ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಮತ್ತು ಉನ್ನತ ಶಿಕ್ಷಣ ಕೊಡಿಸುವಂತೆ ಶಾಸಕ ಡಿ.ರವಿಶಂಕರ್ ಸಲಹೆ

ಕೆ.ಆರ್.ನಗರ(ಜಿಟೆಕ್ ಶಂಕರ್): ಹಿಂದುಳಿದ ಸಮಾಜದಲ್ಲಿ ಸಬಲರಾಗಿ ಬದುಕಿ ಆರ್ಥಿಕವಾಗಿ ಉನ್ನತ ಸ್ಥಾನ ಪಡೆಯಲು ಶಿಕ್ಷಣ ಪ್ರಮುಖ ಸಾಧನವಾಗಿದ್ದು ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉನ್ನತ ಮತ್ತು ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ವಾಲ್ಮೀಕಿ ನಾಯಕರ ಸಮುದಾಯ ಭವನದಲ್ಲಿ ತಾಲೂಕು ನಾಯಕರ ಸಂಘ, ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ನಾಯಕ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರು, ಚುನಾಯಿತ ಜನಪ್ರತಿನಿಧಿಳು ಮತ್ತು ವಿಶೇಷ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣದ ಜತೆಗೆ ರಾಜಕೀಯ ಸ್ಥಾನಮಾನ ಪಡೆದಾಗ ಮಾತ್ರ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗಲಿದ್ದು ಈ ವಿಚಾರವನ್ನು ಅರಿತು ನಾಯಕ ಸಮಾಜದ ಬಾಂಧವರು ಒಟ್ಟಗಾಗಿ ಮುನ್ನಡೆಯಿರಿ ಎಂದು ಸಲಹೆ ನೀಡಿದ ಶಾಸಕರು ನಿಮ್ಮ ಹಿಂದೆ ಸದಾ ಬೆನ್ನೆಲುಬಾಗಿ ನಾನು ಇರುತ್ತೇನೆ ಎಂದು ಭರವಸೆ ನೀಡಿದರು.
ಈ ಹಿಂದೆ ಸಿದ್ದರಾಮಯ್ಯನವರು ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಕ್ಷೇತ್ರದ ವ್ಯಾಪ್ತಿಯ 17 ಸಮುದಾಯ ಭವನಗಳಿಗೆ ತಲಾ 20 ಲಕ್ಷ ರೂ ಅನುದಾನವನ್ನು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ದೊಡ್ಡಸ್ವಾಮೇಗೌಡರು ಕೊಡಿಸಿದ್ದರು ಎಂದು ಶಾಸಕರು ತಿಳಿಸಿದ್ದರು.
2023ರಲ್ಲಿ ನಾನು ಶಾಸಕರಾದ ನಂತರ 14 ಸಮುದಾಯ ಭವನಗಳಿಗೆ 10 ರಿಂದ 20 ಲಕ್ಷ ಮತ್ತು ಕೆ.ಆರ್.ನಗರ ಪಟ್ಟಣದ ನಾಯಕ ಸಮುದಾಯ ಭವನಕ್ಕೆ 1 ಕೋಟಿ ಅನುದಾನ ಕೊಡಿಸಲಾಗಿದ್ದು ಈ ಪೈಕಿ ಈಗಾಗಲೇ ಶೇಕಡ 50 ರಷ್ಟು ಹಣ ಬಿಡುಗಡೆಯಾಗಿದ್ದು ಉಳಿಕೆ ಹಣವನ್ನು ಕೊಡಿಸಲಾಗುತ್ತದೆಂದು ಮಾಹಿತಿ ನೀಡಿದರು.

ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾಧು ಮೈಸೂರು ನಗರದ ಪ್ರತಿಷ್ಠಿತ ಪ್ರದೇಶದಲ್ಲಿ ನಾಯಕ ಸಮಾಜದವರಿಗೆ 5 ಎಕರೆ ಸ್ಥಳ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿ ಅದರಲ್ಲಿ ಯಶಸ್ವಿಯಾಗಿದ್ದು ಅದಕ್ಕಾಗಿ ಅವರನ್ನು ಸಮಾಜದ ಪರವಾಗಿ ನಾನು ಅಭಿನಂದಿಸುತ್ತೇನೆ ಎಂದರು.
ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾಧು ಮಾತನಾಡಿ ಚುನಾವಣೆ ಸಮಯದಲ್ಲಿನಾಯಕ ಸಮಾಜದವರು ತಮನಿಗಿಷ್ಟ ಬಂದ ಪಕ್ಷಗಳ ಜತೆ ಗುರುತಿಸಿಕೊಂಡು ರಾಜಕಾರಣ ಮಾಡಿ ಆದರೆ ಸಮಾಜದ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಸಲಹೆ ನೀಡಿದರು.
ಕೆ.ಆರ್.ನಗರ ತಾಲೂಕು ಕೇಂದ್ರದಲ್ಲಿರುವಂತೆ ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿಯೂ ಭವ್ಯವಾದ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಮಾಡಿಸಲು ಶಾಸಕ ಡಿ.ರವಿಶಂಕರ್ ಮುಂದಾಗಿದ್ದು ಇದಕ್ಕೆ ನನ್ನ ಸಂರ್ಪೂಣ ಬೆಂಬಲವಿದೆ ಎಂದು ಘೋಷಿಸಿದರು.
ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ, ವಾಲ್ಮೀಕಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹೆಚ್.ಸಿ.ಬಸವರಾಜು, ಜಂಗಲ್ ರೆಸಾರ್ಟ್ ಮತ್ತು ವಿಹಾರಧಾಮಗಳ ನಿಗಮದ ಮಾಜಿ ಅಧ್ಯಕ್ಷ ಅಪ್ಪಣ್ಣ, ತಾಲೂಕು ನಾಯಕ ನೌಕರರ ಸಂಘದ ಅಧ್ಯಕ್ಷ ಜಿ.ಕೆ.ಸಿದ್ದೇಶ್ವರ ಪ್ರಸಾದ್ ಮಾತನಾಡಿದರು.
ತಾಲೂಕು ನಾಯಕರ ಸಂಘದ ಗೌರವಾಧ್ಯಕ್ಷ ಎ.ಟಿ.ಶಿವಣ್ಣ, ಅಧ್ಯಕ್ಷ ಸುಬ್ಬುಕೃಷ್ಣ, ಪದಾಧಿಕಾರಿಗಳಾದ ಜ್ಯೋತಿಕುಮಾರ್, ಡಿ.ಕೆ. ಕೃಷ್ಣನಾಯಕ, ಕಿರಣ್ ಕುಮಾರ್, ಪ್ರೇಮಕುಮಾರಿ, ಕೆ.ವಿ.ರಮೇಶ್, ನಾಯಕ ಸಮಾಜದ ಮುಖಂಡರಾದ ಕಲ್ಲಹಳ್ಳಿಶ್ರೀನಿವಾಸ್, ತಿಪ್ಪೂರುಮಹದೇವ್, ಗಣೇಶ್, ನಾಗರಾಜನಾಯಕ, ಮುಂಜನಹಳ್ಳಿಮಹದೇವ್, ಹುಣಸೂರು ತಾಲೂಕು ನಾಯಕರ ಸಂಘದ ಅಧ್ಯಕ್ಷ ಅಣ್ಣಯ್ಯನಾಯಕ ಮತ್ತಿತರರು ಇದ್ದರು.







