ArticlesLatest

ದಕ್ಷಿಣ ಭಾರತದಲ್ಲಿಯೇ ಹೆಸರುವಾಸಿಯಾದ ಚುಂಚನಕಟ್ಟೆ ಜಾತ್ರೆ… ಚುಂಚನಕಟ್ಟೆಯ ಸ್ಥಳ ಮಹಿಮೆ ಏನು?

ಸಾಮಾನ್ಯವಾಗಿ ಜಾತ್ರೆ ಎಂದರೆ ಜನಜಂಗುಳಿ, ಆಟ, ವ್ಯಾಪಾರ ವಹಿವಾಟು, ಖುಷಿ, ಸಂತಸ, ಸಂಭ್ರಮ ಹೀಗೆ ಎಲ್ಲವೂ ಇರುತ್ತದೆ.

ಮೈಸೂರು: ಕಾಲ ಬದಲಾಗಿದೆ ತಂತ್ರಜ್ಞಾನದ ನಾಗಲೋಟದಲ್ಲಿ ನಾವಿದ್ದೇವೆ… ಹೀಗಿದ್ದರೂ ಗ್ರಾಮೀಣ ಸೊಗಡು ಹಾಗೆಯೇ ಉಳಿದಿದ್ದು, ಜಾತ್ರೆಗಳಿಗೂ ಹೈಟೆಕ್ ಸ್ಪರ್ಶ ಸಿಕ್ಕಿದೆ… ಕೃಷಿ ಕಾರ್ಯಗಳಿಗೆ ಜಾನುವಾರುಗಳ ಬದಲಾಗಿ ಯಂತ್ರಗಳು ಬಂದಿವೆ. ಆದರೂ ಜಾನುವಾರುಗಳ ಮೇಲಿನ ಪ್ರೀತಿ ರೈತರಿಗೆ ಹಾಗೆಯೇ ಉಳಿದಿದೆ.. ಹೀಗಾಗಿ ಜಾನುವಾರು ಜಾತ್ರೆ ಅದೇ ಸಂಭ್ರಮವನ್ನು ಉಳಿಸಿಕೊಂಡು ಮುನ್ನಡೆಯುತ್ತದೆ. ಇದಕ್ಕೆ ಚುಂಚನಕಟ್ಟೆಯಲ್ಲಿ ನಡೆಯುವ ಜಾನುವಾರು ಜಾತ್ರೆ ಸಾಕ್ಷಿಯಾಗಿ ನಿಂತಿದೆ.

ಒಂದು ಕಾಲದಲ್ಲಿ ಚುಂಚನಕಟ್ಟೆ ಜಾತ್ರೆ ಅಂದ್ರೆ ಇಡೀ ದಕ್ಷಿಣ ಭಾರತದ ರೈತರು, ವ್ಯಾಪಾರಿಗಳು ಇತ್ತ ಮುಖ ಮಾಡಿ ನಿಲ್ಲುತ್ತಿದ್ದರು. ಜಾನುವಾರುಗಳನ್ನು ಮಾರಾಟ ಮಾಡಲು, ಖರೀದಿಸಲು ಇಲ್ಲಿಗೆ ಬರುತ್ತಿದ್ದರು.  ಹಾಗೆಂದು ಇದೇನು ಬರೀ  ಜಾನುವಾರು ಜಾತ್ರೆಯಾಗಿರದೆ ಗ್ರಾಮೀಣ ಸಂಸ್ಕೃತಿಯ ಭಾಗವಾಗಿ, ರೈತರು ಮತ್ತು ಖರೀದಿದಾರರ ನಡುವಿನ ಕೊಂಡಿಯಾಗಿ. ಗ್ರಾಮೀಣ ಜನರಿಗೆ ಸಡಗರ ಸಂಭ್ರಮದ ಹಬ್ಬವಾಗಿ ಮುಂದುವರೆಯುತ್ತಾ ಬಂದಿದೆ.

