208ನೇ ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವ ಆಚರಣೆ… ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ
ಪ್ರತಿಯೊಬ್ಬರೂ ಇತಿಹಾಸದ ಅರಿವು ಹೊಂದಬೇಕು. ಕೋರೆಗಾಂವ್ ಸ್ಥಂಭ ಸೈನಿಕರ ಸಾಹಸ ಬಿಂಬಿಸುವ ವಿಜಯ ಸ್ಥಂಭವಾಗಿದೆ.

ಕುಶಾಲನಗರ (ರಘುಹೆಬ್ಬಾಲೆ): ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ವರ್ಗದ ಸರ್ಕಾರಿ ನಿವೃತ್ತಿ ನೌಕರರ ಸಂಘದ ವತಿಯಿಂದ ಗುರುವಾರ ಮಹಾಲಕ್ಷ್ಮಿ ಸಭಾಂಗಣದಲ್ಲಿ 208ನೇ ಭೀಮಾ ಕೋರೆಗಾವ್ ಯುದ್ಧದ ವಿಜಯೋತ್ಸವ ದಿನಾಚರಣೆ ಮಾಡಲಾಯಿತು.
ಮೀನುಗಾರಿಕೆ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಕುಮಾರಸ್ವಾಮಿ ಜ್ಯೋತಿ ಬೆಳಗಿಸುವ ಮೂಲಕ ವಿಜಯೋತ್ಸವ ಆಚರಣಾ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಕಲ್ಬುರ್ಗಿಯ ಅಮರಜ್ಯೋತಿ ಬಂತೈಜಿ ಮಾತನಾಡಿ, ಶೋಷಿತರು ಶೋಷಕ ಶಕ್ತಿಗಳ ವಿರುದ್ಧ ಸಾರಿದ ಯುದ್ಧ ಕೋರೇಗಾಂವ್ ಯುದ್ಧ. ಅದು ಭೀಮಾ ತೀರದಲ್ಲಿ ನಡೆದಿದ್ದರಿಂದ ಅದು ಇತಿಹಾಸದಲ್ಲಿ ‘ಭೀಮಾ ಕೋರೇಗಾಂವ್ ಯುದ್ಧ’ವೆಂದೇ ಪ್ರಸಿದ್ಧವಾಗಿದೆ. 1818ರ ಹೊಸ ವರ್ಷದ ಸಂದರ್ಭದಲ್ಲಿ ಆ ಯುದ್ಧ ನಡೆಯಿತು ಎಂದರು

ನಿವೃತ್ತ ಕನ್ನಡ ಪ್ರಾಧ್ಯಾಪಕಿ ಬಿ.ಡಿ.ಸರೋಜ ಮಾತನಾಡಿ,ಜನವರಿ 01 ರಂದು ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವವನ್ನು ದೇಶದಾದ್ಯಂತ ಶೋಷಿತ ಸಮುದಾಯಗಳು ಆಚರಣೆ ಮಾಡುತ್ತಿವೆ.ಇಂದಿಗೂ ಕೂಡ ಶೋಷಿತ ಹಿಂದುಳಿದ ಎಸ್ ಸಿ ಎಸ್ ಟಿ ಹಾಗೂ ಹಿಂದುಳಿದ ವರ್ಗದವರ ಮೇಲೆ ಶೋಷಣೆ ದೌರ್ಜನ್ಯ ನಿರಂತರವಾಗಿದ್ದು ಅಂಬೇಡ್ಕರ್ ಅವರು ಶೋಷಿತರಿಗೆ ಹಲವು ಹಕ್ಕುಗಳನ್ನು ನೀಡಿದೆ. ಪ್ರತಿ ಗ್ರಾಮದಲ್ಲಿ ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವದ ಕುರಿತು ಯುವ ಜನರಿಗೆ ಮಾಹಿತಿ ನೀಡಬೇಕಿದೆ ಎಂದರು.

ಕೊಡಗು ಜಿಲ್ಲಾ ದಲಿತ ಹಿತರಕ್ಷಣಾ ವೇದಿಕೆ ಸಂಚಾಲಕ ಹಾನಗಲ್ಲು ಜಯಪ್ಪ ಮಾತನಾಡಿ, ಇತಿಹಾಸವನ್ನು ಮೆರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂದು ಅಂಬೇಡ್ಕರ್ ಹೇಳಿದ್ದಾರೆ. ಪ್ರತಿಯೊಬ್ಬರೂ ಇತಿಹಾಸದ ಅರಿವು ಹೊಂದಬೇಕು. ಕೋರೆಗಾಂವ್ ಸ್ಥಂಭ ಸೈನಿಕರ ಸಾಹಸ ಬಿಂಬಿಸುವ ವಿಜಯ ಸ್ಥಂಭವಾಗಿದೆ. ಇಂದಿಗೂ ಆ ಸ್ಮಾರಕ ಮಹರ್ ವೀರ ಕಥೆಗೆ ಸಾಕ್ಷಿಯಂತೆ ಇದೆ. ಡಾ.ಬಿ.ಆರ್.ಅಂಬೇಡ್ಕರ್ ಪ್ರತಿವರ್ಷ ಜನವರಿ ಒಂದರಂದು ಭೀಮಾ ಕೋರೆಗಾಂವ್ ಗೆ ಭೇಟಿ ನೀಡಿ, ಗೌರವ ಸಲ್ಲಿಸುತ್ತಿದ್ದರು ಎಂದರು.

ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ವರ್ಗದ ಸರ್ಕಾರಿ ನಿವೃತ್ತಿ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಸ್ಸಿ ಎಸ್ಟಿ ಹಿಂದುಳಿದ ಮತ್ತು ಶೋಷಿತರ ಶೌರ್ಯದ ಸಂಕೇತವೇ ಕೋರೆಗಾಂವ್ ಯುದ್ಧವಾಗಿದೆ. ಭೀಮಾ ನದಿ ದಡದಲ್ಲಿ ಪೇಶ್ವೆಯವರ ಸೇನೆ ಹಾಗೂ ಇಂಗ್ಲೀಷ್ ಸೈನಿಕರ ಮಧ್ಯೆ ನಡೆದ ಯುದ್ದದಲ್ಲಿ 24 ಗಂಟೆಯಲ್ಲಿ 5 ಸಾವಿರ ಪೇಶ್ವೆಗಳ ಸೈನಿಕರನ್ನು ಐನೂರು ಮಹರ್ ಸೈನಿಕರು ಕೊಂದು ಶೌರ್ಯ ಮೆರೆದಿದ್ದಾರೆ.
ಇದನ್ನು ಈ ದೇಶದ ಮೇಲ್ವರ್ಗದ ಪರವಾಗಿರುವ ಇತಿಹಾಸಕಾರರು ಮರೆಮಾಚಿದ್ದರು. ಕೇಂಬ್ರಿಡ್ಜ್ ವಿವಿ ಮ್ಯೂಜಿಯಂ ಇತಿಹಾಸದಲ್ಲಿ ಬರೆದು ಸಂಗ್ರಹಿಸಿದ್ದನ್ನು ಓದಿದ ಅಂಬೇಡ್ಕರ್ ಅವರು ಭಾರತಕ್ಕೆ ಮರಳಿ ಭೀಮಾ ನದಿ ದಡದಲ್ಲಿರುವ ಕೋರೆಗಾಂವ್ ಯುದ್ಧ ನಡೆದ ಸ್ಥಳವನ್ನು ಪರಿಶೀಲಿಸಿ ಉತ್ಖನನ ಮಾಡಿ ಮಹರ್ ಜನಾಂಗದ ಸೈನಿಕರ ಶೌರ್ಯ ಸ್ಥೂಪವನ್ನು ನಿರ್ಮಿಸಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಿದರು ಎಂದರು.

ಕಾರ್ಯಕ್ರಮದಲ್ಲಿ ಬುದ್ಧವಂದನೆ ಹಾಗೂ ಸಂವಿಧಾನ ಪೀಠಿಕೆ ವಾಚಿಸಿ ಪ್ರತಿಜ್ಞೆ ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ವರ್ಗದ ಸರ್ಕಾರಿ ನಿವೃತ್ತಿ ನೌಕರರ ಸಂಘದ ಕಾರ್ಯದರ್ಶಿ ಬಿ.ಸಿ.ರಾಜು,ಖಜಾಂಜಿ ನಿಂಗರಾಜು,ನಿವೃತ್ತ ಅಧಿಕಾರಿಗಳಾದ ಬೇಲಯ್ಯ, ಎ.ಎಸ್.ಜೋಯ್ಯಪ್ಪ, ಅಪ್ಪಾಜಿ, ಚನ್ನಾರಾಜು, ಕೆ.ಕೆ.ಕಾಳಪ್ಪ, ಮಲ್ಲಪ್ಪ,ಎಚ್.ಕೆ.ರಾಜಪ್ಪ,ಸ್ವಾಮಿ, ಚನ್ನಬಸವಯ್ಯ, ಮಾಜಿ ಸೈನಿಕ ರಮೇಶ್ ಹಾಗೂ ಬುದ್ಧ ಸಮಿತಿಯ ಮಹಾದೇವಸ್ವಾಮಿ ಪಾಲ್ಗೊಂಡಿದ್ದರು.







