LatestMysore

317 ಕೃಷಿ ಪತ್ತಿನ ಸಹಕಾರ ಸಂಘಗಳಿಗೆ 1,350 ಕೋಟಿ ರೂ ಬಡ್ಡಿ ರಹಿತ ಕೃಷಿ ಸಾಲ

ಕೆ.ಆರ್.ನಗರ(ಜಿಟೆಕ್ ಶಂಕರ್): ಎಂಸಿಡಿಸಿಸಿ ಬ್ಯಾಂಕಿನ ವ್ಯಾಪ್ತಿಯ 317 ಕೃಷಿ ಪತ್ತಿನ ಸಹಕಾರ ಸಂಘಗಳಿಗೆ 1,350 ಕೋಟಿ ರೂ ಬಡ್ಡಿ ರಹಿತ ಕೃಷಿ ಸಾಲ ನೀಡಲಾಗಿದೆ ಎಂದು ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.

ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಹೊರ ತಂದಿರುವ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.

ಇದರ ಜತೆಗೆ 650 ಕೋಟಿ ರೂ ಕೃಷಿಯೇತರ ಸಾಲ ವಿತರಣೆ ಮಾಡಲಾಗಿದೆಯಲ್ಲದೆ ಬ್ಯಾಂಕಿನಲ್ಲಿ 950 ಕೋಟಿ ಠೇವಣ  ಹಣ ಸಂಗ್ರಹವಾಗಿದ್ದು ಮಾ, 31ರೊಳಗೆ ಸುಸ್ತಿ ಸಾಲವನ್ನು ಸಂಪೂರ್ಣ ವಸೂಲಿ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

317 ಕೃಷಿ ಪತ್ತಿನ ಸಹಕಾರ ಸಂಘಗಳ  ಪೈಕಿ 172 ಸಂಘಗಳು ಸುಸ್ತಿ ಪಟ್ಟಿಯಲ್ಲಿದ್ದು ಸಾಲ ವಸೂಲಾತಿಯನ್ನು ತೀವೃಗೊಳಿಸುವ ಕೆಲಸಕ್ಕೆ ಚಾಲನೆ ನೀಡಲು ಬ್ಯಾಂಕುಗಳ ವ್ಯವಸ್ಥಾಪಕರು ಮತ್ತು ಮೇಲ್ವಿಚಾರಕರ ಸಭೆ ಕರೆಯಲಾಗಿದ್ದು ಅವರೊಂದಿಗೆ ಸಂಘಗಳ ಆಡಳಿತ ಮಂಡಳಿಯವರು ಮತ್ತು ಕಾರ್ಯ ನಿರ್ವಹಣಾಧಿಕಾರಿಗಳು ಕೈಜೋಡಿಸಿ ಕೆಲಸ ಮಾಡಬೇಕೆಂದರು.

ಸಂಘಗಳ ರೈತ ಸದಸ್ಯರುಗಳು ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡದಿದ್ದರೆ ಹೊಸ ಸದಸ್ಯರಿಗೆ ಸಾಲ ನೀಡಲು ತೊಂದರೆಯಾಗುವುದರೊಂದಿಗೆ ಎಂಸಿಡಿಸಿಸಿ ಬ್ಯಾಂಕಿಗೆ ಅಪೆಕ್ಸ್ ಬ್ಯಾಂಕ್ ಮತ್ತು ನಬಾರ್ಡ್ ನಿಂದ ಆರ್ಥಿಕ ಸಹಕಾರ ದೊರೆಯುವುದಿಲ್ಲ ಎಂದರು.

ಪ್ರಸ್ತುತ  ಎರಡು ಜಿಲ್ಲೆಗಳ 155 ಕೃಷಿ ಪತ್ತಿನ ಸಹಕಾರ ಸಂಘಗಳು ಸುಸ್ತಿ ರಹಿತವಾಗಿದ್ದು ಅಲ್ಲಿನ ಹೊಸ ರೈತ ಸದಸ್ಯರುಗಳಿಗೆ ಸಾಲ ನೀಡಲು ನಿರ್ಧರಿಸಲಾಗಿದ್ದು ಈ ಸಂಬಂಧ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಅದನ್ನು ಶೀಘ್ರದಲ್ಲಿಯೆ ಅನುಷ್ಠಾನ ಮಾಡಲಾಗುತ್ತದೆಂದು ಅಧ್ಯಕ್ಷರು ಪ್ರಕಟಿಸಿದರು.

ಶೇ.5 ರಿಂದ 10 ರಷ್ಠು ಸುಸ್ತಿಯಾಗಿರುವ 60ಸಂಘಗಳಿಗೂ ಸಾಲ ಮರುಪಾವತಿಯ ನಂತರ ಅಲ್ಲಿನ ಹೊಸ ಸದಸ್ಯರಿಗೂ ಸಾಲ ನೀಡಲಾಗುತ್ತದೆಂದ ಅವರು ನಾವು ಆರ್ಥಿಕವಾಗಿ ಸಬಲವಾಗಿದ್ದರೆ ರೈತ ಸದಸ್ಯರು, ಗ್ರಾಹಕರು ಮತ್ತು ಸಿಬ್ಬಂದಿಗೆ ಅನೂಕೂಲವಾಗಲಿದ್ದು ಸರ್ವರೂ ಪರಸ್ಪರ ಸಹಕಾರ ಮನೋಭಾವನೆಯಿಂದ  ಸುಸ್ತಿ ಸಾಲ ವಸೂಲಿ ಮಾಡಿ ಬ್ಯಾಂಕಿನ  ಸರ್ವಾಂಗೀಣ ಅಭಿವೃದ್ದಿಗೆ ಸಹಕರಿಸಬೇಕೆಂದು  ಕೋರಿದರು.

ಸಂಘದ ಅಧ್ಯಕ್ಷ ಶ್ರೀರಾಮಪುರಕೃಷ್ಣೇಗೌಡ, ಉಪಾಧ್ಯಕ್ಷ ಎಂ.ಆರ್.ಮಹದೇವ್, ನಿರ್ದೇಶಕರಾದ ಕೆ.ಎಸ್.ರಂಗೇಶ್, ಕೆ.ಗೋಪಾಲಚಂದ್ರ, ಚಿಕ್ಕಿರೇಗೌಡ, ಕೆ.ವಿ.ಕೃಷ್ಣೇಗೌಡ, ಮೋಹನಕುಮಾರ್, ಎನ್.ಡಿ.ದೇವಮ್ಮ, ಮಂಜಮ್ಮ, ಸಿಇಒ ಎಂ.ಆರ್.ಪ್ರೇಮಕುಮಾರ್, ಕಾರ್ಯದರ್ಶಿ ಎಸ್.ಪಿ.ತ್ಯಾಗರಾಜು ಮತ್ತಿತರರು ಇದ್ದರು.

admin
the authoradmin

Leave a Reply

Translate to any language you want