LatestSports

ಗ್ರಾಮೀಣ ಜನರ ಕ್ರೇಜ್  ಎತ್ತಿನಗಾಡಿ ಓಟ… ಗಮನಸೆಳೆಯುವ ಬಂಡಿ ಉತ್ಸವದ ವಿಶೇಷತೆಗಳೇನು?

ಎತ್ತಿನಗಾಡಿ ಓಟ ಇವತ್ತಿಗೂ ಗ್ರಾಮೀಣ ಭಾಗದ ಪ್ರಮುಖ ಕ್ರೀಡೆಯಾಗಿ ಮೇಳೈಸುತ್ತಿದೆ.

ಎಲ್ಲ ಸಂಭ್ರಮವೂ ನಮಗೆ ಮಾತ್ರ ಸಾಕಾ? ನಮ್ಮೊಂದಿಗೆ ಹೆಗಲಿಗೆ ಹೆಗಲಾಗಿ ದುಡಿದ ಎತ್ತುಗಳಿಗೂ ಬೇಡವಾ? ಎಂಬ ಆಲೋಚನೆಗಳಿಂದ ನಮ್ಮ ಪೂರ್ವಿಕರು ಜಾರಿಗೆ ತಂದ ಎತ್ತಿನ ಗಾಡಿ ಓಟ ಮತ್ತು ಅದಕ್ಕಾಗಿಯೇ ಸೃಷ್ಟಿ ಮಾಡಿದ ಬಂಡೀ ಉತ್ಸವ ಗ್ರಾಮೀಣ ಬದುಕಿನ ಸೊಗಡಾಗಿದೆ. ಇದನ್ನು ಉಳಿಸಿ, ಬೆಳೆಸಿಕೊಂಡು ಬರುವ ಪ್ರಯತ್ನ ಮುಂದುವರೆಯುತ್ತಿದೆ. ತಲತಲಾಂತರದಿಂದ ಬಂದ ಈ ಎತ್ತಿನ ಗಾಡಿ ಓಟ ಈಗ ಆಧುನಿಕ ಹೊಳಪು ಪಡೆದುಕೊಂಡು ಗಮನಸೆಳೆಯುತ್ತಿದೆ.

ಹಾಗೆನೋಡಿದರೆ ಗ್ರಾಮೀಣ ಪ್ರದೇಶದ ರೋಮಾಂಚನಕಾರಿ ಕ್ರೀಡೆಯಲ್ಲಿ ಎತ್ತಿನಗಾಡಿ ಓಟವೂ ಒಂದಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಿಂದಿನ ಕಾಲದಲ್ಲಿ ಸದಾ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ರೈತರು ಮನರಂಜನೆ ಮತ್ತು ಸಾಹಸ ಪ್ರದರ್ಶನಕ್ಕಾಗಿ ಹುಟ್ಟುಹಾಕಿದ ಎತ್ತಿನಗಾಡಿ ಓಟ ಇವತ್ತಿಗೂ ಗ್ರಾಮೀಣ ಭಾಗದ ಪ್ರಮುಖ ಕ್ರೀಡೆಯಾಗಿ ಮೇಳೈಸುತ್ತಿದೆ. ಈಗ ಮೊದಲಿಗೆ ಹೋಲಿಸಿದರೆ ಒಂದಷ್ಟು ಬದಲಾವಣೆಗಳೊಂದಿಗೆ ಇನ್ನಷ್ಟು ವೈಭವತೆ ಪಡೆದುಕೊಂಡಿರುವುದು ನಿಜಕ್ಕೂ ಖುಷಿಪಡುವ ಸಂಗತಿಯಾಗಿದೆ.

