ಕಾಂಗ್ರೆಸ್ ಗೆ ಶುರುವಾಗಿದೆ ಅಗ್ನಿಪರೀಕ್ಷೆ…! ಚುನಾವಣೆಯಲ್ಲಿ ರಾಹುಲ್ ಗಾಂಧಿಯ ತಂತ್ರಗಳೇಕೆ ಫಲಿಸುತ್ತಿಲ್ಲ!

ಲೋಕಸಭಾ ಚುನಾವಣೆ ಬಳಿಕ ನಡೆದ ಎಲ್ಲ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಹೀನಾಯ ಸೋಲು ಕಾಣುತ್ತಿದೆ.. ರಾಹುಲ್ ಗಾಂಧಿ ಸೇರಿದಂತೆ ಕೈ ನಾಯಕರು ಬಳಸುತ್ತಿರುವ ತಂತ್ರಗಳೆಲ್ಲವೂ ವಿಫಲವಾಗುತ್ತಿವೆ. ಏನೇ ಕಸರತ್ತು ಮಾಡಿದರೂ ಅದು ಮತವನ್ನು ತಂದುಕೊಡುತ್ತಿಲ್ಲ. ಹೀಗಿದ್ದರೂ ರಾಹುಲ್ ಗಾಂಧಿ ಮಾತ್ರ ಹಳೆಯ ಆ ತಂತ್ರಕ್ಕೆ ಜೋತು ಬಿದ್ದಿರುವುದು ಎದ್ದು ಕಾಣಿಸುತ್ತಿದೆ. ಮುಂದೆ ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ, ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಬರಲಿವೆ.. ಈ ಚುನಾವಣೆಗಳು ಕಾಂಗ್ರೆಸ್ ಗೆ ಅಗ್ನಿಪರೀಕ್ಷೆಯಾಗಿದ್ದು, ಇದನ್ನು ಹೇಗೆ ಎದುರಿಸುತ್ತದೆ ಎನ್ನುವುದೇ ಕುತೂಹಲಕಾರಿಯಾಗಿದೆ.
ಕಾಂಗ್ರೆಸ್ ಗೆ ಟಾರ್ಗೆಟ್ ಬಿಜೆಪಿನಾ? ನರೇಂದ್ರ ಮೋದಿನಾ? ಈ ಪ್ರಶ್ನೆ ಪ್ರತಿ ಚುನಾವಣೆ ನಡೆದಾಗಲೆಲ್ಲ ಕಾಡುತ್ತದೆ. ಏಕೆಂದರೆ ಇತ್ತೀಚೆಗಿನ 2024ರ ಲೋಕಸಭೆಯಿಂದ ಸ್ಥಳೀಯ ಸಂಸ್ಥೆ ಚುನಾವಣೆ ತನಕ ಕಾಂಗ್ರೆಸ್ ನ ಸಾಧನೆಯನ್ನು ಗಮನಿಸಿದರೆ ಕಾಂಗ್ರೆಸ್ ನಾಯಕರ ಅದರಲ್ಲೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ತಂತ್ರಗಳೆಲ್ಲವೂ ವಿಫಲವಾಗಿವೆ. ಇದಕ್ಕೆ ಬಿಜೆಪಿ ಪಕ್ಷವನ್ನು ಟಾರ್ಗೆಟ್ ಮಾಡಿಕೊಂಡು ಅದಕ್ಕೆ ವಿರುದ್ಧವಾಗಿ ಸಂಘಟನೆ ಮಾಡಿಕೊಂಡು ಹೋಗುವ ಬದಲಿಗೆ ಕೇವಲ ಮೋದಿ, ಆರ್ ಎಸ್ ಎಸ್ ಎಂದು ಬಡಬಡಾಯಿಸಿಕೊಳ್ಳುತ್ತಿರುವುದೇ ಕಾರಣವಾಗಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವಾಗಿ ಸುಮಾರು 70 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ 99 ಸ್ಥಾನ ಗೆದ್ದಾಗ ಅದೇ ದೊಡ್ಡ ಸಾಧನೆ ಎಂಬಂತೆ ಬೀಗಿತ್ತು. ಇನ್ನೇನಿದ್ದರೂ ಕಾಂಗ್ರೆಸ್ ನದ್ದೇ ಜಮಾನ.. ಮೋದಿ ವರ್ಚಸ್ ಕಡಿಮೆಯಾಯಿತು ಎಂದು ಹಲವರು ಮಾತನಾಡಿಕೊಂಡಿದ್ದರು. ಆದರೆ ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ತನ್ನ ಪಕ್ಷದ ಸಂಘಟನೆ ಕಡೆಗೆ ಗಮನಕೊಡಲೇ ಇಲ್ಲ. ಅಷ್ಟೇ ಅಲ್ಲದೆ ಲೋಕಸಭಾ ಚುನಾವಣೆಗೆ ಮಾಡಿಕೊಂಡಿದ್ದ ಇಂಡಿಯಾ ಒಕ್ಕೂಟದ ಕಡೆಗೂ ಲಕ್ಷ್ಯಕೊಡಲಿಲ್ಲ. ಅದನ್ನು ಮತ್ತೆ ಗಟ್ಟಿಗೊಳಿಸುವ ಪ್ರಯತ್ನಕ್ಕೂ ಮುಂದಾಗಲಿಲ್ಲ.

