ವರ್ಷದಂಚಿನಲ್ಲಿ ನಿಂತು ನೋಡಿದಾಗ… ನಿನ್ನೆಯ ಕನವರಿಕೆ… ನಾಳೆಯ ಭರವಸೆ..
ಇವತ್ತಿನ ಸೂರ್ಯಾಸ್ತಮಾನದೊಂದಿಗೆ ಕಾಲಗರ್ಭದಲ್ಲಿ ಹುದುಗಿ ಹೋಗಲಿರುವ 2025ಕ್ಕೆ ಒಂದು ಸಂಭ್ರಮದ ವಿದಾಯವನ್ನು ಹೇಳಿ ಬಿಡೋಣ.

ವರ್ಷದಂಚಿನಲ್ಲಿ ನಿಂತು ನೋಡಿದಾಗ… ಕಳೆದ ಅಷ್ಟು ದಿನಗಳು ಕಣ್ಮುಂದೆ ಬಂದು ನಿಲ್ಲುತ್ತವೆ.. ಕಷ್ಟ ಸುಖ, ನೋವು, ನಲಿವು, ನಿರಾಸೆ ಹೀಗೆ ಎಲ್ಲವನ್ನೂ ಮೀರಿ ಸಾಗಿದ ಹಾದಿ ನೆನಪಾಗುತ್ತದೆ. ಇವತ್ತಿನ ಸೂರ್ಯಾಸ್ತಮಾನದೊಂದಿಗೆ 2025ನೇ ಇಸವಿ ಕಾಲಗರ್ಭದಲ್ಲಿ ಸೇರಿಕೊಳ್ಳುವುದರೊಂದಿಗೆ ಇತಿಹಾಸದ ಪುಟದಲ್ಲಿ ವಿಲೀನಗೊಳ್ಳಲಿದೆ. 12 ತಿಂಗಳು, 365 ದಿನಗಳು ಎಷ್ಟು ಬೇಗ ಕಳೆದು ಹೋಯಿತಲ್ಲ ಎಂಬ ಉದ್ಘಾರ ಹೊರಬರುತ್ತದೆ.
ಕಳೆದು ಹೋದ ವರ್ಷದಲ್ಲಿ ಏನೆಲ್ಲ ಇತ್ತಲ್ಲವೆ? ಅಲ್ಲಿ ಖುಷಿಯಿತ್ತು, ನೋವಿತ್ತು.. ಅದೆಲ್ಲವನ್ನೂ ನೆನಪಿಸಿ ಕೊಳ್ಳುತ್ತಾ ವರ್ಷದಂಚಿಗೆ ಬಂದು ನಿಂತಿದ್ದೇವೆ. ಇವತ್ತಿನ ಸೂರ್ಯಾಸ್ತಮಾನ ನಾಳಿನ ಹೊಸವರ್ಷದ ಸೂರ್ಯೋದಯಕ್ಕೆ ಮುನ್ನುಡಿಯಾಗಲಿದೆ. ಇನ್ನು ಹಾಗೆ ನಿಂತು ಕಳೆದು ಹೋದ ದಿನಗಳತ್ತ ತಿರುಗಿ ನೋಡಿದಾಗ ಇಡೀ ಒಂದು ವರ್ಷದ ಅಷ್ಟು ದಿನಗಳು ನಮ್ಮ ಕಣ್ಣಂಚಿನಲ್ಲಿ ಹಾದು ಹೋದ ಅನುಭವವಾಗಿ ಬಿಡುತ್ತದೆ. ಇಲ್ಲಿ ಪಡೆದುಕೊಂಡಿದ್ದು, ಕಳೆದುಕೊಂಡಿದ್ದು ಎಲ್ಲವನ್ನು ನೆನಪು ಮಾಡಿಕೊಳ್ಳುತ್ತಾ ಹೋದರೆ ಎಲ್ಲವೂ ಅನುಭವವಾಗಿ ಬದುಕನ್ನು ಗಟ್ಟಿಗೊಳಿಸುತ್ತದೆ.

