ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ಆರಂಭ.. ಭಕ್ತರಲ್ಲಿ ಮನೆ ಮಾಡಿದ ಸಂಭ್ರಮ… ಜಾತ್ರೆಯ ವಿಶೇಷತೆಗಳೇನು?
ಸಿದ್ದಪ್ಪಾಜಿಯು ಪಾಂಚಾಳರು ಒಡ್ಡುವ ಸವಾಲು, ಪವಾಡಗಳನ್ನು ಗೆದ್ದು ಏಳು ಊರುಗಳ ಪಾಳೆಪಟ್ಟುಗಳನ್ನು ಒಕ್ಕಲು ಪಡೆದು ಚಿಕ್ಕಲೂರಿನಲ್ಲಿ ನೆಲೆಸಿದರೆಂದೂ ಹೇಳಲಾಗಿದೆ.

ಚಾಮರಾಜನಗರ: ಜಿಲ್ಲೆಯಲ್ಲಿ ನಡೆಯುವ ಜಾತ್ರೆಗಳ ಪೈಕಿ ತನ್ನದೇ ಆದ ವಿಶೇಷತೆ, ಸಂಪ್ರದಾಯ ಮತ್ತು ಆಚರಣೆಯಿಂದ ಗಮನಸೆಳೆದಿರುವ ಕೊಳ್ಳೇಗಾಲ ತಾಲೂಕಿನ ಮಂಟೇಸ್ವಾಮಿ ಪರಂಪರೆಯ ಪ್ರಸಿದ್ಧ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ಜನವರಿ 3ರಿಂದ ಆರಂಭವಾಗಿದ್ದು 7ರ ತನಕ ಐದು ದಿನಗಳ ಕಾಲ ಹಗಲು ರಾತ್ರಿ ನಡೆಯಿದೆ. ಹೀಗಾಗಿ ಸ್ಥಳೀಯ ಏಳು ಗ್ರಾಮದವರು ಮಾತ್ರವಲ್ಲದೆ, ಹೊರಗಿನಿಂದಲೂ ಸಿದ್ದಪ್ಪಾಜಿ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದು ಅರಣ್ಯದ ನಡುವೆ ಇರುವ ದೇಗುಲ ವ್ಯಾಪ್ತಿಯಲ್ಲಿ ಜಾತ್ರಾ ಸಂಭ್ರಮ ಮನೆ ಮಾಡಿದೆ.
ಪ್ರತಿ ವರ್ಷವೂ ಚಿಕ್ಕಲ್ಲೂರು ಜಾತ್ರೆ ಬಂತೆಂದರೆ ಭಕ್ತರಲ್ಲಿ ಪುಳಕ ಶುರುವಾಗುತ್ತದೆ. ಸಿದ್ದಪ್ಪಾಜಿ ಬಳಿಗೆ ತೆರಳಿ ಇಷ್ಟಾರ್ಥ ನೆರವೇರಿಸುವಂತೆ ಬೇಡಿಕೊಳ್ಳುವುದು ಮತ್ತು ಇಷ್ಟಾರ್ಥ ನೆರವೇರಿಸಿದಕ್ಕೆ ಹರಕೆ ತೀರಿಸುವುದು, ಹಾಗೆಯೇ ಪಂಕ್ತಿ ಸೇವೆಯಂದು ಭಕ್ತರು ಕುಟುಂಬ ಸಮೇತ ಮಾಂಸದ ಅಡುಗೆ ಸಿದ್ಧಪಡಿಸಿ ಸಿದ್ದಪ್ಪಾಜಿಗೆ ಎಡೆಇಟ್ಟು ನಂತರ ಸಹಭೋಜನ ಸ್ವೀಕರಿಸುವುದು ಹೀಗೆ ಹತ್ತಾರು ಸಂಪ್ರದಾಯಗಳು ಜಾತ್ರೆಯಲ್ಲಿ ಇರಲಿದೆ.