ಇದರ ಪರಿಣಾಮ ಲೋಕಸಭಾ ಚುನಾವಣೆ ಬಳಿಕ ಟಿಎಂಸಿ, ಎಎಪಿ ಹೀಗೆ ಹಲವು ಪಕ್ಷಗಳು ಇಂಡಿಯಾ ಒಕ್ಕೂಟದಲ್ಲಿದ್ದರೂ ಇಲ್ಲದಂತೆ ವರ್ತಿಸಲಾರಂಭಿಸಿದವು. ರಾಹುಲ್ ಗಾಂಧಿ ಎಲ್ಲರನ್ನು ಒಟ್ಟು ಮಾಡುವ ಪ್ರಯತ್ನದತ್ತ ಗಮನಹರಿಸಲೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ರಾಹುಲ್ ಗಾಂಧಿಯನ್ನೇ ಬದಿಗಿಟ್ಟು ತಾನೇ ಇಂಡಿಯಾ ಒಕ್ಕೂಟದ ಸಾರಥ್ಯ ವಹಿಸಿಕೊಳ್ಳುವ ಪ್ರಯತ್ನಕ್ಕೆ ಮಮತಾ ಬ್ಯಾನರ್ಜಿ ಮುಂದಾದರು. ಆದರೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಇಂಡಿಕೂಟದ ನೇತೃತ್ವವನ್ನು ಬೇರೆಯವರಿಗೆ ಕೊಟ್ಟು ತಾವು ಅವರ ಕೈಕಳಗೆ ಮುಂದುವರೆಯಲು ಇಷ್ಟಪಡಲಿಲ್ಲ. ಹೀಗಾಗಿ ಇಂಡಿಯಾ ಒಕ್ಕೂಟ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿಗೆ ಬಂದು ನಿಂತಿದೆ.