ಜಾತ್ರೆಯ ಸಮಯದಲ್ಲಿ ಎತ್ತಿನಗಾಡಿ ಓಟ ಅರ್ಥಾತ್ ಬಂಡಿ ಉತ್ಸವವನ್ನು ನಡೆಸುವ ಮೂಲಕ ಎತ್ತಿನಗಾಡಿ ಓಟವನ್ನು ಕೆಲವು ಜಾತ್ರೆಯಲ್ಲಿ ನಡೆಯಲೇ ಬೇಕೆಂಬ ಸಂಪ್ರದಾಯವನ್ನು ಮಾಡಿರುವುದು ಅವು ಉಳಿದು ಬೆಳೆಯಲಿ ಎಂಬ ಉದ್ದೇಶದಿಂದ ಎಂಬುದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ತಮ್ಮೊಂದಿಗೆ ಕೃಷಿ ಚಟುವಟಿಕೆಯಲ್ಲಿ ಹೆಗಲಿಗೆ ಹೆಗಲುಕೊಟ್ಟು ದುಡಿದ ಎತ್ತುಗಳು ಶಕ್ತಿ ಸಾಮರ್ಥ್ಯದಲ್ಲಿ ಕಡಿಮೆಯಿಲ್ಲ ಎಂಬುದನ್ನು ತೋರಿಸುವ ಸಲುವಾಗಿ ಎತ್ತಿನಗಾಡಿ ಓಟವನ್ನು ಹಿಂದಿನ ಕಾಲದವರು ನಡೆಸುತ್ತಿದ್ದರು. ಆ ಮೂಲಕ ಮನರಂಜನೆ ಪಡೆಯುತ್ತಿದ್ದರು.

ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಪಡೆಯುವುದು ಸುಲಭವಲ್ಲ. ಎತ್ತಿನಗಾಡಿಯನ್ನು ಓಡಿಸುವುದು ಒಂದು ರೀತಿಯ ಸಾಹಸವೇ… ಇದಕ್ಕೆ ಪರಿಣತಿ ಬೇಕಾಗುತ್ತದೆ. ತಮ್ಮದೇ ಎತ್ತುಗಳ ಬಂಡಿಯ ಮೂಲಕ ಸ್ಪರ್ಧಾ ಸ್ಥಳಕ್ಕೆ ತೆರಳಿ ಅಲ್ಲಿ ಓಡಿ ಗೆಲುವು ಪಡೆಯುವ ಮೂಲಕ ಹತ್ತೂರುಗಳಲ್ಲಿ ಹೆಸರು ಪಡೆಯುತ್ತಿದ್ದ ಕಾಲವಿತ್ತು. ಇವತ್ತಿಗೂ ಬಹಳಷ್ಟು ರೈತರು ಬರೀ ಕೃಷಿ ಚಟುವಟಿಕೆ ಮಾತ್ರವಲ್ಲದೆ, ಎತ್ತಿನಗಾಡಿ ಓಡಿಸಿ ಗೆಲುವು ಸಾಧಿಸುವ ಮೂಲಕ ಸಾಧನೆ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.

ಇನ್ನು ಎತ್ತುಗಳನ್ನು ಗಾಡಿ ಸಹಿತ  ಓಡಿಸುವುದು ಒಂದು ರೀತಿಯ ಸಾಹಸ ಮತ್ತು ರೋಮಾಂಚನಕಾರಿ. ಇದರಲ್ಲಿ ಪರಿಣತಿ ಬೇಕಾಗುತ್ತದೆ. ಜತೆಗೆ ಎತ್ತುಗಳು ಕೂಡ ದಷ್ಠಪುಷ್ಠವಾಗಿ ಆರೋಗ್ಯವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಎತ್ತುಗಳು ವೇಗವಾಗಿ ಓಡುವಂತೆ ಮಾಡುವುದು ಗಾಡಿ ಓಡಿಸುವವರ ಕ್ಷಮತೆಯಾಗಿರುತ್ತದೆ. ಎತ್ತಿನ  ಬಂಡಿಯನ್ನು ಓಡಿಸುವವರು ಕೂಡ ಪರಿಣತಿ ಹೊಂದಿರಬೇಕಾಗುತ್ತದೆ. ಎತ್ತುಗಳನ್ನು ವೇಗವಾಗಿ ಓಡುವಂತೆ ಪ್ರೇರೇಪಿಸುತ್ತಾ ನಿರ್ಧಿಷ್ಟ ಗುರಿಯನ್ನು ಅತಿ ಕಡಿಮೆ ಸಮಯದಲ್ಲಿ ತಲುಪಬೇಕಾಗುತ್ತದೆ. ಹೀಗೆ ತಲುಪಿದ ಎತ್ತಿನಗಾಡಿ ಮತ್ತು ಅದನ್ನು ಓಡಿಸಿದವರು ಚಾಂಪಿಯನ್ ಆಗುತ್ತಾರೆ.

