ಸ್ವಚ್ಛತೆಯಲ್ಲಿ ಮತ್ತೆ ನಂ.1 ಸ್ಥಾನಕ್ಕಾಗಿ ಓಡೋಣ ಮೈಸೂರಿಗಾಗಿ, ಒಂದಾಗೋಣ.. ಫೆ.8ಕ್ಕೆ ಸ್ವಚ್ಛತಾ ಓಟ..

ಮೈಸೂರು: ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಮತ್ತೆ ಒಂದನೇ ಸ್ಥಾನ ಪಡೆಯುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಪಾಲಿಕೆ ವತಿಯಿಂದ ಓಡೋಣ ಮೈಸೂರಿಗಾಗಿ, ಒಂದಾಗೋಣ ಸ್ವಚ್ಛತೆಗಾಗಿ ಎಂಬ ಘೋಷ ವ್ಯಾಕ್ಯದಡಿಯಲ್ಲಿ ಫೆ.8ರಂದು ಸ್ವಚ್ಛತಾ ಓಟ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ತಿಳಿಸಿದ್ದಾರೆ.
ಮಹಾ ನಗರ ಪಾಲಿಕೆಯ ಜಯಚಾಮರಾಜ ಒಡೆಯರ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಓಡೋಣ ಮೈಸೂರಿಗಾಗಿ, ಒಂದಾಗೋಣ ಸ್ವಚ್ಛತೆಗಾಗಿ ಎಂಬ ಘೋಷ ವ್ಯಾಕ್ಯದಡಿಯಲ್ಲಿ ಈ ಮ್ಯಾರಥಾನ್ ಓಟ ಆಯೋಜಿಸಲಾಗಿದೆ. 3-ಕೆ, 5-ಕೆ, 10-ಕೆ ಮೂರು ವಿಭಾಗದಲ್ಲಿ ಓಟ ನಡೆಯಲಿದೆ. 18ರಿಂದ 40 ವಯಸ್ಸಿನ ಹಾಗೂ 40 ವರ್ಷಕ್ಕಿಂತ ಮೆಲ್ಪಟ್ಟವರ ಗುಂಪುಗಳಾಗಿ ವಿಂಗಡಣೆ ಮಾಡಲಾಗಿದೆ. ಪುರುಷರು ಹಾಗೂ ಮಹಿಳೆಯರು ಭಾಗವಹಿಸಬಹುದು. ಇದರೊಂದಿಗೆ ವಿಶೇಷ ವರ್ಗದ ಗುಂಪನ್ನು ಸಹ ಮಾಡಲಾಗಿದೆ ಎಂದು ಮಾಹಿತಿ ತಿಳಿಸಿದರು.

ಫೆ.8ರಂದು ಭಾನುವಾರ ಬೆಳಗ್ಗೆ 6 ಗಂಟೆಗೆ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಮ್ಯಾರಥಾನ್ ಗೆ ಚಾಲನೆ ನೀಡಲಾಗುತ್ತದೆ. ಮೂರು ಕಿಲೋ ಮೀಟರ್ ದೂರ ಓಟವು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ದಿಂದ ಹೊರಟು ಕೆ.ಆರ್.ಸರ್ಕಲ್, ಎಂಸಿಸಿ, ಬಸವೇಶ್ವರ ಸರ್ಕಲ್, ಹಾರ್ಡಿಂಜ್ ವೃತ್ತ, ದೊಡ್ಡಗಡಿಯಾರದ ಮೂಲಕ ಬಂದು ಟೌನ್‌ಹಾಲ್ ಬಳಿ ಸಮಾಪ್ತಿಗೊಳ್ಳಲಿದೆ. 5 ಕೀಲೋ ಮೀಟರ್ ಓಟವು ಆಂಜನೇಯ ಸ್ವಾಮಿ ದೇವಸ್ಥಾನದಿಂದ ಶುರುವಾಗಿ ದೊಡ್ಡ ಗಡಿಯಾರ, ದೇವರಾಜ ಅರಸ್ ರಸ್ತೆ, ಜೆಎಲ್‌ಬಿ ರಸ್ತೆ, ರಾಮಸ್ವಾಮಿ ವೃತ್ತ, ನೂರಡಿ ರಸ್ತೆ, ಬಸವೇಶ್ವರ ಸರ್ಕಲ್, ಹಾರ್ಡಿಂಜ್ ಸರ್ಕಲ್ ಮೂಲಕ ಟೌನ್ ಹಾಲ್ ಗೆ ಬಂದು ಸಮಾಪ್ತಿಯಾಗಲಿದೆ. ಅದೇ ರೀತಿ 10 ಕಿಲೋ ಮೀಟರ್ ಓಟ 5 ಕೀಲೋ ಮೀಟರ್ ಓಟದ ಹಾದಿಯಲ್ಲೇ ಎರಡು ಬಾರಿ ಕ್ರಮಿಸಬೇಕು ಎಂದು ತಿಳಿಸಿದರು.
ಓಟದಲ್ಲಿ ಸಾರ್ವಜನಿಕರು ಆಸಕ್ತಿಯಿಂದ ಭಾಗವಹಿಸಬೇಕು ಎನ್ನುವ ಆಶಯದಿಂದ ಆರ್ಕಷಕ ಬಹುಮಾನಗಳನ್ನು ನೀಡಲಾಗುತ್ತದೆ. ಎಲ್ಲ ವಿಭಾಗಕ್ಕೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುತ್ತದೆ. ಇದಕ್ಕಾಗಿ 1.44 ಲಕ್ಷ ರೂಪಾಯಿಯನ್ನು ಮೀಸಲಾಗಿ ಇಡಲಾಗಿದೆ. ಸ್ವಚ್ಛತಾ ಓಟವನ್ನು ಆಯೋಜನೆ ಮಾಡಲು ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡಿವೆ. ಭಾಗವಹಿಸುವ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.ಅಲ್ಲದೇ ಅಗತ್ಯ ಸೌಲಭ್ಯಗಳನ್ನು, ಮುಂಜಾಗ್ರತಾ ಕ್ರಮಗಳನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಮೈಸೂರು ನಗರವನ್ನು ಸ್ವಚ್ಛ ಸರ್ವೇಕ್ಷಣೆಯಲ್ಲಿ ಮತ್ತೆ ಪ್ರಥಮ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಾಲಾ ಕಾಲೇಜು ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆಯನ್ನು ನಡೆಸಲಾಗಿದೆ. ಮುಂದೆ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ. ಸಾರ್ವಜನಿಕರಿಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ವಲಯ ಮಟ್ಟದಲ್ಲಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸ್ವಚ್ಛತೆ ಕುರಿತು ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸಿಕ್ಕ-ಸಿಕ್ಕ ಕಡೆ ತ್ಯಾಜ್ಯವನ್ನು ಬೀಸಾಡದಂತೆ ತಿಳಿವಳಿಕೆ ನೀಡುತ್ತಿದ್ದಾರೆ. ನಗರವು ಸ್ವಚ್ಛವಾಗಿರಬೇಕಾದರೆ ಪ್ರತಿಯೊಬ್ಬ ನಾಗರಿಕರ ಸಹಕಾರ ಬಹಳ ಮುಖ್ಯ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.