2024ರ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಮಾಡಿದ ಭಾರತ್ ಜೋಡೋ ಪಾದಯಾತ್ರೆ ಒಂದಷ್ಟು ಯಶಸ್ಸು ತಂದು ಕೊಟ್ಟಿತು. ಇದಾದ ನಂತರ ದೆಹಲಿ, ಬಿಹಾರ, ಮುಂಬೈ ಮುಂತಾದ ಕಡೆಗಳಲ್ಲಿ ಕಾಂಗ್ರೆಸ್ ನ ಯಾವುದೇ ತಂತ್ರಗಳು ಫಲಿಸಿಲ್ಲ. ಇಲ್ಲಿ ಮುಖ್ಯವಾಗಿ ರಾಹುಲ್ ಗಾಂಧಿ ಮತ್ತು ಅವರ ಸುತ್ತು ಇರುವ ಕೆಲವು ಹಿರಿಯ ನಾಯಕರು ಮೋದಿಯನ್ನು ಬೈಯ್ಯುವುದೇ ರಾಜಕೀಯ ಎಂದುಕೊಂಡಿದ್ದಾರೆ. ಆಗಾಗ್ಗೆ ಮೋದಿ ಮತ್ತು ಆರ್ ಎಸ್ ಎಸ್ ಬಗ್ಗೆ ಮಾತನಾಡುವುದರಿಂದ ಒಂದು ಸಮುದಾಯದ ಮತವನ್ನು ಸೆಳೆಯಬಹುದು ಎಂಬುದು ಅವರ ಆಲೋಚನೆಯಾಗಿದ್ದು, ಅದರಿಂದ ಒಂದಷ್ಟು ಲಾಭವೂ ಆಗಿರಬಹುದು ಆದರೆ ನಿಜ ಹೇಳಬೇಕೆಂದರೆ ಇದ್ಯಾವುದೂ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಕೆಲಸ ಮಾಡಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಕಾಂಗ್ರೆಸ್ ಗೆ ಬರೀ ಸೋಲಾಗಿದ್ದರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿರಲಿಲ್ಲ. ಆದರೆ ಕಾಂಗ್ರೆಸ್ ಆಗುತ್ತಿರುವುದು ಹೀನಾಯ ಸೋಲು. ಇದು ಪಕ್ಷದ ಅಸ್ತಿತ್ವದ ಪ್ರಶ್ನೆಯಾಗಿದೆ. ಪ್ರತಿ ಚುನಾವಣೆಗಳಲ್ಲಿ ಸೋಲನ್ನೇ ಕಾಣುತ್ತಿದ್ದರೆ, ರಾಜಕೀಯವಾಗಿ ಬೆಳೆಯ ಬೇಕೆಂದು ಕೊಳ್ಳುವ ಯುವ ಮುಖಂಡರಿಗೂ ಭಯ ಶುರುವಾಗುತ್ತದೆ. ಅವರು ಬೇರೆ ಪಕ್ಷಗಳತ್ತ ಮುಖ ಮಾಡಬಹುದು, ಹಾಗೆಯೇ ಕಾರ್ಯಕರ್ತರು ಕೂಡ ಹಿಂದೇಟು ಹಾಕುತ್ತಾರೆ. ಇವತ್ತು ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಗೆ ಸ್ಪರ್ಧೆ ಮಾಡಲು ಅಭ್ಯರ್ಥಿಗಳೇ ಇಲ್ಲದಾಗಿದೆ. ಹಾಗೆಯೇ ಜೈಕಾರ ಕೂಗಲು ಕಾರ್ಯಕರ್ತರು ಸಿಗದಂತಾಗಿದೆ.

ಬಿಹಾರ ಚುನಾವಣೆ ಬಳಿಕ ಮುಂಬೈ ಬೃಹತ್ ಪಾಲಿಕೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಇದಕ್ಕೆ ಕಾರಣವೇನು? ಎಂಬುದನ್ನು ರಾಹುಲ್ ಗಾಂಧಿ ಆಗಲೀ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಾಗಲೀ ಯಾವತ್ತಾದರೂ ಆ ಬಗ್ಗೆ ಸಭೆ ನಡೆಸಿ ಚರ್ಚೆ ಮಾಡಿದ್ದಾರಾ? ಖಂಡಿತಾ ಇಲ್ಲ. ಪಕ್ಷದ ಸಂಘಟನೆ ಮಾಡದೆ ಹೋದರೂ ತೊಂದರೆಯಾಗುತ್ತಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈಯ್ಯುವ ಭರದಲ್ಲಿ ದೇಶದ ಮಾನವನ್ನು ಹರಾಜು ಹಾಕುತ್ತಿರುವುದು ಬೇಸರದ ಸಂಗತಿಯಾಗಿದೆ. ಅದರಲ್ಲೂ ಹೊರದೇಶದಲ್ಲಿ ಹೋಗಿ ತಮ್ಮ ದೇಶದ ಬಗ್ಗೆ ಮಾತನಾಡುವ ರಾಹುಲ್ ಗಾಂಧಿಯ ವರ್ತನೆ ಸುತರಾಂ ಒಪ್ಪುವಂತಹದ್ದಲ್ಲ. ಇದೇ ಅವರಿಗೆ ಮುಳುವಾಗುತ್ತಿದೆ ಎಂಬುದನ್ನು ಅವರು ಮರೆಯುತ್ತಿದ್ದಾರೆ.

