ನಿಸರ್ಗ ಸುಂದರ ತಾಣ ಮುಡುಕುತೊರೆಯಲ್ಲಿ 17ದಿನಗಳ ಜಾತ್ರೆ ಆರಂಭ.. ಏನೆಲ್ಲ ವಿಶೇಷತೆಗಳಿವೆ ಗೊತ್ತಾ?
ಮುಡುಕುತೊರೆ ಜಾತ್ರೆ ಜ.21 ರಿಂದ ಫೆ.6ರವರೆಗೆ ಬಹಳ ಅದ್ಧೂರಿಯಾಗಿ ನಡೆಯಲಿದೆ.

ಮುಡುಕುತೊರೆಯಲ್ಲಿ ಜಾತ್ರಾ ಸಂಭ್ರಮ ಆರಂಭಗೊಂಡಿದೆ.. ಇಲ್ಲಿನ ಜಾತ್ರೆಗೆ ತನ್ನದೇ ಆದ ಇತಿಹಾಸ ಮತ್ತು ಮಹತ್ವವಿದ್ದು, ಸ್ಥಳದ ಮಹಿಮೆ ಪುರಾಣದೊಂದಿಗೆ ನಂಟು ಹೊಂದಿರುವುದನ್ನು ನಾವು ಕಾಣಬಹುದಾಗಿದೆ. ಈ ಕ್ಷೇತ್ರದ ನಿಸರ್ಗ ಸೌಂದರ್ಯವು ಆಸ್ತಿಕ, ನಾಸ್ತಿಕ ಎನ್ನದೆ ಎಲ್ಲರನ್ನು ತನ್ನತ್ತ ಸೆಳೆಯುತ್ತಿದ್ದು, ಒಮ್ಮೆ ಭೇಟಿ ನೀಡಿದವರನ್ನು ಮತ್ತೆ, ಮತ್ತೆ ತನ್ನತ್ತ ಸೆಳೆಯುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ. ಹಾಗಾದರೆ ಮುಡುಕುತೊರೆ ಸ್ಥಳಮಹಿಮೆ ಮತ್ತು ಕ್ಷೇತ್ರದ ವಿಶೇಷತೆಗಳನ್ನು ತಿಳಿದುಕೊಳ್ಳೋಣ…

ಕರ್ನಾಟಕದ ಶ್ರೀಶೈಲ ಎಂದೇ ಖ್ಯಾತಿ ಪಡೆದಿರುವ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿರುವ ಮುಡುಕುತೊರೆ ಜಾತ್ರೆ ಜ.21 ರಿಂದ ಫೆ.6ರವರೆಗೆ ಬಹಳ ಅದ್ಧೂರಿಯಾಗಿ ನಡೆಯಲಿದೆ. ಮಹಾಭಾರತದೊಂದಿಗೂ ನಂಟಿರುವ ಶ್ರೀ ಕ್ಷೇತ್ರದ ಜಾತ್ರೆಯನ್ನು ನೋಡುವುದೇ ಹಾಗೆಯೇ ಬೆಟ್ಟದ ಮೇಲಿರುವ ದೇವಸ್ಥಾನದಿಂದ ಕಾವೇರಿ ನದಿ ಹರಿಯುವ ವಿಹಂಗಮ ದೃಶ್ಯವನ್ನು ಕಣ್ತುಂಬಿಕೊಳ್ಳುವುದು ಖುಷಿಯ ಸಂಗತಿಯಾಗಿದೆ. ರೈತಾಪಿ ಜನರ ದನಗಳ ಪರಿಷೆ ಜಾತ್ರೆಗೆ ಮೆರುಗನ್ನು ತರುತಿದ್ದು, ಹೀಗಾಗಿ ಜಾತ್ರೆಯನ್ನು ನೋಡದೆ ಇರುವವರು ಒಮ್ಮೆ ಅತ್ತ ಕಡೆಗೆ ಪಯಣ ಬೆಳೆಸಬಹುದಾಗಿದೆ.

ಮುಡುಕುತೊರೆ ಕ್ಷೇತ್ರವು ಮೈಸೂರು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೊಂದಾದ ತಿ.ನರಸೀಪುರದಿಂದ 19 ಕಿ.ಮೀ ದೂರದಲ್ಲಿದೆ. ಕಾವೇರಿ ನದಿ ಪಶ್ಚಿಮದಿಂದ ಉತ್ತರ ದಿಕ್ಕಿನತ್ತ ಹರಿದು, ಪೂರ್ವಕ್ಕೆ ಮುರಿದು ದಕ್ಷಿಣಕ್ಕೆ ಪ್ರವೇಶಿಸಿದ್ದರಿಂದ ಬಹುಶಃ ಮುಡುಕುತೊರೆ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ. ಇನ್ನು ಇಲ್ಲಿನ ಸೋಮಗಿರಿ ಬೆಟ್ಟದ ಮೇಲಿನ ಮಲ್ಲಿಕಾರ್ಜುನ ಇಲ್ಲಿನ ಆಧಿದೈವನಾಗಿದ್ದಾನೆ. ಈ ಮಲ್ಲಿಕಾರ್ಜುನ ಲಿಂಗವು ತಲಕಾಡು ಪಂಚಲಿಂಗದೊಂದಿಗೆ ಸೇರಿರುವುದು ಈ ಕ್ಷೇತ್ರದ ಮಹಿಮೆ ಇನ್ನಷ್ಟು ಇಮ್ಮಡಿಸಲು ಕಾರಣವಾಗಿದೆ.

