Latest

ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಪ್ರಾಣ ತೆಗೆದ ಬೊಲೆರೋ ವಾಹನ… ಆಗಿದ್ದೇನು?

ಮಡಿಕೇರಿ: ಇತ್ತೀಚೆಗಿನ ದಿನಗಳಲ್ಲಿ  ಚಾಲಕರ ಅಜಾಗರೂಕತೆ ಮತ್ತು ಅತಿಯಾದ ವೇಗದ ಚಾಲನೆಗೆ ಅಪಘಾತಗಳು ನಡೆಯುತ್ತಿದ್ದು, ದಾರಿಯಲ್ಲಿ ತಮ್ಮ ಪಾಡಿಗೆ ತಾವು ಎಂಬಂತೆ  ನಡೆದುಕೊಂಡು ಹೋಗುವ ಅಮಾಯಕ ಪಾದಾಚಾರಿಗಳು ಬಲಿಯಾಗುತ್ತಿದ್ದಾರೆ.

ಇದೀಗ ಕೊಡಗಿನ ಕುಶಾಲನಗರ ಬಳಿಯ ಹೆಬ್ಬಾಲೆಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಅಮಾಯಕ ಮಹಿಳೆ ಪ್ರಾಣಕಳೆದುಕೊಂಡಿದ್ದಾರೆ. ಮೃತಪಟ್ಟ ಮಹಿಳೆ ಮಂಜುಳಾ(50) ಎಂದು ಗುರುತಿಸಲಾಗಿದ್ದು, ಇವರು ನಿವೃತ್ತ ಶಿಕ್ಷಕ ಪಾಲಾಕ್ಷ ಎಂಬವರ ಪತ್ನಿಯಾಗಿದ್ದಾರೆ. ಇವರು ಹೆಬ್ಬಾಲೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರ ಪಾಲಿಗೆ ಯಮನಾಗಿ ಬೊಲೇರೋ (ಕೆ.ಎ.13.ಎನ್.8637)  ವಾಹನ ಬಂದಿದೆ. ಈ ವಾಹನ  ಹಾಸನದ ಕೋಣನೂರಿನಿಂದ ಕುಶಾಲನಗರದ ಕಡೆಗೆ ತೆರಳುತ್ತಿತ್ತು. ಅದೇನಾಯಿತೋ ವಾಹನವನ್ನು ಚಾಲಿಸುತ್ತಿದ್ದ ಚಾಲಕನ ನಿರ್ಲಕ್ಷ್ಯದಿಂದ ನೇರವಾಗಿ ಮುಂದೆ ನಡೆದುಕೊಂಡು ಹೋಗುತ್ತಿದ್ದ ಮಂಜುಳಾ ಅವರಿಗೆ ಡಿಕ್ಕಿ ಹೊಡೆದಿದೆ.

ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಮಂಜುಳಾ ಅವರು ಗಂಭೀರ ಗಾಯಗೊಂಡಿದ್ದು ಅವರನ್ನು ತಕ್ಷಣವೇ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗದೆ  ಅವರು ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ಚಂದ್ರಶೇಖರ್, ಸಂಚಾರ ಪೊಲೀಸ್ ಠಾಣಾಧಿಕಾರಿ ಗಣೇಶ್ ಭೇಟಿ ನೀಡಿ ಪರಿಶೀಲಿಸಿ, ಬೊಲೇರೋ ವಾಹನದ ಚಾಲಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

admin
the authoradmin

Leave a Reply

Translate to any language you want