CrimeLatest

ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು ಹೇಗೆ?

ಬೆಂಗಳೂರು: ನ್ಯಾಯ ಕೊಡಿಸಬೇಕಾದ ಪೊಲೀಸ್ ಇನ್ಸ್ ಪೆಕ್ಟರ್  ಎಫ್ ಐಆರ್ ನಲ್ಲಿ ಆರೋಪಿಯ ಹೆಸರು ಸೇರಿಸದಿರಲು 5ಲಕ್ಷ ರೂಪಾಯಿಯ ಲಂಚದ ಬೇಡಿಕೆಯಿಟ್ಟು ಲೋಕಾಯಕ್ತ ಪೊಲೀಸರ ಬಲೆಗೆ ಬಿದ್ದು  ಪರಪ್ಪನ ಅಗ್ರಹಾರದ ಜೈಲ್ ಸೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ವೈರಲ್ ಆಗುತ್ತಿರುವ ಇನ್ಸ್ ಪೆಕ್ಟರ್ ನ ವರ್ತನೆ ಮತ್ತು ಆತ ನಡೆದುಕೊಂಡಿರುವ ರೀತಿ, ನೀತಿಗಳನ್ನು ನೋಡಿದ ಜನ  ಹಿಡಿಶಾಪ ಹಾಕುತ್ತಿದ್ದಾರೆ.

ಖಾಕಿಗೆ ಅದರದ್ದೇ ಆದ ಗೌರವಿದೆ. ಆದರೆ ಕೆಲವು ಭ್ರಷ್ಟಾಚಾರಿಗಳು ಹಣದ ಆಸೆಗಾಗಿ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವಂತೆ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ. ಇದೀಗ ಹಣದ ಆಸೆಗೆ ಬಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಲೋಕಾಯುಕ್ತರ ಅತಿಥಿಯಾಗಿ ಜೈಲ್ ಸೇರಿದ್ದಾರೆ.  ಇದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಅಂದಹಾಗೆ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆ ಬಿದ್ದ ಇನ್ಸ್ ಪೆಕ್ಟರ್ ಹೆಸರು ಗೋವಿಂದ ರಾಜು. ಬೆಂಗಳೂರಿನ ಕೆ.ಪಿ.ಅಗ್ರಹಾರ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ನ್ಯಾಯಯುತವಾಗಿ ಕೆಲಸ ಮಾಡಿ, ಲಂಚಕ್ಕೆ ಕೈ ಚಾಚದೆ ಇದ್ದಿದ್ದರೆ ಇವತ್ತು ಇವರ ಮಾನ ಬೀದಿಯಲ್ಲಿ ಹರಾಜು ಆಗುತ್ತಿರಲಿಲ್ಲ.  ಆದರೆ ಇಷ್ಟುವರೆಗಿನ ಇವರ ಸೇವೆ ಮತ್ತು ಖಾಕಿಯ ಗೌರವಕ್ಕೆ ಕಳಂಕ ತರುವ ಕೆಲಸವನ್ನು ಮಾಡಿರುವುದು ದುರಂತವೇ ಸರಿ.

ಇಷ್ಟಕ್ಕೂ ಆಗಿದ್ಧೇನು ಎಂಬುದನ್ನು ನೋಡಿದ್ದೇ ಆದರೆ ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚೀಟಿ ವ್ಯವಹಾರ ವಿಚಾರಕ್ಕೆ ಸಂಬಂಧಿಸಿದಂತೆ ದೂರು ಇವರ ಠಾಣೆಗೆ ಬಂದಿತ್ತು.  ಈ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಜವಬ್ದಾರಿ ಇನ್ಸ್ ಪೆಕ್ಟರ್ ಗೋವಿಂದರಾಜು ಅವರದ್ಧಾಗಿತ್ತು.  ಹೀಗಾಗಿ  ಇನ್ಸ್ ಪೆಕ್ಟರ್ ಗೋವಿಂದರಾಜು ಚೀಟಿ ವ್ಯವಹಾರದಲ್ಲಿ ವಂಚನೆ ಮಾಡಿದ್ದಾರೆ ಎನ್ನಲಾದವರು ಇದ್ದ  ಪ್ಲಾಟ್‌ ಗೆ ತೆರಳಿದ್ದರು.

