LatestMysore

ಫೆ.6, ಹಿರೀಕ್ಯಾತನಹಳ್ಳಿ ಮಹದೇಶ್ವರ ದೇಗುಲ ಉದ್ಘಾಟನೆ.. ಫೆ.4ರಿಂದಲೇ ದೇವತಾಕಾರ್ಯ ಆರಂಭ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಶ್ರೀ ಮಹದೇಶ್ವರ ದೇವಾಲಯದ ಉದ್ಘಾಟನಾ ಕಾರ್ಯಕ್ರಮವು ಫೆ.6ರಂದು ಶುಕ್ರವಾರ ನಡೆಯಲಿದೆ. ಈ ಸಂಬಂಧ ಫೆ.4ರ ಬುಧವಾರದಿಂದಲೇ  ಮಲೈಮಹದೇಶ್ವರ ದೇವರ ಪ್ರತಿಷ್ಠಾಪನೆ ಮತ್ತು ಗೋಪುರ ಶಿಖರ, ಕಲಸ, ಪ್ರತಿಷ್ಠಾಪನಾ ಮಹೋತ್ಸವದ  ಕಾರ್ಯಕ್ರಮಕ್ಕೆ ಸಂಬಂಧಿಸಿದ ದೇವತಾ ಕಾರ್ಯಗಳು ಆರಂಭವಾಗಲಿವೆ.

ಫೆ.4ರಂದು ಬುಧವಾರ  ಸಂಜೆ 6ಗಂಟೆಗೆ  ಶುಭ ಗೋಧೋಳಿ ಲಗ್ನದಲ್ಲಿ ತೀರ್ಥ ಸಂಗ್ರಹಣೆ, ಅಂಕುರಾರೋಹಣ, ಗಣಪತಿ ಪೂಜೆ, ಗೋಪೂಜೆ ಗ್ರಾಮ ಪ್ರದಕ್ಷಿಣೆ, ಧ್ವಜಾರೋಹಣ, ದೀಪಾರಾಧನೆ, ಸಭಾ ಪ್ರಾರ್ಥನೆ,  ಪ್ರವೇಶ ಬಲಿ, ಆಲಯ ಪ್ರವೇಶ, ಮಹಾಸಂಕಲ್ಪ, ಪುಣ್ಯಾಹ, ನಾಂದಿ, ರಕ್ಷಾಬಂಧನ, ವಾಸ್ತುಪೂಜೆ, ರಕ್ಷೋಘ್ನ ಪೂಜೆ ನಡೆಯಲಿದೆ.

ಫೆ.5ರಂದು ಗುರುವಾರ ಬೆಳಿಗ್ಗೆ 11.45ಕ್ಕೆ ಸರಿಯಾಗಿ  ಸಲ್ಲುವ ಶುಭ ಅಭಿಜಿನ್ ಲಗ್ನದಲ್ಲಿ ಪೂಜಾ ಕಾರ್ಯಕ್ರಮಗಳು ಆರಂಭವಾಗಿ ತತ್ವ ಕಲಸ, ಪ್ರಧಾನ  ಉಮಾಮಹೇಶ್ವರ ಕಲಶಾರಾಧನೆ, ಲಕ್ಷ್ಮಿನಾರಾಯಣ ಕಲಶ,  ಬ್ರಹ್ಮ ಕಲಶ,  ನವಗ್ರಹ ಕಲಶ, ಮಹಾಮೃತ್ಯಂಜಯ ಕಲಶ, ಸಪ್ತಸಭಾ ಕಲಶ, ಸಪ್ತ ಮಾತೃಕಾ ಕಲಶ, ದಿಕ್ಫಾಲಕ ಕಲಶ ಪ್ರತಿಷ್ಠಾಪಿಸಿ  ಈ ದೇವತಾ ಕಲಶಗಳಿಗೆ ಪೂಜಾರಾಧನೆ ಹಾಗೂ  ಹೋಮ, ಹವನ, ಪ್ರಧಾನ ಸ್ವಾಮಿಗೆ ಮತ್ತು ಗೋಪುರದ ಶಿಖರ ಕಲಶಕ್ಕೆ ಬಿಂಬಶುದ್ಧಿ, ಜಲಾಧಿವಾಸ, ಶಯನಾಧಿವಾಸಗಳ ಪೂಜಾ ಕಾರ್ಯಗಳು ನಡೆಯಲಿವೆ.