ಜಾತ್ರೆ ಬಗ್ಗೆ ನೋಡುವುದಾದರೆ, ಸಾಮಾನ್ಯವಾಗಿ ಮೂರು, ಐದು, ಆರು ದಿನ ಹೀಗೆ ಜಾತ್ರೆ ನಡೆಯುತ್ತದೆ. ಆದರೆ ಮುಡುಕುತೊರೆ ಜಾತ್ರೆ ಮಾತ್ರ ಹಾಗಿಲ್ಲ. ಇದು ಬರೋಬ್ಬರಿ 17 ದಿನಗಳ ಕಾಲ ನಡೆಯುತ್ತದೆ. ಈ ಹದಿನೇಳು ದಿನವೂ ವಿಶೇಷದ ದಿನಗಳಾಗಿದ್ದು, ಒಂದೊಂದು ದಿನ ಒಂದೊಂದು ದೈವಿಕ ಕಾರ್ಯಕ್ರಮಗಳು ಜರುಗುವುದನ್ನು ಕಾಣಬಹುದಾಗಿದೆ. ಅಂಕುರಾರ್ಪಣ ದಿಂದ ಆರಂಭವಾಗುವ ಜಾತ್ರೆಯಲ್ಲಿ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ ಮಲ್ಲಿಕಾರ್ಜುನ ರಥವು ಜ.28ರಂದು ನೆರವೇರಲಿದ್ದು, ಆ ದಿನ ಭಕ್ತಸಾಗರವೇ ಇಲ್ಲಿಗೆ ಹರಿದು ಬರಲಿದೆ.

ಮುಡುಕುತೊರೆ ಜಾತ್ರೆಯಲ್ಲಿ ವರ್ಷಪೂರ್ತಿ ರೈತರೊಂದಿಗೆ ದುಡಿಯುವ ಹಾಲು ನೀಡುವ ಜಾನುವಾರುಗಳಿಗೆ ಮಹತ್ವದ ಸ್ಥಾನವಿದೆ. ಈ ಜಾತ್ರೆಯಲ್ಲಿ ತಮ್ಮ ಜಾನುವಾರುಗಳನ್ನು ಮಾರಾಟ ಮಾಡುವುದು, ಹೊಸ ಜಾನುವಾರುಗಳನ್ನು ಖರೀದಿಸುವುದು ಹೀಗೆ ವಹಿವಾಟುಗಳು ನಡೆಯುತ್ತವೆ. ಇದಕ್ಕೆಂದೇ ರೈತರು ತಮ್ಮ ಜಾನುವಾರುಗಳನ್ನು ಇಲ್ಲಿಗೆ ತರುವುದು ವಿಶೇಷ. ಹಳ್ಳಿಗಳಲ್ಲಿ ಜಾತ್ರೆಗೆ ಜಾನುವಾರುಗಳನ್ನು ಹೊಡೆದುಕೊಂಡು ಹೋಗುವುದನ್ನು ನೋಡುವುದೇ ವಿಶೇಷ. ತಮ್ಮ ಊರಿನಲ್ಲಿ ಮೆರವಣಿಗೆ ನಡೆಸಿ ಬಳಿಕ ಕರೆದೊಯ್ಯಲಾಗುತ್ತದೆ.

ಮೊದಲೆಲ್ಲ ರೈತರು ಜಾನುವಾರುಗಳನ್ನು ಹೊಡೆದುಕೊಂಡು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದರು. ಆದರೀಗ ಬಹುತೇಕ ಜನರು ವಾಹನಗಳಲ್ಲಿಯೇ ತೆರಳುವುದು ಸಾಮಾನ್ಯವಾಗಿದೆ. ಮುಡುಕುತೊರೆ ಜಾತ್ರೆಯ ಅಂಗವಾಗಿ ಶಯನೋತ್ಸವ, ಪಲ್ಲಕ್ಕಿ ಉತ್ಸವ, ರಥೋತ್ಸವ, ತೆಪ್ಪೋತ್ಸವ, ಕೈಲಾಸ ವಾಹನೋತ್ಸವ, ಮಂಟಪೋತ್ಸವಗಳು, ಗಿರಿ ಪ್ರದಕ್ಷಿಣೆ, ಪರ್ವತ ಪರಿಷೆ, ಮಹಾಭಿಷೇಕ ಹೀಗೆ ಹತ್ತಾರು ಕಾರ್ಯಕ್ರಮಗಳು ನಡೆಯುವುದನ್ನು ನಾವು ಕಾಣಬಹುದಾಗಿದೆ.

