LatestMysore

ಮೈಸೂರಿಗೆ ಕಳಂಕ ತರುತ್ತಿರುವ ಡ್ರಗ್ಸ್ ಜಾಲಕ್ಕೆ ಇತಿಶ್ರೀ  ಹಾಡಲೇ ಬೇಕಾಗಿದೆ..

ಮೈಸೂರು: ಹಣದಾಸೆಗೆ ಕೆಲವರು ಫ್ಯಾಕ್ಟರಿ ನಡೆಸುವ ನೆಪದಲ್ಲಿ ಮಾದಕ ವಸ್ತುಗಳನ್ನು ತಯಾರಿಸುವ ಹೀನ ಕೃತ್ಯಕ್ಕಿಳಿದಿರುವುದು ಪಾರಂಪರಿಕ ನಗರಿ ಮೈಸೂರಿಗೆ ಕಪ್ಪು ಚುಕ್ಕೆಯಾಗಿದೆ. ಕಳೆದ ಕೆಲವು  ತಿಂಗಳ ಹಿಂದೆ ಮಹಾರಾಷ್ಟ್ರ ಪೊಲೀಸರು ದಾಳಿ ಮಾಡಿ ಡ್ರಗ್ಸ್ ತಯಾರು ಮಾಡುತ್ತಿದ್ದ ಘಟಕವನ್ನು ಪತ್ತೆ ಹಚ್ಚುವ ಮೂಲಕ ಮೈಸೂರಿನಲ್ಲಿ ಡ್ರಗ್ಸ್ ಉತ್ಪಾದನೆಯಾಗುತ್ತಿರುವ ಬಗ್ಗೆ ಬಹಿರಂಗಗೊಳಿಸಿದ್ದರು. ಈ ಘಟನೆ ನಂತರ ಇಲ್ಲಿನ ಪೊಲೀಸರು ಎಚ್ಚೆತ್ತುಕೊಂಡು ಕಾರ್ಯಾಚರಣೆ ಆರಂಭಿಸಿದ್ದರು. ಇದೀಗ ಮತ್ತೊಮ್ಮ ದೆಹಲಿ ಪೊಲೀಸರು ಇಲ್ಲಿಗೆ ಬಂದು ಫ್ಯಾಕ್ಟರಿಯೊಂದನ್ನು ಶೋಧ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ.

ಮೈಸೂರಿನಲ್ಲಿ ಗಾಂಜಾ, ಡ್ರಗ್ಸ್ ಮಾರಾಟವಾಗುತ್ತಿರುವುದು, ಕೆಲವು ಪುಂಡ ಪೋಕರಿಗಳು ಅದರ ಮತ್ತಿನಲ್ಲಿ ಅಪರಾಧ ಕೃತ್ಯಗಳನ್ನು ಎಸಗುತ್ತಿರುವುದು ಗೊತ್ತಿಲ್ಲದ ವಿಚಾರವೇನಲ್ಲ. ಇತ್ತೀಚೆಗೆ  ಗಾಂಜಾ ಮತ್ತಿನಲ್ಲಿ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ ಪ್ರಕರಣ ನಡೆದಿತ್ತು. ಇದೆಲ್ಲದರ ನಡುವೆ ಮೈಸೂರಿಗೆ ಹೇಗೆ ಮಾದಕ ವಸ್ತುಗಳು ಬರುತ್ತಿವೆ ಎಂದು ಜನ ತಲೆ ಕೆಡಿಸಿಕೊಂಡಿದ್ದರು. ಆದರೆ ಡ್ರಗ್ಸ್ ಮೈಸೂರಿಗೆ ಬರುತ್ತಿಲ್ಲ.. ಮೈಸೂರಿನಲ್ಲಿಯೇ ತಯಾರಾಗುತ್ತಿದೆ ಎಂಬುದು ಡ್ರಗ್ಸ್ ಫ್ಯಾಕ್ಟರಿ ಮೇಲೆ ಮಹಾರಾಷ್ಟ್ರ ಪೊಲೀಸರು ದಾಳಿ ಮಾಡಿದಾಗ ಪತ್ತೆಯಾಗಿತ್ತು. ಅವತ್ತು ಪತ್ತೆಯಾಗಿದ್ದು ಬರೋಬ್ಬರಿ 390 ಕೋಟಿ ಮೌಲ್ಯದ ಮಾದಕ ವಸ್ತುವಾಗಿತ್ತು.