ಸ್ವಚ್ಛ ಸರ್ವೇಕ್ಷಣೆಗಾಗಿ ಈಗಾಗಲೇ ಪಾಲಿಕೆ ವತಿಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಎರಡು ಪಾಳಿಯಲ್ಲಿ ಕಸ ಸಂಗ್ರಹವನ್ನು ಮಾಡಲಾಗುತ್ತಿದೆ. ಮಧ್ಯಾಹ್ನದ ವೇಳೆ ವಾಣಿಜ್ಯ ಚಟುವಟಿಕೆಗಳು ನಡೆಯುವ ಪ್ರಮುಖ ರಸ್ತೆಗಳಲ್ಲಿ ಕಸ ಸಂಗ್ರಹ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಕ್ರಮವನ್ನು ಶೀಘ್ರದಲೇ ಅನುಷ್ಠಾನ ಮಾಡಲಾಗುತ್ತದೆ. ಇದರ ಸಾಧಕ-ಬಾಧಕ ನೋಡಿಕೊಂಡು ಮುಂದಿನ ದಿನದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ನಗರದ ಅಲ್ಲಲ್ಲಿ ಕಸ ಸಂಗ್ರಹಣಾ ವಾಹನಗಳಿಂದ ಕಸವನ್ನು ತುಂಬಿಕೊಳ್ಳುವಂತಹ ಉಪ ಕೇಂದ್ರಗಳನ್ನು ತೆರೆಯುವುದರಿಂದ ಕಸ ಸಂಗ್ರಹಣಾ ವಾಹನಗಳಿಗೆ ಸಮಯವೂ ಉಳಿತಾಯವಾಗಲಿದೆ ಹಾಗೂ ಸರತಿ ಸಾಲಿನಲ್ಲಿ ಕಾಯುವುದು ತಪುö್ಪತ್ತದೆ. ಇದರೊಂದಿಗೆ ರಾಯನಕೆರೆ ಹಾಗೂ ವಿದ್ಯಾರಣ್ಯಪುರಂನಲ್ಲಿ ಒಣ ಕಸ ಸಂಸ್ಕರಣ ಘಟಕಗಳು ಹಾಗೂ ಕಟ್ಟಡ ತ್ಯಾಜ್ಯ ಘಟಕಗಳು ಕಾರ್ಯ ನಿರ್ವಹಿಸಲು ಶುರು ಮಾಡಿದರೇ ಕಸ ಉಳಿಯುವುದು ತಪ್ಪಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಯೋಗಾತ್ಮ ಶ್ರೀಹರಿ, ಉಪ ಆಯುಕ್ತ ಸೋಮಶೇಖರ್, ಸ್ವಚ್ಛ ಭಾರತ್ ಅಭಿಯಾನದ ನೊಡೇಲ್ ಅಧಿಕಾರಿ ಮೃತ್ಯುಂಜಯ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.







