News

ಅತಿಹೆಚ್ಚು ರಸ್ತೆ ಅಪಘಾತ ಪ್ರಕರಣಗಳಲ್ಲಿ ರಾಜ್ಯದಲ್ಲಿ  ತುಮಕೂರು ಜಿಲ್ಲೆಗೆ ಎರಡನೇ ಸ್ಥಾನ

ತುಮಕೂರು: ರಾಜ್ಯದಲ್ಲಿಯೇ ಅತಿಹೆಚ್ಚು ರಸ್ತೆ ಅಪಘಾತ ಪ್ರಕರಣಗಳಲ್ಲಿ ತುಮಕೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಈ ಪರಿಸ್ಥಿತಿಯಲ್ಲಿ ಅಪಘಾತ ಪ್ರಕರಣಗಳ ತಡೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿದೆ. ಅಪಘಾತ ಹೆಚ್ಚಳಕ್ಕೆ ಕಾರಣಗಳನ್ನು ಪತ್ತೆ ಮಾಡಿ ನಿಯಂತ್ರಿಸಲು ಅನುಸರಿಸಬೇಕಾದ ವೈಜ್ಞಾನಿಕ ಕ್ರಮ ರೂಪಿಸಲಾಗುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ಎಂ.ಪ್ರಸಾದ್ ಹೇಳಿದರು.

ನಗರದ ಸಿಎಸ್‌ಐ ಸಂಸ್ಥೆಯ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ರೋಟರಿ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದಕ್ಕೆ ಕಾರಣಗಳೇನು ಎಂಬುದನ್ನು ಸಮಿತಿ ಅಧ್ಯಯನ ಮಾಡಿ, ಅಪಘಾತ ನಿಯಂತ್ರಣಕ್ಕೆ ಸೂಕ್ತ ಕಾರ್ಯಕ್ರಮ ರೂಪಿಸಲಿದೆ. ಅಪಘಾತ ವಲಯಗಳನ್ನು ಗುರುತಿಸಿ ಅಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ನಿರ್ವಹಿಸಲಿದೆ ಎಂದು ತಿಳಿಸಿದರು.

ರಸ್ತೆ ಅಪಘಾತ ನಿಯಂತ್ರಣದಲ್ಲಿ ಪ್ರಮುಖವಾಗಿ ವಾಹನ ಚಾಲನೆ ಮಾಡುವವರಲ್ಲಿ ರಸ್ತೆ ನಿಯಮಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು, ಯುವಜನರು ಅಪಘಾತಕ್ಕೀಡಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿವೆ. ಇವರು ರಸ್ತೆ ನಿಯಮಗಳು ಹಾಗೂ ವಾಹನ ಚಾಲನಾ ಪರವಾನಗಿ, ಅಗತ್ಯ ದಾಖಲಾತಿ ಹೊಂದುವುದು ಕಡ್ಡಾಯವಾಗಿದೆ. ಈ ಬಗ್ಗೆ ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಸಂಚಾರ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದರು.

ರಾಜ್ಯ ವಾಹನ ತರಬೇತಿ ಶಾಲೆಗಳ ಒಕ್ಕೂಟದ ಗೌರವಾಧ್ಯಕ್ಷ ಟಿ.ಆರ್.ಸದಾಶಿವಯ್ಯ ಮಾತನಾಡಿ, ಸಾರಿಗೆ ಪ್ರಾಧಿಕಾರ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಹಯೋಗದಲ್ಲಿ ರೋಟರಿ ಸಂಸ್ಥೆ, ವಾಹನ ತರಬೇತಿ ಶಾಲೆ ಸಂಘದಿಂದ ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜು ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಗುವುದು. 18ವರ್ಷಕ್ಕೆ ಕಡಿಮೆ ವಯಸ್ಸಿನವರು ವಾಹನ ಚಲಾಯಿಸಬಾರದು. ಈ ಬಗ್ಗೆ ಪೋಷಕರು ಮಕ್ಕಳಲ್ಲಿ ತಿಳುವಳಿಕೆ ಮೂಡಿಸಬೇಕು. 18ವರ್ಷದ ನಂತರ ವಾಹನ ಚಾಲನಾ ಪರವಾನಗಿ ಪಡೆಯಬೇಕು. ಚಲಾಯಿಸುವ ವಾಹನಗಳ ಅಗತ್ಯ ದಾಖಲಾತಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ವೇಗದ ಚಾಲನೆ, ವ್ಹೀಲಿಂಗ್‌ನಂತಹ ವಿಕೃತ ಮೆರೆದರೆ ಅಪಘಾತದಲ್ಲಿ ಜೀವ ಕಳೆದುಕೊಳ್ಳುವ ಅಪಾಯವಿದೆ ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಸಿದರು.

ಸಿಎಸ್‌ಐ ವಲಯ ಅಧ್ಯಕ್ಷರಾದ ರೆವರೆಂಡ್ ಮನೋಜ್‌ಕುಮಾರ್ ಅವರು ಮಾತನಾಡಿ, ರಸ್ತೆ ಸುರಕ್ಷತೆ ಬಗ್ಗೆ ಇಲಾಖೆ ಅಥವಾ ಸಂಘಸಂಸ್ಥೆಗಳು ಮಕ್ಕಳಿಗೆ ಅರಿವು ಮೂಡಿಸಿದರೆ ಸಾಲದು, ಶಾಲೆ ಕಾಲೇಜುಗಳಲ್ಲಿ ಬೋಧಕರು ಸಂಚಾರ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಬೇಕು. ತಮ್ಮ ಸಂಸ್ಥೆಯ ಶಾಲಾಕಾಲೇಜು ಬೋಧಕರಿಗೆ ಈ ಬಗ್ಗೆ ಸೂಚನೆ ನೀಡುವುದಾಗಿ ಹೇಳಿದರು.

ರೋಟರಿ ತುಮಕೂರು ಅಧ್ಯಕ್ಷ ಡಾ.ಎ.ಎಸ್.ಸುದರ್ಶನ್, ರೋಟರಿ ಜಿಲ್ಲಾ ಕಾರ್ಯದರ್ಶಿ ಎಂ.ಎಸ್.ಉಮೇಶ್, ಕಾರ್ಯದರ್ಶಿ ಮಲ್ಲೇಶಯ್ಯ, ಸಮುದಾಯ ಸೇವೆ ನಿರ್ದೇಶಕಿ ಚಂದ್ರಕಲಾ, ಮುಖಂಡರಾದ ಮೀರಾರಾಣಿ, ಅನಿತಾ ನಾಗೇಶ್ ಮೊದಲಾದವರು ಭಾಗವಹಿಸಿದ್ದರು.

admin
the authoradmin

Leave a Reply

Translate to any language you want