ಇದು ಎಲ್ಲೋ ಒಂದು ಕಡೆ ನಮ್ಮ ಆಂತರಿಕ ವಿಚಾರಗಳನ್ನು ಬಹಿರಂಗಗೊಳಿಸುವ ಮತ್ತು ದೇಶದ ಮಾನವನ್ನು ಹರಾಜು ಹಾಕುವ ಕೆಲಸವೆಂದೇ ಬಿಂಬಿತವಾಗುತ್ತಿದೆ. ಇದನ್ನು ರಾಹುಲ್ ಗಾಂಧಿ ಎಲ್ಲಿವರೆಗೆ ಅರಿಯುವುದಿಲ್ಲವೋ ಅಲ್ಲಿಯ ತನಕ ಅದರ ಪರಿಣಾಮಗಳು ಪಕ್ಷದ ಮೇಲೆ ಬೀರುತ್ತಲೇ ಇರುತ್ತದೆ. ರಾಹುಲ್ ಗಾಂಧಿ ನಾಯಕತ್ವದಲ್ಲಿ ಸೋಲಿನ ಸರಮಾಲೆಯೇ ಪಕ್ಷವನ್ನು ಸುತ್ತಿಕೊಂಡಿದೆ. ಹೀಗಾಗಿ ಮುಂದೆ ಯಾರಿಗೆ ಸಾರಥ್ಯ ನೀಡಿದರೆ ಪಕ್ಷ ಬೆಳೆಯಬಹುದು ಎಂಬ ಪ್ರಶ್ನೆಯೂ ಎದ್ದಿದೆ. ನೆಹರು ಕುಟುಂಬವನ್ನು ಹೊರತು ಪಡಿಸಿ ಮೂರನೇ ವ್ಯಕ್ತಿಗೆ ಪಕ್ಷದ ಹಿಡಿತ ಸಿಗಲಾರದು. ಇವತ್ತು ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದರೂ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿಲ್ಲ ಎಲ್ಲವನ್ನೂ ನಿಯಂತ್ರಿಸುತ್ತಿರುವುದು ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಎಂಬುದು ಕಣ್ಮುಂದಿರುವ ಸತ್ಯವಾಗಿದೆ.

ನೆಹರು ಕುಟುಂಬದ ಹೊರತಾಗಿ ಕಾಂಗ್ರೆಸ್ ನ್ನು ನೋಡುವುದು ಕಷ್ಟವೇ.. ಹೀಗಾಗಿ ಹಿರಿಯ ನಾಯಕರು ಕೂಡ ನೆಹರು ಕುಟುಂಬಕ್ಕೆ ನಿಷ್ಠರಾಗಿ ರಾಜಕೀಯ ಮಾಡುತ್ತಿದ್ದಾರೆ ವಿನಃ ಪಕ್ಷ ಸಂಘಟಿಸಿ ಗೆಲುವಿಗೆ ಹೋರಾಡಲು ತಯಾರಿಲ್ಲದಾಗಿದೆ. ಈಗಿರುವ ಹೈಕಮಾಂಡ್ ನಾಯಕರಲ್ಲಿ ಹೆಚ್ಚಿನವರಿಗೆ ತಮ್ಮನ್ನು ಹೊರತಾಗಿ ಬೇರೆಯವರನ್ನು ಗೆಲ್ಲಿಸಿಕೊಂಡು ಬರುವ ತಾಕತ್ ಇಲ್ಲದಾಗಿದೆ. ಹೀಗಾಗಿ ಅವರು ತಮ್ಮ ರಾಜಕೀಯ ಉಳಿವಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ ಎಸ್ ಎಸ್ ನ್ನು ಟೀಕೆ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪವೂ ಇಲ್ಲದಿಲ್ಲ.

