ಕಾರ್ಖಾನೆಗಳಲ್ಲಿ ದಿನಗೂಲಿ ನೌಕರರಿಗೆ ಊಟದಲ್ಲಿ ತಾರತಮ್ಯ ಮಾಡದಂತೆ ಕನ್ನಡಾಂಬೆ ರಕ್ಷಣಾ ವೇದಿಕೆ ಆಗ್ರಹ

ಮೈಸೂರು: ನಗರದ ಹಲವಾರು ಖಾಸಗಿ ಕಾರ್ಖಾನೆಗಳಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುವ ಕನ್ನಡಿಗರಿಗೆ ಕಾರ್ಖಾನೆಗಳ ಕ್ಯಾಂಟೀನ್ ನಲ್ಲಿ ನೀಡುವ ಊಟದಲ್ಲಿ ತಾರತಮ್ಯ ಮಾಡುತ್ತಿರುವುದನ್ನು ಖಂಡಿಸಿ ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಬಿ.ಬಿ.ರಾಜಶೇಖರ್ ಊಟದಲ್ಲಿ ತಾರತಮ್ಯ ತಪ್ಪಿಸಬೇಕು ಇಲ್ಲದಿದ್ದಲ್ಲಿ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಲಾಗುವ ಎಂದು ಎಚ್ಚರಿಕೆಯ ಮನವಿ ಸಲ್ಲಿಸಿದ್ದಾರೆ.
ದಿನಗೂಲಿ ಕಾರ್ಮಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಹೂಟಗಳ್ಳಿಯ ಖಾಸಗಿ ಕಾರ್ಖಾನೆಗೆ ಭೇಟಿ ನೀಡಿ ಮನವಿ ಸಲ್ಲಿಸುವ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆ ಮುಖಂಡರು ನಮ್ಮ ಕಾರ್ಖಾನೆಯಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ ಎಂದು ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷರ ಜತೆ ವಾಗ್ವಾದಕ್ಕೆ ಇಳಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಮನಗಂಡ ಇತರೆ ಕಾರ್ಮಿಕರು ರಾಜಶೇಖರ್ ಅವರ ಮನವೊಲಿಸಿ ಮನವಿ ಸ್ವೀಕರಿಸಿ ದಿನಗೂಲಿ ನೌಕರರಿಗೆ ನೀಡುತ್ತಿರುವ ಊಟದಲ್ಲಿ ಯಾವುದೇ ರೀತಿಯಲ್ಲಿ ತಾರತಮ್ಯ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಜಶೇಖರ್ ಮಾತನಾಡಿ, ಮೈಸೂರಿನ ಹಲವಾರು ಕಾರ್ಖಾನೆಗಳಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುವ ಈ ಭಾಗದ ಬಡ ರೈತರ ಮಕ್ಕಳಿಗೆ ಕಾರ್ಖಾನೆಯಲ್ಲಿ ನೀಡುವ ಊಟದಲ್ಲೂ ಭಾರಿ ತಾರತಮ್ಯ ಮಾಡಲಾಗುತ್ತಿದೆ, ಇದನ್ನು ಪ್ರಶ್ನಿಸಿ ಕಾರ್ಖಾನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾದ ಕಾರ್ಮಿಕ ಇಲಾಖೆ ಕಾರ್ಖಾನೆಗಳ ಪರವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳ ಕಾರ್ಖಾನೆಗಳಿಗೆ ದಿಢೀರ್ ಭೇಟಿ ನೀಡಿ, ದಿನಗೂಲಿ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸಬೇಕು.
ಕ್ಯಾಂಟಿನ್ಗಳಲ್ಲಿ ಊಟ ಮಾಡುವಾಗ ದೈಹಿಕವಾಗಿ ಕಷ್ಟಪಟ್ಟು ಕೆಲಸ ಮಾಡುವ ಕಾರ್ಮಿಕರಿಗೆ ಕ್ಯಾಂಟಿನವರು ಎಷ್ಟು ತಿಂತೀಯಾ ಕಡಿಮೆ ತಿನ್ನು ಎಂದು ಬೈಯುವುದು, ಕಳಪೆ ಮತ್ತು ಗುಣಮಟ್ಟವಿಲ್ಲದ ಆಹಾರಗಳನ್ನು ನೀಡುತ್ತಾರೆ. ಇದರಿಂದ ದಿನಗೂಲಿ ನೌಕರರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ನಮ್ಮ ನೆಲ, ನಮ್ಮ ಜಲವನ್ನು ಬಳಸಿಕೊಂಡು ನಮ್ಮ ಪರಿಸರವನ್ನು ಹಾಳುಮಾಡಿ ಹಣ ಸಂಪಾದನೆ ಮಾಡುವ ಕಾರ್ಖಾನೆ ಮಾಲಿಕರು ಸ್ಥಳೀಯ ದಿನಗಳಿ ನೌಕರರಿಗೆ ನೀಡುವ ಕಿರುಕುಳ, ತಾರತಮ್ಯ ತಪ್ಪಬೇಕು, ಸಂಬಂದ್ಧಪಟ್ಟ ಇಲಾಖೆಗಳು ಇದನ್ನು ಗಮನಿಸಬೇಕು ಇಲ್ಲದಿದ್ದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದರು.
ಕನ್ನಡಾಂಬೆ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್, ಜಿಲ್ಲಾ ಸಂಚಾಲಕ ಹರೀಶ್, ಕಾರ್ಯದರ್ಶಿ ಲೋಕೇಶ್, ಶ್ರೀನಿವಾಸ್, ಮಹೇಶ್, ಸುದರ್ಶನ್, ಪ್ರತೀಕ್, ಚಂದ್ರು, ತೇಜಸ್, ಸಚಿನ್ ಮತ್ತಿತರು ಭಾಗವಹಿಸಿದ್ದರು.