ಈ ವೇಳೆ ಆರೋಪಿಗಳು ಮತ್ತು ಇನ್ಸ್ ಪೆಕ್ಟರ್ ಗೋವಿಂದರಾಜು ಅವರ ನಡುವೆ ಮಾತುಕತೆಗಳಾಗಿದ್ದವು. ಅಲ್ಲದೆ ನೋಟಿಸ್ ಕೊಡದೇ ಬಂದಿದ್ದೀರಾ, ನಾವು ಲಾಯರ್ ಬಳಿ ಮಾತನಾಡುತ್ತೇವೆ ಎಂದು ಆರೋಪಿಗಳು ಪಟ್ಟು ಹಿಡಿದಿದ್ದರು.  ಈ ವೇಳೆ ಇನ್ಸ್ ಪೆಕ್ಟರ್ ನೀವು ನನ್ನ ಕರ್ತವ್ಯಕ್ಕೆ ಅಡ್ಡಿ ಮಾಡುತ್ತಿದ್ದೀರಾ ಎಂದಿದ್ದರು. ಅದಕ್ಕೆ ಆರೋಪಿಗಳು ಇಲ್ಲ ನಾವು ಅಡ್ಡಿ ಮಾಡುತ್ತಿಲ್ಲ. ನೀವು ನೋಟಿಸ್ ಕೊಟ್ಟಿಲ್ಲ… ನೀವು ನೋಟೀಸ್ ತೋರಿಸಿಲ್ಲ ಸರ್.. ನಾವು ಅಡ್ಡ ಬರಲಿಲ್ಲ ಸರ್.. ನೋಟಿಸ್ ತೋರಿಸಿಲ್ಲ ಅರ್ಧ ಗಂಟೆ ಆಯ್ತು ನನಗೆ ನಮ್ಮ ಲಾಯರ್ ಬೇಕು… ನಿಮಗೆ ನಾನು ಸಹಕಾರ ಕೊಡ್ತೇನೆ… ನನಗೆ ಲಾಯರ್ ಬರಬೇಕು… ಇದರಲ್ಲಿ ಲ್ಯಾಪ್ಸ್ ಇದೆ ಎಂದೆಲ್ಲ ಆರೋಪಿ ಎನ್ನಲಾದ ವ್ಯಕ್ತಿ ಬಡಬಡಿಸಿದ್ದನು.

ಅವರು ಬಾರದೆ ಇದ್ದಾಗ ಹೊಯ್ಸಳ ಕರೆಯಿಸಿ ಅವರನ್ನು ಠಾಣೆಗೆ ಕರೆದುಕೊಂಡು ಹೋಗಲಾಗಿತ್ತು.  ಆದರೆ ಅದಕ್ಕೂ ಮುನ್ನ ಪೊಲೀಸರು ಭೇಟಿ ನೀಡಿರುವುದು ಮತ್ತು ಮಾತುಕತೆ ನಡೆಸಿದ ದೃಶ್ಯ ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು.

ಆದರೆ ಆರೋಪಿಗಳು ಸ್ಟೇಷನ್‌ಗೆ ಹೋದ ಮೇಲೆ ಇನ್ಸ್ ಪೆಕ್ಟರ್ ಗೋವಿಂದರಾಜು ಅವರ ಜತೆಯಲ್ಲಿಯೇ ಡೀಲ್ ನಡೆಸಿದ್ದರು.  ಕೇಸ್‌ ಆದರೆ ನಿಮಗೆ ಮುಂದಕ್ಕೆ ಕಷ್ಟವಾಗುತ್ತದೆ. ಆದ್ದರಿಂದ ಎಫ್ ಐಆರ್ ನಿಂದ  ಕೈ ಬಿಡಲು ಐದು ಲಕ್ಷ ನೀಡುವಂತೆ ಹೇಳಿದ್ದರು. ಅದರಂತೆ ಮೊದಲು ಒಂದು ಲಕ್ಷ ಹಣ ತರಿಸಿಕೊಂಡಿದ್ದರು. ನಂತರ ನಾಲ್ಕು ಲಕ್ಷ ಹಣ ತರುವಂತೆ ಸೂಚನೆ ನೀಡಿದ್ದರು. ಇನ್ಸ್ ಪೆಕ್ಟರ್ ಗೋವಿಂದರಾಜು ಮಾತಿಗೆ ಒಪ್ಪಿಕೊಂಡು ಬಂದ ಆರೋಪಿಗಳು ನಂತರ ಇನ್ಸ್ ಪೆಕ್ಟರ್ ಗೆ ಖೆಡ್ಡಾ ತೋಡಿದ್ದರು.

