ArticlesLatest

ಕಾಯಕದಲ್ಲಿ ಮಡಿವಾಳನಾದೆ…ವಚನದಲ್ಲಿ ಕಲಿದೇವನಾದೆ… ಮಡಿವಾಳ ಮಾಚಿದೇವರ ಸ್ಮರಣೆ!

ಫೆಬ್ರವರಿ 1, ಮಡಿವಾಳ ಮಾಚಿದೇವರ ಜಯಂತ್ಯುತ್ಸವದ ಪ್ರಯುಕ್ತ ಲೇಖನ

12ನೇ ಶತಮಾನದ ಶರಣ ಚಳವಳಿಯಲ್ಲಿ ಕಾಯಕ ಮತ್ತು ಅಧ್ಯಾತ್ಮವನ್ನು ಒಂದೇ ದಾರಿಯಲ್ಲಿ ನಡಸಿದ ಅಪರೂಪದ ವ್ಯಕ್ತಿತ್ವವೆಂದರೆ ಮಡಿವಾಳ ಮಾಚಿದೇವ. 2026ರ ಫೆಬ್ರವರಿ 1ರಂದು ಆಚರಿಸಲ್ಪಡುವ ಅವರ ಜಯಂತಿ ಕೇವಲ ಸ್ಮರಣೆಯ ದಿನವಲ್ಲ… ಕಾಯಕ–ವಚನ–ದಾಸೋಹ ತತ್ವಗಳನ್ನು ಇಂದಿನ ಸಮಾಜಕ್ಕೆ ನೆನಪಿಸುವ ಮಹತ್ವದ ಸಂದರ್ಭವೂ ಹೌದು. ವೃತ್ತಿ, ಜಾತಿ, ಸ್ಥಾನಮಾನಗಳ ಅಳತೆಗಳಾಚೆ ಮನುಷ್ಯನ ಮೌಲ್ಯವನ್ನು ನಿರ್ಧರಿಸುವ ದಾರಿಯನ್ನು ಶರಣರು ತೋರಿಸಿದರೆ, ಅದನ್ನು ಬದುಕಿನಲ್ಲೇ ಅನುಷ್ಠಾನಗೊಳಿಸಿದವರಲ್ಲಿ ಮಾಚಿದೇವರು ಪ್ರಮುಖರು.

ಮಡಿವಾಳ ಮಾಚಿದೇವರು ಹಿಪ್ಪರಿಗೆಯ ಮಡಿವಾಳ ಮನೆತನದಲ್ಲಿ ಜನಿಸಿದರು. ಪರ್ವತಯ್ಯ–ಸುಜ್ಞಾನಾಂಬಿಕೆ ದಂಪತಿಗಳ ಪುತ್ರರಾದ ಅವರು, ಶಿವಭಕ್ತಿಯ ವಾತಾವರಣದಲ್ಲಿ ಬೆಳೆದವರು. ಮಲ್ಲಿಕಾರ್ಜುನ ಸ್ವಾಮಿಗಳ ದೀಕ್ಷೆ, ಕಲ್ಯಾಣದ ಶರಣ ಸಂಸ್ಕೃತಿಯ ಸ್ಪರ್ಶ—ಇವೆಲ್ಲ ಅವರ ವ್ಯಕ್ತಿತ್ವವನ್ನು ರೂಪಿಸಿದ ಮೂಲಗಳು. ಸಮಾಜದಲ್ಲಿ ಗೌರವ ಮತ್ತು ಸಿರಿವಂತಿಕೆ ಇದ್ದರೂ, ಮಾಚಿದೇವರು ತಮ್ಮ ಮಡಿವಾಳಿಕೆ ಕಾಯಕವನ್ನು ಎಂದೂ ತ್ಯಜಿಸಲಿಲ್ಲ. ಅವರ ಬದುಕಿನ ದೃಢ ನಿಲುವೇ— ಕಾಯಕವೇ ಆರಾಧನೆ.

