ಕೂಡಿಗೆ( ರಘುಹೆಬ್ಬಾಲೆ) : ತಾಲ್ಲೂಕಿನ ಕೂಡಿಗೆ ಕೃಷಿ ಫಾರಂ ಆವರಣದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ ಸಮಾರೋಪ ಹಾಗೂ ಕಾಲೇಜು ವಾರ್ಷಿಕೋತ್ಸವ ಸಮಾರಂಭ ನಡೆಯಿತು.

ಕೂಡಿಗೆ ಡಯಟ್ ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕಲಾ,ವಾಣಿಜ್ಯ ಹಾಗೂ ವಿಜ್ಞಾನ ಎಂಬ ವಿಷಯವಾರು ಕೀಳೆರಿಮೆ ಹಾಗೂ ವ್ಯತ್ಯಾಸವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು. ಅವರ ಇಚ್ಛೆ ಹಾಗೂ ಆಸಕ್ತಿಗೆ ಅನುಗುಣವಾಗಿ ವಿಷಯಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಎಲ್ಲಾ ವಿಭಾಗಗಳು ಮುಖ್ಯವಾಗಿವೆ. ಓದಿ ಉತ್ತಮ ಅಂಕಗಳಿಸಿದಲ್ಲಿ ನೀವು ನಿರ್ದಿಷ್ಟ ಗುರು ಮುಟ್ಟಲು ಸಾಧ್ಯವಿದೆ ಎಂದರು. ಈ ಕಾಲೇಜಿನಲ್ಲಿ ಹೆಣ್ಣು ಮಕ್ಕಳ ಪ್ರಮಾಣ ಜಾಸ್ತಿ ಇದೆ. ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ಹೆಚ್ಚಿನ ಆದ್ಯತೆ ನೀಡಲಾಗಿದೆ.ಅದು ನಿಮ್ಮ ಹಕ್ಕು ಕೂಡ ಆಗಿದೆ.ಹೆಣ್ಣು ಮಕ್ಕಳು ವಿದ್ಯಾವಂತರಾದಲ್ಲಿ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬಡಕುಟುಂಬದಲ್ಲಿ ಹುಟ್ಟಿದ್ದರು ಕೂಡ ಅವರು ಪುಸ್ತಕಗಳನ್ನು ಸಂಗ್ರಹಿಸಿ ಅಧ್ಯಯನ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ವಿಶ್ವದಲ್ಲಿಯೇ ಶ್ರೇಷ್ಠ ಜ್ಞಾನಿ ಎನಿಸಿಕೊಂಡರು.ಈ ಮಾದರಿಯನ್ನು ವಿದ್ಯಾರ್ಥಿಗಳು ಅನುಸರಿಸಬೇಕು ಪುಸ್ತಕಗಳನ್ನು ಖರೀದಿಸಿ ಅಧ್ಯಯನ ಮಾಡಬೇಕು ಆಗ ಮಾತ್ರ ತಮ್ಮ ಜ್ಞಾನಾಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಎ.ಯೋಗೇಶ್ ಮಾತನಾಡಿ, ವಿದ್ಯಾರ್ಥಿ ನಿರಂತರ ಅಧ್ಯಯನಶೀಲತೆ ಮೈಗೂಡಿಸಿಕೊಂಡು ಕಠಿಣ ಪರಿಶ್ರಮದೊಂದಿಗೆ ಓದಿದಾಗ ಖಂಡಿತ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ.ನಿಮ್ಮ ಮೇಲೆ ಪೋಷಕರು ಹಾಗೂ ಶಿಕ್ಷಕರು ಹೊಂದಿರುವ ನಿರೀಕ್ಷೆಯನ್ನು ಹುಸಿಮಾಡಬಾರದು. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಸಂಸ್ಥೆಗೆ,ಶಿಕ್ಷಕರಿಗೆ ಹಾಗೂ ಪೋಷಕರಿಗೆ ಕೀರ್ತಿತರಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಹಂಡ್ರಂಗಿ ನಾಗರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥಮಾಡಬಾರದು,ಮೊಬೈಲ್ ಮತ್ತು ಟಿವಿಗಳಿಂದ ದೂರ ಉಳಿದು ಓದಿನಕಡೆಗೆ ಆಸಕ್ತಿ ತೋರಬೇಕು ಎಂದರು. ಪರೀಕ್ಷೆ ಇನ್ನು ಕೇವಲ ಮೂರ ತಿಂಗಳು ಬಾಕಿ ಇದೆ.ಆದ್ದರಿಂದ ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ತಪ್ಪದೇ ಅಂದೆ ಓದಬೇಕು. ಪಿಯುಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದೆ.ವಿದ್ಯಾರ್ಥಿ ಕಠಿಣ ಪರಿಶ್ರಮ ದಿಂದ ಚೆನ್ನಾಗಿ ಓದಿ ಉತ್ತಮ ಅಂಕಗಳೊಂದಿಗೆ ಶೇ.ನೂರು ಫಲಿತಾಂಶ ತರಬೇಕು ಎಂದು ಹೇಳಿದರು.

ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಎಚ್.ಕೆ.ಸೋಮಶೇಖರ್, ನಿರ್ದೇಶಕ ಈರಪ್ಪ ಬಹುಮಾನ ವಿತರಣೆ ಮಾಡಿದರು. ಉಪನ್ಯಾಸಕ ಸತೀಶ್ ಅವರು ಕಾಲೇಜು ವರದಿ ವಾಚನ ಮಾಡಿದರು. ಇದೇ ಸಂದರ್ಭ ಡಯಟ್ ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಯೋಗೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಉಪನ್ಯಾಸಕರಾದ ನಾಗಪ್ಪ ಯಾಲಕ್ಕಿಕಟ್ಟೆ, ಕಾವೇರಮ್ಮ,ಹನುಮರಾಜು,ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಾದ ಫಾತಿಮತ್ ಸನಾ, ಲಯನ ಸ್ವಾಗತಿಸಿದರು ಲಾವಣ್ಯ ವಂದಿಸಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭರತನಾಟ್ಯ, ಜಾನಪದ ನೃತ್ಯ , ಸಮೂಹ ನೃತ್ಯ ಪ್ರದರ್ಶಿಸಿದರು. ಹಾಗೂ ವಿದ್ಯಾರ್ಥಿಗಳು ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರ ಮನರಂಜಿಸಿದರು.