ಉಳಿದ ನಾಲ್ಕು ಲಕ್ಷ ಹಣದ ವಿಚಾರಕ್ಕೆ ವಾಟ್ಸಪ್ ಕಾಲ್ ಮಾಡಿ ಕೇಳುತ್ತಿದ್ದರು. ಹೀಗಾಗಿ ಮನೆಯಲ್ಲಿ ಸಿಸಿಟಿಯಲ್ಲಿ ರೆಕಾರ್ಡ್ ಆದ ದೃಶ್ಯಗಳು, ಪೊಲೀಸರು ಬಂದಿದ್ದ ದೃಶ್ಯ ಎಲ್ಲವನ್ನು ಸಂಗ್ರಹಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿತ್ತು. ಆದರೆ ಇದ್ಯಾವುದರ ಬಗ್ಗೆ ಸ್ವಲ್ಪವೂ ಅನುಮಾನ ಬಾರದ್ದರಿಂದ ಇನ್ಸ್ ಪೆಕ್ಟರ್ ಗೋವಿಂದರಾಜು ಉಳಿದ 4ಲಕ್ಷ ಕ್ಕಾಗಿ ಬೇಡಿಕೆಯಿಟ್ಟು, ಮೈಸೂರು ರಸ್ತೆಯ ಸಿರಸಿ ಸರ್ಕಲ್ ಬಳಿಯ ಸಿಎಆರ್ ಮೈದಾನದ ಹತ್ತಿರ ಬಂದು ಹಣ ನೀಡುವಂತೆ ಗೋವಿಂದರಾಜು ಹೇಳಿದ್ದರು.

ಅದರಂತೆ ಹಣವನ್ನು ತೆಗೆದುಕೊಂಡು ದೂರುದಾರ ಹೋಗಿದ್ದು ಅವರೊಂದಿಗೆ ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ನೇತೃತ್ವದ ತಂಡವೂ ತೆರಳಿತ್ತು.  ಇನ್ಸ್ ಪೆಕ್ಟರ್ ಗೋವಿಂದರಾಜು ಬಂದು ಹಣ ಸ್ವೀಕರಿಸುತ್ತಿದ್ದಂತೆಯೇ ಅವರ ಮೇಲೆ ದಾಳಿ ಮಾಡಿ ಹೆಡೆಮುರಿಕಟ್ಟಲಾಗಿತ್ತು. ಈ ದೃಶ್ಯ ಥೇಟ್ ಸಿನಿಮಾದಂತ್ತೆ ಇದ್ದದ್ದು ಮಾತ್ರ ದುರ್ದೈವವೇ.. ಈ ವೇಳೆ ಲೋಕಾಯುಕ್ತ ಪೊಲೀಸರ ಹಿಡಿತದಲ್ಲಿದ್ದ ಗೋವಿಂದರಾಜು ನನ್ನದೇನು ತಪ್ಪಿಲ್ಲ ನನ್ನ ಬಿಡಿ ಎಂದು ಕಿರುಚಿಕೊಂಡರೂ ಬಿಡದೆ ಬಂಧಿಸಿ ಕರೆದೊಯ್ಯಲಾಗಿದೆ. ಇದೀಗ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ. ಲೋಕಾಯುಕ್ತ ಪೊಲೀಸರ ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

admin
the authoradmin

Leave a Reply

Translate to any language you want