ArticlesLatest

ಕಾಫಿ ಗುಣಮಟ್ಟ ಏಕೆ ಕಾಪಾಡಬೇಕು? ಕಾಫಿ ಮಂಡಳಿ ಬೆಳೆಗಾರರಿಗೆ ನೀಡುವ ಸಲಹೆಗಳೇನು?

ಕೊಡಗು ಸೇರಿದಂತೆ ಕಾಫಿ (Coffee) ಬೆಳೆಯುವ ಪ್ರದೇಶಗಳಲ್ಲಿ ಕಾಫಿಕೊಯ್ಲು ಜೋರಾಗಿ ನಡೆಯುತ್ತಿದೆ. ಒಂದೆಡೆ ಕಾಫಿ ಕೊಯ್ಲು ನಡೆಯುತ್ತಿದ್ದರೆ ಮತ್ತೊಂದೆಡೆ ಅದನ್ನು ಒಣಗಿಸುವ  ಮತ್ತು ಮಾರಾಟ ಮಾಡುವ ಪ್ರಕ್ರಿಯೆಗಳು ಎಲ್ಲೆಂದರಲ್ಲಿ ನಡೆಯುತ್ತಿದೆ. ಫೆಬ್ರವರಿ ಕೊನೆಯ ತನಕವೂ ಕಾಫಿಯ ಕೊಯ್ಲುನ ಕಾಲವಾಗಿರುವುದರಿಂದ ಅದನ್ನು ಮುಗಿಸಿ ಕಾಫಿಯನ್ನು ಒಣಗಿಸಿ ದಾಸ್ತಾನು ಮಾಡುವ ತನಕವೂ ಒತ್ತಡದ ಬದುಕು ಕಾಫಿ ಬೆಳೆಗಾರರದ್ದಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಕಾಫಿಯ ದರ ಇಳಿಕೆಯಾಗಿದೆ. ಕಳೆದ ವರ್ಷ ಈ ವೇಳೆಗೆ ದರ ದೊರೆತಿತ್ತು. ಆದರೆ ಆ ನಂತರ ಇಳಿಕೆಯಾದ ಬೆಲೆ ಚೇತರಿಕೆ ಕಾಣಲಿಲ್ಲ. ಕಾಫಿಗೆ ಉತ್ತಮ ದರ ಸಿಗಬಹುದೆಂದು ದಾಸ್ತಾನು ಇಟ್ಟವರು ಒಂದಷ್ಟು ನಷ್ಟ ಅನುಭವಿಸುವಂತಾಗಿದೆ. ಸದ್ಯ ಕಾಫಿಯ ದರವೂ ಒಂಥರಾ ಜೂಜಾಟದಂತಾಗಿದೆ. ಯಾವಾಗ ಬೆಲೆ ಏರುತ್ತದೆ ಮತ್ತು ಇಳಿಯುತ್ತದೆ ಎಂಬುದನ್ನು ಹೇಳಲಾಗದ ಸ್ಥಿತಿಗೆ ತಲುಪಿದೆ. ಒಂದೆಡೆ ಅಕಾಲಿಕ ಮಳೆ ಮತ್ತೊಂದೆಡೆ ಕಾರ್ಮಿಕರ ಕೊರತೆ, ಮೋಡದ ವಾತಾವರಣ ಹೀಗೆ ಎಲ್ಲವನ್ನು ನೋಡಿಕೊಂಡು ಅದರ ನಡುವೆ ಕಾಫಿಯನ್ನು ಒಣಗಿಸಿ ದಾಸ್ತಾನು ಮಾಡುವುದು ಸುಲಭವೇನಲ್ಲ. ಒಂದು ರೀತಿಯ ಹೋರಾಟವಾಗಿದೆ.

ಇದೆಲ್ಲದರ ನಡುವೆ ಕಾಫಿಯ ಗುಣಮಟ್ಟ (coffee quality)ವನ್ನು ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ಬಹುತೇಕ ಕಡೆಗಳಲ್ಲಿ ಬೆಳೆಗಾರರು ಗುಣಮಟ್ಟಕ್ಕೆ ಆದ್ಯತೆ ನೀಡದಿರುವುದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ಕಾಫಿಯ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ಕಾಫಿಯನ್ನು ಕೊಯ್ಲು ಮಾಡಿದಲ್ಲಿಂದ ದಾಸ್ತಾನು ಇಡುವ ತನಕ ಗುಣಮಟ್ಟವನ್ನು ಕಾಪಾಡಿಕೊಳ್ಳಿ ಎನ್ನುವುದು ತಜ್ಞರ ಸಲಹೆಯಾಗಿದೆ.

