ಕುಶಾಲನಗರ (ರಘುಹೆಬ್ಬಾಲೆ) : ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಳ್ಳೂರಿನ ಐಶ್ವರ್ಯ ಪಬ್ಲಿಕ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ನೃತ್ಯ ಕಲಾಂಜಲಿ ಮತ್ತು ಕಾಲೇಜು ವಾರ್ಷಿಕೋತ್ಸವ ಸಮಾರಂಭ ಅದ್ಧೂರಿಯಾಗಿ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದ ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಕಾರ್ಯದರ್ಶಿಯೂ ಆದ ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಎನ್.ಕೆ.ಜ್ಯೋತಿ ಅವರು, ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ, ಗುಣ ಹಾಗೂ ಹವ್ಯಾಸವನ್ನು ಕಲಿಸುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಸಲಹೆ ನೀಡಿದರು.

ಪೋಷಕರೇ ಮಕ್ಕಳ ಬೆನ್ನೆಲುಬು,ಮನೆಯೆ ಮೊದಲ ಪಾಠ ಶಾಲೆ ತಾಯಿಯೆ ಮೊದಲ ಗುರು,ಶಿಕ್ಷಕರು ಎರಡನೇ ಗುರು ಜಾಗೂ ತಾಯಿ ಆಗಿರುತ್ತಾರೆ. ಆದ್ದರಿಂದ ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ತರವಾಗಿದೆ ಎಂದರು.ಮನೆಯಲ್ಲಿ ಮಕ್ಕಳ ಕೈಗೆ ಮೊಬೈಲ್ ನೀಡಿ ನೀವು ಮನೆ ಕೆಲಸ ಮಾಡುವುದು ಹಾಗೂ ಟಿವಿ ನೋಡುವಂತ ತಪ್ಪು ಮಾಡಬೇಡಿ. ಮಕ್ಕಳ ಎದುರು ಟಿವಿ,ಮೊಬೈಲ್ ನೋಡಬೇಡಿ.ಮಕ್ಕಳ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಇದರಿಂದ ಮಕ್ಕಳು ತಪ್ಪು ದಾರಿ ತುಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಡಿಜಿಟಲ್ ಯುಗ ಮಕ್ಕಳಿಗೆ ಎಲ್ಲಾ ರೀತಿಯ ಜ್ಞಾನ ಇದೆ.ಮಕ್ಕಳು ತುಂಬ ಬುದ್ಧಿವಂತರಾಗಿದ್ದಾರೆ. ಇಂತಹ ಮಕ್ಕಳಿಗೆ ಮೊಬೈಲ್ ಬದಲು ಕಂಪ್ಯೂಟರ್ ಜ್ಞಾನ ಬೆಳೆಸಬೇಕು ಎಂದರು.

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿ ಗಳ ಜೀವನದಲ್ಲಿ ಬಹಳ ಪ್ರಮುಖವಾದ ಘಟ್ಟ.ಆದ್ದರಿಂದ ಮಕ್ಕಳು ನಿರಂತರ ಅಧ್ಯಯನಶೀಲತೆ ಕೈಗೊಂಡು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಬೇಕು ಎಂದರು. ಪೋಷಕರು ಮತ್ತು ಶಿಕ್ಷಕರ ನಡುವೆ ಉತ್ತಮ ಬಾಂಧವ್ಯ ಇದ್ದರೆ ಖಂಡಿತ ಮಕ್ಕಳ ಭವಿಷ್ಯ ಉಜ್ವಲಗೊಳಿಸಬಹುದು. ಮಕ್ಕಳ ನಡುವೆ ಭಿನ್ನಾಭಿಪ್ರಾಯ ಮಾಡಬೇಡಿ.ಮಕ್ಕಳನ್ನು ಸಮಾನವಾಗಿ ಕಾಣಬೇಕು ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು. ಐಶ್ವರ್ಯ ವಿದ್ಯಾಸಂಸ್ಥೆಯನ್ನು ಉನ್ನತ ಸ್ಥಾನಕ್ಕೆ ತರಲು ಸಂಸ್ಥೆ ಅಧ್ಯಕ್ಷ ಪುಲಿಯಂಡರಾಮು ಅವರು ಶ್ರಮ ಅಪಾರವಾಗಿದೆ.ಇದೇ ರೀತಿ ಮುಂದೆ ಕೂಡ ಸಂಸ್ಥೆ ಎತ್ತರಕ್ಕೆ ಬೆಳೆದು ಸಾವಿರಾರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುವತ್ತ ಮುನ್ನಡೆಯಲಿ ಎಂದು ಶುಭ ಹಾರೈಸಿದರು.

ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಹಂಡ್ರಂಗಿ ನಾಗರಾಜು ಮಾತನಾಡಿ,ಐಶ್ವರ್ಯ ವಿದ್ಯಾಸಂಸ್ಥೆ ಮಕ್ಕಳಿಗೆ ಉತ್ತಮ ಗುಣಾತ್ಮಕ ಶಿಕ್ಷಕದೊಂದಿಗೆ ಅವರಿಗೆ ಕೌಶಲಗಳನ್ನು ಕಲಿಸುತ್ತಿದೆ. ಈ ಸಂಸ್ಥೆ ಪ್ರತಿವರ್ಷ ಪಿಯುಸಿ ಪರೀಕ್ಷೆಯಲ್ಲಿ ಶೇ.ನೂರು ಫಲಿತಾಂಶ ತರುವ ಮೂಲಕ ಉತ್ತಮ ಸಾಧನೆ ಮಾಡುತ್ತಿದ್ದು,ಸಂಸ್ಥೆ ಅಧ್ಯಕ್ಷರು ಹಾಗೂ ಶಿಕ್ಷಕ ವರ್ಗದ ಕೊಡುಗೆ ಅಪಾರವಾಗಿದೆ ಎಂದರು.2011ರಲ್ಲಿ ಐಶ್ವರ್ಯ ಪದವಿ ಪೂರ್ವ ಕಾಲೇಜು ಆರಂಭಗೊಂಡಿತ್ತು.

ಇದರೊಂದಿಗೆ 2022ರಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯನ್ನು ಏಕಕಾಲದಲ್ಲಿ ಆರಂಭಿಸುವ ಮೂಲಕ ಸಂಸ್ಥೆಯ ಅಧ್ಯಕ್ಷ ಪುಲಿಯಂಡರಾಮು ಅವರು ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಪರ್ಧಾತ್ಮಕ ಯುಗವಾಗಿದ್ದು, ವಿದ್ಯಾರ್ಥಿ ಕಠಿಣ ಪರಿಶ್ರಮದೊಂದಿಗೆ ಚನ್ನಾಗಿ ಓದಿ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಬೇಕು.ಜೊತೆಗೆ ಸಂಸ್ಥೆಗೂ ಹಾಗೂ ಪೋಷಕರಿಗೂ ಕೂಡ ಕೀರ್ತಿ ತರಬೇಕು ಎಂದು ಹೇಳಿದರು.

ಐಶ್ವರ್ಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪುಲಿಯಂಡ ರಾಮ್ ದೇವಯ್ಯ ಅಧ್ಯಕ್ಷತೆ ವಹಿಸಿದ್ದರು. ಐಶ್ವರ್ಯ ಪಿಯು ಕಾಲೇಜು ಪ್ರಾಂಶುಪಾಲ ಅಮ್ಮತಾಂಡ ಜೋಯ್ಯಪ್ಪ ಐಶ್ವರ್ಯ ಪಬ್ಲಿಕ್ ಸ್ಕೂಲ್ ಹಾಗೂ ಕಾಲೇಜಿನ ವರದಿ ವಾಚಿಸಿದರು. ಐಶ್ವರ್ಯ ವಿದ್ಯಾಸಂಸ್ಥೆ ಪ್ರಮುಖರಾದ ಪುಲಿಯಂಡ ಸುಬ್ಬಯ್ಯ, ಜಯಂತಿ ಸುಬ್ಬಯ್ಯ ಹಾಗೂ ಕಾವೇರಮ್ಮ ಪುಲಿಯಂಡರಾಮು, ಕಾಲೇಜಿನ ಉಪ ಪ್ರಾಂಶುಪಾಲ ಮದನ್ ಪಾಲ್ಗೊಂಡಿದ್ದರು. ಉಪನ್ಯಾಸಕರಾದ ರೇಷ್ಮನವೀನ ಸ್ವಾಗತಿಸಿದರು.

ಹರ್ಷಿತದೇಚಮ್ಮ ವಂದಿಸಿದರು.ಶ್ರೆರ್ಲಿ ಸುಬ್ಬಯ್ಯ ನಿರೂಪಿಸಿದರು. ನಂತರ ಐಶ್ವರ್ಯ ಪಬ್ಲಿಕ್ ಸ್ಕೂಲ್ ಹಾಗೂ ಕಾಲೇಜಿನ ವಿದ್ಯಾರ್ಥಿ ಗಳು ಪ್ರದರ್ಶಿಸಿದ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮನರಂಜಿಸಿದವು.ಉತ್ತಮವಾಗಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೂ ಹಾಗೂ ಪೋಷಕರಿಗೂ ಅತ್ಯುತ್ತಮವಾದ ರುಚಿಕರ ಉಪಹಾರ ನೀಡಲಾಯಿತು.

ಇದೇ ಸಂದರ್ಭ ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಕಾರ್ಯದರ್ಶಿಯೂ ಆದ ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಎನ್.ಕೆ.ಜ್ಯೋತಿ ಹಾಗೂ ಕೂಡಿಗೆ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಹಂಡ್ರಂಗಿ ನಾಗರಾಜು ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.








