LatestMysore

ಗಂಡು ಮಕ್ಕಳು ಲೈಂಗಿಕ ಶೋಷಣೆಗೆ ಒಳಗಾಗುತ್ತಿರುವುದು ವಿಷಾದದ ಸಂಗತಿ:ಎಸಿಪಿ ರವಿಪ್ರಸಾದ್

 ಮೈಸೂರು: ಗಂಡು ಮಕ್ಕಳು ಕೂಡ ಲೈಂಗಿಕ ಶೋಷಣೆಗೆ ಒಳಗಾಗುತ್ತಿರುವುದು ವಿಷಾದದ ಸಂಗತಿಯಾಗಿದ್ದು, ಪ್ರತಿಯೊಬ್ಬರೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ಬೆಳೆದು ದುರ್ಬಲ ಪರಿಸರವನ್ನು ಉತ್ತಮವಾಗಿ ಕಟ್ಟಬೇಕೆಂದು ಹೆಬ್ಬಾಳದ ಸಹಾಯಕ ಪೊಲೀಸ್ ಆಯುಕ್ತರಾದ ರವಿಪ್ರಸಾದ್ ಕಿವಿಮಾತು ಹೇಳಿದರು.

ಒಡನಾಡಿ ಸೇವಾ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಗಂಡು ಮಕ್ಕಳ ಸಂವೇದನಾಶೀಲ ಕಾರ್ಯಕ್ರಮದಲ್ಲಿ ನೋವು ತಿಂದ ಮಕ್ಕಳ ಕನಸು ಮತ್ತು ಯಶಸ್ಸಿನ ಬಗ್ಗೆ ಆತ್ಮಾವಲೋಕನ ಕಾರ್ಯಕ್ರಮದ ಅಡಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಆಧುನಿಕ ಪ್ರಪಂಚದಲ್ಲಿನ ತಂತ್ರಜ್ಞಾನವು ದುರುಪಯೋಗವಾಗುವ ರೀತಿಯಲ್ಲಿ ಬಳಕೆಯಾಗಬಾರದು, ಮೊಬೈಲ್ ಮತ್ತು ಲ್ಯಾಪ್ ಟಾಪ್ ಗಳು ಒಳ್ಳೆಯ ವಿಷಯಗಳನ್ನು ಗ್ರಹಿಸಲಷ್ಟೇ ಬಳಸಬೇಕು ಎಂದರು.

ಮಕ್ಕಳ ಗುರಿ ಮತ್ತು ಶ್ರಮದ ಬಗ್ಗೆ ಮಾತನಾಡಿ ಕನಸುಗಳು ನಮ್ಮ ಕೈಗೆಟುಕಬೇಕು ಎಂದರೆ ಶಿಕ್ಷಣ ಮತ್ತು ಸಂವೇದನಾಶೀಲತೆಯಿಂದ ಪಡೆದ ಜ್ಞಾನದ ಮುಖೇನ ಮಾತ್ರ ಸಾಧ್ಯ, ಅದೇ ರೀತಿಯಲ್ಲಿ ನಮ್ಮ ಇತಿಹಾಸ ಎಂತಹದ್ದೇ ನೋವುಗಳಿಂದ ಕೂಡಿದ್ದರೂ ಕೂಡ ಜ್ಞಾನದಾಹಿಗಳಾಗಿ ಗುರಿ ಮುಟ್ಟಿದರೆ ಬದುಕು ಸಾಕ್ಷಾತ್ಕಾರ ಎಂದರಲ್ಲದೆ, ತಂತ್ರಜ್ಞಾನವು ಹದಿಹರೆಯದ ಸಮಯದಲ್ಲಿ ದುರುಪಯೋಗ ಆಗುತ್ತಿರುವುದನ್ನು ಗಮನಿಸುತ್ತಿದ್ದೇನೆ ಅದರ ಬಗ್ಗೆ ಎಚ್ಚರದಿಂದಿರಬೇಕು ಮತ್ತು ಜಾಗರೂಕರಾಗಿ ಇರಬೇಕೆಂದು  ಎಚ್ಚರಿಸಿದರು.