ಇನ್ನು ಗುಣಮಟ್ಟದ ಕುರಿತಂತೆ ಕಾಫಿಮಂಡಳಿ ಹಲವು ರೀತಿಯ ಸಲಹೆಗಳನ್ನು ನೀಡುತ್ತಲೇ ಬಂದಿದೆ. ಆ ಪ್ರಕಾರ ಕಾಫಿ ತೋಟಗಳ ಗಿಡಗಳಲ್ಲಿನ ಕಾಫಿ ಸಂಪೂರ್ಣ ಅಲ್ಲದಿದ್ದರೂ ಶೇ.80ರಷ್ಟು ಹಣ್ಣಾದ ಬಳಿಕ ಬೆಳೆಗಾರರು ಕೊಯ್ಲು ಮಾಡಬೇಕು. ಅದರಲ್ಲೂ ಹಣ್ಣು ಮತ್ತು ಕಾಯಿಯನ್ನು ಪ್ರತ್ಯೇಕ ಮಾಡಿ ಒಣಗಿಸಿದರೆ ಇನ್ನು ಉತ್ತಮ. ಕಣದಲ್ಲಿ ಒಣಗಿಸಲು ಹರಡುವಾಗ ಎಂಟು ಸೆಂಟಿಮೀಟರ್ ನಷ್ಟು ದಪ್ಪ ಇರಬೇಕಾಗುತ್ತದೆ. ಕಾಂಕ್ರಿಟ್ ಕಣದಲ್ಲಿ ಒಣಗಿಸುವುದಾದರೆ ತೊಂದರೆಯಿಲ್ಲ. ಅದನ್ನು ಹೊರತು ಪಡಿಸಿ ಬಯಲಲ್ಲಿ ಹಾಕಿ ಒಣಗಿಸುವಾಗ  ಎಚ್ಚರ ವಹಿಸಬೇಕು. ಕಲ್ಲು ಮಣ್ಣು ಸೇರದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.

ಕಾಫಿ ಕೊಯ್ಲು ಮಾಡುವಾಗ ಕಸಗಳು ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಅವುಗಳನ್ನು ತೆಗೆದು ಶುದ್ಧಗೊಳಿಸಬೇಕಾಗುತ್ತದೆ. ಹರಡಿದ ಕಾಫಿಯನ್ನು ದಿನಕ್ಕೆ ನಾಲ್ಕೈದು ಬಾರಿಯಾದರೂ ಕದಲಿಸುತ್ತಿರಬೇಕು. ಹೀಗೆ ಮಾಡುವುದರಿಂದ ಬಿಸಿಲು ಚೆನ್ನಾಗಿ ಬೀಳಲು ಅನುಕೂಲವಾಗುತ್ತದೆ. ರಾತ್ರಿ ಹೊತ್ತು ಹೆಚ್ಚಿನ ಪ್ರಮಾಣದಲ್ಲಿ ಮಂಜು ಬೀಳುವುದರಿಂದ ರಾತ್ರಿ ವೇಳೆ ಮುಚ್ಚಿಟ್ಟು ಬೆಳಗ್ಗೆ ಸೂರ್ಯನ ಶಾಖ ಹೆಚ್ಚಾಗಿ ಮಂಜು ಕರಗಿದ ಬಳಿಕ ಕಾಫಿಯನ್ನು ಹರಡುವುದು ಒಳ್ಳೆಯದು. ಹೀಗೆ ಮಾಡುತ್ತಾ ಬಂದರೆ ಕಾಫಿ ಬೇಗ ಒಣಗಲು ಸಹಕಾರಿಯಾಗುತ್ತದೆ. ಒಂದು ಹಿಡಿಯಷ್ಟು ಚೆರ್ರಿ ಕಾಫಿಯನ್ನು ತೆಗೆದುಕೊಂಡು ಅಲ್ಲಾಡಿಸಿದರೆ ಒಳಗಿನ ಬೀಜ ಅಲ್ಲಾಡುವ ಶಬ್ದ ಕೇಳಿಸಿದರೆ ಕಾಫಿ ಒಣಗಿದೆ ಎಂದರ್ಥ.

