನ್ ಗಳಿಗೆ ಅಲೆದಾಡಿಸಿರುತ್ತಾರೆ. ಪೂರ್ಣ ನಂಬಿಕೆ ಬಂದ ಬಳಿಕವಷ್ಟೇ ಕೊನೆಗೆ ತಾವು ಪತ್ತೆ ಮಾಡುವ ಸ್ಥಳಕ್ಕಿಂತ ಸ್ವಲ್ಪ ದೂರದ ಸ್ಥಳಕ್ಕೆ ಬರುವಂತೆ ಹೇಳುತ್ತಾರೆ.   ಬಳಿಕ ಅಲ್ಲಿಂದ ಮಹಿಳೆಯನ್ನು ಮಾತ್ರ ಕರೆದೊಯ್ದು ಮತ್ತೆ ಅದೇ ಸ್ಥಳಕ್ಕೆ ಕರೆದುಕೊಂಡು ಬಿಟ್ಟು ಹೋಗುತ್ತಾರೆ. ಹೀಗೆ ತಾವು ದಂಧೆ ನಡೆಸುವ ಸ್ಥಳವನ್ನು ತುಂಬಾ ಗೌಪ್ಯವಾಗಿಡುತ್ತಾರೆ.

ನ್ಯಾಯವನ್ನು ಮೀರಿದ ಯಾವುದೇ ಕೆಲಸ ಮಾಡಿದರೂ ಅದಕ್ಕೆ ಒಂದಲ್ಲ ಒಂದು ದಿನ ಕಂದಾಯ ಕಟ್ಟಲೇ ಬೇಕಾಗುತ್ತದೆ ಎಂಬುದಕ್ಕೆ ಇದೀಗ ಮೈಸೂರು ಹೊರವಲಯದಲ್ಲಿ ನಡೆಯುತ್ತಿದ್ದ ಭ್ರೂಣಪತ್ತೆ ಮತ್ತು ಹತ್ಯೆ ಪ್ರಕರಣ ಸಾಕ್ಷಿಯಾಗಿದೆ. ಅಷ್ಟೇ ಅಲ್ಲದೆ ಮುಖ್ಯಮಂತ್ರಿಗಳ ತವರಿನಲ್ಲಿಯೇ ಇಂತಹದೊಂದು ಕೃತ್ಯ ನಡೆಯುತ್ತಿತ್ತಾ? ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಎದ್ದಿದೆ. ಮಂಡ್ಯದ ನಂತರ ಭ್ರೂಣಪತ್ತೆ ಮತ್ತು ಹತ್ಯೆ ದಂಧೆ ಮೈಸೂರು ಕಡೆಗೆ ಹಬ್ಬಿದ್ದು ಅಚ್ಚರಿ ಮೂಡಿಸಿದೆ. ಆದರೆ ಇಲ್ಲಿ ಮುಖ್ಯವಾಗಿ ಹೇಳಬೇಕೆಂದರೆ ಮಂಡ್ಯಕ್ಕೆ ಮುಂದೆ ಇಲ್ಲಿಯೂ ನಡೆಯುತ್ತಿತ್ತು. ಆದರೆ ಗೌಪ್ಯವಾಗಿತ್ತು ಅಷ್ಟೇ.. ಮೈಸೂರು ಹೊರವಲಯದ ಬನ್ನೂರು ರಸ್ತೆಯ ಹನುಗನಹಳ್ಳಿಯಲ್ಲಿ ಫಾರಂಹೌಸ್ ನಡೆಯುತ್ತಿದ್ದರಿಂದ ಯಾರಿಗೂ ಅನುಮಾನ ಬಂದಿರಲಿಲ್ಲ.

ಇದನ್ನೂ ಓದಿ :  ಫೇಸ್ ಬುಕ್ ಪ್ರೇಮ.. ಪ್ರಣಯ… ಪ್ರಾಣ ತೆಗೆಯಿತು!

ಇಲ್ಲಿನ ಫಾರಂಹೌಸ್ ನಲ್ಲಿ ಮಹಿಳೆಯರನ್ನು ಕರೆತಂದು ಭ್ರೂಣಪತ್ತೆ ಮತ್ತು ಹತ್ಯೆ ಮಾಡುತ್ತಿದ್ದರೂ ಯಾರಿಗೂ ಯಾವುದೇ ರೀತಿಯ ಸಂಶಯ ಬಂದಿರಲಿಲ್ಲ. ಆದರೆ ಈ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ  ಮೈಸೂರು ಮತ್ತು ಮಂಡ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ದೀಪಾವಳಿ ಹಬ್ಬದಂದು(ಅ.22) ದಾಳಿ ನಡೆಸಿದ್ದು ಭ್ರೂಣಪತ್ತೆ ಮತ್ತು ಹತ್ಯೆ ಜಾಲವೊಂದನ್ನು ಬಯಲು ಮಾಡಿದ್ದಾರೆ. ಈ ದಂಧೆಯ ಹಿನ್ನಲೆಯನ್ನು  ನೋಡಿದ್ದೇ ಆದರೆ ಇದರ ಕಿಂಗ್ ಪಿನ್ ಶ್ಯಾಮಲ ಎಂದು ಹೇಳಲಾಗಿದೆ.

