ಯಳಂದೂರಿನಲ್ಲಿ ಮೇಸ್ತ್ರಿಗೆ ಪತ್ರಕರ್ತರ ಸೋಗಿನಲ್ಲ್ಲಿ ಹಣಕ್ಕೆ ಬೇಡಿಕೆ, ಹಲ್ಲೆ: ಇಬ್ಬರು ವಶಕ್ಕೆ.. ಏನಿದು ಘಟನೆ?

ಯಳಂದೂರು(ನಾಗರಾಜ ವೈ.ಕೆ.ಮೊಳೆ): ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ರಸ್ತೆಗೆ ಡಾಂಬರು ಹಾಕುವ ವಿಷಯವಾಗಿ ಮಾಧ್ಯಮದವರೆಂದು ಹೇಳಿ ಹಣಕ್ಕೆ ಬೇಡಿಕೆಯಿಟ್ಟಿದ್ದಲ್ಲದೆ, ಹಣವನ್ನು ಕೊಡದಿದ್ದಾಗ ಕೆಲಸದ ಮೇಸ್ತ್ರಿ ಮೇಲೆ ಹಲ್ಲೆ ನಡೆಸಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.
ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಇನ್ನೊಬ್ಬ ನಾಪತ್ತೆಯಾಗಿದ್ದು, ಇನ್ನಷ್ಟು ಮಂದಿ ಇದರಲ್ಲಿ ಭಾಗಿಯಾಗಿದ್ದಾರೆ ಪೊಲೀಸರು ಶಂಕಿಸಿದ್ದಾರೆ. ಘಟನೆ ಬಗ್ಗೆ ಮೇಸ್ತ್ರಿ ಸಿ.ಚೆಲುವರಾಜು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು ಈ ಸಂಬಂಧ ಕೃಷ್ಣಾಪುರ ಗ್ರಾಮದ ಶೇಖರ ಹಾಗೂ ಹೊನ್ನೂರು ಗ್ರಾಮದ ಪುನೀತ್‌ರಾಜ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಪುರುಷೋತ್ತಮ್ (ರಾಜು) ಎಂಬುವನ ಬಂಧನಕ್ಕೆ ಬಲೆ ಬೀಸಿದ್ದಾರೆ. ಅಲ್ಲದೆ ಇನ್ನಷ್ಟು ಮಂದಿ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಿದ್ದಾರೆ.

ಏನಿದು ಘಟನೆ?: ಮೈಸೂರಿನ ಅನ್ನಪೂಣೇಶ್ವರಿ ಕನ್ಸ್ ಸ್ಟ್ರಕ್ಷನ್‌ನಲ್ಲಿ ಟಾರ್ ಮೇಸ್ತ್ರಿಯಾಗಿ ಸಿ. ಚೆಲುವರಾಜು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಕಂಪೆನಿ ಕಳೆದ ಎರಡು ತಿಂಗಳಿಂದ ತಾಲೂಕಿನ ಬಿ.ಆರ್.ಹಿಲ್ಸ್ ರಸ್ತೆ ಹಾಗೂ ವೈ.ಕೆ.ಮೋಳೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿ ನಡೆಸುತ್ತಿದೆ. ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಜ.9 ರಂದು ಕೆಲಸ ನಡೆಯುತ್ತಿದ್ದಾಗ ಶೇಖರ ಹಾಗೂ ಪುರುಷೋತ್ತಮ ಎಂಬುವರು ಎರಡು ಲಕ್ಷ ರೂ. ಹಣವನ್ನು ನೀಡುವಂತೆ ಇಲ್ಲವೆ ಕೆಲಸ ನಿಲ್ಲಿಸುವಂತೆ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ.

ಜ.10 ರಂದು ಪಟ್ಟಣದ ಬಳೇಪೇಟೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು ರಾತ್ರಿ 9.30ರ ವೇಳೆ ಟಾರನ್ನು ಹಾಕಲು ಬಂದಾಗ ಇವರೊಂದಿಗೆ ಪುನೀತ್ ರಾಜ್ ಎಂಬುವರೂ ಜೊತೆಗೂಡಿ ನಾವು ಪತ್ರಿಕೆಯವರು, ಟಿ.ವಿ. ಮಾಧ್ಯಮದವರು ನೀವು ಮಾಡುತ್ತಿರುವ ಕೆಲಸ ನಿಲ್ಲಿಸಿ ಎಂದು ಬೆದರಿಕೆ ಒಡ್ಡಿದ್ದಲ್ಲದೆ, ಚೆಲುವರಾಜುರನ್ನು ನಿಂದಿಸಿದ್ದಾರೆ. ದೈಹಿಕ ಹಲ್ಲೆ ನಡೆಸಿದ್ದಾರೆ. ಆಗ 112 ಕ್ಕೆ ಕರೆ ಮಾಡಿದಾಗ ಈ ಮೂವರು ಹಾಗೂ ಇನ್ನೂ ಕೆಲವರು ಬೆದರಿಕೆವೊಡ್ಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ವಶಕ್ಕೆ ಪಡೆದಿದ್ದಲ್ಲದೆ, ನಾಪತ್ತೆಯಾದವರ ಪತ್ತೆಗೆ ಬಲೆ ಬೀಸಿದ್ದಾರೆ.







