ಸರಗೂರು: ಪಟ್ಟಣದಲ್ಲಿ ಗ್ರಾಮದೇವತೆ ಶ್ರೀ ಸಂತೆ ಮಾಸ್ತಮ್ಮನವರ 31ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವ ಶುಕ್ರವಾರ ಅತ್ಯಂತ ಭಕ್ತಿ, ಶ್ರದ್ಧೆ ಮತ್ತು ವಿಜೃಂಭಣೆಯಿಂದ ನಡೆಯಿತು. ಜಾತ್ರಾ ಮಹೋತ್ಸವದ ಸಂಪೂರ್ಣ ನೇತೃತ್ವವನ್ನು ಶ್ರೀ ಮಾಸ್ತಮ್ಮನವರ ಪೂಜಾ ಸೇವಾ ಸಮಿತಿ ವಹಿಸಿಕೊಂಡಿದ್ದು, ನೂರಾರು ಭಕ್ತರ ಸಾನ್ನಿಧ್ಯದಲ್ಲಿ ಧಾರ್ಮಿಕ ಆಚರಣೆಗಳು ಸಂಭ್ರಮದಿಂದ ಜರುಗಿದವು.

ಇಲ್ಲಿನ ಶ್ರೀ ಸಂತೆ ಮಾಸ್ತಮ್ಮನವರ ದೇವಾಲಯವು ಶತಮಾನಗಳ ಇತಿಹಾಸ ಹೊಂದಿದ್ದು, ಹಿಂದಿನಿಂದಲೂ ಗ್ರಾಮದ ಕುಲದೇವತೆ ಹಾಗೂ ಗ್ರಾಮದೇವತೆಯಾಗಿ ಪೂಜಿಸಲ್ಪಡುತ್ತಿದೆ. ಭೀಮನಕೊಲ್ಲಿ ಶ್ರೀ ಮಹದೇಶ್ವರ ಜಾತ್ರೆ ಮುಗಿದ ಮಾರನೆಯ ದಿನ ನಡೆಯುವ ಈ ಜಾತ್ರೆಗೆ ವಿಶೇಷ ಮಹತ್ವವಿದ್ದು, ಹಿಂದೆ ಇದನ್ನು “ತಂಗಳು ಜಾತ್ರೆ” ಎಂದು ಕರೆಯಲಾಗುತ್ತಿತ್ತು ಎಂದು ವಯೋವೃದ್ಧ ಭಕ್ತರು ನೆನಪಿಸಿಕೊಂಡರು. ಇಂದಿಗೂ ಈ ಜಾತ್ರೆಯನ್ನು ಗ್ರಾಮಸ್ಥರು ಅಪಾರ ಭಕ್ತಿ ಭಾವದಿಂದ ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.

ಗುರುವಾರ ರಾತ್ರಿಯಿಂದಲೇ ಮಾಸ್ತಮ್ಮನವರ ದೇವಾಲಯವನ್ನು ತಳಿರು- ತೋರಣ, ಬಣ್ಣ ಬಣ್ಣದ ರಂಗೋಲಿ ಹಾಗೂ ವಿದ್ಯುತ್ ದೀಪಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಶುಕ್ರವಾರ ಮುಂಜಾನೆ ವಿನಯ್ ಶಾಸ್ತ್ರಿ ಹಾಗೂ ವಿರೂಪಾಕ್ಷ ಅವರಿಂದ ಹೋಮ-ಹವನಗಳು ನಡೆದು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ಮಧ್ಯಾಹ್ನ ಪೂರ್ಣಕುಂಭ ಕಳಸದೊಂದಿಗೆ ಉತ್ಸವ ಮೂರ್ತಿಯನ್ನು ಕಪಿಲಾ ನದಿಗೆ ಕೊಂಡೊಯ್ದು ಗಂಗೆ ಪೂಜೆ ಸಲ್ಲಿಸಲಾಯಿತು. ಶಿವ-ಪಾರ್ವತಿ ಉತ್ಸವ ಮೂರ್ತಿಗಳನ್ನು ವಿವಿಧ ಹೂವಿನಿಂದ ಭವ್ಯವಾಗಿ ಅಲಂಕರಿಸಿ, ಮಂಗಳವಾದ್ಯ, ವೀರಗಾಸೆ, ಸತ್ತಿಗೆ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಉತ್ಸವ ಮೆರವಣಿಗೆ ನಡೆಸಲಾಯಿತು. ಕೊಂಡ ಹಾಯುವ ಭಕ್ತರು ಕಪಿಲಾ ನದಿಯಲ್ಲಿ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ, ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ಸಾಗುತ್ತಾ ದೇವಸ್ಥಾನಕ್ಕೆ ಆಗಮಿಸಿದರು.

ದೇವಾಲಯದ ಬಳಿ ಮೂರು ಸುತ್ತು ಪ್ರದಕ್ಷಿಣೆ ನೆರವೇರಿಸಿದ ಬಳಿಕ, ಮೊದಲು ದೇವಸ್ಥಾನದ ಅರ್ಚಕರು ಕೊಂಡವನ್ನು ಹಾಯ್ದು, ನಂತರ ಹರಕೆ ಒತ್ತುವವರು ಹಾಗೂ ಸತ್ತಿಗೆ ಹೊತ್ತವರು ಕೊಂಡ ಹಾಯ್ದರು. ಈ ಸಂದರ್ಭದಲ್ಲಿ ಮಹಾ ಮಂಗಳಾರತಿ ನಡೆದು, ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಪ್ರತಿವರ್ಷದಂತೆ ಈ ವರ್ಷವೂ ನೂರಾರು ಭಕ್ತರು ಕೆಂಡದ ಮೇಲೆ ನಡೆದು ತಮ್ಮ ಹರಕೆಗಳನ್ನು ತೀರಿಸಿಕೊಂಡರು.

ಗ್ರಾಮದೇವತೆ ಶ್ರೀ ಸಂತೆ ಮಾಸ್ತಮ್ಮನವರ ಜಾತ್ರಾ ಮಹೋತ್ಸವಕ್ಕೆ ಸರಗೂರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಧಾರ್ಮಿಕ ಸಂಭ್ರಮಕ್ಕೆ ಸಾಕ್ಷಿಯಾದರು.

ಜಾತ್ರಾ ಕೊಂಡೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸರಗೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ಗೋಪಾಲ್, ಎಎಸ್ಐ ಶ್ರೀಕಂಠಸ್ವಾಮಿ, ಸಿಬ್ಬಂದಿಗಳಾದ ಇಮ್ರಾನ್, ಆನಂದ್, ಜಗದೀಶ್, ಕೃಷ್ಣಯ್ಯ ಸೇರಿದಂತೆ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಈ ಜಾತ್ರಾ ಮಹೋತ್ಸವದಲ್ಲಿ ಶ್ರೀ ಮಾಸ್ತಮ್ಮನವರ ಪೂಜಾ ಸೇವಾ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಸರಗೂರಿನ ಸಮಸ್ತ ನಾಗರಿಕರು, ಎಲ್ಲಾ ಜನಾಂಗಗಳ ಯಜಮಾನರು, ಮುಖಂಡರುಗಳು ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.