ಈಕೆ ಬಿಎಸ್ಸಿ ನರ್ಸಿಂಗ್ ಮಾಡಿದ್ದು, ನರ್ಸ್ ಆಗಿ ಕೆಲಸ ಮಾಡಬೇಕಾದ ಈಕೆ ಸದ್ಯ ಮೈಸೂರು ಜಿಲ್ಲೆಯ ಬನ್ನೂರಿನಲ್ಲಿ ಎಸ್ ಕೆ ಹಾಸ್ಪಿಟಲ್ ಮತ್ತು ಡಯಾಗ್ನಾಸ್ಟಿಕ್  ಸೆಂಟರ್ ತೆರೆದು ಡಾ.ಶ್ಯಾಮಲ ಆಗಿ ಗುರುತಿಸಿಕೊಂಡಿದ್ದಾಳೆ. 2019ರಿಂದ ಆರಂಭವಾಗಿರುವ ಈಕೆಯ ನರ್ಸಿಂಗ್ ಹೋಂನಲ್ಲಿ ನಡೆಯುತ್ತಿದ್ದದ್ದು ಭ್ರೂಣ ಹತ್ಯೆ ಎಂಬುದು ಗೊತ್ತಾಗಿದೆ. ಈಕೆಯ ಆಸ್ಪತ್ರೆ ಬನ್ನೂರು ಮುಖ್ಯ ರಸ್ತೆಯಲ್ಲಿದ್ದು 15 ಬೆಡ್‌ಗಳನ್ನು ಹೊಂದಿದೆ. ಇದುವರೆಗೆ 200ಕ್ಕೂ ಹೆಚ್ಚು ಭ್ರೂಣಹತ್ಯೆ ನಡೆದಿರಬಹುದು ಎಂದು ಹೇಳಲಾಗಿದೆ. 

ಇದನ್ನೂ ಓದಿ : ಭಾರತಕ್ಕೆ ಬಾಂಗ್ಲಾ-ನೇಪಾಳಿ ಹುಡ್ಗೀರ್ ಬರೋದ್ಯಾಕೆ?…

ಶ್ಯಾಮಲಾಗೆ ತಮ್ಮ ಗೋವಿಂದರಾಜ್ ಸಾಥ್ ನೀಡುತ್ತಿದ್ದು, ದಲ್ಲಾಳಿ ಪುಟ್ಟರಾಜು ಮೂಲಕ ಗಿರಾಕಿಗಳನ್ನು ಸ್ಕ್ಯಾನಿಂಗ್ ಕೇಂದ್ರಕ್ಕೆ ಕರೆಸುತ್ತಿದ್ದರು. ದಲ್ಲಾಳಿಗಳ ಮೂಲಕ ಬಂದವರಿಗೆ ಮಾತ್ರ ಭ್ರೂಣ ಪತ್ತೆ ಮಾಡುತ್ತಿದ್ದರು. ಇದಕ್ಕಾಗಿ ಅವರು ಪಡೆಯುತ್ತಿದ್ದದ್ದು 25 ರಿಂದ 35 ಸಾವಿರ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಭ್ರೂಣಪತ್ತೆ ಮಾಡಿದರೆ ಅದು ಬೇರೆಯವರಿಗೆ ಗೊತ್ತಾಗಿ ಬಿಡುತ್ತದೆ ಎಂಬ ಕಾರಣಕ್ಕಾಗಿ ಕಾರಿನಲ್ಲಿ ಸ್ಕ್ಯಾನಿಂಗ್ ಮಿಷನ್ ಕೊಂಡೊಯ್ದು ಹನುಗನಹಳ್ಳಿಯಲ್ಲಿ ಫಾರಂಹೌಸ್ ನಲ್ಲಿ ಮಹಿಳೆಯರನ್ನು ಕರೆಯಿಸಿಕೊಂಡು ಅಲ್ಲಿ ಭ್ರೂಣಪತ್ತೆ ಮಾಡುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಆರೋಗ್ಯಾಧಿಕಾರಿಗಳಿಗೆ ಬಂದ ಹಿನ್ನಲೆಯಲ್ಲಿ ಮಹಿಳೆಯೊಬ್ಬರನ್ನು ಮುಂದೆ ಬಿಟ್ಟು ಆಕೆಯ ಮೂಲಕ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಯಾವುದೇ ಕಾರಣಕ್ಕೂ ಯಾರಿಗೂ ಯಾವುದೇ ಅನುಮಾನ ಬಾರದಂತೆ ನೋಡಿಕೊಳ್ಳಲಾಗಿತ್ತು. ಕಾರ್ಯಾಚರಣೆಗಿಳಿದ ಪಿಸಿಪಿಎನ್ ಡಿಟಿ ಉಪನಿರ್ದೇಶಕ ವಿವೇಕ್ ದೊರೈ, ಮಂಡ್ಯ ಡಿಹೆಚ್ಒ ಮೋಹನ್ ಕುಮಾರ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ, ಮೈಸೂರು ಡಿಹೆಚ್ಒ ಡಾ. ಪಿ.ಸಿ.ಕುಮಾರಸ್ವಾಮಿ ರೇಡಿಯೊಲಾಜಿಸ್ಟ್ ವಿಜಯಶರಧಿ, ಸಿಬ್ಬಂದಿ ಅನಿಲ್ ಪಿ.ಥಾಪಸ್, ಎನ್.ಅರುಣ್ ಕುಮಾರ್, ಬಿ.ಮಂಗಳಾ, ಪುಟ್ಟಸಿದ್ದಮ್ಮ ಎಂಬುವರನ್ನೊಳಗೊಂಡ ತಂಡ ಹನುಗನಹಳ್ಳಿಯಲ್ಲಿರುವ ಫಾರಂಹೌಸ್ ಮೇಲೆ ದಾಳಿ ಮಾಡಿತ್ತು.

