News

ದುಬಾರೆ ಸಾಕಾನೆ ಶಿಬಿರದಲ್ಲಿ  ತಬ್ಬಲಿ ಮರಿಯಾನೆ ಆರ್ಯನಿಗೆ ಪ್ರಥಮ ವರ್ಷದ ಹುಟ್ಟು ಹಬ್ಬದ ಸಂಭ್ರಮ…

ಕುಶಾಲನಗರ(ರಘು ಹೆಬ್ಬಾಲೆ): ಕಳೆದ ಒಂದು ವರ್ಷದ ಹಿಂದೆ ತಾಯಿಯಿಂದ ಬೇರ್ಪಟ್ಟು ತಬ್ಬಲಿಯಾಗಿ  ದುಬಾರೆಯ ಸಾಕಾನೆ ಶಿಬಿರ ಸೇರಿ ಅರಣ್ಯ ಇಲಾಖೆಯ ಆಶ್ರಯದಲ್ಲಿ ಬೆಳೆದ ಮರಿಯಾನೆಗೆ ಇದೇ ಜನವರಿಗೆ ಒಂದು ವರ್ಷವಾಗುತ್ತಿರುವುದರಿಂದ ಪ್ರಥಮ ವರ್ಷದ ಹುಟ್ಟು ಹಬ್ಬವನ್ನು ಅರಣ್ಯ ಇಲಾಖೆ ಸಿಬ್ಬಂದಿ  ಕೇಕ್ ಕತ್ತರಿಸುವ ಮೂಲಕ ಆಚರಿಸಿ ಸಂಭ್ರಮಿಸಿದ್ದಾರೆ.

2025 ಜನವರಿ 24ರಂದು ಚಿಕ್ಲಿಹೊಳೆ ಮೀಸಲು ಅರಣ್ಯದಲ್ಲಿ  ಜನ್ಮ ನೀಡಿದ ತಾಯಿಯಿಂದ ಬೇರ್ಪಟ್ಟಿದ್ದ ಮರಿಯಾನೆ ದಿಕ್ಕು ಕಾಣದೆ ಅರಚಾಡುತ್ತಿತ್ತು. ಇದನ್ನು ನೋಡಿದ ಅರಣ್ಯ ಸಿಬ್ಬಂದಿ ಅದನ್ನು ರಕ್ಷಣೆ ಮಾಡಿ ನಂಜರಾಯಪಟ್ಟಣ ಬಳಿಯ ದುಬಾರೆ ಸಾಕಾನೆ ಶಿಬಿರಕ್ಕೆ ತಂದಿದ್ದರು.  ಆ ನಂತರ ಅದರ ಆರೈಕೆ ಆರಂಭವಾಗಿತ್ತು. ತಾಯಿಯ ಸಖ್ಯದಿಂದ ದೂರವಾಗಿದ್ದ ಈ ಮರಿಯಾನೆಯ ಆರೈಕೆ ಅಷ್ಟೇನು ಸುಲಭವಾಗಿರಲಿಲ್ಲ. ಆದರೆ ಇದನ್ನು ತುಂಬಾ ಜತನದಿಂದ ನೋಡಿಕೊಳ್ಳಲಾಗಿತ್ತಲ್ಲದೆ, ಆರ್ಯ ಎಂಬ ಹೆಸರನ್ನಿಡಲಾಗಿತ್ತು.

ಅರಣ್ಯ ಇಲಾಖೆಯ ಮಾವುತರು, ಕಾವಾಡಿಗರು ಸೇರಿದಂತೆ ಸಿಬ್ಬಂದಿ, ಅಧಿಕಾರಿಗಳು ಆರ್ಯನನ್ನು ಪ್ರೀತಿಯಿಂದ ಸಾಕಿ ಸಲಹುತ್ತಾ ಬಂದಿದ್ದರಿಂದ ಕಳೆದ ಒಂದು ವರ್ಷದಿಂದ ದುಬಾರೆ ಆನೆ ಶಿಬಿರದಲ್ಲಿದ್ದುಕೊಂಡೇ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುತ್ತಿದೆ. ಇತರೆ ಆನೆಗಳ ಪೈಕಿ ಅತಿ ಚಿಕ್ಕದಾಗಿರುವ ಮತ್ತು ತಬ್ಬಲಿಯೂ ಆಗಿರುವುದರಿಂದ ಇದರ ಮೇಲೆ ಎಲ್ಲರಿಗೂ ತುಸು ಪ್ರೀತಿ ಜಾಸ್ತಿ ಎಂದೇ ಹೇಳಬೇಕು.

ಇದನ್ನು ಜತನದಿಂದಲೇ ಕಾಪಾಡುತ್ತಾ ಬಂದಿರುವ ಅರಣ್ಯ ಇಲಾಖೆ ಜ.24ಕ್ಕೆ ಅದು ತಾಯಿಯಿಂದ ಬೇರ್ಪಟ್ಟು, ಅರಣ್ಯ ಇಲಾಖೆ ವಶಕ್ಕೆ ಬಂದು ವರ್ಷವಾಗಿದ್ದರಿಂದ ಖುಷಿ ಖುಷಿಯಾಗಿ ಕೇಕ್ ಕತ್ತರಿಸುವ ಮೂಲಕ ಅರ್ಥಪೂರ್ಣವಾಗಿ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ.  ಈ ಸುಂದರ ಕ್ಷಣಕ್ಕೆ  ಮಡಿಕೇರಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ವಿ‌.ಅಭಿಷೇಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ಎ.ಗೋಪಾಲ್, ಕಾರ್ಯಪ್ಪ ಹಾಗೂ ಕುಶಾಲನಗರ ವಲಯ ಅರಣ್ಯಾಧಿಕಾರಿ ಆರ್.ರಕ್ಷಿತ್, ದುಬಾರೆ ಉಪ ವಲಯದ ಅರಣ್ಯಾಧಿಕಾರಿ ರಂಜನ್, ವೆಂಕಟೇಶ್ ಹಾಗೂ ಸಿಬ್ಬಂದಿ ಸಾಕ್ಷಿಯಾದರು.

admin
the authoradmin

Leave a Reply

Translate to any language you want