ಮಕ್ಕಳ ಕಲ್ಯಾಣ ಸಮಿತಿ ಮೈಸೂರು ಇದರ ಅಧ್ಯಕ್ಷರಾದ ರವಿಚಂದ್ರನ್  ಮಾತನಾಡಿ ಮಕ್ಕಳ ಮುಂದಿನದ ಶಿಕ್ಷಣದ ಅನುಕೂಲತೆಗಾಗಿ ಜವಾಬ್ದಾರಿಯನ್ನು ಅರಿತು ಮುನ್ನಡೆಯಬೇಕು, ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಮೌನವಾಗಿ ಸಹಿಸಿಕೊಳ್ಳಬಾರದು ಅದು ಗಂಡು ಮಕ್ಕಳಾಗಿರಲಿ ಹೆಣ್ಣು ಮಕ್ಕಳಾಗಿರಲಿ ಎಂದು ಧೈರ್ಯ ತುಂಬಿದರು. ಒಡನಾಡಿ ಸಂಸ್ಥೆಯು ಕಳೆದ 36 ವರ್ಷಗಳಿಂದ ರಾಷ್ಟ್ರ ಮತ್ತು ಅಂತರಾಷ್ಟ್ರೀಯ  ಮಟ್ಟದಲ್ಲಿ ಕೆಲಸ ಮಾಡುತ್ತಾ ಸಂವೇದನಾಶೀಲ ಕಾನೂನುಗಳು ಬರಲು ಒಡನಾಡಿಯು ಶ್ರಮವಹಿಸಿದೆ ಎಂದು ಶ್ಲಾಘಿಸಿದರು. ಮಕ್ಕಳು ತಮ್ಮ ಇತಿಹಾಸವನ್ನು ಮರೆಯದೆ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಬಾಳಬೇಕು ಎಂದು ತಿಳಿಸಿದ್ದಲ್ಲದೆ ಮಕ್ಕಳ ಕಲಿಕೆಯ ಇಂಗ್ಲಿಷ್ ಮತ್ತು ಕಂಪ್ಯೂಟರ್ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ಅದರ ತರಬೇತಿಯನ್ನು ಮುಕ್ತಾಯಗೊಳಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿದರು.

ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ರವರು ನಾಯಕತ್ವದ ತರಬೇತಿ ಹೊಂದಿದ ಯುವಕ, ಯುವತಿಯರನ್ನು ಉದ್ದೇಶಿಸಿ ಮಾತನಾಡಿ ನಾಯಕತ್ವ ಎಂಬುದು ಒಂದು ಸಾಮಾಜಿಕ ಜವಾಬ್ದಾರಿ ಮತ್ತು ಕಾನೂನುಗಳನ್ನು ಗೌರವಿಸಿ ಇತರರಿಗೆ ಮಾದರಿಯಾಗಿ ಬದುಕುವುದನ್ನು ನಾಯಕತ್ವದ ಮುಖೇನ ರೂಪಿಸಿಕೊಳ್ಳಬೇಕೆಂದು ಅದರ ಮೂಲಕ ಬದಲಾವಣೆಗಳನ್ನು ತರಬೇಕು ಎಂದರಲ್ಲದೆ, ನಾಯಕತ್ವವಿಲ್ಲದ ವಿದ್ಯೆ ಅಪಪ್ರಯೋಜಕ ಎನಿಸಿಕೊಳ್ಳುತ್ತದೆ ಹಾಗಾಗಿ ವಿದ್ಯಾವಂತ ಯುವಕರು ಸಮಾಜದ ಒಳಿತಿಗಾಗಿ ಬದಲಾವಣೆಗಳಿಗಾಗಿ ಒಳಗೊಳ್ಳುತ್ತಾ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕೆಂದು ತಿಳಿಸಿದರು.

ಒಡನಾಡಿಯ ನಿರ್ದೇಶಕರಾದ ಪರಶುರಾಮ್  ಮತ್ತು ಒಡನಾಡಿಯ ಸಿಬ್ಬಂದಿಗಳಾದ ಪ್ರದೀಪ್, ಶಶಾಂಕ್, ಬಾಲ ಕುಮಾರ್, ನಾಜಿಯಾ ಚಂದನ ಹಾಗೂ ಒಡನಾಡಿಯ ಗ್ರಂಥಾಲಯ ಪಾಲಕರಾದ ಗೀತಾ ಭಾಗವಹಿಸಿದ್ದರು.

admin
the authoradmin

Leave a Reply

Translate to any language you want