ಅಕ್ರಮ ಗಣಿಗಾರಿಕೆಯಿಂದ ಯರಗಂಬಳ್ಳಿಯಲ್ಲಿ ಜನರಿಗೆ ಸಂಕಷ್ಟ… ಸಮಸ್ಯೆ ಪರಿಹರಿಸಲು ಡಿಸಿಗೆ ಮನವಿ!

ಯಳಂದೂರು(ನಾಗರಾಜು ವೈಕೆಮೋಳೆ): ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ಕಾನೂನು ಉಲ್ಲಂಘಿಸಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಗ್ರಾಮಸ್ಥರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಇದರ ಬಗ್ಗೆ ಆಡಳಿತರೂಢರು ಕಣ್ಣುಮುಚ್ಚಿ ಕುಳಿತಿರುವ ಕಾರಣದಿಂದಾಗಿ ಇದೀಗ ಗ್ರಾಮಸ್ಥರೇ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಕೂಡಲೇ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಿ ಗ್ರಾಮವನ್ನು ಕಾಪಾಡಲು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.

ಇದೀಗ ನೂತನವಾಗಿ ಜಿಲ್ಲೆಗೆ ಆಗಮಿಸಿರುವ ಜಿಲ್ಲಾಧಿಕಾರಿ ಶ್ರೀರೂಪ ಅವರಿಗೆ ಗ್ರಾಮಸ್ಥರು ತಮ್ಮ ಮನವಿಯನ್ನು ಸಲ್ಲಿಸಿದ್ದು, ಈ ಮನವಿಯಲ್ಲಿ ಗ್ರಾಮದಲ್ಲಿ ಕಾನೂನು ಉಲ್ಲಂಘಿಸಿ ನಡೆಯುತ್ತಿರುವ ಗಣಿಗಾರಿಕೆಯಿಂದ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂಬುದನ್ನು ವಿವರಿಸಿದ್ದಾರೆ. ಅದರಂತೆ, ಗ್ರಾಮದ ಸರ್ವೆ ನಂಬರ್ 711/1, 711/2, 711/3 ರಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಗಣಿಗಾರಿಕೆ ನಡೆಸುತ್ತಿದ್ದಾರೆ. ಅಲ್ಲದೇ 710/1 ರ ಸರ್ಕಾರಿ ಜಮೀನಿನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಾನೂನು ಉಲ್ಲಂಘಿಸಿ ಗಣಿಗಾರಿಕೆ ನಡೆಸುತ್ತಿರುವುದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದ್ದು, ಆರೋಗ್ಯ ದ ಮೇಲೆ ದುಪ್ಷರಿಣಾಮ ಬೀರಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಗಣಿಗಾರಿಕೆ ಸ್ಥಳದ 20 ಮೀಟರ್ ಅಂತರದಲ್ಲಿ ಕಬಿನಿ ವಿತರಣಾ ನಾಲೆಯಿದೆ. ಗಣಿಗಾರಿಕೆಯಿಂದ ನೀರಾವರಿ ಕಾಲುವೆ ಬದಿಯ ರಸ್ತೆ ಕುಸಿಯುತ್ತಿದೆ .ಕ್ವಾರಿಯ ಅಕ್ಕಪಕ್ಕದಲ್ಲಿ ಜನವಸತಿ ಪ್ರದೇಶ, ಕೆರೆ, ಕಬಿನಿ ನಾಲೆ ಮತ್ತು ಶಾಲೆಯಿದೆ. ಬೋರ್ ವೆಲ್ ನಲ್ಲಿ ಕಬ್ಬಿಣಾಂಶ ಹೆಚ್ಚಿರುವ ನೀರು ಬರುತ್ತಿದ್ದು, ಜನರಿಗೆ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿವೆ. ಹಲವಾರು ಜನ ಮಾರಣಾಂತಿಕ ರೋಗಗಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಹತ್ತಿರವಿರುವುದರಿಂದ ಹುಲಿ ಮತ್ತು ವನ್ಯಜೀವಿಗಳಿಗೆ ತೊಂದರೆಯಾಗುತ್ತಿದೆ. ಸುವರ್ಣಾವತಿ ಸೇತುವೆ ಮೇಲೆ ಅತೀ ಭಾರ ತುಂಬಿದ ಲಾರಿಗಳು ಸಂಚರಿಸುತ್ತಿದ್ದು, ಸೇತುವೆಗೆ ತೊಂದರೆಯಾಗುತ್ತಿದೆ.

ಗಣಿಗಾರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕನಿಷ್ಠ ವೇತನ, ಇ.ಎಸ್.ಐ ಮತ್ತು ಗ್ರಾ ಪಿ.ಎಫ್ ಸೌಲಭ್ಯ ಹಾಗು ಸುರಕ್ಷಾ ಉಪಕರಣಗಳನ್ನು ಒದಗಿಸಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮನವಿ ಸ್ವೀಕರಿಸಿ ಡಿಸಿ ಶ್ರೀರೂಪ ಮಾತನಾಡಿ, ಈ ಸಂಬಂಧ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ವೇಳೆ ತಾಪಂ ಮಾಜಿ ಸದಸ್ಯ ವೈ.ಕೆ.ಮೋಳೆ ನಾಗರಾಜು, ಗ್ರಾಮಸ್ಥರಾದ ಸಿದ್ದರಾಜು, ನಿಂಗಶೆಟ್ಟಿ, ನಾಗರಾಜು, ನಿಂಗಶೆಟ್ಟಿ, ಸಿದ್ದಶೆಟ್ಟಿ, ಮಣಿ, ಶಿವರಾಜು, ಪ್ರಭು, ನಂಜಶೆಟ್ಟಿ,ಲಿಂಗರಾಜು, ಸಿದ್ದು, ಮಹದೇವು ಇತರರು ಹಾಜರಿದ್ದರು







