ಹೊಸ ವರ್ಷಕ್ಕೆ ಕಾಲಿಟ್ಟಾಯಿತು… ಮುಂದೆ ಗುರಿ ಇರಲಿ… ಅದನ್ನು ತಲುಪುವ ಪ್ರಯತ್ನವಿರಲಿ…
2026 ಹೊಸ ವರ್ಷದ ಮುಂಜಾನೆ ಮಂಡ್ಯ ತಾಲೂಕು ಹೊಳಲು ಗ್ರಾಮದಲ್ಲಿ ಇಬ್ಬನಿ ತಬ್ಬಿದ ಮಂಜಿನ ಪರದೆಯನ್ನು ಸರಿಸಿ ರವಿ ಉದಯಿಸಿದ ಸುಂದರ ದೃಶ್ಯ... ಇದನ್ನು ತಮ್ಮ ಕ್ಯಾಮರಾ ಮೂಲಕ ಸೆರೆ ಹಿಡಿದವರು ಕೆ.ಪಿ.ಕುಮಾರ್, ಹೊಳಲು.

ಹೊಸ ವರ್ಷಕ್ಕೆ ಕಾಲಿಟ್ಟಾಗಿದೆ.. ಇನ್ನೇನಿದ್ದರೂ ಹಳೆಯದಕ್ಕೆ ವಿದಾಯ ಹೇಳಿ ಹೊಸತಿಗೆ ತೆರೆದುಕೊಳ್ಳುವ ಸಮಯ.. ಹೊಸ ವರ್ಷದಲ್ಲಿ ಏನೇನು ಮಾಡಬೇಕು ಎಂಬುದನ್ನು ಗುರಿಯಾಗಿಟ್ಟುಕೊಂಡು ಅದನ್ನು ತಲುಪುವ ಕಡೆಗೆ ಪ್ರಯತ್ನ ಮಾಡಬೇಕು..

ಬದುಕಿನಲ್ಲಿ ಗುರಿ ಇಲ್ಲದೆ ಹೋದರೆ ನೀರಸ ಎನಿಸಿ ಬಿಡುತ್ತದೆ. ಏನಾದರೊಂದು ಮಾಡಿಯೇ ಮಾಡುತ್ತೇನೆ ಹೊರಟರೆ ಗುರಿ ತಲುಪುವುದು ಕಷ್ಟವಾಗಲಾರದು..

ಹೊಸವರ್ಷವನ್ನು ನಾವು ಕೇವಲ ಹೊಸ ವಸ್ತುಗಳ ಖರೀದಿಗೆ ಮಾತ್ರ ಸೀಮಿತ ಮಾಡಿಕೊಳ್ಳದೆ ನಾವು ನಮಗಾಗಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಕೂಡ ಅಗತ್ಯವೇ… ಹೊಸ ವರ್ಷದಿಂದ ನಾನು ಹೊಸ ಮನುಷ್ಯನಾಗುತ್ತೇನೆ ಎಂಬ ದೃಢ ನಿರ್ಧಾರಕ್ಕೆ ಬರುವುದು ಕೂಡ ಬಹುಮುಖ್ಯವಾಗುತ್ತದೆ.

ಮದ್ಯಪಾನ, ಧೂಮಪಾನ ಸೇರಿದಂತೆ ಹಲವು ದುಶ್ಚಟಗಳನ್ನು ಹೊಂದಿದವರು ಅದಕ್ಕೆ ಇತಿಶ್ರೀ ಹೇಳುತ್ತೇನೆ ಎಂಬ ಸಂಕಲ್ಪ ಮಾಡಬೇಕು. ಆ ಮೂಲಕ ಹಳೆಯ ವರ್ಷದಲ್ಲಿ ಕಳೆದುಕೊಂಡಿದ್ದನ್ನು ಹೊಸವರ್ಷದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಹೊಸ ಮನುಷ್ಯರಾಗಿ ಮಾರ್ಪಾಡಾಗಲು ಸಾಧ್ಯವಾಗಲಿದೆ. ಇದು ನಮ್ಮದೇ ಕುಟುಂಬಕ್ಕೆ ಕೊಡುವ ಕೊಡುಗೆಯೂ ಆಗಬಹುದು. ಜತೆಗೆ ಹೊಸ ಬದುಕಿಗೆ ತೆರೆದುಕೊಳ್ಳಲು ಸಹಾಯ ಆಗಬಹುದು.

ಅಂದುಕೊಂಡಿದ್ದೆಲ್ಲವೂ ಆಗದೆ ಇರಬಹುದು ಆದರೆ ಆಗುವಂತೆ ಮಾಡುವುದು ನಮ್ಮ ಪ್ರಯತ್ನವಾಗಬೇಕು.. ಪ್ರಯತ್ನ ಪಡುವುದರಲ್ಲಿ ತಪ್ಪೇನಿಲ್ಲ.. ಫಲಾಫಲಗಳನ್ನು ದೇವರ ಮೇಲೆ ಹಾಕಿ ಬಿಡೋಣ.. ನಾವು ಮಾಡುವ ಒಳ್ಳೆಯ ಕೆಲಸಗಳು ನಮ್ಮ ಕೈ ಬಿಡಲಾರವು.. ಸದಾ ಒಳ್ಳೆಯದನ್ನೇ ಮಾಡುತ್ತಾ ಹೋಗೋಣ.. ಏನಂತೀರಾ?







