ಚಾಮುಂಡಿಬೆಟ್ಟದಲ್ಲಿ 36 ಕೋಟಿ ರೂ.ವೆಚ್ಚದಲ್ಲಿ ‘ಪ್ರಸಾದ್’ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಆರಂಭ

ಮೈಸೂರು: ನಾಡದೇವತೆ ಚಾಮುಂಡೇಶ್ವರಿ ನೆಲೆ ನಿಂತ ಪವಿತ್ರಕ್ಷೇತ್ರವಾಗಿರುವ ಚಾಮುಂಡಿ ಬೆಟ್ಟದಲ್ಲಿ 36 ಕೋಟಿ ರೂ.ವೆಚ್ಚದಲ್ಲಿ ‘ಪ್ರಸಾದ್’ ಯೋಜನೆಯಡಿ ವಿವಿಧ ಕಾಮಗಾರಿಗಳು ಆರಂಭವಾಗಿದ್ದು ಭಕ್ತರಲ್ಲಿ ಹರ್ಷ ತಂದಿದೆ.
ಚಾಮುಂಡೇಶ್ವರಿ ದೇಗುಲದ ಪಕ್ಕದಲ್ಲಿಯೇ ಇರುವ ಖಾಲಿ ಜಾಗದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಸುಸಜ್ಜಿತವಾದ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಜೆಸಿಬಿ ಸಹಾಯದಿಂದ ವೇದಿಕೆ ನಿರ್ಮಾಣಕ್ಕೆ ಅಗತ್ಯವಾದ ಅಡಿಪಾಯವನ್ನು ತೆಗೆಯಲಾಗುತ್ತಿದೆ.. ಪಾದರಕ್ಷೆಗಳನ್ನಿಡಲು ಶೂ ಸ್ಟ್ಯಾಂಡ್ ಕಟ್ಟಡ, ಲಗೇಜ್ಗಳನ್ನು ಇರಿಸಲು ಕೊಠಡಿ ಸೇರಿದಂತೆ ವಿವಿಧ ಕಟ್ಟಡಗಳು ಈ ಸ್ಥಳದಲ್ಲಿ ತಲೆ ಎತ್ತಲಿವೆ. ಸಾಲು ಮಂಟಪ ನಿರ್ಮಾಣವಾಗಲಿದ್ದು, ಚಾಮುಂಡಿ ಬೆಟ್ಟದ ದೇಗುಲದ ಅಂಗಳಕ್ಕೆ ಪ್ರವೇಶಿಸುತ್ತಿದ್ದಂತೆಯೇ ಭಕ್ತರಿಗೆ ಸ್ವಾಗತ ಕೋರುವ ಗೋಪುರವನ್ನು ನಿರ್ಮಿಸಲು ಯೋಜಿಸಲಾಗಿದೆ. ಮಹಿಷಾಸುರ ಪ್ರತಿಮೆ ಬಳಿ ಪ್ಲಾಜಾ ನಿರ್ಮಾಣವಾಗಲಿದ್ದು, ಸಿಸಿಟಿವಿ ಸೌಲಭ್ಯ ಸಹಿತ ಟಿಕೆಟಿಂಗ್ ಕೌಂಟರ್ ಕೂಡ ಇರಲಿದೆ.

ಕೇಂದ್ರ ಸರ್ಕಾರವು ಅನುದಾನ ಬಿಡುಗಡೆ ಮಾಡಿದ್ದು, ಕರ್ನಾಟಕ ಪ್ರವಾಸೋದ್ಯಮ ಮೂಲ ಸೌಕರ್ಯ ನಿಗಮವು ಟೆಂಡರ್, ಕಾಮಗಾರಿ ಅನುಷ್ಠಾನದ ಉಸ್ತುವಾರಿಯನ್ನು ಹೊತ್ತಿದೆ. 9 ತಿಂಗಳಲ್ಲಿ ಉದ್ದೇಶಿತ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿಯನ್ನು ಪ್ರವಾಸೋದ್ಯಮ ಇಲಾಖೆ ಹಾಕಿಕೊಂಡಿದೆ. ಪಾರಂಪರಿಕತೆಗೆ ದಕ್ಕೆಯಾಗದಂತೆ ದರ್ಶನಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರಿಗೆ ಪ್ರವಾಸೋದ್ಯಮ ಸ್ನೇಹಿಯಾಗಿ ಯೋಜನೆ ರೂಪಿತಗೊಂಡಿದೆ.
ದೇವಾಲಯಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದೂ, ರಾತ್ರಿ ವೇಳೆ ದೇವಾಲಯವನ್ನು ಮುಚ್ಚಿದ ಬಳಿಕ ಹೆಚ್ಚಿನ ಕೆಲಸಗಳನ್ನು ಕೈಗೊಳ್ಳಲಾಗುತ್ತದೆ, ಅಗತ್ಯವಿದ್ದಲ್ಲಿ ಹಗಲು ವೇಳೆಯಲ್ಲೂ ನಿರ್ದಿಷ್ಟ ಕಾಮಗಾರಿಗಳು ನಡೆಯಲಿದೆ ಎಂಬುದು ಪ್ರವಾಸೋದ್ಯಮ ಇಲಾಖೆಯ ಮೂಲಗಳಿಂದ ಲಭ್ಯವಾದ ಮಾಹಿತಿಯಾಗಿದೆ.







