LatestMysore

ರೈತರ ಕಾಯಕದಲ್ಲೇ ಬಸವಣ್ಣನವರ ಕಾಯಕ– ದಾಸೋಹ ತತ್ವಗಳ ಜೀವಂತ ಪ್ರತಿಬಿಂಬ: ರೂಪ ಕುಮಾರಸ್ವಾಮಿ

ಬಾಹ್ಯ ವೈಭವಕ್ಕಿಂತ ಉತ್ತಮ ವ್ಯಕ್ತಿತ್ವ ಮತ್ತು ಮೌಲ್ಯಯುತ ಬದುಕಿಗೆ ಆದ್ಯತೆ ನೀಡಬೇಕು

ಮಳವಳ್ಳಿ: ರೈತರ ಕಾಯಕತತ್ವವು ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳ ಪ್ರತಿರೂಪವಾಗಿದೆ. ಶರಣರ ನಡೆ-ನುಡಿಯನ್ನು ಹೆಬ್ಬಣಿ ಗ್ರಾಮದ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಹೇಳಿದರು.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹೆಬ್ಬಣಿಗ್ರಾಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ನೀಲ ಬಿ.ಆರ್. ಸವಣೂರು ಮತ್ತು ನಳಿನ ಚಂದ್ರಶೇಖರ್ ದತ್ತಿ ಅಂಗವಾಗಿ ಹಮ್ಮಿಕೊಂಡಿದ್ದ ವಚನಗ್ರಾಮ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ  ಅವರು ರೈತರ ಕಾಯಕತತ್ವವು ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳ ಪ್ರತಿರೂಪವಾಗಿದೆ. ಶರಣರ ನಡೆ-ನುಡಿಯನ್ನು ಹೆಬ್ಬಣಿ ಗ್ರಾಮದ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದ ಅವರು, 12ನೇ ಶತಮಾನದ ಶರಣ ಒಕ್ಕಲಿಗ ಮುದ್ದಣ್ಣನವರ ದೃಷ್ಟಾಂತವನ್ನು ಉದಾಹರಿಸಿ ಅರ್ಥಪೂರ್ಣ ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ  ವಚನ ಕುಮಾರಸ್ವಾಮಿ ಮಾತನಾಡಿ ಮೋಳಿಗೆಮಾರಯ್ಯ ಮತ್ತು ಮೋಳಿಗೆ ಮಹಾದೇವಿ ದಂಪತಿಗಳ ತ್ಯಾಗಮಯ ಜೀವನವನ್ನು ಸ್ಮರಿಸಿದರು. ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದು ಅರಸುತನಕ್ಕೆ ತಿಲಾಂಜಲಿ ಹೇಳಿ ಕಟ್ಟಿಗೆ ಕಡಿದು ಮಾರುವ ಕಾಯಕವನ್ನು ಸ್ವೀಕರಿಸಿದ ಅವರ ಬದುಕು ವಚನ ಮೌಲ್ಯಗಳ ಜೀವಂತ ಉದಾಹರಣೆ ಎಂದು ಹೇಳಿದರು.

“ಆನೆ ಕುದುರೆ ಭಂಡಾರವಿರ್ದೇನು, ತಾನುಂಬುದು ಪಡಿಯಕ್ಕಿ ಒಂದಾವಿ‌ನ ಹಾಲು, ಮಲುಗುವುದದರ್ಧ ಮಂಚ – ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜ” ಎಂಬ ವಚನವನ್ನು ಉದಾಹರಿಸಿ, ಬಾಹ್ಯ ವೈಭವಕ್ಕಿಂತ ಉತ್ತಮ ವ್ಯಕ್ತಿತ್ವ ಮತ್ತು ಮೌಲ್ಯಯುತ ಬದುಕಿಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಪ್ರತಿಯೊಂದು ಮನೆಗೂ ಉಚಿತವಾಗಿ ವಚನ ಪುಸ್ತಕಗಳನ್ನು ವಿತರಿಸಿ, ನಂತರ ಶ್ರೀ ನಿರ್ವಾಣೇಶ್ವರ ವಿರಕ್ತ ಮಠದಲ್ಲಿ ನಡೆದ ಸಮಾರಂಭದಲ್ಲಿ ವಚನ ಸಾಹಿತ್ಯದ ಮಹತ್ವವನ್ನು ಜನತೆಗೆ ಪರಿಚಯಿಸಲಾಯಿತು. ವಚನ ಮೌಲ್ಯಗಳನ್ನು ಅಳವಡಿಸಿಕೊಂಡ ಹೆಬ್ಬಣಿಗ್ರಾಮವನ್ನು ವಚನಗ್ರಾಮ ಎಂದು ಅಧಿಕೃತವಾಗಿ ಘೋಷಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ನಿರ್ವಾಣೇಶ್ವರ ಮಠದ ಶ್ರೀ ಶಂಭುಲಿಂಗಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಳವಳ್ಳಿ ಸಿ.ಇ.ಎಸ್.ಸಿ ಕಾರ್ಯನಿರ್ವಾಹಕ ಅಭಿಯಂತರ ಪುಟ್ಟಸ್ವಾಮಿ, ಮಳವಳ್ಳಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಮೂರ್ತಿ, ಮಂಡ್ಯ ಜಿಲ್ಲಾ ಶರಣ ವೇದಿಕೆ ಸಂಘಟನೆ ಗೌರವಾಧ್ಯಕ್ಷ ಬಬ್ರುವಾಹನ, ಗೌಡಿಕೆ ನಾಗೇಶ್,  ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಉಪಾಧ್ಯಕ್ಷ ಶಿವಪುರ ಉಮಾಪತಿ ಉಪಸ್ಥಿತರಿದ್ದರು. ಮೌಲ್ಯ ನಿರೂಪಿಸಿದರು,  ಮಹದೇವಸ್ವಾಮಿ ಪ್ರಾರ್ಥಿಸಿದರು. ಮೋಹನ್ ಕುಮಾರ್ ವಂದಿಸಿದರು.

admin
the authoradmin

Leave a Reply

Translate to any language you want