ಪ್ರತಿದಿನ ಸೂರ್ಯೋದಯಕ್ಕೂ ಮುನ್ನ ಮಡಿ ಬಟ್ಟೆಗಳನ್ನು ಸಂಗ್ರಹಿಸಿ, ಕೆರೆಯಲ್ಲಿ ಒಗೆದು, ಮಡಿ ಮಾಡಿ, ಗಂಟು ಕಟ್ಟಿಕೊಂಡು ವೀರಘಂಟೆ ಬಾರಿಸುತ್ತ ಮನೆ ಮನೆಗೆ ಹೋಗುವುದು ಅವರ ನಿತ್ಯ ಕ್ರಮವಾಗಿತ್ತು. ಈ ಕಾಯಕ ಕೇವಲ ಬದುಕಿನ ಉಪಾಯವಲ್ಲ; ಅದು ಶುದ್ಧತೆ, ಶಿಸ್ತು ಮತ್ತು ನೈತಿಕತೆಯ ಸಂಕೇತವಾಗಿತ್ತು. ಶರಣರ ಬಟ್ಟೆಗಳನ್ನು ಮಾತ್ರ ಮಡಿ ಮಾಡುವುದು, ದುಷ್ಟಾಚಾರ, ಮದ್ಯಪಾನ, ಹಿಂಸೆಗಳಲ್ಲಿ ಮುಳುಗಿದವರ ಬಟ್ಟೆಗಳನ್ನು ಸ್ಪರ್ಶಿಸದಿರುವುದು ಅವರ ಕಟ್ಟುನಿಟ್ಟಿನ ನಿಯಮವಾಗಿತ್ತು. ಈ ಮೂಲಕ ‘ಮಡಿ’ ಅಂದರೆ ಹೊರಗಿನ ಶುದ್ಧತೆಯಷ್ಟೇ ಅಲ್ಲ, ಒಳಗಿನ ಶುದ್ಧತೆಯೂ ಹೌದು ಎಂಬ ಸಂದೇಶವನ್ನು ಅವರು ಸಮಾಜಕ್ಕೆ ನೀಡಿದರು.

ಕಾಯಕದ ಒತ್ತಡದಲ್ಲಿದ್ದರೂ ಅಧ್ಯಾತ್ಮದ ಹಸಿವು ಅವರೊಳಗೆ ಸದಾ ಜೀವಂತವಾಗಿತ್ತು. ತಮ್ಮ ಆತ್ಮವ್ಯಥೆಯನ್ನು ಅವರು ವಚನದಲ್ಲಿ ಹೀಗೆ ವ್ಯಕ್ತಪಡಿಸುತ್ತಾರೆ:

ಒಡಲ ಹೊರೆವ ಇಚ್ಛೆಯಿಂದ

ಹಗಲೆನ್ನದೆ ಇರುಳೆನ್ನದೆ

ಬೆಂದ ಬಸುರಿಗೆ ಕುದಿಯುತಿದ್ದೇನೆ;

ನಿಮ್ಮ ನೆನೆಯೆ ವೇಳೆಯಿಲ್ಲ, ಪೂಜಿಸಲೂ ವೇಳೆಯಿಲ್ಲ—

ಪ್ರಯಾಸವ ಬಿಡಿಸಿ ನಿಮ್ಮ ನೆನೆವಂತೆ ಮಾಡಯ್ಯ,

ಕಲಿದೇವರದೇವ”.

ಈ ವಚನದಲ್ಲಿ ಕಾಯಕದ ದಣಿವು ಮತ್ತು ಶಿವಸ್ಮರಣೆಯ ಹಾತೊರಿಕೆ ಒಂದೇ ವೇಳೆ ಕಾಣಿಸುತ್ತದೆ. ಅಂದರೆ, ಕಾಯಕದಿಂದ ದೂರವಾದ ಭಕ್ತಿಯಲ್ಲ; ಕಾಯಕದ ಮಧ್ಯೆಯೇ ಅರಳುವ ಭಕ್ತಿಯೇ ಅವರ ದಾರಿ. ಶರಣ ಚಿಂತನೆಯ ಸಾರ್ಥಕತೆಯೇ ಇದು.