ಫೆ.6ರಂದು  ಶುಕ್ರವಾರ  ದೇವಾಲಯದ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿದ್ದು, ಅಂದು ಬೆಳಿಗ್ಗೆ 11 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿದ್ದು, ಆದಿಚುಂಚನಗಿರಿ ಮಠದ ಡಾ.ಬಾಲಗಂಗಾಧರನಾಥ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ನಡೆಯಲಿರುವ ಕಾರ್ಯಕ್ರಮದ  ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ.ನಿರ್ಮಲಾನಂದಾನಾಥ ಮಹಾಸ್ವಾಮಿಗಳು ವಹಿಸಲಿದ್ದು, ಆದಿಚುಂಚನಗಿರಿ ಮೈಸೂರು ಶಾಖಾ ಮಠದ  ಶ್ರೀ ಸೋಮನಾಥೇಶ್ವರ ಮಹಾಸ್ವಾಮಿ, ಮಾದಳ್ಳಿ ಉಕ್ಕಿನಕಂತೆ ಮಠದ  ಶ್ರೀ ಸಾಂಬಸದಾಶಿವ ಸ್ವಾಮಿಗಳು ಉಪಸ್ಥಿತರಿರುವರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಜಿ.ಟಿ.ದೇವೇಗೌಡ, ಜಿ.ಡಿ.ಹರೀಶ್ ಗೌಡ, ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್, ಮೈಮುಲ್ ನಿರ್ದೇಶಕ ಕೆ.ಎಸ್.ಕುಮಾರ್, ಜಿಪಂ ಮಾಜಿ ಸದಸ್ಯ ಸಿ.ಟಿ.ರಾಜಣ್ಣ, ಜೆಡಿಎಸ್ ಮುಖಂಡರಾದ  ಹರವೆ ಶ್ರೀಧರ್, ಹಿರಿಕ್ಯಾತನಹಳ್ಳಿ ಗ್ರಾಪಂ  ಅಧ್ಯಕ್ಷರಾದ ಶಿಲ್ಪಶ್ರೀ,  ಉದ್ಯಮಿ ದೇವರಹಳ್ಳಿ ಸೋಮಶೇಖರ್, ಹಿರೀಕ್ಯಾತನಹಳ್ಳಿ ದೊಡ್ಡಯಜಮಾನರಾದ  ಹೆಚ್.ಆರ್.ಜಗದೀಶ್  ಯಜಮಾನರಾದ ಪಾಪಣ್ಣ ಭಾಗವಹಿಸಲಿದ್ದಾರೆ.

ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಮಧ್ಯಾಹ್ನ 1ಗಂಟೆಗೆ ಅನ್ನದಾಸೋಹ ನಡೆಯಲಿದೆ. ರಾತ್ರಿ 8ಗಂಟೆಗೆ  ಚಂಡಾಸುರನ ವಧೆ ಅಥವಾ ಹೇಮಾವತಿ ಪರಿಣಯ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಗ್ರಾಮದ ಯಜಮಾನರಾದ ಜಗದೀಶ್ ಅವರು, ಹಿರಿಕ್ಯಾತನಹಳ್ಳಿ ಗ್ರಾಮದಲ್ಲಿ ನೂತನವಾಗಿ ಮಹದೇಶ್ವರ ದೇವಸ್ಥಾನವನ್ನು ಗ್ರಾಮದ ಸರ್ವ ಜನಾಂಗದವರು ಸಹಕಾರದೊಂದಿಗೆ ಕಟ್ಟಿದ್ದೇವೆ. ಫೆ.6ರಂದು ದೇವಸ್ಥಾನ ಉದ್ಘಾಟನೆಗೊಳ್ಳಲಿದ್ದು ಗ್ರಾಮದ ಎಲ್ಲರೂ ತಮ್ಮ ಸಂಬಂಧಿಕರರಿಗೆ  ಗ್ರಾಮದಿಂದ ಬೇರಡೆಗೆ ಮದುವೆಯಾಗಿರುವ ಹೆಣ್ಣು ಮಕ್ಕಳ ಕುಟುಂಬಸ್ಥರಿಗೆ ಹಾಗೂ ಸ್ನೇಹಿತರಿಗೆ, ತಮ್ಮ ಪರಿಚಿತರಿಗೆ ತಿಳಿಸಿ ದೇವತಾ ಕಾರ್ಯದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದ್ದಾರೆ.

admin
the authoradmin

Leave a Reply

Translate to any language you want