ಮೈಸೂರಿನಿಂದ ಡ್ರಗ್ಸ್ ತಯಾರಾಗಾಗಿ ಅದನ್ನು ಬೇರೆಡೆಗೆ ಸಾಗಿಸುವ ಜಾಲ ಸಕ್ರೀಯವಾಗಿದ್ದು, ಹೊರ ರಾಜ್ಯದಲ್ಲಿ ಡ್ರಗ್ ಫೆಡ್ಲರ್ ಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದಾಗ ಅವರು ನೀಡುವ ಮಾಹಿತಿ ಮೇರೆಗೆ ಇಲ್ಲಿನ ಫ್ಯಾಕ್ಟರಿಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಇದೀಗ ಮತ್ತೊಮ್ಮೆ  ಮೈಸೂರಿನ ಹೆಬ್ಬಾಳ್  ಕೆಮಿಕಲ್ ಫ್ಯಾಕ್ಟರಿ ಮೇಲೆ ದಾಳಿ ನಡೆಸಿದ ದೆಹಲಿ ಪೊಲೀಸರು ಪರಿಶೀಲನೆ ನಡೆಸಿ ಹಿಂತಿರುಗಿದ್ದಾರೆ. ಈ ಬಾರಿ ಯಾವುದೇ ಮಾದಕ ವಸ್ತುಗಳು ಲಭ್ಯವಾಗಿಲ್ಲ ಎನ್ನಲಾಗುತ್ತಿದೆ.  ಆದರೆ ಮೈಸೂರಿನ ಕೈಗಾರಿಕೋದ್ಯಮಿಗಳಿಗೆ ಈ ಪ್ರಕರಣಗಳು ತಲೆನೋವಾಗಿ ಪರಿಣಮಿಸಿದೆ.

ಹೀಗಾಗಿ ಎಚ್ಚೆತ್ತುಕೊಂಡಿರುವ ಪೊಲೀಸರು, ಕೈಗಾರಿಕೋದ್ಯಮಿಗಳು ಸಭೆ ನಡೆಸಿದ್ದು, ಈ ವೇಳೆ ಕಾನೂನು ಅರಿವು ಸಂವಾದ ನಡೆಸಿದ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್  ಅವರು ಸಲಹೆ ಸೂಚನೆ ನೀಡಿದ್ದು,  ನಗರದಲ್ಲಿರುವ ಎಲ್ಲಾ ಕೆಮಿಕಲ್ ಫ್ಯಾಕ್ಟರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಸಂಗ್ರಹಿಸಲಿದ್ದಾರೆ . ಅಲ್ಲದೆ, ಮಾದಕ ವಸ್ತು ತಯಾರಿಕೆಯಲ್ಲಿ ಬಳಕೆಯಾಗುವ ಯಂತ್ರೋಪಕರಣಗಳು ಮತ್ತು ರಾಸಾಯಾನಿಕ ವಸ್ತುಗಳ ಬಗ್ಗೆ ಚಿತ್ರ ಸಮೇತ ಮಾಹಿತಿಯನ್ನು ಆಯುಕ್ತರು ನೀಡಿದ್ದಾರೆ.

