ಮೈಸೂರು: ಸಿದ್ಧರಾಮೇಶ್ವರರು ಶರಣ ಸಂಸ್ಕೃತಿಯ ಮೂಲಕ ಸಮಾನತೆ, ಕಾಯಕ ಮತ್ತು ದಾಸೋಹದ ಮೌಲ್ಯಗಳನ್ನು ಸಮಾಜಕ್ಕೆ ತಲುಪಿಸಿದ ಮಹಾನ್ ಚಿಂತಕರಾಗಿದ್ದಾರೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.
ಮೈಸೂರಿನ ಬೋಗಾದಿ ಶಾರದಾನಗರ ರೈಲ್ವೆ ಬಡಾವಣೆಯ ಶರಣು ವಿಶ್ವವಚನ ಫೌಂಡೇಷನ್ ಕಚೇರಿ ‘ಶರಣು ಕುಠೀರ’ದಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿಯನ್ನು ಭಕ್ತಿ-ಗೌರವದಿಂದ ಆಚರಿಸಿ ಸಿದ್ಧರಾಮೇಶ್ವರರ ಭಾವಪೂರ್ಣ ಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ, ವಚನ ಪರಂಪರೆಯ ಮಹತ್ವವನ್ನು ಸ್ಮರಿಸಿ ಮಾತನಾಡಿದರು.
“ಸಿದ್ಧರಾಮೇಶ್ವರರಿಗೆ ಅಲ್ಲಮಪ್ರಭುದೇವರಿಂದ ಬಸವಣ್ಣನವರ ಪರಿಚಯವಾಯಿತು. ಬಸವಣ್ಣನವರ ಆದರ್ಶ, ವ್ಯಕ್ತಿತ್ವ ಮತ್ತು ವಚನ ಚಿಂತನೆಗಳಿಂದ ಆಕರ್ಷಿತರಾದ ಸಿದ್ಧರಾಮೇಶ್ವರರು ಬಸವಣ್ಣನವರ ಕುರಿತು ನೂರಾರು ವಚನಗಳನ್ನು ರಚಿಸಿದರು. ವಚನ ಸಾಹಿತ್ಯದ ವಿಕಾಸದಲ್ಲಿ ಅವರ ಪಾತ್ರ ಮಹತ್ತರವಾಗಿದ್ದು, ಅವರನ್ನು ಅನುಭವಮಂಟಪದ ತೃತೀಯ ಅಧ್ಯಕ್ಷರೆಂದು ಕರೆಯಲಾಗುತ್ತದೆ”. ಸಿದ್ಧರಾಮೇಶ್ವರರು ಶರಣ ಸಂಸ್ಕೃತಿಯ ಮೂಲಕ ಸಮಾನತೆ, ಕಾಯಕ ಮತ್ತು ದಾಸೋಹದ ಮೌಲ್ಯಗಳನ್ನು ಸಮಾಜಕ್ಕೆ ತಲುಪಿಸಿದ ಮಹಾನ್ ಚಿಂತಕರಾಗಿದ್ದಾರೆ ಎಂದು ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಅವರು ಮಾತನಾಡಿ, “ಸಿದ್ಧರಾಮೇಶ್ವರರು ಕೇವಲ ಆಧ್ಯಾತ್ಮಿಕ ಸಾಧಕರಷ್ಟೇ ಅಲ್ಲ; ಭೌತಿಕವಾಗಿ ಕೆರೆ-ಕಟ್ಟೆಗಳನ್ನು ನಿರ್ಮಿಸಿ ಜನಜೀವನಕ್ಕೆ ನೆರವಾದ ಕ್ರಿಯಾಶೀಲ ಸಮಾಜಸೇವಕರೂ ಹೌದು. ಆಧ್ಯಾತ್ಮಿಕ ಸಾಧನೆಯೊಂದಿಗೆ ಲೋಕಹಿತದ ಕೆಲಸಗಳನ್ನು ಮಾಡಿದ ಕಾರಣವೇ ಅವರು ‘ಶಿವಯೋಗಿ’ ಎಂಬ ಗೌರವಪದಕ್ಕೆ ಪಾತ್ರರಾದರು”. ಇಂತಹ ಮಹಾನ್ ಶರಣರ ಚಿಂತನೆಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಕವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್‌ನ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಕಾವೇರಿ ನೀರಾವರಿ ನಿಗಮದ ನಿವೃತ್ತ ಅಧಿಕಾರಿ ಸದಾನಂದ್ ಸೇರಿದಂತೆ ವಚನ ಹಾಗೂ ತನುಶ್ರೀ ಉಪಸ್ಥಿತರಿದ್ದರು.