ಮಾಚಿದೇವರು ಕಲ್ಯಾಣಕ್ಕೆ ಬಂದ ನಂತರ ಅನುಭವ ಮಂಟಪದ ಚರ್ಚೆಗಳಲ್ಲಿ ಭಾಗವಹಿಸಿದರು. ಬಸವಣ್ಣನವರ ವಚನಗಳ ಸಾರವನ್ನು ಆಳವಾಗಿ ಗ್ರಹಿಸಿ, ಕಾಯಕ ಮತ್ತು ಅಧ್ಯಾತ್ಮ ವಿಭಿನ್ನವಲ್ಲ ಎಂಬ ತತ್ವವನ್ನು ತಮ್ಮ ಜೀವನದ ಮೂಲಕ ಪ್ರತಿಪಾದಿಸಿದರು. ತಮ್ಮ ಅನುಭವಗಳ ಸಾರವನ್ನು ‘ಕಲಿದೇವರ ದೇವ’ ಅಂಕಿತದಲ್ಲಿ ವಚನಗಳಾಗಿ ರೂಪಿಸಿದರು. ಕಾಯಕದ ಶುದ್ಧತೆಯನ್ನು ಅವರು ಹೀಗೆ ಸಾರುತ್ತಾರೆ…

ಲಿಂಗವಸ್ತ್ರವನೊಗೆದು ಶುದ್ಧನಾದೆನು;

ಎನ್ನ ಕಾಯಕವನವಧರಿಸಯ್ಯ,

ಕಲಿದೇವರ ದೇವ”.

ಇಲ್ಲಿ ಕಾಯಕವೇ ಶುದ್ಧತೆಯ ಮಾರ್ಗ ಎಂಬುದು ಸ್ಪಷ್ಟವಾಗುತ್ತದೆ. ಅವರ ವಚನಗಳಲ್ಲಿ ಅಹಂಕಾರ ವಿರೋಧ, ಸಮತೆ ಮತ್ತು ಸಾಮಾಜಿಕ ಜವಾಬ್ದಾರಿಯ ತೀಕ್ಷ್ಣ ಧ್ವನಿಯೂ ಕೇಳಿಸುತ್ತದೆ. ಅರಸ–ಬ್ರಾಹ್ಮಣ–ವ್ಯಾಪಾರಿಗಳ ಅಹಂಕಾರಭರಿತ ಭಕ್ತಿಯನ್ನು ಅವರು ಟೀಕಿಸುತ್ತಾ ಹೇಳುತ್ತಾರೆ..

ಅರಸಿನ ಭಕ್ತಿ ಅಹಂಕಾರದಲ್ಲಿ ಹೋಯಿತ್ತು,

ಬ್ರಾಹ್ಮಣನ ಭಕ್ತಿ ಮುಟ್ಟು ತಟ್ಟಿನಲ್ಲಿ ಹೋಯಿತ್ತು,

ಸೆಟ್ಟಿಯ ಭಕ್ತಿ ಕುಟಿಲ ವ್ಯಾಪಾರದಲ್ಲಿ ಹೋಯಿತ್ತು

ಇಂಥವರ ಭಕ್ತಿಗೆ ಊರಿಂದ ಹೊರಗಣ ಡಂಬನೇ ಸಾಕ್ಷಿ,

ಕಲಿದೇವರ ದೇವ”.

ಈ ವಚನಗಳಲ್ಲಿ ಭಕ್ತಿಯ ಹೆಸರಿನಲ್ಲಿ ಬೆಳೆಸಿಕೊಳ್ಳುವ ಅಹಂಕಾರ ಮತ್ತು ಲಾಭಾಸಕ್ತಿಯ ವಿರುದ್ಧದ ತೀವ್ರ ಎಚ್ಚರಿಕೆ ಕಾಣುತ್ತದೆ. ಭಕ್ತಿ ಆಚರಣೆಯಲ್ಲಿ ಅಲ್ಲ; ಆಚರಣೆಯ ಶುದ್ಧತೆಯಲ್ಲಿ ಇರಬೇಕು ಎಂಬ ಸಂದೇಶ ಇದರಲ್ಲಿ ಅಡಗಿದೆ.