ಕೈಗಾರಿಕೋದ್ಯಮಿಗಳು, ತಮ್ಮ ಕಾರ್ಖಾನೆಯ ಕಟ್ಟಡಗಳನ್ನು ಬಾಡಿಗೆ ನೀಡುವ ಮುನ್ನ ಬಾಡಿಗೆ ಪಡೆಯುವವರ ವಿವರ ಕಲೆ ಹಾಕುವುದರೊಂದಿಗೆ ಕಾರ್ಖಾನೆಯಲ್ಲಿ ಏನು ಉತ್ಪಾದನೆಯಾಗುತ್ತಿದೆ ಎಂಬುದರ ನಿಗಾ ವಹಿಸಬೇಕು. ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೆರೆ ಜಿಲ್ಲೆ ಅಥವಾ ನೆರೆ ರಾಜ್ಯದ ಕಾರ್ಮಿಕರು ಅಥವಾ ನೌಕರರ ಹಿನ್ನಲೆಯ ಬಗ್ಗೆ  ಸಂಬಂಧ ಪಟ್ಟ ಕಾರ್ಖಾನೆಯ ಮಾಲೀಕರು, ಪೊಲೀಸ್ ತಪಾಸಣೆ ಮೂಲಕ ಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ಕೆಮಿಕಲ್ ಫ್ಯಾಕ್ಟರಿಗಳ ಪ್ರತಿಯೊಬ್ಬ ಮಾಲೀಕರನ್ನು ನೇರವಾಗಿ ವಿಚಾರಣೆ ನಡೆಸುವ ಮೂಲಕ ಕಾರ್ಖಾನೆಯಲ್ಲಿ ತಯಾರಾಗುವ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.  ಇನ್ನೊಂದೆಡೆ  ಹೆಬ್ಬಾಳದಲ್ಲಿರುವ ಕೈಗಾರಿಕಾ ಪ್ರದೇಶದ ಕಟ್ಟಡವೊಂದರಲ್ಲಿ ಡ್ರಗ್ಸ್ ಉತ್ಪಾದನೆ ಮಾಡುತ್ತಿದ್ದಾರೆ ಎಂಬ ಅನುಮಾನದಲ್ಲಿ ದಾಳಿ ನಡೆಸಿದ ಎನ್‌ಸಿಬಿ (ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ) ತಂಡವು ಗಣಪತ್ ಲಾಲ್‌ ಎಂಬಾತನನ್ನು ಬಂಧಿಸಿದೆ. ಗಣಪತ್ ಲಾಲ್ ಜೆ.ಕೆ ಟಯರ್ಸ್ ಹಿಂಭಾಗದ ರಸ್ತೆಯಲ್ಲಿರುವ ಕಟ್ಟಡದಲ್ಲಿ ರಾಸಾಯನಿಕ ತಯಾರಿಕ ಘಟಕ ನಡೆಸುತ್ತಿದ್ದನು.

ರಾಜಸ್ಥಾನದಲ್ಲಿ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಗಣಪತ್ ಲಾಲ್ ಸಂಬಂಧಿಕ ಬಂಧಿಯಾಗಿದ್ದು, ಆತ ನೀಡಿದ ಮಾಹಿತಿ ಆಧರಿಸಿ ಮೈಸೂರಿನ ಘಟಕಕ್ಕೆ ದಾಳಿ ನಡೆಸಲಾಗಿದ್ದು, ತೀವ್ರ ವಿಚಾರಣೆಯ ಬಳಿಕ ಜಿಲ್ಲಾ ನ್ಯಾಯಾಲಯದ ಮೂರನೇ ಜೆಎಂಎಪ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಆರೋಪಿಯನ್ನು ಹೊರರಾಜ್ಯಕ್ಕೆ ಕೊಂಡೊಯ್ಯಲು ಅನುಮತಿ ಪಡೆದು ತೆರಳಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಡ್ರಗ್ಸ್ ನಂಟು  ಮೈಸೂರಿನೊಂದಿಗೆ ಗಟ್ಟಿಯಾಗಿರುವುದನ್ನು ಅಲ್ಲಗೆಳೆಯುವಂತಿಲ್ಲ. ಪೊಲೀಸರು ಈ ನಿಟ್ಟಿನಲ್ಲಿ ಕಠಿಣ ಕ್ರಮಗೊಳ್ಳುವುದು ಬಹು ಮುಖ್ಯವಾಗಿದೆ.

admin
the authoradmin

Leave a Reply

Translate to any language you want