ಸರಗೂರು: ಸಮೀಪದ ಹೆಬ್ಬಲಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಕುರ ಗ್ರಾಮದಲ್ಲಿ ಇತ್ತೀಚೆಗೆ ಇತಿಹಾಸ ಪ್ರಸಿದ್ಧ ಶ್ರೀ ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವ ಭಾರೀ ವಿಜೃಂಭಣೆಯಿಂದ ನೆರವೇರಿತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ಬಣ್ಣ ಬಳಿದು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಇಡೀ ಗ್ರಾಮವೇ ವಿದ್ಯುದ್ದೀಪಗಳಿಂದ ಜಗಮಗಿಸುತ್ತಿತ್ತು.

ಪೂಜಾ ಕೈಂಕರ್ಯವನ್ನು ಈ ದೇವಸ್ಥಾನದ ಅರ್ಚಕರಾದ ಹೆಚ್.ಸಿ ಬಾಲಕೃಷ್ಣ, ಹೆಚ್.ಬಿ ಪ್ರಕಾಶ್, ದಿವಾಕರ್, ನರಸಿಂಹಮೂರ್ತಿ ರವರು ನೆರವೇರಿಸಿದರು. ಶ್ರೀ ವೇಣುಗೋಪಾಲಸ್ವಾಮಿ ಉತ್ಸವ ಮೂರ್ತಿಯನ್ನು ಕಪಿಲಾ ನದಿಯವರೆಗೆ ಉತ್ಸವದಲ್ಲಿ ಕರೆದೊಯ್ದು ಅಲ್ಲಿ ಗಂಗೆ ಪೂಜೆ ಸಲ್ಲಿಸಿ ನಂತರ ದೇವಸ್ಥಾನಕ್ಕೆ ಮರಳಿತು, ಈ ಸಂದರ್ಭದಲ್ಲಿ ನೂತನವಾಗಿ ತಯಾರಾಗಿರುವ ಜಯ ವಿಜಯರುಗಳು, ಕುದುರೆಗಳು ಹಾಗೂ ಸಾರಥಿಯನ್ನು ಒಳಗೊಂಡ 4 ಚಕ್ರದ ಪುಷ್ಪ ಪಲ್ಲಕ್ಕಿ ರಥದಲ್ಲಿ ಹುಲಿಕುರ ಶ್ರೀ ವೇಣುಗೋಪಾಲಸ್ವಾಮಿ ಮಹಾ ರಥೋತ್ಸವ ಭಾರಿ ವಿಜೃಂಭಣೆಯಿಂದ ನಡೆಯಿತು.

ಭಕ್ತಾದಿಗಳು ರಥೋತ್ಸವಕ್ಕೆ ಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು, ಭಕ್ತಾಧಿಗಳೆಲ್ಲರೂ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಗೋವಿಂದ, ಗೋವಿಂದ ಇನ್ನಿತರ ನಾಮಗಳನ್ನು ಪಠಿಸುತ್ತಾ ದಾರಿ ಉದ್ದಕ್ಕೂ ದಾಸರು, ಗುಡ್ಡರು ದೊಣ್ಣೆ ವರಸೆ ಪ್ರದರ್ಶಿಸಿ ಮಣೆ ಶ್ಯಾಮ ನಡೆಸಿಕೊಟ್ಟರು.

ಹೆಚ್.ಡಿ.ಕೋಟೆಯ ವನಸಿರಿನಾಡು ಕಲಾ ಬಳಗದ ಕಲಾವಿದರ ಸಂಘದ ವತಿಯಿಂದ ಕುಡುಕ ಕಟ್ಟಿದ ತಾಳಿ ಅಥವಾ ಸಾಕು ತಂಗಿಯ ಸಂಕಟ ಎಂಬ ಸುಂದರ ಸಾಮಾಜಿಕ ನಾಟಕವನ್ನು ಏರ್ಪಡಿಸಿದ್ದರು. ಹಾಗೂ ಸರಗೂರಿನ ತೊಗಟವೀರ ಸಮಾಜದ ಶ್ರೀ ಚೌಡೇಶ್ವರಿ ಭಜನಾ ಮಂಡಳಿ ಮತ್ತು ತೊರವಳ್ಳಿ ಕುಂಬಾರಶೆಟ್ಟರ ಸಮಾಜದವರಿಂದ ಸ್ವಾಮಿಯವರ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ವಾದ್ಯಗೋಷ್ಠಿ ಮೂಲಕ ವಿದ್ಯುತ್ ದೀಪಾಲಾಂಕೃತ ಹೂವಿನ ಪಲ್ಲಕ್ಕಿಯಲ್ಲಿ ಶ್ರೀ ವೇಣುಗೋಪಾಲಸ್ವಾಮಿಯನ್ನು ಮೆರವಣಿಗೆ ಮೂಲಕ ಕಪಿಲಾ ನದಿಯ ದಡಕ್ಕೆ ತಂದು, ನದಿಯ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹೂವಿನ ಅಲಂಕಾರಗಳಿಂದ ಶೃಂಗಾರಗೊಂಡಿದ್ದ ತೆಪ್ಪದಲ್ಲಿ ಪ್ರತಿಷ್ಠಾಪಿಸಲಾಯಿತು.