ಇನ್ನು ಮುಡುಕುತೊರೆ ಜಾತ್ರೆಯಲ್ಲಿ ರಥೋತ್ಸವ ದಿನದಂದು ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ರಥೋತ್ಸವಕ್ಕೆ ಗೊರವರ ಕುಣಿತ, ನಂದಿಕಂಬ, ಪೂಜಾಕುಣಿತ, ಕಂಸಾಳೆ, ಸೋಬಾನೆ, ಜಾಗಟೆ ಸೇವೆ, ತುತ್ತೂರಿ, ಕೊಂಬುಸೇವೆ ಮೊದಲಾದ ಜನಪದೀಯ ನೃತ್ಯಗಳು ಸಾಥ್ ನೀಡುತ್ತವೆ. ಇಷ್ಟೇ ಅಲ್ಲದೆ ತೆಪ್ಪೋತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ಪಾಲ್ಗೊಳ್ಳುತ್ತಾರೆ. ತೆಪ್ಪದ ದಿನ ಗೊರವರು ಗಿರಿಯ ಮೇಲೆ ಕುಣಿಯುವುದು ವಿಶೇಷವಾಗಿರುತ್ತದೆ. ಇದೇ ಸಂದರ್ಭ ’ಕಜ್ಜಾಯದ ಮಣೆ ಬಟ್ಟಲು ಉಡಿಸುತೀವಿ’ ಎಂದು ಹರಕೆ ಹೊತ್ತವರು ಅದನ್ನು ಒಪ್ಪಿಸುವುದು ನಡೆಯುತ್ತದೆ.

ಜಾತ್ರೆಯಲ್ಲಿ ಮತ್ತೊಂದು ವಿಶೇಷತೆ ನಡೆಯುತ್ತದೆ. ಅದೇನೆಂದರೆ ಪರ್ವತ ಪರಿಷೆಯ ದಿನಾಂಕವನ್ನು ನಿಗದಿ ಪಡಿಸುವುದಾಗಿದೆ. ಬಹಳಷ್ಟು ಜನರಿಗೆ ಏನಿದು ಪರ್ವತ ಪರಿಷೆ ಎಂಬ ಕುತೂಹಲವೂ ಮೂಡದಿರದು. ಇದು ಜಾತ್ರೆಯಲ್ಲಿ ನಡೆಯುವ ಕಾರ್ಯಕ್ರಮವಾಗಿದ್ದು, ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪರ್ವತ ಪರಿಷೆಗೆ ಪುರಾಣದ ನಂಟಿದ್ದು, ಪುರಾಣ ಕಥೆಯ ಪ್ರಕಾರ ಹೇಳುವುದಾದರೆ, ಪಾರ್ವತಿಯು ಶಿವನ ವಾಹನ ಬಸವನ ಮೇಲೆ ತನ್ನ ತವರು ಮನೆಯಾದ ಶ್ರೀಶೈಲಕ್ಕೆ ಹೋಗಿ ಬರುತ್ತಿದ್ದಳೆಂದೂ ಆ ನಂಬಿಕೆ ಇಂದಿಗೂ ಜನಮನದಲ್ಲಿದೆ.

ಈ ಪರಿಷೆ ಯಾವಾಗ ಆರಂಭವಾಯಿತೆಂಬುವುದು ತಿಳಿದು ಬರುವುದಿಲ್ಲವಾದರೂ ಚಿಕ್ಕದೇವರಾಜ ತನಗೆ ಮಲ್ಲಿಕಾರ್ಜುನನ ಕೃಪೆಯಿಂದ ಒಳ್ಳೆಯದಾದ ಹಿನ್ನಲೆಯಲ್ಲಿ ಪರಿಷೆ ಮಾಡಿಸಿದ್ದರೆಂದು ಹೇಳಲಾಗುತ್ತಿದೆ. ಆದರೆ ಈ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಮುಂದುವರೆದುಕೊಂಡು ಹೋಗುತ್ತಿದೆ. ಅದು ಏನೇ ಇರಲಿ ಮುಡುಕುತೊರೆಯಲ್ಲಿ ಜಾತ್ರೆ ಆರಂಭವಾಗಿರುವುದರಿಂದ ಈ ಕ್ಷೇತ್ರದತ್ತ ಭಕ್ತರು, ಪ್ರವಾಸಿಗರು ಎಲ್ಲರೂ ದೌಡಾಯಿಸುತ್ತಿದ್ದು, ಕ್ಷೇತ್ರಕ್ಕೆ ಭೇಟಿ ನೀಡಿ ಬಂದಿದ್ದೇ ಆದರೆ ಜನ್ಮ ಪಾವನವಾಗುವುದರಲ್ಲಿ ಎರಡು ಮಾತಿಲ್ಲ.
ಬಿ.ಎಂ.ಲವಕುಮಾರ್