ಸಾಮಾನ್ಯವಾಗಿ ಜಾತ್ರೆ ಎಂದರೆ ಜನಜಂಗುಳಿ, ಆಟ, ವ್ಯಾಪಾರ ವಹಿವಾಟು, ಖುಷಿ, ಸಂತಸ, ಸಂಭ್ರಮ ಹೀಗೆ ಎಲ್ಲವೂ ಇರುತ್ತದೆ. ಎಲ್ಲ ಜಾತ್ರೆಗಳಲ್ಲೂ ರೈತರಿಗೆ ಹೆಗಲುಕೊಟ್ಟು ದುಡಿಯುವ ಜಾನುವಾರು ಇರಲೇ ಬೇಕು. ಹೀಗಾಗಿ ಹೆಚ್ಚಿನ ಜಾತ್ರೆಗಳಲ್ಲಿ ಜಾನುವಾರುಗಳಿಗೆ ಸ್ಥಾನ ನೀಡಲಾಗುತ್ತಿತ್ತು. ಇವತ್ತಿಗೂ ಅದು ಮುಂದುವರೆಯುತ್ತಾ ಬಂದಿದೆ. ಆ ವಿಚಾರದಲ್ಲಿ  ಚುಂಚನಕಟ್ಟೆಯ ಜಾನುವಾರು ಜಾತ್ರೆಯೂ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.  ಈ ಜಾತ್ರೆಯಲ್ಲಿ ಬರೀ ಜಾನುವಾರು ಮಾತ್ರವಲ್ಲದೆ ಪ್ರತಿಯೊಬ್ಬರ ಪ್ರೀತಿ, ವಿಶ್ವಾಸವಿದೆ. ದೇಶಿ ತಳಿಯ ಗೋ ಸಂಪತ್ತುಗಳಿವೆ. ಅದರಾಚೆಗೆ ಗ್ರಾಮೀಣ ಸೊಗಡು ಮೇಳೈಸುತ್ತದೆ.

ಜಾತ್ರೆಗೆ ರೈತರು ಮಂಡ್ಯ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ರಾಮನಗರ, ಮಾಗಡಿ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಮಾತ್ರವಲ್ಲದೆ, ಹೊರಗಿನ ರಾಜ್ಯಗಳಿಂದಲೂ ಬರುವುದು ವಿಶೇಷ. ಇನ್ನು ಜಾತ್ರೆ ನಡೆಯುವ ಚುಂಚನಕಟ್ಟೆ ಬಗ್ಗೆ  ಹೇಳುವುದಾದರೆ ಪುರಾಣ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಚುಂಚನಕಟ್ಟೆಯಲ್ಲಿ ರಾಮನೇ ಆರಾಧ್ಯ ದೈವನಾಗಿದ್ದಾನೆ. ಕಾವೇರಿ ನದಿ ದಡದಲ್ಲಿರುವ ಚುಂಚನಕಟ್ಟೆ  ಯಾತ್ರಾ ಸ್ಥಳ ಮತ್ತು ಪ್ರವಾಸಿ ತಾಣವೂ ಹೌದು. ಒಮ್ಮೆ ಇಲ್ಲಿಗೆ ಆಗಮಿಸಿದ ತೃಣಬಿಂಧು ಮಹರ್ಷಿಗಳು ಈ ಸ್ಥಳವನ್ನು ನೋಡಿ ತಮ್ಮ ತಪಸ್ಸಿಗೆ ಇದು ಸೂಕ್ತ ಸ್ಥಳವೆಂದು ನಿರ್ಧರಿಸುತ್ತಾರೆ. ಆದರೆ ತಪಸ್ಸು ಮಾಡುವ ಮುನ್ನ ಸ್ನಾನ, ಜಪ ಮಾಡಲು ನದಿ ಅವಶ್ಯಕತೆಯಿರುವುದರಿಂದ ಅವರು ನದಿಗಾಗಿ ಹುಡುಕಾಡುತ್ತಾರೆ.