ರಾಜ ಬಿಜ್ಜಳನ ಕಾಲದಲ್ಲಿ ಅನ್ಯಾಯ ಮತ್ತು ಅಧರ್ಮದ ವಿರುದ್ಧ ಮಾಚಿದೇವರು ನಿರ್ಭೀತಿಯಾಗಿ ನಿಂತರು. ರಾಜಾಜ್ಞೆಯಾದರೂ ತಮ್ಮ ನಿಯಮಗಳಿಗೆ ವಿರುದ್ಧವಾದ ಕಾರ್ಯವನ್ನು ಮಾಡುವುದಿಲ್ಲ ಎಂಬ ದೃಢ ನಿಲುವು ಅವರದು. ಈ ಧೈರ್ಯ ಮತ್ತು ಕಾಯಕನಿಷ್ಠೆಯೇ ಅವರನ್ನು ಸಮಾಜರಕ್ಷಕ ಶರಣನಾಗಿ ರೂಪಿಸಿತು. “ಮಾಚಿದೇವರ ಮುಂದೆ ಆನೆ ಶರಣಾಗುವ ಸನ್ನಿವೇಶ”.

ಮಡಿವಾಳ ಮಾಚಿದೇವರ ಆತ್ಮಬಲವನ್ನು ಸಾರುವ ಅತ್ಯಂತ ಪ್ರಸಿದ್ಧ ಘಟನೆಯೆಂದರೆ, ಅವರ ಮುಂದೆ ಮದಗೊಂಡ ಆನೆ ಶರಣಾಗುವ ಸನ್ನಿವೇಶ. ಅನ್ಯಾಯದ ವಿರುದ್ಧ ನಿಂತಿದ್ದ ಮಾಚಿದೇವರನ್ನು ಮಣಿಸಲು ರಾಜಾಧಿಕಾರಿಗಳು ಮದಗೊಂಡ ಆನೆಯನ್ನು ಅವರ ಎದುರಿಗೆ ತರಿಸಿದರು ಎಂಬುದು ಶರಣ ಸಾಹಿತ್ಯದಲ್ಲಿ ಉಲ್ಲೇಖವಾಗುತ್ತದೆ. ಸಾಮಾನ್ಯವಾಗಿ ಭೀತಿ ಮತ್ತು ಬಲದ ಸಂಕೇತವಾಗಿದ್ದ ಆನೆ, ಮಾಚಿದೇವರ ಅಚಲ ಧೈರ್ಯ, ಕಾಯಕನಿಷ್ಠೆ ಮತ್ತು ಶುದ್ಧ ಆಚರಣೆಯ ಎದುರು ತತ್ತರಿಸಿತು.

ಕೈಯಲ್ಲಿ ವೀರಘಂಟೆ, ಮನಸ್ಸಿನಲ್ಲಿ ಶಿವಸ್ಮರಣೆ, ನಡೆನುಡಿಯಲ್ಲಿ ದೃಢತೆ—ಈ ನೈತಿಕ ಶಕ್ತಿಯ ಎದುರು ಮದಗೊಂಡ ಆನೆ ಶಾಂತಗೊಂಡು ಶರಣಾಗುವಂತೆ ವರ್ತಿಸಿತು. ಈ ಸನ್ನಿವೇಶ ದೈಹಿಕ ಶಕ್ತಿಗಿಂತ ನೈತಿಕ ಶಕ್ತಿಯೇ ಶ್ರೇಷ್ಠ ಎಂಬ ಶರಣರ ತತ್ವವನ್ನು ಜೀವಂತವಾಗಿ ಪ್ರತಿಪಾದಿಸುತ್ತದೆ. ” ಮಲ್ಲಿಗಮ್ಮನ ತ್ಯಾಗ ಮತ್ತು ಕಾಯಕನಿಷ್ಠೆಯ ಪರಾಕಾಷ್ಠೆ”