ಆ ನಂತರ ತೆಪ್ಪದಲ್ಲಿ ದೇವರ ಉತ್ಸವಮೂರ್ತಿಯನ್ನು ನದಿಯ ಮಧ್ಯ ಭಾಗಕ್ಕೆ ತೆಗೆದುಕೊಂಡು ಹೋಗಿ ಮೂರು ಬಾರಿ ಪ್ರದಕ್ಷಿಣೆ ಹಾಕಿಸಿ ನೆರೆದಿದ್ದ ನೂರಾರು ಭಕ್ತರು ಶ್ರೀ ವೇಣುಗೋಪಾಲಸ್ವಾಮಿಗೆ ಜೈಕಾರ ಘೋಷಣೆಗಳನ್ನು ಮೊಳಗಿಸಿದರು. ನಂತರ ಮೆರವಣಿಗೆ ಮೂಲಕ ದೇವರನ್ನು ದೇವಸ್ಥಾನಕ್ಕೆ ತರಲಾಯಿತು, ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು, ಈ ಸಂದರ್ಭದಲ್ಲಿ ಸಹಾಯ ಮಾಡಿದ ಹಲವರನ್ನು ದೇವಸ್ಥಾನದ ಕಮಿಟಿಯ ವತಿಯಿಂದ ಸನ್ಮಾನಿಸಲಾಯಿತು.
ಹೆಚ್.ಡಿ ಕೋಟೆ ಪೊಲೀಸರು ಯಾವುದೇ ಅಹಿತಕರ ಘಟನೆಯಾಗದಂತೆ ವೃತ್ತ ನೀರಿಕ್ಷಕ ಗಂಗಾಧರ್ ರವರ ನೇತೃತ್ವದಲ್ಲಿ ಉಪ ನಿರೀಕ್ಷಕ ಚಿಕ್ಕನಾಯಕ ಮತ್ತು ಸಿಬ್ಬಂದಿ ಹೆಚ್ಚಿನ ಬಂದೋಬಸ್ತ್ ಮಾಡಿದ್ದರು.ಕಮಿಟಿಯ ವತಿಯಿಂದ ಸಾವಿರಾರು ಭಕ್ತರಿಗೆ ಮಧ್ಯಾನದಿಂದ ರಾತ್ರಿವರೆವಿಗೂ ಅನ್ನ ಸಂತರ್ಪಣೆಯು ಬಾರಿ ವ್ಯವಸ್ಥಿತ ರೀತಿಯಲ್ಲಿ ಭಕ್ತರು ಯಾವುದೇ ತೊಂದರೆ ಇಲ್ಲದೆ ಊಟವನ್ನು ಸವಿದರು.

ದೇವಸ್ಥಾನದ ಸಮಿತಿ ಅಧ್ಯಕ್ಷ ಕೆ.ಜಿ ಸ್ವಾಮಿ, ಉಪಾಧ್ಯಕ್ಷ ಸಣ್ಣನಾಯಕ, ಕಾರ್ಯದರ್ಶಿ ಎಚ್.ಬಿ ಬಾಲಕೃಷ್ಣ, ಗೌರವಾಧ್ಯಕ್ಷ ಕೆ. ಚಿಕ್ಕವೀರನಾಯಕ, ಪದ್ಮರಾಜ್, ಖಜಾಂಚಿ ಕೆ.ಮೋಹನ್ ರಾಜ್ ಹುಲಿಕುರ, ನಿರ್ದೇಶಕರಾದ ಎಸ್.ವಿ ವೇಣುಗೋಪಾಲ್, ಬಿ.ಸಿ ಬಸಪ್ಪ, ನಂಜೇಗೌಡ, ಪಟೇಲ್ ಪದ್ಮೇಗೌಡ, ಎಚ್.ಎಲ್ ನಂಜೇಗೌಡ, ನಜುಂಡಸ್ವಾಮಿ, ರಮೇಶ್ ಕುಮಾರ್ ಕೆ, ನೂರಲಕುಪ್ಪೆಯ ಬಾಲಕೃಷ್ಣ, ಎನ್ ರಮೇಶ್, ರಾಘವೇಂದ್ರ, ಚಿಕ್ಕದೇವನಾಯಕ, ನವನೀತ್, ಕೃಷ್ಣ, ನಿರಂಜನರಾಜೇಅರಸ್, ಗೋವಿಂದೇಗೌಡ.

ರವಿಕುಮಾರ್, ಶ್ರೀನಿವಾಸ್, ಅಭಿಕುಮಾರ್, ಬಾಲಕೃಷ್ಣ, ಆದಿ ಕರ್ನಾಟಕ ಬೀದಿಯ ಯಜಮಾನ ಕೆ.ಗೋಪಾಲಯ್ಯ, ನಾಯಕ ಸಮಾಜದ ಯಜಮಾನರಾದ ಚೆನ್ನನಾಯಕ, ನಾಮಧಾರಿ ಸಮಾಜದ ಯಜಮಾನರಾದ ತಮ್ಮಣ್ಣ, ಮಹೇಶ್, ಸುರೇಂದ್ರ, ರವಿಕುಮಾರ್, ಶಿವಣ್ಣ ಇನ್ನಿತರರು ಹಾಗೂ ಸುತ್ತ ಮುತ್ತಲ ಪಟ್ಟಣ ಹಾಗೂ ಗ್ರಾಮಗಳ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.