ಈ ವೇಳೆ ಅವರಿಗೆ ಅಲ್ಲಿಯೇ ಗುಪ್ತಗಾಮಿನಿಯಾಗಿ ಹರಿಯುವ ಕಾವೇರಿ ನದಿ ಕಾಣಿಸುವುದಿಲ್ಲ. ಹೀಗಾಗಿ ನಾರಾಯಣನನ್ನು ಕುರಿತು ತಪಸ್ಸು ಮಾಡಲು ಆರಂಭಿಸುತ್ತಾರೆ. ಅವರ ತಪಸ್ಸಿಗೆ ಒಲಿದ ನಾರಾಯಣ ಗುಪ್ತಗಾಮಿನಿಯಾದ ಹರಿಯುತ್ತಿದ್ದ ಕಾವೇರಿಯನ್ನು ತೋರಿಸುತ್ತಾರೆ. ಅಷ್ಟೇ ಅಲ್ಲದೆ ತ್ರೇತಾಯುಗದಲ್ಲಿ ರಾಮನ ಅವತಾರವೆತ್ತಿ ರಾವಣನನ್ನು ಸಂಹಾರ ಮಾಡಿ ನಿಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಡುತ್ತೇನೆಂದು ಮಾತು ನೀಡುತ್ತಾನೆ.

ಕಾಲಾಂತರದಲ್ಲಿ ತ್ರೇತಾಯುಗದಲ್ಲಿ ಶ್ರೀರಾಮ, ಸೀತೆ ಲಕ್ಷ್ಮಣರಾದಿಯಾಗಿ ಸೇನೆಯೊಂದಿಗೆ ಲಂಕೆಯಲ್ಲಿ ರಾವಣನನ್ನು ಸಂಹಾರ ಮಾಡಿ ಹಿಂತಿರುಗುವಾಗಿ ಈ ಕ್ಷೇತ್ರಕ್ಕೆ ಬರುತ್ತಾರೆ ಈ ವೇಳೆ ಲಕ್ಷ್ಮಣನಿಗೆ  ರಾಮ ಬಂಡೆಯನ್ನು ಒಡೆಯಲು ಹೇಳುತ್ತಾನೆ. ಲಕ್ಷ್ಮಣ ಹೊಡೆದ ಬಾಣಕ್ಕೆ ಬಂಡೆ ಚೂರಾಗಿ ಒಡೆದು ಕಾವೇರಿ ಉಕ್ಕಿ ಹರಿಯುತ್ತಾಳೆ. ಇಲ್ಲಿನ ವಿಶೇಷತೆ ಏನೆಂದರೆ ರಾಮದೇವರ ದೇವಾಲಯದ ಗರ್ಭಗುಡಿಯಲ್ಲಿ ಕಾವೇರಿ ಭೋರ್ಗರೆಯುವ ಶಬ್ದ ಕೇಳಿಸುವುದಿಲ್ಲ. ಇನ್ನು ಲಕ್ಷ್ಮಣ ಬಾಣ ಬಿಟ್ಟ ಸ್ಥಳದಲ್ಲಿ ಜಲಪಾತ ಸೃಷ್ಟಿಯಾಗಿದ್ದು, ಅದುವೇ ಧನುಷ್ಕೋಟಿಯಾಗಿದೆ.

ಇನ್ನು ಜಾತ್ರೆಗೆ ಬರುವವರಿಗೆ ಸುತ್ತಮುತ್ತ ನೋಡಲು ಯೋಗ್ಯವಾದ ಸ್ಥಳಗಳಿವೆ. ಹೀಗಾಗಿ ಜಾತ್ರೆ ಕಳೆದರೂ ಪ್ರವಾಸಿಗರು ಇತ್ತ ಧಾವಿಸುತ್ತಲೇ ಇರುತ್ತಾರೆ. ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತ ಆಕರ್ಷಣೀಯವಾಗಿದೆ. ಇದುವರೆಗೆ ಯಾವುದೇ ಜಾತ್ರೆಗೆ ಹೋಗದವರು ಜನವರಿ 1ರಿಂದ ಆರಂಭವಾಗಲಿರುವ ಚುಂಚನಕಟ್ಟೆ ಜಾತ್ರೆಗೆ ಬಂದಿದ್ದೇ ಆದರೆ ಜಾತ್ರೆಯ ಸಂಭ್ರಮ, ಸಡಗರದಲ್ಲಿ ತೇಲಾಡುವುದರೊಂದಿಗೆ ಗ್ರಾಮೀಣ ಸೊಗಡಿನಲ್ಲಿ ಒಂದಷ್ಟು ಸಮಯ ಕಳೆದು ಹೊಸ ಅನುಭವ ಪಡೆಯಲು ಸಾಧ್ಯವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

B M Lavakumar

 

admin
the authoradmin

Leave a Reply

Translate to any language you want