ಮಾಚಿದೇವರ ಬದುಕಿನಲ್ಲಿ ಅವರ ಪತ್ನಿ ಮಲ್ಲಿಗಮ್ಮನ ತ್ಯಾಗ ಶರಣ ಸಂಸ್ಕೃತಿಯ ಅತ್ಯಂತ ಸ್ಪರ್ಶಿಸುವ ಅಧ್ಯಾಯವಾಗಿದೆ. ರಾಜಾಜ್ಞೆಯಿಂದ ಮಾಚಿದೇವರ ಕಾಯಕಕ್ಕೆ ಅಡ್ಡಿಯಾಗುವ ಪರಿಸ್ಥಿತಿ ನಿರ್ಮಾಣವಾದಾಗ, ಕಾಯಕ ನಿಲ್ಲಬಾರದೆಂಬ ದೃಢ ಸಂಕಲ್ಪದಿಂದ ಮಲ್ಲಿಗಮ್ಮ ತ್ಯಾಗಕ್ಕೆ ಸಿದ್ಧಳಾದಳು ಎಂಬುದು ಶರಣ ಸಾಹಿತ್ಯದಲ್ಲಿ ಉಲ್ಲೇಖವಾಗುತ್ತದೆ. ಪತಿಯ ಕಾಯಕ ನಿರಂತರವಾಗಬೇಕು ಎಂಬ ಕಾರಣಕ್ಕೆ, ತನ್ನದೇ ದೇಹವನ್ನು ಸಮರ್ಪಿಸಿದ ಮಲ್ಲಿಗಮ್ಮನ ತ್ಯಾಗ ಕೇವಲ ವೈಯಕ್ತಿಕ ಭಾವೋದ್ರೇಕವಲ್ಲ; ಕಾಯಕವೇ ಧರ್ಮ, ಕಾಯಕವೇ ಜೀವಿತ ಎಂಬ ಶರಣ ತತ್ವದ ಪರಾಕಾಷ್ಠೆಯಾಗಿದೆ. ಕುಟುಂಬ, ದೇಹ, ಜೀವ—ಎಲ್ಲವನ್ನೂ ಮೀರಿದ ಕಾಯಕನಿಷ್ಠೆಗೆ ಇದು ಜೀವಂತ ಸಾಕ್ಷಿಯಾಗಿದೆ.

‘ಕಾಯಕದಲ್ಲಿ ಮಡಿವಾಳನಾದೆ, ವಚನದಲ್ಲಿ ಕಲಿದೇವನಾದೆ” ಎಂಬ ಮಾತು ಮಾಚಿದೇವರ ಬದುಕಿನ ಸಾರ. ವೃತ್ತಿಯಲ್ಲಿ ಅವರು ಮಡಿವಾಳ; ತತ್ವದಲ್ಲಿ ಜ್ಞಾನಿ; ಆಚರಣೆಯಲ್ಲಿ ವೀರ. ವೃತ್ತಿಯನ್ನು ಕೀಳಾಗಿ ನೋಡುವ ಮನೋಭಾವಕ್ಕೆ ಅವರು ತಮ್ಮ ಬದುಕಿನಿಂದಲೇ ಉತ್ತರ ಕೊಟ್ಟರು. ಮಾನವಜನ್ಮದ ಮೌಲ್ಯವನ್ನು ಅವರು ಹೀಗೆ ನೆನಪಿಸುತ್ತಾರೆ:

ಮನುಷ್ಯ ಜನ್ಮದಲ್ಲಿ ಬಂದು

ಶಿವಜ್ಞಾನವರಿಯದಿದ್ದರೆ

ಕಾಗೆ ಕೋಳಿಗಳಿಂದ ಕರಕಷ್ಟ

ಕಾಣಾ ಕಲಿದೇವರ ದೇವ”.

ಇಂದಿನ ಕಾಲದಲ್ಲೂ ವೃತ್ತಿಯ ಆಧಾರದ ಮೇಲೆ ಮಾನವ ಮೌಲ್ಯವನ್ನು ಅಳೆಯುವ ಪ್ರವೃತ್ತಿ ಕಂಡುಬರುತ್ತದೆ. ಮಾಚಿದೇವರ ಜೀವನ ಈ ತಪ್ಪು ದೃಷ್ಟಿಕೋನಕ್ಕೆ ಸವಾಲು ಹಾಕುತ್ತದೆ. ವೃತ್ತಿ ಯಾವುದೇ ಇರಲಿ, ಅದನ್ನು ಶುದ್ಧ ಮನಸ್ಸಿನಿಂದ ಮಾಡಿದರೆ ಅದೇ ದೇವರ ಮಾರ್ಗ ಎಂಬ ಸತ್ಯವನ್ನು ಅವರ ಬದುಕು ನಮಗೆ ಬೋಧಿಸುತ್ತದೆ. ಈ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದೇ ಮಡಿವಾಳ ಮಾಚಿದೇವರ ಜಯಂತಿಯ ನಿಜವಾದ ಆಚರಣೆ.

 

admin
the authoradmin

Leave a Reply

Translate to any language you want