ಕಾಫಿಮಂಡಳಿ ಪ್ರಕಾರ ಒಣಗಿದ ಕಾಫಿಯ ತೇವಾಂಶವು ತೇವಾಂಶದ ಮಾಪಕದಲ್ಲಿ ತೋರಿಸುವಂತೆ ಅರೇಬಿಕಾ ಮತ್ತು ರೋಬಸ್ಟಾ ಪಾರ್ಚ್ ಮೆಂಟ್  ಶೇ.10, ಅರೇಬಿಕಾ ಚೆರ್ರಿ ಶೇ.10.5, ರೋಬಸ್ಟಾ ಚೆರ್ರಿ ಶೇ.11 ಇರಬೇಕಂತೆ. ಇನ್ನು ಫಾರ್ಲಿಟ್ ಮೂಲಕವೂ ಅಂದಾಜು ಮಾಡಬಹುದಾಗಿದ್ದು, ಒಂದು ಫಾರ್ಲಿಟ್ ಗೆ ಅರೇಬಿಕಾ, ರೋಬಸ್ಟಾ ಪಾರ್ಚ್ ಮೆಂಟ್ 15.5ಕೆಜಿ, ಅರೇಬಿಕಾ ಚೆರ್ರಿ 16ಕೆಜಿ, ರೋಬಸ್ಟಾ ‍ಚೆರ್ರಿ 18 ಕೆಜಿ ಇರಬೇಕಂತೆ. ಹಾಗೆಂದು ಇದೇ ಖಚಿತವಲ್ಲ ಬದಲಾವಣೆಗಳು ಆಗುವ ಸಾಧ್ಯತೆ ಇರುತ್ತದೆ. ಆದರೆ ಇಷ್ಟಿದ್ದರೆ ಉತ್ತಮವಾಗಿ ಒಣಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಕಾಫಿಯನ್ನು ಕಣದಿಂದ ತೆಗೆದು ದಾಸ್ತಾನಿಡಲು ಚೀಲಕ್ಕೆ ತುಂಬುವಾಗಲೂ ಎಚ್ಚರಿಕೆ ವಹಿಸಬೇಕಾಗುತ್ತದೆ. ಬೇರೆ, ಬೇರೆ ದಿನಗಳಲ್ಲಿ ಒಣಗಿದ ಕಾಫಿಯನ್ನು ಪ್ರತ್ಯೇಕ ಚೀಲಗಳಲ್ಲೇ ತುಂಬಿಡುವುದು ಉತ್ತಮ. ಹಾಗೆಯೇ ದಾಸ್ತಾನಿಡುವ ಗೋದಾಮು ಕೂಡ ಶುದ್ಧವಾಗಿರಬೇಕು. ಕೀಟ ನಾಶಕಗಳು ಶೇಖರಿಸಿದ ಗೋದಾಮು ಆಗಿರಬಾರದು. ಜತೆಗೆ ತೇವಾಂಶವೂ ಇರಬಾರದು. ಕಾಫಿ ತುಂಬಿದ ಚೀಲಗಳನ್ನು ನೆಲದ ಮೇಲೆ ಇಡದೆ ಮರದ ಹಲಗೆ ಮೇಲೆ ಅಟ್ಟಿಡುವುದು ಸೂಕ್ತ.  ಕಾಫಿ ಬೇಳೆ ಮಾಡುವ ಮುನ್ನ ಚೆರ್ರಿ ಚೆನ್ನಾಗಿ ಒಣಗಿಸುವುದು ಒಳ್ಳೆಯದು.

ತಮ್ಮೆಲ್ಲ ಒತ್ತಡದ ನಡುವೆ ಕಾಫಿಬೆಳೆಗಾರರು ಕೊಯ್ಲುನಿಂದಲೇ ಗುಣಮಟ್ಟವನ್ನು ಕಾಯ್ದುಕೊಂಡು ಬಂದರೆ ಖರೀದಿಸುವ ವ್ಯಾಪಾರಸ್ಥರಿಗೂ, ಅದನ್ನು ಬೇರೆ ದೇಶಗಳಿಗೆ ರಫ್ತು ಮಾಡುವ ರಫ್ತುದಾರರಿಗೂ ಅನುಕೂಲವಾಗಲಿದೆ. ಜತೆಗೆ ಗುಣಮಟ್ಟದ ಕಾಫಿಯನ್ನು ನಾವು ನೀಡಿದ್ದೇ ಆದರೆ ದೇಶದ ಗೌರವ ಉಳಿಯುವುದರೊಂದಿಗೆ ಬೇಡಿಕೆ ಹೆಚ್ಚಲು ಕಾರಣವಾಗಲಿದೆ. ಆದುದರಿಂದ ಪ್ರತಿಯೊಬ್ಬ ಕಾಫಿ ಬೆಳೆಯುವ ಬೆಳೆಗಾರರು ಗುಣಮಟ್ಟದತ್ತ ಹೆಚ್ಚಿನ ಆದ್ಯತೆ ನೀಡುವುದು ಒಳ್ಳೆಯದು.

ರಾಸಾಯನಿಕಯುಕ್ತ ಆಹಾರ ಮನುಷ್ಯನ ದೇಹ ಸೇರುತ್ತಿದೆ… ಆರೋಗ್ಯವಂತ ಸಮಾಜದ ಹೊಣೆ ರೈತರ ಮೇಲಿದೆ…!

ಕೊಡಗಿನಲ್ಲಿ ಸಾಂಬಾರ ರಾಣಿಯ ವೈಭವ ಮರೆಯಾಗಿದ್ದು ಹೇಗೆ? ಏಲಕ್ಕಿ ಬೆಳೆಗಾರನ ಆ ದಿನಗಳು ಹೇಗಿದ್ದವು ಗೊತ್ತಾ?

B M Lavakumar

 

 

admin
the authoradmin

Leave a Reply

Translate to any language you want