ಇಲ್ಲಿ ತನಕ ನಾವು ಸಾಗಿ ಬಂದಿದ್ದೇವೆ ಎಂದರೆ ಕಳೆದು ಹೋದ ಪ್ರತಿಯೊಂದು ವರ್ಷವೂ ನಮಗೆ ಮುಖ್ಯವೇ.. ಕೆಲವೊಂದು ವರ್ಷ ನಾವು ಸದಾ ನೆನಪಿನಲ್ಲಿಟ್ಟು ಕೊಳ್ಳುವಂತಹ ವಿಶೇಷವಾದ ಕೊಡುಗೆಯನ್ನೇ ನೀಡಿದೆ. ಹೀಗಾಗಿ ಕಳೆದು ಹೋದ ವರ್ಷದಲ್ಲಿ ದುಃಖದ ಕ್ಷಣಗಳನ್ನಷ್ಟೇ ನೆನಪಿಸಿಕೊಳ್ಳುವ ಬದಲಿಗೆ ಸುಖದ ಕ್ಷಣಗಳನ್ನು ಮೆಲುಕು ಹಾಕುತ್ತಾ ಖುಷಿ ಪಡೋಣ.. ನಾಳೆ ಎನ್ನುವುದು ಭರವಸೆ.. ಅದು ಸುಖವಾಗಿರಲಿ ಎಂದು ಬಯಸುವುದರಲ್ಲಿ ತಪ್ಪೇನಿಲ್ಲ.
ಸರಿದು ಹೋದ ದಿನಗಳಲ್ಲಿ ನಾವು ಒಳಿತಾದಾಗ ಖುಷಿಪಟ್ಟಿದ್ದೇವೆ. ಕೆಡಕು ಆದಾಗ ಅತ್ತಿದ್ದೇವೆ, ಹಿಡಿಶಾಪ ಹಾಕಿದ್ದೇವೆ. ಅದರಾಚೆಗೆ ನಮ್ಮ ಸಾಧನೆಗೆ, ಬದುಕಿಗೆ ವಿಶೇಷವಾದ ಏನಾದರೊಂದು ಕೊಡುಗೆ ಸಿಕ್ಕಾಗ ಸಂಭ್ರಮಿಸಿದ್ದೇವೆ. ಆದ್ದರಿಂದ ಕಳೆದು ಹೋದ ವರ್ಷ ನಮಗೆ ನೀಡಿದ ಸಂತಸವನ್ನು ನೆನಪಿಸಿಕೊಳ್ಳುತ್ತಾ ಖುಷಿಪಡೋಣ. ಇನ್ನು ಕಳೆದು ಹೋಗಿದ್ದು ಬರೀ ವರ್ಷನಾ ಅಥವಾ ನಾವಾ ಎಂದು ನೋಡಿದ್ದೇ ಆದರೆ ನಾವು ಕೂಡ ಕಳೆದು ಹೋಗಿದ್ದು ನಮ್ಮ ಗಮನಕ್ಕೆ ಬಾರದೆ ಇರದು.. ವಯಸ್ಸು ಜಾರಿದೆ.. ಈಡೇರದ ಬಯಕೆ ಬಗ್ಗೆ ಬೇಸರವಿದೆ..

ಜತೆಗಿದ್ದವರು ಏನೇನೋ ಆದರೂ ನಾವು ಹೀಗೆಯೆ ಇದ್ದೇವಲ್ಲ ಎಂಬ ಕೊರಗು.. ಸಿಗದ ಪ್ರಮೋಷನ್, ಹೆಚ್ಚಾಗದ ಸ್ಯಾಲರಿ.. ಕೆಲಸ ಸಿಗದೆ ಕೊರಗು.. ಈಡೇರದ ಮನೆ ಕಟ್ಟಿಸುವ, ಕಾರು ಕೊಳ್ಳುವ ಆಸೆಗಳು ಒಂದೇ ಎರಡೇ.. ಎಲ್ಲೋ ಒಂದು ಕಡೆ ಶೂನ್ಯ ಸಾಧನೆ ಮನಸ್ಸನ್ನು ಭಾರ ಮಾಡಿ ಬಿಡುತ್ತದೆ. ಆದರೂ ಎಲ್ಲ ಕಳೆದ ಹೋದ ಮೇಲೂ ನಾವು ಉಳಿದಿದ್ದೇವಲ್ಲ ಎಂಬ ಸಂತೋಷದೊಂದಿಗೆ ಮುಂದೆ ಸಾಗುವ ಧೈರ್ಯ ತೋರಬೇಕಿದೆ. ಯಾವುದಾದರೊಂದು ಗುರಿಯನ್ನಿಟ್ಟುಕೊಂಡೇ ಮುಂದಿನ ವರ್ಷವನ್ನು ಎದುರು ನೋಡೋಣ..
ಕಷ್ಟಗಳನ್ನಷ್ಟೆ ನೆನೆದು ಈ ವರ್ಷವೇ ಸರಿಯಿಲ್ಲ ಎನ್ನುವುದು ಮೂರ್ಖತನವಾಗಿ ಬಿಡುತ್ತದೆ. ಸೂರ್ಯೋದಯದೊಂದಿಗೆ ಆಗಮಿಸಲಿರುವ ಹೊಸವರ್ಷವನ್ನು ಸ್ವಾಗತಿಸುವ ಮುನ್ನ ಅಷ್ಟು ಘಟನೆಗಳಿಗೆ ಸಾಕ್ಷಿಯಾಗಿದ್ದ ಒಂದು ವರ್ಷ ಸರಿದು ಹೋಯಿತಲ್ಲ ಎಂಬ ನೋವು ನಮ್ಮೆಲ್ಲರಲ್ಲೂ ಇದೆ. ಆ ವರ್ಷಕ್ಕೊಂದು ಸಂತೋಷದ ವಿದಾಯವನ್ನು ನಾವು ಹೇಳಲೇ ಬೇಕಾಗಿದೆ. ಇವತ್ತಿನ ಸೂರ್ಯಾಸ್ತಮಾನದೊಂದಿಗೆ ಕಾಲಗರ್ಭದಲ್ಲಿ ಹುದುಗಿ ಹೋಗಲಿರುವ 2025ಕ್ಕೆ ಒಂದು ಸಂಭ್ರಮದ ವಿದಾಯವನ್ನು ಹೇಳಿ ಬಿಡೋಣ.
B M Lavakumar