ಎತ್ತಿನಗಾಡಿ ಓಟಕ್ಕೆ ರಾಸುಗಳನ್ನು ತಯಾರು ಮಾಡುವುದು ಕಷ್ಟದ ಕೆಲಸವೇ.. ಅವುಗಳಿಗೆ ತರಬೇತಿ ನೀಡಬೇಕಾಗುತ್ತದೆ. ಜತೆಗೆ ಅವುಗಳನ್ನು ಜತನದಿಂದ ನೋಡಿಕೊಳ್ಳಬೇಕಾಗುತ್ತದೆ. ಇಷ್ಟೆಲ್ಲ ಮಾಡಿದ ಮೇಲೆ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದರೆ ಅವು ಪ್ರಶಂಸೆಗೆ ಪಾತ್ರವಾಗುತ್ತವೆ. ಮುಂದೆ ಎತ್ತಿನಗಾಡಿ ಸ್ಪರ್ಧೆ ಎಲ್ಲೆಲ್ಲಿ ನಡೆಯುತ್ತವೆಯೋ ಅಲ್ಲಿಗೆ ತೆರಳಲು ಆಹ್ವಾನಗಳು  ಬರುತ್ತವೆ.

ಅದು ಏನೇ ಇರಲಿ ಆಧುನಿಕ ಕಾಲಘಟ್ಟದಲ್ಲಿ ರೋಮಾಂಚನಕಾರಿ ಸಾಹಸ ಸ್ಪರ್ಧೆಗಳನ್ನು ದ್ವಿಚಕ್ರ, ನಾಲ್ಕು ಚಕ್ರವಾಹನಗಳ ಮೂಲಕ ನಡೆಸಲಾಗುತ್ತಿದೆ. ಆದರೂ ಅವುಗಳ ನಡುವೆ ಎತ್ತಿನಗಾಡಿ ಓಟ ಇವತ್ತಿಗೂ ತನ್ನದೇ ಆದ ಕ್ರೇಜ್ ನ್ನು ಉಳಿಸಿಕೊಂಡಿರುವುದು ನಾವೆಲ್ಲರೂ ಖುಷಿಪಡಬೇಕಾದ ಸಂಗತಿಯಾಗಿದೆ. ಅಷ್ಟೇ ಅಲ್ಲದೆ ಇದು ಗ್ರಾಮೀಣ ಜನರ ಶಕ್ತಿಯೂ ಹೌದು.

ಬಾಕ್ಸಿಂಗ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಲ್ಲದೆ, ಅಂತರಾಷ್ಟ್ರೀಯ ಮಟ್ಟದಲ್ಲಿ  ಮಿಂಚುವ ಸಲುವಾಗಿ ಕಠಿಣ ಪರಿಶ್ರಮ ಪಡುತ್ತಿರುವ ಭರವಸೆಯ ಕ್ರೀಡಾ ವಿದ್ಯಾರ್ಥಿನಿ ಮೈಸೂರಿನ ಮಹಾರಾಜ ಕಾಲೇಜಿನ ಸಿ.ಹೆಚ್.ಸ್ಪೂರ್ತಿ…

B M Lavakumar

admin
the authoradmin

Leave a Reply

Translate to any language you want