ಇದನ್ನೂ ಓದಿ : ಮಗಳು ಮನೆ ಬಿಟ್ಟಳು.. ಹೆತ್ತವರು ಹೆಣವಾದರು..

ಇದುವರೆಗೆ ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ಭ್ರೂಣಪತ್ತೆ ದಂಧೆ ನಡೆಸುತ್ತಿದ್ದ ದಂಧೆಕೋರರು ಒಂದು ಕ್ಷಣ ಬೆರಗಾಗಿ ಬಿಟ್ಟಿದ್ದರು. ಇಡೀ ಮನೆಯನ್ನು ಸುತ್ತುವರೆದ ತಂಡಕ್ಕೆ ಮನೆಯಲ್ಲಿ ಸ್ಕ್ಯಾನಿಂಗ್ ಮಿಷಿನ್, ನಗದು ಹಣ, ನಾಲ್ಕು ಮಂದಿ ಗರ್ಭಿಣಿಯರು, ಅಲ್ಲದೆ ಇಂಜೆಕ್ಷನ್ ಸಿರಿಂಜ್ ಸೇರಿದಂತೆ ಹಲವು ವೈದ್ಯಕೀಯ ಸಾಧನಗಳು ಪತ್ತೆಯಾಗಿದ್ದವು.  ಈ ಸಂಬಂಧ ಮೈಸೂರಿನ ಶ್ಯಾಮಲ, ಕಾರ್ತಿಕ್, ಸ್ವಾಮಿ, ಗೋವಿಂದರಾಜು, ಕೆ.ಸಾಲುಂಡಿಯ ಶಿವಕುಮಾರ್, ಪುಟ್ಟರಾಜು ಹಾಗೂ ಕೆ.ಆರ್.ನಗರದ ಹರೀಶ್ ನಾಯಕ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಏಳು ಜನರ ಪೈಕಿ ಇಬ್ಬರು ನಾಪತ್ತೆಯಾಗಿದ್ದು, ಉಳಿದವರನ್ನು ವಶಕ್ಕೆ ಪಡೆಯಲಾಗಿದೆ.

ವಿಚಾರಣೆ ವೇಳೆ ಶ್ಯಾಮಲ ಈ ದಂಧೆಯ ಕಿಂಗ್ ಪಿನ್ ಎಂಬುದು ತಿಳಿದು ಬಂದಿದೆ. ಅಲ್ಲದೆ ಆಕೆಗೆ ಸೋದರ ಗೋವಿಂದರಾಜು ಸಾಥ್ ನೀಡುತ್ತಿದ್ದನು ಪುಟ್ಟರಾಜು ಸೇರಿದಂತೆ ಹಲವರು ಗರ್ಭಿಣಿ ಮಹಿಳೆಯರನ್ನು ಕರೆತರುವ ಕೆಲಸ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ. ಇವರ ವಿರುದ್ಧ  ವರುಣಾ ಪೊಲೀಸ್ ಠಾಣೆಯಲ್ಲಿ ಹೆರಿಗೆ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

 ಇದನ್ನೂ ಓದಿ :  ಜನ ಸ್ಪಾಗಳನ್ನು ಅನುಮಾನದಿಂದ ನೋಡುತ್ತಿರುವುದೇಕೆ?

ಒಟ್ಟಾರೆಯಾಗಿ ಹೇಳಬೇಕೆಂದರೆ ಭ್ರೂಣಪತ್ತೆ ಪ್ರಕರಣಗಳು ಎಲ್ಲೆಡೆ ನಡೆಯುತ್ತಿದ್ದು, ಮಂಡ್ಯ ಮತ್ತು ಮೈಸೂರು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದೆಯಷ್ಟೆ… ಇಂತಹ ಕೃತ್ಯಗಳು ಇನ್ನೆಷ್ಟು ನಡೆಯುತ್ತಿವೆಯೋ? ಆರೋಗ್ಯ ಇಲಾಖೆ ಅಧಿಕಾರಿಗಳು ಈ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸದಾ ಜಾಗ್ರತರಾಗಿರಲಿ ಎನ್ನುವುದೇ ನಮ್ಮ ಆಶಯ..

 

-ಬಿ.ಎಂ.ಲವಕುಮಾರ್

 

 

 

admin
the authoradmin

Leave a Reply

Translate to any language you want