ಚಿಕ್ಕಲ್ಲೂರು ಜಾತ್ರೆಯು ಜ.3ರಂದು ರಾತ್ರಿ ಚಂದ್ರಮಂಡಲೋತ್ಸವದ ಮೂಲಕ ಆರಂಭಗೊಳ್ಳಲಿದೆ. ಜಾತ್ರೆಗೆ ಹೋಗುವವರಿಗೆ ಮತ್ತು ಸ್ಥಳೀಯರಿಗೆ ಚಂದ್ರಮಂಡಲದ ಬಗ್ಗೆ ಗೊತ್ತಿರುತ್ತದೆ. ಆದರೆ ಹೊರಗಿನವರಿಗೆ ಗೊತ್ತಿರಲಿಕ್ಕಿಲ್ಲವೇನೋ? ಹೀಗಾಗಿ ಚಂದ್ರಮಂಡಲದ ಬಗ್ಗೆ ಹೇಳುವುದು ಅಗತ್ಯವಾಗುತ್ತದೆ. ಚಂದ್ರಮಂಡಲೋತ್ಸವ ಎಂದರೆ ಜಾತ್ರೆಗೆ ಒಳಪಡುವ ಏಳು ಗ್ರಾಮಗಳಾದ ಬಾಣೂರು, ಬಾಳಗುಣಸೆ, ತೆಳ್ಳನೂರು, ಮಸ್ಕಯ್ಯನ ದೊಡ್ಡಿ, ಸುಂಡ್ರಳ್ಳಿ, ಕೊತ್ತನೂರು ಗ್ರಾಮಗಳ ಕುಲೇಳು 18 ಸಮುದಾಯಗಳು ಒಟ್ಟಾಗಿ ಸೇರಿ ಆಚರಿಸುವ ಸಂಪ್ರದಾಯವೇ ಚಂದ್ರಮಂಡಲೋತ್ಸವವಾಗಿದೆ.
ಚಂದ್ರಮಂಡಲೋತ್ಸವದ ವೇಳೆ ಒಂದೊಂದು ಸಮುದಾಯದವರು ಒಂದೊಂದು ರೀತಿಯ ಸೇವೆಯನ್ನು ಸಲ್ಲಿಸುವುದು ಸಂಪ್ರದಾಯವಾಗಿದೆ. ಅದರಂತೆ ಬಿದಿರಿನ ಆಕೃತಿ ಚಂದ್ರಮಂಡಲ ನಿರ್ಮಾಣಕ್ಕೆ ತೆಳ್ಳನೂರು ಗ್ರಾಮದ ಜನರು ಬೊಂಬು ಬಿದಿರುಗಳನ್ನು ನೀಡಿದರೆ, ಎಣ್ಣೆ ಮತ್ತು ಪಂಜನ್ನು ಮಸ್ಕಯ್ಯನ ದೊಡ್ಡಿ ಗ್ರಾಮಸ್ಥರು ಎಣ್ಣೆ ನೀಡುತ್ತಾರೆ. ಮಡಿ ಬಟ್ಟೆಯನ್ನು ಬಾಣೂರು ಹಾಗೂ ಬಾಳಗುಣಸೆ ಗ್ರಾಮದವರು ನೀಡುತ್ತಾರೆ. ಹೀಗೆ ಸಪ್ತ ಗ್ರಾಮಗಳು ನೀಡುವ ವಸ್ತುಗಳನ್ನು ಸಂಗ್ರಹಿಸಿ ಅದರಿಂದ ಗುರುಮನೆ ನೀಲಗಾರರು ಚಂದ್ರಮಂಡಲವನ್ನು ತಯಾರಿಸುತ್ತಾರೆ. ಈ ಚಂದ್ರಮಂಡಲೋತ್ಸವದ ಮೂಲಕ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ಆರಂಭವಾಗುತ್ತದೆ.

ಈ ವೇಳೆ ಜಾತ್ರೆಯಲ್ಲಿ ಪಾಲ್ಗೊಂಡು ಚಂದ್ರಮಂಡಲೋತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತರು ಆಗಮಿಸುತ್ತಾರೆ. ಅದರಲ್ಲೂ ಜಿಲ್ಲೆ, ಹೊರ ಜಿಲ್ಲೆ ಸೇರಿದಂತೆ ಹೊರ ರಾಜ್ಯಗಳಿಂದಲು ಸಿದ್ದಪ್ಪಾಜಿ ಒಕ್ಕಲಿಗೆ ಸೇರಿದವರು ಭಾಗವಹಿಸುವುದು ವಾಡಿಕೆಯಾಗಿದೆ. ಹೊರಗಿದ್ದರೂ ಈ ಸಂದರ್ಭ ಬಿಡುವು ಮಾಡಿಕೊಂಡು ಕುಟುಂಬ ಸಮೇತರಾಗಿ ಜಾತ್ರೆಗೆ ಬಂದು ಇಲ್ಲಿಯೇ ವಾಸ್ತವ್ಯ ಹೂಡಿ ಸಿದ್ದಪ್ಪಾಜಿಗೆ ಹರಕೆ ಸೇವೆ ಸಲ್ಲಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಜಾತ್ರೆಯು ಐದು ಹಗಲು ಹಾಗೂ ಐದು ರಾತ್ರಿ ನಡೆಯುವುದು ಮತ್ತೊಂದು ವಿಶೇಷವಾಗಿದೆ.