ಲೋಕಸಭಾ ಚುನಾವಣೆ ಬಳಿಕ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ರಾಹುಲ್ ಗಾಂಧಿ ಅವರು ನರೇಂದ್ರಮೋದಿ ವಿರುದ್ಧ ಮತಗಳ್ಳತನದ ಅಸ್ತ್ರ ಬಳಿಸಿದರು. ಅದನ್ನೇ ಮುಂದಿಟ್ಟುಕೊಂಡು ಸಮಾವೇಶ ಮಾಡಿದರು. ಪ್ರತಿ ಚುನಾವಣೆಗೂ ಅದನ್ನೇ ಅಸ್ತ್ರ ಮಾಡಿಕೊಂಡರು. ಆದರೆ ಅದು ಯಾವುದೇ ಚುನಾವಣೆಯಲ್ಲಿಯೂ ಅವರಿಗೆ ಅನುಕೂಲ ಮಾಡಿಕೊಡಲಿಲ್ಲ. ಹಾಗಿದ್ದ ಮೇಲೆ ಅದನ್ನು ಬಿಟ್ಟು ಬೇರೆ ಏನಾದರೂ ತಂತ್ರಗಳನ್ನು ಮಾಡಬಹುದಿತ್ತು. ಆದರೆ ಅವರು ಇವತ್ತಿಗೂ ಮತಚೋರಿ ಯನ್ನು ಬಿಟ್ಟು ಯಾವುದೇ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ. ಆ ವಿಚಾರ ಒಂಥರಾ ಸವಕಲು ನಾಣ್ಯದಂತಾಗಿದೆ.

ಇಷ್ಟಕ್ಕೂ ಕಾಂಗ್ರೆಸ್ ಗೆ ಭಯವಿರುವುದು ಬಿಜೆಪಿ ಪಕ್ಷದ ಮೇಲೆ ಅಲ್ಲ… ಮೋದಿ ಮೇಲೆ. ಹೀಗಾಗಿಯೇ ಮೋದಿಯ ಬಗ್ಗೆ ಟೀಕೆ ಮಾಡಿ ಅವರನ್ನು ಕುಗ್ಗಿಸಿದರೆ ಆ ನಂತರ ಬಿಜೆಪಿಯನ್ನು ಸುಲಭವಾಗಿ ಗೆಲ್ಲಬಹುದು ಎಂಬುದು ಅವರ ಆಲೋಚನೆಯಾಗಿದೆ. ಹೀಗಾಗಿಯೇ ಮೋದಿ ಮತ್ತು ಆರ್ ಎಸ್ ಎಸ್ ಟಾರ್ಗೆಟ್ ಮಾಡಿ ಟೀಕೆ ಮಾಡುವುದನ್ನು ರಾಹುಲ್ ಗಾಂಧಿ ಮುಂದುವರೆಸಿದ್ದು, ಅದನ್ನೇ ಕಾಂಗ್ರೆಸ್ ನ ಇತರೆ ನಾಯಕರು ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಸುತ್ತಲೂ ಇರುವ ನಾಯಕರು ರಾಹುಲ್ ಗಾಂಧಿಗೆ ರಾಜಕೀಯವಾಗಿ ಉತ್ತಮ ಸಲಹೆಗಳನ್ನು ನೀಡಬಹುದು. ಆದರೆ ಸಲಹೆಗಳನ್ನು ಸ್ವೀಕರಿಸುವ ಮನಸ್ಥಿತಿ ರಾಹುಲ್ ಗಾಂಧಿಗಿಲ್ಲ. ಹೀಗಾಗಿಯೇ ಬಹುತೇಕ ನಾಯಕರು ಕಾಂಗ್ರೆಸ್ ಉಳಿಯ ಬೇಕಾದರೆ ಪ್ರಿಯಾಂಕ್ ವಾದ್ರಾ ಪಕ್ಷದ ಸಾರಥ್ಯ ವಹಿಸಿಕೊಳ್ಳಬೇಕು ಎಂದು ಬಯಸುತ್ತಿದ್ದಾರೆ.

ಇವತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದರೆ ಅದಕ್ಕೆ ರಾಹುಲ್ ಗಾಂಧಿ ಅಲ್ಲ.. ಇಲ್ಲಿನ ನಾಯಕರೇ ಕಾರಣ.. ಆದರೆ ರಾಜಕೀಯ ಶಹಬ್ಬಾಸ್ ಗಿರಿಗೋಸ್ಕರ ರಾಹುಲ್ ಗಾಂಧಿಯಿಂದಲೇ ಕಾಂಗ್ರೆಸ್ ಗೆಲುವು ಕಂಡಿದೆ ಎಂಬಂತಹ ಮಾತುಗಳನ್ನಾಡುತ್ತಿದ್ದಾರೆ. ಇಲ್ಲಿನ ಮತದಾರರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರ ನಾಯಕತ್ವ ಮೆಚ್ಚಿ ಮತನೀಡುವ ಮೂಲಕ ಕಾಂಗ್ರೆಸ್ ನ್ನು ಗೆಲ್ಲಿಸಿದ್ದಾರೆ. ಅದಕ್ಕಿಂತ ಹೆಚ್ಚಾಗಿ ರಾಜ್ಯದಲ್ಲಿ ಪಕ್ಷ ಸಂಘಟನೆ ಉತ್ತಮವಾಗಿದೆ. ಇದು ಕಾಂಗ್ರೆಸ್ ಗೆ ಗೆಲುವು ತಂದುಕೊಟ್ಟಿದೆ. ಆದರೆ ರಾಜ್ಯದಲ್ಲಿ ನಡೆಯುತ್ತಿರುವ ಅಧಿಕಾರದ ಹಸ್ತಾಂತರ ಜಟಾಪಟಿ, ಭ್ರಷ್ಟಾಚಾರದ ಆರೋಪಗಳು, ಕೆಲವು ಕೈ ನಾಯಕರ ದಬ್ಬಾಳಿಕೆ, ಸರ್ಕಾರಿ ನೌಕರರ ಆತ್ಮಹತ್ಯೆ, ಕುಂಠಿತಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು… ಹೀಗೆ ಹತ್ತಾರು ಸಮಸ್ಯೆಗಳು ರಾಜ್ಯದಲ್ಲಿ ಕಾಡುತ್ತಿದೆ.

ಮುಂದಿನ ಜೂನ್ ಒಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯನ್ನು ನಡೆಸಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಚುನಾವಣೆ ಕಾಂಗ್ರೆಸ್ ಗೆ ಪ್ರತಿಷ್ಟೆಯಾಗಿದೆ. ಇಲ್ಲಿ ಗೆಲ್ಲಲೇ ಬೇಕಾಗಿದೆ. ಆದರೆ ಪಕ್ಷದೊಳಗೆ ಈಗಿರುವ ಭಿನ್ನಮತಗಳು, ಅಧಿಕಾರ ಹಸ್ತಾಂತರದ ಗೊಂದಲಗಳನ್ನೆಲ್ಲ ಬದಿಗಿಟ್ಟು ಗೆಲುವಿಗೆ ಹೋರಾಟ ಮಾಡಬೇಕಾಗಿದೆ. ಅತ್ತ ಕೇಂದ್ರದಲ್ಲಿ ಕಾಂಗ್ರೆಸ್ ಗೆ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಹೀಗೆ ಒಂದರ ನಂತರ ಒಂದು ಎಂಬಂತೆ ಚುನಾವಣೆಗಳು ಬರುತ್ತಿವೆ. ಅದಕ್ಕೆ ಸಿದ್ದರಾಗಬೇಕಾಗಿದೆ. ಇತ್ತ ರಾಜ್ಯ ಕಾಂಗ್ರೆಸ್ ಗೆ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಎದುರಿಸಿ ಗೌರವ ಉಳಿಸಿಕೊಳ್ಳಬೇಕಾಗಿದೆ. ಇದೆಲ್ಲವನ್ನು ಗಮನಿಸಿದ್ದೇ ಆದರೆ ಕಾಂಗ್ರೆಸ್ ಗೆ ಇನ್ಮುಂದೆ ಅಗ್ನಿ ಪರೀಕ್ಷೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಬಿ.ಎಂ.ಲವಕುಮಾರ್







