Mysore

ಮಂಗಳ ಮುದ್ದುಮಾದಪ್ಪ ಅವರ ವಚನ ಗುಮ್ಮಟ ಡಾ. ಫ.ಗು. ಹಳಕಟ್ಟಿಯವರ ಜೀವನ ಚರಿತ್ರೆ ಕೃತಿ ಬಿಡುಗಡೆ

ಮೈಸೂರು: ವಚನ ಸಾಹಿತ್ಯದ ತಾಡೋಲೆಗಳಿಗಾಗಿ ಡಾ. ಫ.ಗು ಹಳಕಟ್ಟಿಯವರು ಹುಡುಕಾಡದ ಊರುಗಳಿಲ್ಲ. ತಡಕಾಡದ ಕೇರಿಗಳಿಲ್ಲ. ಅನ್ವೇಷಣೆಗೈಯದ ಆಲಯಗಳಿಲ್ಲ. ಸಂಶೋಧನೆಗೈಯದ ಸ್ಥಳಗಳಿಲ್ಲ. ವಚನ ಸಾಹಿತ್ಯ ಸಂರಕ್ಷಣೆ, ಸಂಶೋಧನೆ ಮತ್ತು ಪ್ರಸಾರದಲ್ಲಿ ಅಗ್ರಗಣ್ಯರಾಗಿದ್ದ ವಚನ ಗುಮ್ಮಟ ಡಾ. ಫ.ಗು. ಹಳಕಟ್ಟಿ ಅವರ ಸಮಗ್ರ ಜೀವನ, ಚಿಂತನೆ, ಸಂಶೋಧನಾ ಸೇವೆ ಮತ್ತು ವಚನ ಸಾಹಿತ್ಯದ ಮೇಲಿನ ಅವಿರತ ಸಾಧನೆಯನ್ನು ಒಳಗೊಂಡ ಮಹತ್ವದ ಜೀವನಚರಿತ್ರೆ ಕೃತಿಯನ್ನು ಮಂಗಳ ಮುದ್ದುಮಾದಪ್ಪ ಅವರು ರಚಿಸಿದ್ದಾರೆ. ಈ ಕೃತಿಯನ್ನು ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಪ್ರಕಟಿಸಲಾಗುತ್ತಿದೆ.

ಡಾ. ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂಶೋಧಿಸಿ, ಜನಮಾನಸಕ್ಕೆ ತಲುಪಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ಮಹಾನ್ ವಿದ್ವಾಂಸರು. ಅವರ ಜೀವನ ಹೋರಾಟ, ತ್ಯಾಗ, ಸಾಹಿತ್ಯಸೇವೆ ಮತ್ತು ವೈಚಾರಿಕ ನಿಲುವುಗಳನ್ನು ಸಮಗ್ರವಾಗಿ ದಾಖಲಿಸುವ ಈ ಕೃತಿ ಇಂದಿನ ಹಾಗೂ ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿದೆ.

ಲೇಖಕಿ ಮಂಗಳ ಮುದ್ದುಮಾದಪ್ಪ ಅವರು ಆಳವಾದ ಅಧ್ಯಯನ, ಐತಿಹಾಸಿಕ ದಾಖಲೆಗಳು ಮತ್ತು ಸಾಹಿತ್ಯಮೂಲಗಳ ಆಧಾರದ ಮೇಲೆ ಈ ಕೃತಿಯನ್ನು ರೂಪಿಸಿದ್ದು, ಇದು ಕೇವಲ ಜೀವನ ಚರಿತ್ರೆಯಲ್ಲದೆ ವಚನ ಸಾಹಿತ್ಯ ಚಳವಳಿಯ ಒಂದು ಮಹತ್ವದ ದಾಖಲೆ ಎನ್ನುವಂತಿದೆ. ವಚನ ಸಾಹಿತ್ಯದ ಮೌಲ್ಯಗಳನ್ನು ಸಮಾಜದ ಎಲ್ಲ ವರ್ಗಗಳಿಗೂ ತಲುಪಿಸುವ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಶರಣು ವಿಶ್ವವಚನ ಫೌಂಡೇಷನ್ ಈ ಕೃತಿಯನ್ನು ಪ್ರಕಟಿಸುವ ಮೂಲಕ ವಚನ ಪರಂಪರೆಯ ಸಂರಕ್ಷಣೆಗೆ ಮತ್ತೊಂದು ಗಟ್ಟಿಯಾದ ಹೆಜ್ಜೆ ಇಟ್ಟಿದೆ.

ಈ ಕೃತಿ ವಚನ ಸಾಹಿತ್ಯಾಸಕ್ತರು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಅಮೂಲ್ಯ ಮಾರ್ಗದರ್ಶಕವಾಗಲಿದೆ. ಒಟ್ಟು 28 ಅಧ್ಯಾಯಗಳನ್ನು ಒಳಗೊಂಡಿರುವ ಈ ಕೃತಿಗೆ ಮೈಸೂರಿನ ಹಿರಿಯ ಸಾಹಿತಿಗಳಾದ ಡಾ. ಎಚ್.ಟಿ ಶೈಲಜಾ ಮುನ್ನುಡಿ ಬರೆದಿದ್ದರೆ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಬೆನ್ನುಡಿ ಬರೆದಿದ್ದು, 28 ಡಿಸೆಂಬರ್ 2025ರಂದು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಬಿಡುಗಡೆಯಾಗಲಿದೆ. ಕೃತಿಗಾಗಿ 9901137948 ಸಂಪರ್ಕಿಸಬಹುದು.

admin
the authoradmin

Leave a Reply

Translate to any language you want