ಪೌರಾಣಿಕ ಇತಿಹಾಸವನ್ನು ಮೆಲುಕು ಹಾಕಿದರೆ ಲೋಕ ಕಲ್ಯಾಣಕ್ಕೆ ಹೊರಟ ಸಿದ್ದಪ್ಪಾಜಿಯು ಪಾಂಚಾಳರು ಒಡ್ಡುವ ಸವಾಲು, ಪವಾಡಗಳನ್ನು ಗೆದ್ದು ಏಳು ಊರುಗಳ ಪಾಳೆಪಟ್ಟುಗಳನ್ನು ಒಕ್ಕಲು ಪಡೆದು ಚಿಕ್ಕಲೂರಿನಲ್ಲಿ ನೆಲೆಸಿದರೆಂದೂ ಹೇಳಲಾಗಿದೆ. ಹೀಗಾಗಿ ಅವರಿಗೆ ಏಳು ಊರುಗಳ ಜನ ಸೇವೆ ಸಲ್ಲಿಸುತ್ತಾರೆ. ಇದುವೇ ಜಾತ್ರೆಯಾಗಿದೆ. ಏಳು ಊರಿನವರು ಸೇರಿ ನಡೆಸುವ ಈ ಜಾತ್ರೆ ತನ್ನದೇ ಆಚರಣೆಯಿಂದ ಹೆಸರುವಾಸಿಯಾಗಿದೆ. ಈ ಸಮಯವು ಸುಗ್ಗಿಯ ಕಾಲವಾಗಿದ್ದು, ರೈತರು ಕಷ್ಟಪಟ್ಟು ದುಡಿದ ಬೆಳೆಯೂ ಕೈಗೆ ಬಂದಿರುತ್ತದೆ. ಕೃಷಿ ಚಟುವಟಿಕೆಗಳು ಮುಗಿದು ನಿಟ್ಟುಸಿರು ಬಿಡುವ ಕಾಲವೂ ಆಗಿದೆ. ಇಂತಹ ಸಮಯದಲ್ಲಿಯೇ ಪ್ರತಿವರ್ಷವೂ ಚಿಕ್ಕಲ್ಲೂರು ಜಾತ್ರೆ ನಡೆಯುತ್ತದೆ. ಜನ ಸಿದ್ದಪ್ಪಾಜಿಗೆ ತನುಮನಧನ ಅರ್ಪಿಸಿ ನೆಮ್ಮದಿ ಪಡುತ್ತಾರೆ.

ಐದು ದಿನಗಳ ಕಾಲ ನಡೆಯುವ ನಡೆಯುವ ಚಿಕ್ಕಲ್ಲೂರು ಜಾತ್ರೆಯಲ್ಲಿ ಏನೇನು ವಿಶೇಷತೆ, ಸೇವೆ ನಡೆಯಲಿದೆ ಎನ್ನುವುದನ್ನು ನೋಡಿದ್ದೇ ಆದರೆ ಜ.3ರ ರಾತ್ರಿ ಚಂದ್ರಮಂಡಲೋತ್ಸವ, ಜ.4ರಂದು ಹುಲಿವಾಹನೋತ್ಸವ, ದೊಡ್ಡವರ ಸೇವೆ, ಜ.5ರಂದು ರುದ್ರಾಕ್ಷಿ ಮಂಟಪೋತ್ಸವ ಮುಡಿಸೇವೆ ಅಥವಾ ನೀಲಗಾರರ ದೀಕ್ಷೆ, ಜ.6ರಂದು ಗಜವಾಹನೋತ್ಸವ ಪಂಕ್ತಿ ಸೇವೆ ನಡೆಯಲಿದ್ದು ಅಂದು ಏಳು ಊರುಗಳ ಎಲ್ಲ ಜಾತಿ ಸಮುದಾಯದ ಜನರು ಕುಟುಂಬ ಸಮೇತ ಮಾಂಸದ ಅಡುಗೆ ಸಿದ್ಧಪಡಿಸಿ ಸಿದ್ದಪ್ಪಾಜಿಗೆ ಎಡೆ ಇಟ್ಟು ನಂತರ ಸಹಭೋಜನ ನಡೆಸಲಿದ್ದಾರೆ. ಕೊನೆಯ ದಿನವಾದ ಜ.7ರಂದು ಮುತ್ತುರಾಯರ ಸೇವೆ ಅಥವಾ ಕಡೆ ಬಾಗಿಲು ಸೇವೆಯೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ. ಭಕ್ತರ ಅನುಕೂಲಕ್ಕಾಗಿ ಚಿಕ್ಕಲ್ಲೂರು ಕ್ಷೇತ್ರದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದ್ದಲ್ಲದೆ, ಜಾತ್ರೆಗೆ ಬರುವ ಭಕ್ತರಿಗೆ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ.
B M Lavakumar







