LatestMysore

ಹುಣಸಹಳ್ಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಹಾಗೂ ಶ್ರೀ ರೇವಣ್ಣ ಸಿದ್ದೇಶ್ವರ ಅದ್ಧೂರಿ ಜಾತ್ರಾ ಮಹೋತ್ಸವ

ಸರಗೂರು: ತಾಲೂಕಿನ ಹುಣಸಹಳ್ಳಿ ಗ್ರಾಮದಲ್ಲಿ ಮಂಗಳವಾರ ಶ್ರೀ ಬಸವೇಶ್ವರ ಹಾಗೂ ಶ್ರೀ ರೇವಣ ಸಿದ್ದೇಶ್ವರ ಜಾತ್ರಾ ಮಹೋತ್ಸವವು ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ಭಾರಿ ವಿಜೃಂಭಣೆಯಿಂದ ನೆರವೇರಿತು. ಧಾರ್ಮಿಕ ಶ್ರದ್ಧೆ, ಸಂಪ್ರದಾಯ ಹಾಗೂ ಜನಸಾಮಾನ್ಯರ ಭಕ್ತಿಭಾವದ ಸಮನ್ವಯದೊಂದಿಗೆ ನಡೆದ ಈ ಜಾತ್ರಾ ಮಹೋತ್ಸವವು ಗ್ರಾಮದೆಲ್ಲೆಡೆ ಹಬ್ಬದ ಸಂಭ್ರಮವನ್ನು ಮೂಡಿಸಿತು.

ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನವನ್ನು ವಿವಿಧ ಬಣ್ಣಗಳಿಂದ ಅಲಂಕರಿಸಿ, ತಳಿರು–ತೋರಣಗಳನ್ನು ಕಟ್ಟಿ ಆಕರ್ಷಕವಾಗಿ ಸಿಂಗಾರಿಸಲಾಗಿತ್ತು. ದೇವಾಲಯದ ಆವರಣ ಹಾಗೂ ಗ್ರಾಮದ ಪ್ರಮುಖ ಬೀದಿಗಳು ಭಕ್ತರ ನಡಿಗೆಗಳಿಂದ ಕಂಗೊಳಿಸುತ್ತಿದ್ದು, ವಾದ್ಯಗೋಷ್ಠಿಗಳ ಮೆರಗು ಜಾತ್ರೆಗೆ ವಿಶೇಷ ಝಳಪನ್ನು ನೀಡಿತು.

ಗ್ರಾಮದ ಬೀದಿಗಳಲ್ಲಿ ಶ್ರೀ ದೇವರ ರಥೋತ್ಸವ ಭಕ್ತಿಪೂರ್ವಕವಾಗಿ ಸಾಗಿ ಬಂತು. ವೀರಗಾಸೆ ನೃತ್ಯದ ಪ್ರದರ್ಶನಗಳು ಜನಮನ ಸೆಳೆದರೆ, ಸತ್ತಿಗೆಗಳು, ನಂದಿಧ್ವಜ ಕಂಬಗಳ ಮೆರವಣಿಗೆ ಇಲ್ಲಿನ ಗ್ರಾಮದ್ದೆ ಆಗಿದ್ದು, ಇದು ಜಾತ್ರೆಗೆ ಸಂಪ್ರದಾಯಿಕ ಘನತೆಯನ್ನು ನೀಡಿತು.

ರಥೋತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಇಲ್ಲಿನ ಪ್ರತಿಯೊಂದು ಮನೆಯ ಹೆಣ್ಣು ಮಕ್ಕಳುಗಳು, ಮಹಿಳೆಯರು ದಾರಿ ಉದ್ದಕ್ಕೂ ಪೂಜೆ ಸಲ್ಲಿಸಿದರು. ನಂತರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಸಮಾಪ್ತಿಯಾಯಿತು.

ರಥೋತ್ಸವದ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ಹಲವರು ದೇವರ ನಾಮಸ್ಮರಣೆ ಮಾಡುತ್ತಾ ಭಕ್ತಿಭಾವದಲ್ಲಿ ತಲ್ಲೀನರಾದರು.

ಈ ರಥೋತ್ಸವದ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಇಬ್ಜಾಲ್ ಗ್ರಾಮದ ಮಹದೇಶ್ವರ ದೇವಸ್ಥಾನದ ಬಸವ ರನ್ನು ಕರೆ ತಂದು ಬಸವೇಶ್ವರ ದೇವರ ಬಸವ ಮೆರವಣಿಗೆ ವಿಶೇಷ ಆಕರ್ಷಣೆಯಾಗಿದ್ದು, ಈ ಬಸವನಿಗೆ  ಭಕ್ತಾದಿಗಳು ದಾರಿ ಉದ್ದಕ್ಕೂ ಮಲಗಿ ಬಸವನ ಆಶೀರ್ವಾದ ಪಡೆದರು.

ಈ ರಥೋತ್ಸವಕ್ಕೆ ಭಕ್ತರು ಹೂವುಗಳು, ಬಾಳೆ ಹಣ್ಣುಗಳನ್ನು, ಹೊಡೆದು ಇಡುಗಾಯಿ ಹೊಡೆದು ಭಕ್ತಿ ಸಮರ್ಪಿಸಿ ದೇವರಿಗೆ ನಮಿಸಿದರು. ಇನ್ನು ಕೆಲವರು ತಾವುಗಳು ಹೊತ್ತ ಹರಕೆಗಳನ್ನು ತೀರಿಸಿ ದೇವರ ಕೃಪೆಗೆ ಪಾತ್ರರಾದರು.

ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸರಗೂರು ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ  ಆರ್. ಕಿರಣ್ ಅವರ ನೇತೃತ್ವದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ಎ.ಎಸ್.ಐ ಶಿವು, ಇಮ್ರಾನ್ ಆನಂದ್, ಜಗದೀಶ, ರಾಜು ಸಿಬ್ಬಂದಿ ವರ್ಗದವರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಗುಡಿಗೌಡರು, ಯಜಮಾನರುಗಳು, ವಿವಿಧ ಸಮಾಜಗಳ ಮುಖಂಡರು ಸೇರಿದಂತೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಜಾತ್ರೆಯ ಅಂಗವಾಗಿ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರೂ ಪ್ರಸಾದ ಸ್ವೀಕರಿಸಿದರು.

ಜಾತ್ರಾ ಮಹೋತ್ಸವದ ಕೊನೆಯ ಹಂತವಾಗಿ ರಾತ್ರಿ ವೇಳೆಗೆ ಶನಿಪ್ರಭಾವ ರಾಜವಿಕ್ರಮ ನಾಟಕ ಪ್ರದರ್ಶನ ನಡೆಯಿತು. ನಾಟಕವು ಭಕ್ತರು ಹಾಗೂ ಗ್ರಾಮಸ್ಥರಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಸಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.

ಒಟ್ಟಾರೆ, ಹುಣಸಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಬಸವೇಶ್ವರ ಹಾಗೂ ಶ್ರೀ ರೇವಣ ಸಿದ್ದೇಶ್ವರ ಜಾತ್ರಾ ಮಹೋತ್ಸವವು ಭಕ್ತಿಭಾವ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಯಶಸ್ವಿಯಾಗಿ ನೆರವೇರಿತು.

admin
the authoradmin

Leave a Reply

Translate to any language you want